Book Watchers

ಅಜಿತ ಹೆಗಡೆ

ಸೊರಬ ತಾಲೂಕಿನವರಾದ ಅಜಿತ್ ಹೆಗಡೆ ಅವರು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಪದವಿ ಪಡೆದಿರುವ ಅವರು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಎಂ.ಡಿ. ಪಡೆದಿದ್ದಾರೆ. ವೈದ್ಯರಾಗಿ ಸೊರಬದಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಅಜಿತ್ ಹೆಗಡೆ ಅವರು ಪ್ರವೃತ್ತಿಯಿಂದ ಬರಹಗಾರ. ಪರಿಧಾವಿ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ಮತ್ತೊಂದು ಸಂಕಲನ ’ಕಾಮೋಲ’ ಅಚ್ಚಿಗೆ ಹೋಗಿದೆ. ಬಿಳಿಮಲ್ಲಿಗೆಯ ಬಾವುಟ ಮತ್ತು ಸೂರು ಸೆರೆಹಿಡಿಯದ ಹನಿಗಳು ಅವರ ಪ್ರಕಟಿತ ಕವನ ಸಂಕಲನಗಳು. ವೈದ್ಯಕೀಯ ಲೇಖನಗಳ ಸಂಗ್ರಹ 'ಆರೋಗ್ಯದ ಅರಿವು' ಕೃತಿಯು ಕರಡು ತಿದ್ದುಪಡಿ ಹಂತದಲ್ಲಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಕಥೆ, ಕವನ ಮತ್ತು ವೈದ್ಯಕೀಯ ಲೇಖನಗಳು ಪ್ರಕಟವಾಗಿವೆ. ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ಅವರ ’ತಾಯಿ’ ಕಥೆ ಮೊದಲ ಬಹುಮಾನ ದೊರೆತಿದೆ. ಹುತ್ತ ಕಥೆ ಹಾಗೂ ನ್ಯಾಸಾಂತರ ಕವನ ತೀರ್ಪುಗಾರರ ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ವಿಗತ ಕವನವು ಸಂಪದ ಸಾಲು ಪತ್ರಿಕೆಯ ಕವನ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದೆ.

Related Articles

ಭಾವವನ್ನು ಹಿಡಿದಿಡುವ ’ನಿನ್ನ ಪ್ರೀತಿಯ ನೆರಳಿನಲ್ಲಿ’

ಮೂಲತಃ ಶಿರಸಿಯವರಾದ ಇವರು ಕವಿ ಕಾವ್ಯ ಬಳಗ ಎನ್ನುವ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ ಬಹಳ ಕ್ರಿಯಾಶೀಲರು ಕೂಡ. ಲೇಖಕಿಯರ ಸಂಘ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ ಇವರಿಗೆ ದೊರೆತಿದೆ.

ಪುಸ್ತಕಗಳು ಪ್ರಾಣ ಸ್ನೇಹಿತರು. ಅವು ನಗಿಸುತ್ತವೆ, ಅಳಿಸುತ್ತವೆ ಮತ್ತು ಈ ಬದುಕಿನ ಅರ್ಥ ಹುಡುಕುವಂತೆ ಮಾಡುತ್ತವೆ ಎಂಬ ಕ್ರಿಸ್ಟೋಫರ್ ಪಾವೊಲಿನಿ ಅವರ ಮಾತು ಒಳಪುಟದಲ್ಲಿ ಇದೆ. ಇದು ರೂಪಶ್ರೀ ಅವರ ಮಾತೂ ಆಗಿರಬಹುದು. ಏಕೆಂದರೆ ಅವರೇ ಹೇಳಿಕೊಂಡಂತೆ ' ಇವು ನನ್ನ ಭಾವನೆಗಳನ್ನೆಲ್ಲ ಹಿಡಿದಿಟ್ಟು ಹರಿಯಬಿಟ್ಟಿರುವ ಬರಹಗಳು'.

ಒಟ್ಟು ಇಪ್ಪತ್ತೇಳು ಕಥೆ, ಲಹರಿ ಮತ್ತು ಬರಹಗಳು ಈ ಕೃತಿಯಲ್ಲಿ ಇವೆ. ಇದಕ್ಕೆ ಕನ್ನಡದ ಖ್ಯಾತ ಕಾದಂಬರಿಗಾರ್ತಿ ಎಸ್.ಮಂಗಳಾ ಸತ್ಯನ್ ಮುನ್ನುಡಿ ಬರೆದು ಹಾರೈಸಿದ್ದಾರೆ. ಇಲ್ಲಿನ ಪ್ರತಿಯೊಂದು ಬರಹಗಳೂ ಪ್ರೀತಿ ಪ್ರೇಮದ ಕುರಿತಾಗಿರುವುದು ವಿಶೇಷ. ಆದರೆ ಎಲ್ಲಾ ಬರಹಗಳು ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿವೆ. ಮನುಷ್ಯತ್ವದ ಗುಣಗಳೇ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯಗಳೆಂಬ ಹುಟ್ಟನ್ನು ಹಿಡಿದು ರೂಪಶ್ರೀ ನಮ್ಮನ್ನು ಸಂಸಾರ ಶರಧಿಯನ್ನು ದಾಟಿಸಲು ಪ್ರಯತ್ನ ಮಾಡಿದ್ದಾರೆ.

