Book Watchers

ಭಾರತೀದೇವಿ ಪಿ.

ಲೇಖಕಿ, ಅಂಕಣಕಾರ್ತಿ ಭಾರತೀದೇವಿ ಪಿ. ಅವರು ಮೂಲತಃ ಮೂಡುಬಿದರೆಯವರು. 1983 ಮಾರ್ಚ್ 19 ರಂದು ಜನಿಸಿದ ಭಾರತೀದೇವಿಯವರು ಪ್ರಾಥಮಿಕ ಶಿಕ್ಷಣವನ್ನು ಮೂಡುಬಿದರೆಯಲ್ಲಿಯೇ ಪೂರ್ಣಗೊಳಿಸಿದರು. ಆನಂತರ ಉಜಿರೆ ಹಾಗೂ ಚೆನ್ನೈನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಅವರು ಪ್ರಸ್ತುತ ಹಾಸನದ ಹೊಳೆನರಸೀಪುರದ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Articles

ಕನ್ನಡ ಸಂಶೋಧನೆಯ ಹೊಸ ಸಾಧ್ಯತೆ ತೋರುವ ‘ಕನ್ನಡ ಕಥನಗಳು’....

ಕನ್ನಡ ಬಹುಮುಖಿಯಾದದ್ದು, ಬಹುರೂಪಿಯಾದದ್ದು. ಕನ್ನಡದ ಮೊದಲ ಉಪಲಬ್ಧ ಕೃತಿಯ ಕರ್ತೃ ಶ್ರೀವಿಜಯ, ಕವಿರಾಜಮಾರ್ಗದಲ್ಲಿ  ‘ಕನ್ನಡಂಗಳ್’ ಎಂದು ಗುರುತಿಸುವ ಸೂಕ್ಷ್ಮತೆ ತೋರಿದ್ದಾನೆ. ಈ ಕನ್ನಡಗಳ ಜೊತೆ ಇನ್ನೂ ಹಲವು ಭಾಷೆಗಳು, ಜೊತೆಗೆ ಭಿನ್ನ ಸಮುದಾಯಗಳ ವಿಭಿನ್ನ ಸಂಸ್ಕೃತಿಗಳು ಕನ್ನಡ ನಾಡಿನಲ್ಲಿ ನೆಲೆಗೊಂಡಿವೆ. ಇದೇ ಅರಿವಿನ ಭಿತ್ತಿಯಲ್ಲಿ ಕನ್ನಡದ ಅಷ್ಟೇ ಅಲ್ಲ, ಭಾರತದ ಮಹತ್ವದ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆಯವರ ಇತ್ತೀಚಿನ ಕೃತಿ ‘ಕನ್ನಡ ಕಥನಗಳು’ ಮೈದಾಳಿದೆ. ಸುಮಾರು ನಲುವತ್ತು ದಶಕಗಳ ಕಾಲ ಅಧ್ಯಯನ, ಅಧ್ಯಾಪನಗಳಲ್ಲಿ ತೊಡಗಿರುವ ಬಿಳಿಮಲೆಯವರ ಸಂಶೋಧನೆಯ ದಾರಿ ಜನಸಮುದಾಯಗಳ ನಿಕಟ ಒಡನಾಟದಿಂದ ರೂಪುಗೊಂಡಿರುವಂಥದ್ದು. ಹೀಗಾಗಿ ಅವರ ಬರವಣಿಗೆ ಮೇಲಿನಿಂದ ಸಿದ್ಧಾಂತ ಹೇರುವ ಬಗೆಯಲ್ಲಿ ಇರದೇ, ಸಮುದಾಯಗಳಲ್ಲಿ ಕಂಡರಿಸಿದ ತಿಳಿವಿನ ಆಧಾರದ ಮೇಲೆ ತೀರ್ಮಾನಗಳನ್ನು ರೂಪಿಸಿಕೊಳ್ಳುತ್ತದೆ. ಇತ್ತೀಚೆಗೆ ಹೊರಬಂದ ಅವರ ಕೃತಿ ‘ಕನ್ನಡ ಕಥನಗಳು’ ಅವರ ನಿಡುಗಾಲದ ಸಂಶೋಧನೆಯ ತಳಹದಿಯಲ್ಲಿ ರೂಪುಗೊಂಡ ಕೃತಿಯಾಗಿದೆ.

