Article

ಯೋಚನೆಗಳಿಗೆ ಹಚ್ಚುವ ಬರಹಗಳಿರುವ ಸಂಕಲನ ‘ಅವರಿವರು’

’ಅವರಿವರು’ ಪುಸ್ತಕ ಇದೀಗ ಓದಿ ಮುಗಿಸಿದೆ. ನಿಮ್ಮ ಬಿಡಿಬರಹಗಳನ್ನು ಓದುತ್ತಿದ್ದ ನನಗೆ ಸದಾ ನೆನಪಿನಲ್ಲಿ ಉಳಿಯುವುದು ಕರುಣಾನಿಧಿ ಅವರು ತೀರಿಕೊಂಡಾಗ ನೀವು ಬರೆದ ಬರಹ. ಇಂದಿನ ತಲೆಮಾರಿಗೆ ಕರುಣಾನಿಧಿ ಎಂದರೆ ಕೇವಲ ಅವರ ಮಕ್ಕಳ ಭ್ರಷ್ಟಾಚಾರ, ಬೀದಿ ಗಲಾಟೆಗಳಷ್ಟೇ ನೆನಪಿದೆ, ಬಹುಶಃ ಅದು ಒಂದು ಹೋರಾಟದ ದುರಂತ ಅಂತ್ಯವೂ ಹೌದು. ಆದರೆ ನೀವು ಕರುಣಾನಿಧಿ ಹೇಗೆ ದ್ರಾವಿಡ ಅಸ್ಮಿತೆಯಾಗಿದ್ದರು ಎನ್ನುವುದನ್ನು ವಿವರಿಸಿದ್ದಿರಿ, ಅದು ನನಗೆ ತುಂಬಾ ಇಷ್ಟವಾಗಿತ್ತು. ಹಾಗೆ ಇಷ್ಟವಾಗುವ, ಯೋಚನೆಗೆ ಹಚ್ಚುವ, ನೆನಪಿನಲ್ಲಿ ಉಳಿಯುವ ಅನೇಕ ಬರಹಗಳು ಈ ಪುಸ್ತಕದಲ್ಲಿವೆ. ಪುಸ್ತಕಕ್ಕೆ ಎಚ್ ಎಸ್ ಆರ್ ಅವರು ಬರೆದ ಮುನ್ನುಡಿ ಅದಕ್ಕೊಂದು ಮೌಲಿಕವಾದ ಸೇರ್ಪಡೆ. 

ಪುಸ್ತಕದಲ್ಲಿ ನೀವು ಹೆಸರು ಮಾಡಿದವರ ಕತೆಗಳ ಜೊತೆಜೊತೆಯಲ್ಲಿ ಅನಾಮಿಕರ ಬಗ್ಗೆಯೂ ಬರೆದಿರುವಿರಿ. ಮತ್ತು ಆ ಅನಾಮಿಕರ ಕತೆಗಳು ಹೆಚ್ಚು ಆರ್ದ್ರವಾಗಿಯೂ, ಮಾನವೀಯವಾಗಿಯೂ ನಮಗೆ ಇಷ್ಟವಾಗುತ್ತದೆ. ’ಬಿಸಿಲನ್ನು ಕಂಡು ಕಿರಿಕಿರಿ ಮಾಡಿಕೊಳ್ಳದೆ ಅದಕ್ಕೆ ನಮ್ಮನ್ನು ಒಪ್ಪಿಸಿಕೊಳ್ಳಬೇಕು’ ಎನ್ನುವುದು ಎಂತಹ ಅದ್ಭುತವಾದ ತತ್ವ! ಹಾಗೆಯೇ ಇಷ್ಟವಾದದ್ದು ಕಸದಲ್ಲಿ ರಸ ಯೋಚಿಸಬಲ್ಲ ಮನ್ಸೂರ್, ರಾಮಣ್ಣ, ಪುಸ್ತಕ ವ್ಯಾಪಾರಿ ಮೆಹಬೂಬ್ ಪಾಷಾ ಇವರ ಕತೆಗಳು. ಪುಸ್ತಕದ ಮೊದಲಿಗೇ ಇರುವ ಅನಸೂಯಮ್ಮನ ಕತೆ ನಾವು ಮರೆತೇ ಹೋಗಿದ್ದೇವೆ ಎನ್ನಬಹುದಾದ ರೈತರ ಕೆಚ್ಚಿನ ಕತೆ. ಹೆಸರು ಮಾಡಿದವರ ಕತೆಗಳನ್ನು ಬರೆಯುವಾಗ ಅವರ ಬದುಕನ್ನು ನಿಕಷಕ್ಕೊಡ್ಡುವ ನಿಮ್ಮ ದೃಷ್ಟಿ ಎಲ್ಲೂ ಮಂಜಾಗಿಲ್ಲ, ಅವರನ್ನು ಅವರ ಮಿತಿಗಳ ಜೊತೆಜೊತೆಯಲ್ಲಿಯೇ ಕಟ್ಟಿಕೊಟ್ಟಿರುವಿರಿ. ’ಕರ್ನಾಟಕದ ಕಣ್ಣೀರ್ ಸ್ವಾಮಿ’ ಎನ್ನುವಂತಹ ತಮಾಷೆಯ ತಲೆಬರಹ ಕೊಟ್ಟು ಬರೆದಿರುವ ಕುಮಾರಸ್ವಾಮಿ ಅವರ ಬಗೆಗಿನ ಬರಹದಲ್ಲಿ, ’ಪಕ್ಷದ ಜವಾಬ್ದಾರಿ ಹೊರುವವರು ಕುಮಾರಸ್ವಾಮಿ, ಆದರೆ ಅಧಿಕಾರದ ಫಲಾನುಭವಿಗಳು ಮನೆಯವರೆಲ್ಲರೂ’ ಎನ್ನುವ ಒಳನೋಟವನ್ನೂ ಕೊಟ್ಟಿರುವಿರಿ. ಕೆಲವು ಬರಹಗಳು ಕಾಲಂ ಒತ್ತಡಕ್ಕೆ, ಪತ್ರಿಕೆಯಲ್ಲಿ ಬರೆಯುವವರು ಕವರ್ ಮಾಡಲೇಬೇಕಾದ ಒತ್ತಡಕ್ಕೆ ಬರೆದದ್ದು ಅನ್ನಿಸಿದರೂ, ಹಾಗಲ್ಲದೆ ಬರಹಕ್ಕೆ ಆತ್ಮವನ್ನೇ ಕೊಟ್ಟಂಥ ಬರಹಗಳು ಹೆಚ್ಚಾಗಿವೆ. ಹಾಗೆ ಖುಷಿ ಕೊಟ್ಟ ಬರಹಗಳೆಂದರೆ ಆಂಬ್ರೋಸ್, ಗೌರಿ, ಸೂಕಿ, ವಾಟಾಳ್, ಮೇವಾನಿ, ಅಕ್ಕೈ, ರತ್ನಪ್ರಭಾ, ಪ್ರಕಾಶ್ ರೈ (ಅವರ ಸ್ವಭಾವದ ಬಗ್ಗೆ ನಿಮ್ಮ ಒಳನೋಟ ಇಷ್ಟವಾಯಿತು), ನಾರಾಯಣ್ ರೆಡ್ಡಿ, ಪಟ್ನಾಯಕ್ ಇತ್ಯಾದಿ.
ಲಂಕೇಶರ ಜೊತೆ ಅಷ್ಟು ಸಮಯ ಕಳೆದ ನೀವು ಇಷ್ಟೇ ನಿಷ್ಠುರವಾಗಿ ಲಂಕೇಶ್ ಬಗ್ಗೆ ಬರೆದಿಲ್ಲ ಎನ್ನುವ ನಿರಾಸೆ ನನಗೆ. ಲಂಕೇಶ್ ಒಂದು ವಿಚಾರವಾಗಿ ನಮಗೆಲ್ಲರಿಗೂ ಗೊತ್ತು, ಆದರೆ ಅವರ ವೈಯಕ್ತಿಕ ಮಗ್ಗುಲುಗಳನ್ನು ನೀವು ಬರೆಯಬಹುದಿತ್ತೇನೋ... ನಿಮ್ಮ ಮತ್ತಷ್ಟು ಬರಹಗಳಿಗಾಗಿ ಕಾಯುತ್ತಿರುತ್ತೇನೆ. ಓದಿ, ಮತ್ತೆ ಮತ್ತೆ ರೆಫರ್ ಮಾಡಲು ನಿಮ್ಮ ಪುಸ್ತಕವನ್ನು ಎತ್ತಿಟ್ಟುಕೊಳ್ಳುತ್ತೇನೆ.

ಸಂಧ್ಯಾರಾಣಿ