ಮಂಗಳಾ ಅವರು ಹೇಳಿರುವಂತೆ - ವೃತ್ತಿ ಮತ್ತು ಸಂಸ್ಕಾರಗಳು ನಮ್ಮ ಬದುಕಿನ ಅಂಗಗಳು. ಮದುವೆ, ಪ್ರೀತಿ ಪ್ರೇಮ ಪುರುಷನಿಗಿಂತ ಹೆಣ್ಣಿನ ಬದುಕಿನ ಮೇಲೆ ಒಂದು ವಿಶಿಷ್ಟ ಪರಿಣಾಮವನ್ನು ಬೀರುತ್ತದೆ ಎಂಬ ಅಂಶ ಈ ಕೃತಿಯಲ್ಲಿ ಅಡಕವಾಗಿರುವ ಬರಹಗಳಲ್ಲಿ ಕಂಡುಬರುತ್ತದೆ.ದಿಟ್ಟತನದ ಮಹಿಳೆ ಇಲ್ಲಿದ್ದಾಳೆ. ನನ್ನ ಪ್ರೀತಿಯ ನೆರಳಿನಲ್ಲಿ, ಮೌನ ಮುರಿಯದ ಪ್ರೀತಿ, ಮೌನ ಗರ್ಭದೊಳಗೆ, ದೂರ ತೀರದ ಪ್ರೀತಿ ಮತ್ತು ಮರೆತೆನೆಂದರೂ ಮರೆಯದ ಪ್ರೀತಿ.. ಅದು ಆಕೆಯ ರೀತಿ ; ಹೆಚ್ಚು ಮುದ ನೀಡಿದ ಬರಹಗಳು. ಪ್ರೀತಿಯ ಪಾರಿಜಾತ ಪಸರಿಸುತ್ತಿದೆ, ನೆನಪುಗಳ ಸಂಕೋಲೆಯಲ್ಲಿ ಬಂಧಿಯಾಗ ಹೊರಟು, ಅದೇ ಮಳೆ, ಮಿಂಚು, ಆಲಿಕಲ್ಲು, ಬದುಕ ಪ್ರೀತಿಗೊಂದು ದೀಪ ಹಚ್ಚಿ, ನೀ ನನಗೆ ಏನಾಗಬೇಕೋ ಇತ್ಯಾದಿಗಳು ಇಷ್ಟವಾದವು. ಈ ಕೃತಿಯ ಪ್ರಕಾಶಕರು ಮತ್ತು ನಿಮ್ಮೆಲ್ಲರ ಮಾನಸ ಪತ್ರಿಕೆಯ ಸಂಪಾದಕರಾದ ಗಣೇಶ ಕೋಡೂರು ಅವರು ಬೆನ್ನುಡಿಯಲ್ಲಿ ಹೇಳಿರುವಂತೆ ಈ ಸಂಕಲನದ ಓದು ನಿಮ್ಮ ಬದುಕಿನಲ್ಲಿ ನಿಮಗೇ ಗೊತ್ತಿಲ್ಲದಂತೆ ಹೊಸದೊಂದು ಉತ್ಸಾಹವನ್ನು ಚಿಮ್ಮಿಸುತ್ತದೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ನಿನ್ನ ಪ್ರೀತಿಯ ನೆರಳಿನಲ್ಲಿ

 

.....................................................................................................

ಉತ್ತಮ ಕಥಾಗುಚ್ಛ ’ದೇವರ ಕುದುರೆ’

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯವರಾದ ಗಂಗಾಧರಯ್ಯ ಅವರ ಮೂರನೇ ಕಥಾಸಂಕಲನವಿದು. ನವಿಲ ನೆಲ, ಒಂದು ಉದ್ದನೆಯ ನೆರಳು- ಈ ಹಿಂದಿನ ಕಥಾಸಂಕಲನಗಳು.