ಇದು ಕನ್ನಡದ ಕಥನಗಳನ್ನು ಮೂಲಭಿತ್ತಿಯಾಗಿ ಇರಿಸಿಕೊಂಡು ಭಾರತದ ಕಥನಗಳನ್ನು ಹೇಳುತ್ತದೆ. ನಮ್ಮ ಸಂಶೋಧನೆಗಳು ವಸಾಹತುಕಾಲದಿಂದ ಇಲ್ಲಿಯವರೆಗೆ ಸಾಗಿಬಂದ ದಾರಿಯನ್ನು ವಿಶ್ಲೇಷಣೆಗೆ ಒಳಪಡಿಸುತ್ತಾ ಅಧ್ಯಯನಕ್ಕೆ ಹೊರಡುವವರ ಮುಂದಿರುವ ಅಪಾರ ಸಾಧ್ಯತೆಗಳನ್ನು ತೆರೆದಿಡುತ್ತದೆ. ಹೀಗಾಗಿ ಹೆಜ್ಜೆಗುರುತುಗಳೊಂದಿಗೆ ಮುಂದೆ ಸಾಗಬೇಕಾಗಿರುವ ದಾರಿ ತೋರುವ ಕೈಮರವೂ ಆಗಿರುವ ಈ ಕೃತಿ ಇಂದು ಸಂಶೋಧನೆಯಲ್ಲಿ ತೊಡಗಿರುವವರಿಗೆ ಮಾರ್ಗದರ್ಶಿಯಾಗಿದೆ. 2011ನೇ ಜನಗಣತಿಯ ಪ್ರಕಾರ ನಮ್ಮ ದೇಶದಲ್ಲಿ 19569 ಭಾಷೆಗಳನ್ನು ಮಾತೃಭಾಷೆಗಳೆಂದು ಪರಿಗಣಿಸಲಾಗಿದೆ. ಇದನ್ನು ಗಮನಿಸಿದಾಗ ನಮ್ಮ ದೇಶದ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯಗಳ ಅಗಾಧತೆಯ ಪರಿಚಯ ನಮಗಾಗುತ್ತದೆ. ಆದರೆ ನಮ್ಮ ನಡುವೆ ಇಂದು ಏಕರೂಪೀ ಪಠ್ಯಗಳೇ ವಿಜೃಂಭಿಸುತ್ತಾ ಪಠ್ಯಗಳ ವೈವಿಧ್ಯ ಅವಗಣನೆಗೆ ಒಳಗಾಗಿದೆ. ಉದಾಹರಣೆಗೆ, ರಾಮಾಯಣ ಅಥವಾ ಮಹಾಭಾರತವನ್ನೇ ತೆಗೆದುಕೊಂಡರೂ ಪ್ರತಿ ಊರಿನ ಜನರೂ ಅದಕ್ಕೆ ಸಂಬಂಧಪಟ್ಟ ಐತಿಹ್ಯವನ್ನು ತಮ್ಮ ಊರುಗಳಲ್ಲಿ ಗುರುತಿಸುತ್ತಾರೆ. ಇದು ಒಂದು ಪಠ್ಯವನ್ನು ಅವರು ತಮ್ಮದಾಗಿಸಿಕೊಂಡ ಪರಿ. ರಾಮಾಯಣ, ದೇಶಕಾಲದ ವಿಸ್ತಾರದಲ್ಲಿ ಹೇಗೆ ಭಿನ್ನ ಪಠ್ಯಗಳಾಗಿ ಹರಡಿಕೊಂಡಿದೆ ಎಂಬುದೇ ಒಂದು ಆಸಕ್ತಿದಾಯಕ ಅಧ್ಯಯನವಾಗಬಲ್ಲದು. ಅದರ ಬದಲಿಗೆ ರಾಮಾಯಣದ ಒಂದು ಪರಿಷ್ಕೃತ ಪಠ್ಯ ಸಿದ್ಧಪಡಿಸಿ ಅದನ್ನೇ ಪ್ರಮಾಣವಾಗಿ ಸ್ವೀಕರಿಸುವ ಪರಿ ಬಹುರೂಪೀ ಪಠ್ಯಗಳ ಅನನ್ಯತೆಯನ್ನು ನಿರಾಕರಿಸುತ್ತಾ ಸಮುದಾಯಗಳ ಸಂವೇದನೆಯನ್ನು ಕಡೆಗಣಿಸುವ ಬಗೆಯದ್ದಾಗಿದೆ. ರಾಜಕೀಯವಾಗಿ ವಿಘಟಿತವಾಗಿದ್ದ ಈ ಭೂಪ್ರದೇಶಗಳನ್ನು ಮತ್ತು ಸಮುದಾಯಗಳನ್ನು ಒಂದು ಪಠ್ಯ, ಭಾಷೆ ಹಾಗೂ ರಾಜಕೀಯ ಸಿದ್ಧಾಂತಗಳ ಮೂಲಕ ಬೆಸೆಯುವ ಯತ್ನ ಆರಂಭವಾದದ್ದು ವಹಾಹತುಶಾಹಿ ಆಡಳಿತದ ಕಾಲದಲ್ಲಿ ಎಂದು ಬಿಳಿಮಲೆಯವರು ಗುರುತಿಸುತ್ತಾರೆ. ಅಂದು ಲಭ್ಯವಿದ್ದ ಹಲವು ಪಠ್ಯಗಳಲ್ಲಿ ಒಂದನ್ನು ಅಧಿಕೃತಗೊಳಿಸಲು ಅವರು ಗ್ರಂಥಸಂಪಾದನಾಶಾಸ್ತ್ರವನ್ನು ಪರಿಚಯಿಸುತ್ತಾರೆ. ಇವು ಪಠ್ಯಗಳ ವೈವಿಧ್ಯವನ್ನು ಮರೆಮಾಚಿ ಒಂದನ್ನು ಎತ್ತಿಹಿಡಿಯುತ್ತದೆ. ಈ ಕೆಲಸದಲ್ಲಿ ವಿದೇಶೀ ವಿದ್ವಾಂಸರಿಗೆ ನೆರವಾದ ವಿದ್ವಾಂಸರೂ  ಬಹುಪಾಲು ಬ್ರಾಹ್ಮಣರಾಗಿದ್ದು, ಇದು ಪಠ್ಯಗಳ ವೈದಿಕೀಕರಣಕ್ಕೆ  ಕಾರಣವಾಯಿತು. ಈ ಒಂದನ್ನು ಎತ್ತಿಹಿಡಿಯುವ ಧಾವಂತದಲ್ಲಿ ಇತರ ಪಠ್ಯಗಳಲ್ಲಿ ಇದ್ದಿರಬಹುದಾದ ಹಲವು ತಿಳಿವಿನ ತಾಣಗಳನ್ನು ನಾವು ಕಳೆದುಕೊಂಡೆವು. ಮುಂದೆ ಈ ಕೆಲಸವನ್ನು ಮುಂದುವರೆಸಿದ ವಿದ್ವಾಂಸರೂ ಕೂಡಾ ಯಾವುದೋ ಒಂದು ಉದ್ದೇಶ, ತತ್ವ ಸಿದ್ಧಾಂತಗಳ ಹಿನ್ನಲೆಯಲ್ಲಿಯೇ ಸಂಪಾದನಾ ಕಾರ್ಯ ಕೈಗೊಂಡದ್ದನ್ನು ನಾವು ಇಂದು ಗುರುತಿಸುತ್ತಿದ್ದೇವೆ. ಕನ್ನಡ ಸಂಶೋಧನೆ ಇಂದು ಮರೆಯಾಗಿರಬಹುದಾದ ಈ ಅರಿವಿನ ಎಡೆಗಳಿಗೆ ಭೇಟಿ ನೀಡುವ ಕೆಲಸ ಮಾಡಿದರೆ ಸಂಶೋಧನೆ ಹೊಸ ಮೊನಚನ್ನು ಕಂಡುಕೊಳ್ಳುವುದು ಸಾಧ್ಯ.

ವಸಾಹತುಶಾಹಿ ಆರಂಭಿಸಿದ ಈ ಏಕರೂಪಗೊಳಿಸುವ ಪ್ರವೃತ್ತಿ ರಾಷ್ಟ್ರೀಯತೆಯ ಸಂಕಥನ ರೂಪಿಸಲು ಪೂರಕವಾಗಿ ಕೆಲಸ ಮಾಡಿತು. ಇದನ್ನು ಬಿಳಿಮಲೆಯವರು “ಬ್ರಿಟಿಷರು ಬಹುರೂಪೀ ಮಹಾಭಾರತವನ್ನು ಒಂದು ಪಠ್ಯವಾಗಿ ಮಾರ್ಪಡಿಸಿದಂತೆ ಹುಸಿ ರಾಷ್ಟ್ರೀಯತೆಯು ಬಹುಸಂಸ್ಕೃತಿಯ ನೆಲೆಗಳನ್ನು ಏಕರೂಪಗೊಳಿಸುತ್ತಿದೆ.”ಎನ್ನುತ್ತಾರೆ.  ಒಂದು ಗ್ರಂಥ, ಒಂದು ಭಾಷೆ, ಒಂದು ಧರ್ಮವನ್ನು ಪ್ರತಿಪಾದಿಸುತ್ತಿರುವ ಈ ಹೊತ್ತಲ್ಲಿ ಇದು ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ಮನಗಾಣಬಹುದು.