ಅವರ ವೈಕಂ ಕಥೆಗಳು ಅನುವಾದಕ್ಕಾಗಿ ಇವರು 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದವರು. ದೇವರ ಕುದುರೆ ಕೃತಿ ಬೆಸಗರಹಳ್ಳಿ ರಾಮಣ್ಣ ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಭಾಜನವಾಗಿದೆ. ಇಲ್ಲಿನ ಕತೆಗಳು ಅವರು ಹುಟ್ಟಿ ಬೆಳೆದ ಮಣ್ಣಿನಿಂದ ಎದ್ದುಬಂದ ಕತೆಗಳು. ಈ ಕತೆಗಳನ್ನು ಪಾಠವಾಗಿ ಓದಿಕೊಂಡಾಗ ಗಮನಿಸಿದ ಅಂಶಗಳೆಂದರೆ ’ಬಳಸಿರುವ ಭಾಷೆಯ ಘಮಲು, ಕತೆಗಳ ಆಳದಲ್ಲಿ ಇರುವ ಧ್ವನಿ, ಕತೆಗಳು ಕರೆದುಕೊಂಡು ಹೋದಹಾಗೆ ಕತೆಗಾರ ಹಿಂಬಾಲಿಸಿದ ರೀತಿ. ಗಂಗಾಧರರು ಇಲ್ಲಿ ಯಾವುದೇ ಜಿದ್ದಿಗೆ ಬಿದ್ದು ಕತೆಗಳನ್ನು ಕಟ್ಟಿಲ್ಲ.ಕಥೆಗಳಲ್ಲಿ ಬರುವ ಪಾತ್ರಗಳ ಹೆಸರು ವಿಶಿಷ್ಟವಾಗಿವೆ’.

ಹಳ್ಳಿಗಳ ಅಂತರಂಗವು ಅಸುನೀಗುತ್ತಿರುವ ಭಯದ ಸಮಯದಲ್ಲಿ ವೇದನೆ ಮತ್ತು ಕಸಿವಿಸಿಯಲ್ಲಿ ಗಂಗಾಧರಯ್ಯ ಈ ಕಥೆಗಳನ್ನು ಹೇಳಿದ್ದಾರೆ. ಕರ್ಪಾಲು ಎಂಬ ಪದ್ಧತಿಯೇ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಈ ಕರ್ಪಾಲು ಎಂಬ ಕಥೆ ಎದುರಾಗುತ್ತದೆ.ಕೊನೆಕಾರಿಕೆಯ ಈರ್ಕಾಟ ಮತ್ತು ಚಂದ್ರಪ್ಪನೆಂಬ ಜಮೀನ್ದಾರನ ಕಥೆಯಿದು.ಗೌರಿ ಎಂಬ ಹಸು,ಈರ್ಕಾಟನ ಹೆಂಡತಿ ಸಣ್ಣಾಲಿ,ಮಗ ಮಲ್ಲೇಶಿ, ಮತ್ತು ಊರಿನ ನೈಜ ಚಿತ್ರಣ ಕಾಡುತ್ತವೆ. ಪದುಮದೊಳಗೆ ಬಿಂಬ ಸಿಲುಕಿ ಕಥೆಯು ನಮ್ಮನ್ನು ಆರ್ದ್ರಗೊಳಿಸಿ ಬಿಡುತ್ತದೆ. ಅವ್ವನನ್ನು ಬಿಡಲಾಗದ, ಓದನ್ನು ಮುಂದುವರಿಸಲು ಛಲವಿರುವ ರಾಮಾಂಜಿ ಎಂಬ ಬಾಲಕನ ಸುತ್ತ ಸುತ್ತುವ ಕಥೆಯಿದು. ಮಕ್ಕಳಾಗದ ವೆಂಕಟಗಿರಿ ಮತ್ತು ಕೆಂಪೀರಿ ಕೂಡ ನಮ್ಮ ದುಃಖಕ್ಕೆ ಕಾರಣರಾಗುತ್ತಾರೆ.

ಶೀರ್ಷಿಕೆ ಕಥೆ ದೇವರ ಕುದುರೆ ಬಹಳ ಚೆನ್ನಾಗಿದೆ. ಸೂಚ್ಯವಾಗಿ ಅದು ಕೊಡುವ ಸಂದೇಶ ಅಪೂರ್ವ. ನವೀನ ಎಂಬ ಹುಡುಗನಿಗೆ ಹುಟ್ಟುವ ಕುದುರೆ ಸಾಕುವ ಆಸೆ, ಅದರ ಹಿನ್ನೆಲೆ. ಪುಡ್ಕಯ್ಯನೆಂಬ ಅಪ್ಪ ಮತ್ತು ಅವನ ತಲೆಮಾರು, ಅಡವೀಶ ಮೇಷ್ಟ್ರು, ಕಾಬುಳ್ಳ ಮತ್ತು ಅವನ ಹೆಂಡತಿಯ ವ್ರತ ಹೀಗೆ ಈ ಕಥೆಯು ವಿಸ್ತಾರವನ್ನು ಪಡೆದುಕೊಂಡಿದೆ. ಕೋರು - ಬಿಲ್ಲೂರ ಮತ್ತು ಸಣ್ಣಾಲಜ್ಜಿಯ ತಿಕ್ಕಾಟದ ವ್ಯಥೆಯ ಕಥೆ. ಹೌಳಿಚಿಕ್ಕ ಎಂಬ ಗೆಳೆಯ, ಕಾಟ್ರಂಗಪ್ಪ, ಅಜ್ಜಿಯ ಗಂಡ ಕೆಂಜಡ್ಯಪ್ಪ, ಬಿಲ್ಲೂರನ ಅಪ್ಪ ದುಗ್ಗಾಲಪ್ಪ ಪಾತ್ರಗಳಾಗಿ ಹರಿದು ಬರುವ ರೀತಿ ಅನನ್ಯ. ವಿಶ್ವನಾಥ ಎಂಬ ಯುವಕನ ಕೃಷಿ ಪ್ರಯೋಗಗಳ ಕಥೆ ಜೇನುಬೇಲಿ. 'ಗುಡ್ಡದ ಕೂಸು '- ಹಾಳಾಗುತ್ತಿರುವ ಪರಿಸರದ ಬಗ್ಗೆ ಕಾಳಜಿ ತೋರುವ ಗ್ಯಾರಜ್ಜ ಮತ್ತು ಆ ನೋವಿನ ಸಂಗತಿಗೆ ಸಂಬಂಧಿಸಿದಂತೆ ಕನ್ನಡಿಯನ್ನು ಹಿಡಿಯುವುದು.

ಅಜ್ಜಿಯ ಕೋಲು - ಸಂಜೀವ ಮತ್ತು ಅವನ ಮಗಳು ಸುದೇಹಿಯನ್ನು ಇಟ್ಟುಕೊಂಡು ವಿರಾಟರೂಪ ಪಡೆಯುವ ಕಥೆ. ಚಿಕ್ಕನ ನವಿಲು ಮರಿಗಳು ನಮ್ಮ ಕಣ್ಣಲ್ಲಿ ನೀರು ಹನಿಸುತ್ತವೆ. ಓದಿಯೇ ಆ ಭಾವವನ್ನು ಅನುಭವಿಸುವುದು ಒಳಿತು. ಚಿತ್ರದ ಗೊತ್ತ ಮುಟ್ಟದೆ ಕಥೆಯ ನಾಕಾಲಯ್ಯ, ಅವನ ತಾಯಿ ಗುರುವಮ್ಮ, ಅದು ಕಾರಣ ಎಂಬ ಕಥೆಯ ಚನ್ವೀರ ; ಇವರೆಲ್ಲ ನಮ್ಮ ಪಕ್ಕ ಕುಳಿತು ಕಥೆ ಹೇಳುತ್ತಿರುವಂತೆ ಭಾಸವಾಗುವುದು ದಿಟ. ಇದು ಕಥೆಗಾರನ ಗೆಲುವೂ ಹೌದು. ಮುರ್ಕಲಸಿನ ಮರ ಕಥೆಯಲ್ಲಿ ಮರ ಉಳಿಸಿಕೊಳ್ಳಲು ಹೋರಾಡುವ ಬಾಳಪ್ಪ, ಇಂದಿನ ಕಾಲದ ಧರ್ಮಪ್ಪ ಮತ್ತು ಬುಡೇನ ಸಾಬ್ರ ಕಥೆ ಪ್ರತೀ ಹಳ್ಳಿಯಲ್ಲೂ ಇದೆ. ಆದರೆ ಅಂತ್ಯ ಮಾತ್ರ ಬೇರೆಯಾಗಿರಬಹುದು. ಬೇರಿಲ್ಲದ ಗಿಡ - ಓದುವ ಹಂಬಲದ ಕಪಿನಿ ಎಂಬ ಅನಾಥ ಹುಡುಗ, ಅಲ್ಕೂರಯ್ಯ ಎಂಬ ಮಾವ, ಸಣ್ಣೀರಮ್ಮ ಎಂಬ ಅತ್ತೆ. ಈ ಸಂಕಲನದ ಕೊನೆಯ ಕಥೆಯಲ್ಲಿ ಬರುವ ಪಾತ್ರಗಳು. ಇದೂ ಸಹ ದುಃಖದ ಅನುಸಂಧಾನದಲ್ಲಿ ಮುಗಿಯುತ್ತದೆ. ಗಂಗಾಧರಯ್ಯ ಅವರ ಕಥೆಗಳಲ್ಲಿ ಸಾಕುಪ್ರಾಣಿಗಳಿವೆ, ಅನಾಥ ಮಕ್ಕಳಿದ್ದಾರೆ, ಮಕ್ಕಳಾಗದ ದಂಪತಿಗಳಿದ್ದಾರೆ ಅದೆಲ್ಲವುಗಳ ಜೊತೆಗೆ ಅತಿ ಸಾಮಾನ್ಯ ಹಳ್ಳಿಗರಿದ್ದಾರೆ. ಗ್ರಾಮೀಣ ಸೊಗಡಿನ ಭಾಷೆ ಮತ್ತು ವಾತಾವರಣ ಸಂಕಲನದ ಉದ್ದಕ್ಕೂ ಹೇರಳವಾಗಿ ಹರವಿಕೊಂಡಿದೆ.