ಈ ಏಕರೂಪಿ ಪಠ್ಯಗಳಾಚೆಗೆ ಕಣ್ಣು ಹಾಯಿಸಿದರೆ ವಿಸ್ತಾರವಾದ ಬಹುಪಠ್ಯಗಳು ಗೋಚರಿಸುತ್ತಾ ಸಮುದಾಯಗಳ ನಾಡಿಮಿಡಿತಗಳನ್ನು ಪರಿಚಯಿಸುತ್ತವೆ. ಶಿಷ್ಟ ಪುರಾಣಗಳನ್ನೇ ಮಾನ್ಯ ಮಾಡುತ್ತಿರುವ ಈ ಸಂದರ್ಭದಲ್ಲಿ ಜನಪದ ಪುರಾಣಗಳು ಇವುಗಳಿಗಿಂತ ಭಿನ್ನವಾಗಿ ಕಟ್ಟಿಕೊಡುತ್ತಿರುವ ಲೋಕದೃಷ್ಟಿ ಏನು ಎಂಬುದನ್ನು ಬಿಳಿಮಲೆಯವರ ಬರಹಗಳು ಉದ್ದಕ್ಕೂ ತೆರೆದು ತೋರಿವೆ. “ಸೂಕ್ಷ್ಮವಾಗಿ ನೋಡಿದರೆ ಜನಪದ ಪುರಾಣಗಳು ದುಃಖಾಂತ ನಿರೂಪಣೆಯನ್ನು ಹೊಂದಿದ್ದರೆ ಲಿಖಿತ ಪುರಾಣಗಳು ಸಾಮಾನ್ಯವಾಗಿ ಸುಖಾಂತ ನಿರೂಪಣೆಯನ್ನು ಹೊಂದಿರುತ್ತವೆ” ಎಂದು ಬಿಳಿಮಲೆಯವರು ಗುರುತಿಸುತ್ತಾರೆ. ಈ ನಾಯಕರು ಪ್ರಭುತ್ವ, ಸ್ಥಾಪಿತ ಹಿತಾಸಕ್ತಿಯೊಂದಿಗೆ ಸಂಘರ್ಷಕ್ಕಿಳಿದು ಅಕಾಲ ಮರಣ ಹೊಂದಿರುವುದು ಬೇರೆಯದೇ ಆದ ಚರಿತ್ರೆಯನ್ನು ಕಟ್ಟಿಕೊಡುತ್ತದೆ ಎನ್ನುತ್ತಾ ಕೊರಗ ತನಿಯ, ಕಲ್ಕುಡ, ಸಿರಿ ಮುಂತಾದ ದೈವಗಳ ಜೀವನವೃತ್ತಾಂತದ ಮೂಲಕ ವಿವರಿಸುತ್ತಾರೆ. ಜೊತೆಗೆ ಮಾನವಕೇಂದ್ರಿತ ಕಥನಗಳಿಗಿಂತ ಭಿನ್ನವಾಗಿ  ಹಳೆಯ ಕಥನಗಳು ಮಾನವ ಮತ್ತು ಪ್ರಕೃತಿಯ ಸಂಯೋಜನೆಯಲ್ಲಿ ಹಸನಾಗಿ ರೂಪುಗೊಳ್ಳುತ್ತಿದ್ದವು ಎನ್ನುವುದನ್ನೂ ಹಲವು ಕಥನಗಳ ಮೂಲಕ ತೋರಿಸಿದ್ದಾರೆ.  ಸ್ವಕೇಂದ್ರಿತ ಕಥನವೇ ವಿಜೃಂಭಿಸಿ ಸಮೂಹ ಕೇಂದ್ರಿತ ತಿಳುವಳಿಕೆ ಮೂಲೆಗುಂಪಾಗಿರುವುದನ್ನು ನಮ್ಮ ಸಂಶೋಧನೆಗಳು ಗುರುತಿಸಿ ಚರ್ಚೆಗೊಳಪಡಿಸುವ ಅಗತ್ಯವನ್ನು ಅವರು ಒತ್ತಿಹೇಳುತ್ತಾರೆ.