ಒಂದೇ ಕಥಾಸಂಕಲನದಲ್ಲಿ ಹಲವು ಉತ್ತಮ ಕಥೆಗಳು ಸಿಗುವುದು ಅಪರೂಪ. ಆದರೆ ಇಲ್ಲಿ ಬಂಪರ್ ಕೊಡುಗೆ ಇದೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ದೇವರ ಕುದುರೆ

...................................................................................................

ಆಫ್ರಿಕಾ ನೋವು, ನಲಿವಿನ ’ಸೂರ್ಯನ ನೆರಳು’

ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪುಶಿನ್ ಸ್ಕಿ 'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ "ಸೂರ್ಯನ ನೆರಳು" ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.

'ಆಫ್ರಿಕಾದ ನೋವು, ಸಂಕಷ್ಟಗಳನ್ನು ಕುರಿತಾದ ಪ್ರಾಮಾಣಿಕ,ಸವಿವರ ಆದರೆ ಅಷ್ಟೇ ನಿರ್ಭಾವುಕ ಪ್ರವೇಶಿಕೆ ಹಾಗೂ ಅದರ ಗಾಢ ಆಕರ್ಷಣೆಯಿಂದ ಹುಟ್ಟಿದ ಒಂದು ನಿಶ್ಯಬ್ದ ಪ್ರೇಮಗೀತೆ' ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿರುವುದು ಅತ್ಯಂತ ಸೂಕ್ತವಾಗಿದೆ.

ಈ ಪುಸ್ತಕವು ಬಿಳಿಯ ವರ್ಣದ ಕಪುಶಿನ್ ಸ್ಕಿ ಅರವತ್ತರ ದಶಕದಿಂದ ತೊಂಬತ್ತರವರೆಗಿನ ದಶಕದ ಅವಧಿಯಲ್ಲಿ ಕಗ್ಗತ್ತಲ ಖಂಡ ಮತ್ತು ಕರಿಯರ ನಾಡು ಎಂದೇ ಹೆಸರಾದ ಆಫ್ರಿಕಾ ಖಂಡದ ತುಂಬೆಲ್ಲಾ ಓಡಾಡಿ ಪಡೆದ ಅನುಭವಗಳು ಮತ್ತು ಸಂಗ್ರಹಿಸಿದ ಮಾಹಿತಿಗಳ ಸಂಗ್ರಹ. ಇದು ಆಫ್ರಿಕಾದ ಆಂತರ್ಯಕ್ಕೆ ಇಳಿದು ಅವರು ರಚಿಸಿರುವ ಪುಸ್ತಕ. ಇಡೀ ಕೃತಿಯುದ್ದಕ್ಕೂ ಉರಿಬಿಸಿಲು, ನೆರಳಿನ ಹುಡುಕಾಟ,ಜನರ ಅಲೆಮಾರಿತನ, ವಸಾಹತುಶಾಹಿ ಆಳ್ವಿಕೆ ಮತ್ತು ಸ್ವಾತಂತ್ರ್ಯದ ನಂತರ ಬುಡಕಟ್ಟು ಜನಾಂಗಗಳ ಮಧ್ಯೆ ಅಧಿಕಾರಕ್ಕಾಗಿ ಸಂಘರ್ಷ ಹಾಗೂ ಸಾಮೂಹಿಕ ಹತ್ಯೆಗಳ ಪ್ರಸ್ತಾಪ ಕಾಡುತ್ತದೆ.  ಈ ಕೃತಿಯ ಆರಂಭದ ಒಂದೆರಡು ಅಧ್ಯಾಯಗಳನ್ನು ಪಟ್ಟು ಹಿಡಿದು ಓದಿದಿರಾದರೆ ಆಮೇಲೆ ಸುಲಭವಾಗಿ ಪುಸ್ತಕವನ್ನು ಕೆಳಗಿಡುವುದು ಸಾಧ್ಯವಿಲ್ಲ. ಇಲ್ಲಿಯ ಓದಿನ ಅನುಭವಗಳಿಂದ ಕಳಚಿಕೊಳ್ಳುವುದು ಸುಲಭವಲ್ಲ.

ಪ್ರತ್ಯೇಕ ಅಧ್ಯಾಯಗಳ ಅಡಿಯಲ್ಲಿ ಬರುವ ಘಟನೆಗಳು ಭಾವತೀವ್ರತೆಯಿಂದ ಕೂಡಿವೆ. ತಣಿಯುತ್ತಿರುವ ನರಕ ಎಂಬ ಅಧ್ಯಾಯವಂತೂ ದೃಶ್ಯಗಳು ಕಣ್ಮುಂದೆ ಬಂದಂತೆ ಕ್ರೌರ್ಯದ ಅನಾವರಣ ಮಾಡುತ್ತದೆ. ಡಾ.ಡೊಯ್ಲ್, ಸಲೀಂ - ಈ ಅಧ್ಯಾಯಗಳು ಅಲ್ಲಿನ ಜನರ ವಿಶಿಷ್ಟತೆಯನ್ನು ಹೇಳುತ್ತವೆ. ದಂಗೆಯ ಅಂಗರಚನೆ ಆಫ್ರಿಕಾದಲ್ಲಿ ಆದ ರಾಜಕೀಯ ಬದಲಾವಣೆಗಳನ್ನು ಹೇಳುತ್ತದೆ. ಆಫ್ರಿಕಾದಲ್ಲಿನ ದಾರಿದ್ರ್ಯ, ಬಂಡಾಯ, ಆಂತರಿಕ ಯುದ್ಧ, ವಿದೇಶಿಯರ ಆಕ್ರಮಣ, ಗುಲಾಮರ ಮಾರಾಟ, ಭಯಂಕರ ಬಿಸಿಲನ್ನು ಬಿಚ್ಚಿಟ್ಟು ಬೆಚ್ಚಿ ಬೀಳಿಸುವ ಲೇಖನಗಳ ಮಾಲೆಯಿದು.

ಪಾಶ್ಚಾತ್ಯರು ಗಡಿಯಾರಕ್ಕೆ ಸರಿಯಾಗಿ ಬದುಕುತ್ತಿದ್ದರೆ, ಆಫ್ರಿಕನ್ನರು ಬದುಕಿಗೆ ಸರಿಯಾಗಿ ಗಡಿಯಾರವನ್ನು ಹೊಂದಿಸಿಕೊಳ್ಳುವ ಜನ ಎನ್ನುತ್ತಾರೆ ಲೇಖಕರು. ಜನ ಭರ್ತಿಯಾದಾಗ ಹೊರಡುವ ಬಸ್. ಆದರೆ ಅಲ್ಲಿನ ಪಯಣಗಳು ಕಿಲೋಮೀಟರುಗಳಿಗೆ ಸಂಬಂಧಿಸಿದ್ದಲ್ಲ, ಗಂಟೆ ಅಥವಾ ದಿನಗಳಿಗೆ ಸಂಬಂಧಿಸಿದ್ದು. ಯಾಕೆಂದರೆ ಅಲ್ಲಿ ರಸ್ತೆಗಳೇ ಇಲ್ಲ ಅಥವಾ ಪೂರ್ಣವಾಗಿ ಹಾಳಾಗಿರುತ್ತವೆ.ಅಲ್ಲಿನ ಜನ ಅಜ್ಞಾನ, ನಿರುದ್ಯೋಗದಿಂದ ನರಳುವುದು, ಹಸಿವು ಮತ್ತು ನೀರಡಿಕೆಗಳಿಂದ ಸಾಯುವುದು ಕಾಡುತ್ತದೆ. ಲೇಖಕರು ಒಂದು ಕಡೆ ಬಸ್ಸಿಳಿದಾಗ ಪೋಲೀಸನೊಬ್ಬ ಅಲ್ಲಿರುವ ಜನರೆಲ್ಲರನ್ನೂ ತೋರಿಸಿ 'ಕಳ್ಳರು' ಎಂದು ಹೇಳಿ, 'ನನ್ನನ್ನು ಮಾರ್ಗದರ್ಶಿಯಾಗಿ ನೇಮಿಸಿಕೊಳ್ಳಿ, ನನಗೂ ಬದುಕಲು ಬಿಡಿ' ಎಂದು ಅವರ ಮಧ್ಯೆ ಅಂಗಲಾಚುವುದು ಅಲ್ಲಿಯ ವಾಸ್ತವಕ್ಕೆ ಹಿಡಿದ ಕನ್ನಡಿ.

ಇಲ್ಲಿ ಅನುವಾದಕಿ ಸಹನಾ ಹೆಗಡೆ ಅವರನ್ನು ಹೊಗಳಲೇಬೇಕು. ಅನುವಾದವೆನ್ನುವುದು ಸುಲಭದ ಕೆಲಸವಲ್ಲ. ಮೂಲಕ್ಕೆ ಚ್ಯುತಿ ಬಾರದಂತೆ ಅದ್ಭುತವಾಗಿ ಸಹನಾ ಅವರು ಅನುವಾದವನ್ನು ಮಾಡಿದ್ದಾರೆ. ಈ ಅನುವಾದಿತ ಕೃತಿಯು, ವಿಭಿನ್ನ ಅನುಭವದ ನೋಟಕ್ಕಾಗಿ ಹೆಚ್ಚು ಜನರನ್ನಾದರೂ ತಲುಪಬೇಕು ಎಂಬ ಆಶಯ ನನ್ನದು. ಹಾಗಾಗಿ ಎಲ್ಲರೂ ಒಮ್ಮೆ ಕೊಂಡು ಓದಿ, ಸೂರ್ಯನ ನೆರಳನ್ನು ಖಂಡಿತಾ ಕಾಣಿರಿ.


ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

https://www.bookbrahma.com/book/sooryana-neralu

..........................................................................................................

ಮೇಲುಸ್ತರದ ವೈವಿಧ್ಯಮಯ ಕಥೆಗಳ ’ಗೀರು’

ಮುನ್ನುಡಿ ಬರೆದ ಸೇತುರಾಮ ಸರ್ ಹೇಳಿದಂತೆ ಬದುಕಿನ ಅನುಭವದ ಪ್ರಜ್ಞೆ, ಸಾರ್ವಜನಿಕ ಲೋಕ ಮತ್ತು ಸಾರ್ವತ್ರಿಕ ಸಂಸ್ಕಾರದ ಮೂಸೆಯಲ್ಲಿ ಹದವಾಗಿ ಮೂಡಿಬಂದ ಒಳ್ಳೆಯ ಕಥೆಗಳು ಇಲ್ಲಿವೆ.
ಹದಿನಾಲ್ಕು ಕಥೆಗಳು ಇಲ್ಲಿ ಇರುವುದರಿಂದ ಕೆಲವನ್ನು ಮಾತ್ರ ಉಲ್ಲೇಖ ಮಾಡುತ್ತೇನೆ.

ಸ್ಫೋಟ - ಅರುಂಧತಿ ಮತ್ತು ಗೌತಮರ ನಡುವಿನ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗುತ್ತದೆ. ಅದಕ್ಕೆ ಕಾರಣ ಅರುಂಧತಿ ಅಲ್ಲ. ಆದರೆ ಆಕೆ ಮಗುವನ್ನು ಪಡೆಯುವ ಹಂತವಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಆಗ ಅವಳ ಮನಸ್ಸಿನಲ್ಲಿ ಚಿತ್ರಿತವಾದ ವಿಷಯವನ್ನು ಓದುಗರಿಗೆ ಅದ್ಭುತವಾಗಿ ದಾಟಿಸಲು ದೀಪ್ತಿ ಸಫಲರಾಗಿದ್ದಾರೆ. ' ಪ್ಲೀಸ್ , ಆ ಸೆಮೆನ್ ಬದಲು ನಂಗೆ ಬೇರೆ ಯಾರದ್ದಾದರೂ ಇನ್ ಸರ್ಟ್ ಮಾಡೋಕ್ಕಾಗುತ್ತಾ ?'... ಎಂಬಲ್ಲಿಗೆ ಅವಳ ಆಕ್ರೋಶ ಸ್ಫೋಟಗೊಳ್ಳುತ್ತದೆ.

ಭಾಗೀಚಿಕ್ಕಿ - ಪ್ರತೀ ಊರಲ್ಲಿ ಅಥವಾ ನಮ್ಮ ಬಂಧು- ಬಳಗದಲ್ಲಿ ಇರಬಹುದಾದ ಮಧ್ಯ ವಯಸ್ಸು ದಾಟುತ್ತಿರುವ ಹೆಂಗಸು ಇವಳು. ಒಂದು ನಿಮಿಷ ಖಾಲಿ ಕುಳಿತು ಕೊಳ್ಳುವವಳಲ್ಲ. ಆದರೆ ಬಾಯಿ ಬೊಂಬಾಯಿ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳ ಬಲ್ಲಳು. ಅವಳ ಹನ್ನೆರಡು ವರ್ಷದ ಮಗು ಸತ್ತು ಹೋದ ನೆನೆದು ಯಾರಿಗೂ ಗೊತ್ತಾಗದ ಹಾಗೆ ಅಳುವವಳು. ಗಂಡಸರೆಂದರೆ ಆಕ್ರೋಶವೋ, ಅನುಮಾನವೋ ಅಥವಾ ಅನುಭವವೋ ಎಂದು ನಿರೂಪಕಿಗೆ ಗೊಂದಲ. ಆಕೆಯಾದರೂ ತನಗೆ ಅನುಕೂಲ ಎಂದು ಅವಳನ್ನು ಮನೆಗೆ ತಂದು ಇಟ್ಟು ಕೊಂಡವಳು. ' ನನ್ನ ಮಗಳು ಸತ್ತದ್ದು ಹೆಂಗೆ ಗೊತ್ತಾ ? ಅವರಪ್ಪನಿಂದಲೇ' ‌.. ಎಂದು ಅವಳು ಹೇಳುವಾಗ ನಮ್ಮ ಎದೆ ಝಲ್ ಎನ್ನುತ್ತದೆ. ಅವಳ ನೋವು ನಮ್ಮದಾಗಿ, ಭಾಗೀಚಿಕ್ಕಿ ಪರ ಮನಸ್ಸು ನಿಲ್ಲುತ್ತದೆ ಮತ್ತು ಕತೆ ಗೆಲ್ಲುತ್ತದೆ.

ಕ್ಯಾನ್ವಾಸ್ - ಮೂವರು ನಿವೃತ್ತ ಗೆಳೆಯರು,ಗಾರ್ಡನ್ ಮತ್ತು ಚಿತ್ರಕಾರನ ಜೊತೆ ಆರಂಭವಾದ ಕಥೆ, ಆ ಚಿತ್ರಕಾರ ಮಾಥುರನ ಹೆಂಡತಿಯ ಪಾದದ ಚಿತ್ರ ಬಿಡಿಸಿದಾಗ ಒಂದು ತಿರುವು ಪಡೆಯುತ್ತದೆ. ಮನಸ್ಸಿನಲ್ಲಿ ಮಂಡಿಗೆ ತಿನ್ನುವ ವೃದ್ಧರ ಕಥೆ ಕೂಡ ಹೌದು. ಅಂತ್ಯದಲ್ಲಿ ಒಂದು ಚಮಕ್ ನೀಡುವುದು ದೀಪ್ತಿ ಅವರಿಗೆ ಒಲಿದಿದೆ. ಆದರೆ ಇದೇ ತರಹದ ಕಥೆಯನ್ನು ನಾನು ಓದಿದ್ದು, ಅದು ನೆನಪಾಗುತ್ತಿಲ್ಲ.
ಹಾಗಾಗಿ ಈ ಕಥೆಯಲ್ಲಿ ಚಿತ್ರಕಾರ ಹೇಳುವಂತೆ ' ಯಾರು ಯಾರ ಸ್ವತ್ತಲ್ಲ ' ಎಂಬುದು ಸರಿ.

ಚೌಕಟ್ಟು - ಒಂದು ಸ್ತ್ರೀ ಸಂವೇದನೆಯ ಕಥೆ. ಚೆನ್ನಾಗಿದೆ.
ಮುಚ್ಚಿದ ಬಾಗಿಲು- ಪ್ರಬಂಧದ ಶೈಲಿಯಲ್ಲಿ ಇರುವ ಅನಾಥತೆಯ ಕಥೆ.

ನ್ಯೂಸ್ ಬೀ- ಬೆನ್ನುಡಿಯಲ್ಲಿ ಡಾ. ಸಬಿತಾ ಬನ್ನಾಡಿ ಹೇಳಿರುವಂತೆ ಬದುಕು ತನ್ನೆದುರು ಬಂದಂತೆ ಸ್ವೀಕರಿಸುವ ಮುಗ್ಧತೆಯಾಚೆಗೂ ನ್ಯೂಸ್ ಬೀ ಗೆ ಇರುವ ನೈತಿಕತೆ ಮತ್ತು ಧೃಡತೆಗೆ ಒಂದು ಸೆಳೆತದ ಗುಣವಿದೆ.

ಮೊಹರು, ಶೀರ್ಷಿಕೆ ಕಥೆ ಗೀರು, ನೆರಳಿನಾಚೆ, ಶಿಕ್ಷೆ, ಅಲಮೇಲಮ್ಮ ಮತ್ತು ಇಂಗ್ಲಿಷ್, ಕುದಿ, ರೊಕ್ಕ ದೋಷ ಎಲ್ಲವೂ ಮೇಲುಸ್ತರದ ವೈವಿಧ್ಯಮಯ ಕಥೆಗಳು.

ಈ ಟೆಂಡರ್ ಕಥೆಯಲ್ಲಿ ಕಟು ವಾಸ್ತವ ಸಂಗತಿಯನ್ನು ದೇವರ ಮುಖಾಂತರ ವಿಡಂಬನೆ ಮಾಡಿದ್ದು ದೀಪ್ತಿ ವಿಚಾರದ ವಿಸ್ತಾರವಾದ ಹರಿವಿನ ದ್ಯೋತಕವಾಗಿದೆ. ಹೀಗೆ ಒಂದೇ ಕಥಾಸಂಕಲನದಲ್ಲಿ ಹಲವು ಒಳ್ಳೆಯ ಕಥೆಗಳು ಇವೆ. ಆ ಕಾರಣದಿಂದ ಖಂಡಿತಾ ಕೊಂಡು ಓದಲೇ ಬೇಕಾದ ಪುಸ್ತಕವಿದು.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

https://www.bookbrahma.com/book/geeru

 

Top News
Top Events