ಇದಕ್ಕೆ ಮಾದರಿಯೆನ್ನುವಂತೆ ನಳಚರಿತೆಯ ಕಥಾನಕ ಹೇಗೆ ಓದು ಪಠ್ಯ, ಹಾಡು ಪಠ್ಯ, ದೃಶ್ಯ ಪಠ್ಯವಾಗಿ ಹರಡಿಕೊಂಡಿದೆ ಮತ್ತು ಅದು ಜನಮಾನಸದ ಭಾಗವಾಗಿವೆ ಎಂಬುದನ್ನು ‘ಹಳಗನ್ನಡದ ಬಹುರೂಪೀ ನಿರೂಪಣೆಗಳು’ ಎಂಬ ಲೇಖನದಲ್ಲಿ ತೋರಿಸಲಾಗಿದೆ. ನಳಚರಿತೆ ಎಂಬುದು ಯಕ್ಷಗಾನದಲ್ಲಿ, ಹರಿಕತೆಯಲ್ಲಿ, ಗಮಕದಲ್ಲಿ, ವರ್ಣಚಿತ್ರದಲ್ಲಿ ಮತ್ತೆ ಮತ್ತೆ ನಿರೂಪಗೊಳ್ಳುತ್ತಾ ಜನರ ನಡುವೆ ಜೀವಂತವಾಗಿತ್ತು. ಹೀಗೆ ಮಧ್ಯಕಾಲೀನ ಸಂದರ್ಭದಲ್ಲಿ ಹಲವು ಬಗೆಯಲ್ಲಿ ನಿರೂಪಣೆಗೊಳ್ಳುತ್ತಿದ್ದ ಪಠ್ಯಗಳು ಕಾಲಾಂತರದಲ್ಲಿ ಏಕರೂಪೀ ಓದುಪಠ್ಯವಾಗಿ ಬದಲಾದವು. ಭಕ್ತಿಯುಗದಲ್ಲಿ ಹೀಗೆ ಭಿನ್ನ ಪಠ್ಯಗಳನ್ನು ಏಕಾಕೃತಿಗೆ ಒಗ್ಗಿಸುವ ಯತ್ನ ನಡೆದಿದೆ. ವಸಾಹತುಶಾಹಿ ಕಾಲ ತನ್ನ ರಾಜಕೀಯ ಅಗತ್ಯಗಳಿಗೆ ತಕ್ಕಂತೆ ಇದನ್ನು ನಡೆಸಿದೆ. ಈ ವಿದ್ಯಮಾನವನ್ನು ಗಮನಿಸದೇ ಹೋದಲ್ಲಿ ಪಠ್ಯಗಳ ಕುರಿತಾದ ನಮ್ಮ ತಿಳಿವು ಅಪೂರ್ಣವಾಗುತ್ತದೆ.
ಕಾಲಾನುಕ್ರಮದಲ್ಲಿ ಹಲವು ಸಮುದಾಯಗಳಿಗೆ ನೆಲೆಯಾದ ಹಲವು ಸಂಸ್ಕೃತಿಗಳ ತೊಟ್ಟಿಲಾಗಿ ಪರಸ್ಪರ ಮಿಳಿತಗೊಂಡ ಈ ಬಹುತ್ವ ಭಾರತದ ಜೀವಸೆಲೆ ಇರುವುದು ಈ ಕಥನಗಳಲ್ಲಿ. ಒಂದೆಡೆ, ಮಾರುಕಟ್ಟೆ, ಇನ್ನೊಂದೆಡೆ ರಾಷ್ಟ್ರೀಯತೆಯ ಕಣ್ಣುಪಟ್ಟಿಗಳು ಜೀವಸೆಲೆಗಳನ್ನು ಬತ್ತಿಸುತ್ತವೆ. ಇದರಿಂದಾಗಿ ವಾಗ್ವಾದಗಳೇ ಸಾಧ್ಯವಾಗದ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ನಮ್ಮನ್ನು ಆಳುವವರು ಇಂತಹ ವಿಷಯಗಳ ಕುರಿತು ಸಂಶೋಧನೆ ಮಾಡಬೇಕು, ಇವಷ್ಟೆ ಸಂಶೋಧನಾಯೋಗ್ಯ ಎಂದು ನಿರ್ದೇಶಿಸುವ ಕಾಲಕ್ಕೆ ನಾವು ಬಂದು ತಲುಪಿದ್ದೇವೆ. ಈ ಕಾರಣಕ್ಕಾಗಿಯೇ ಎ.ಕೆ.ರಾಮಾನುಜನ್ ಅವರ 300 ರಾಮಾಯಣಗಳನ್ನು ದೆಹಲಿ ವಿಶ್ವವಿದ್ಯಾಲಯ ಪಠ್ಯವಾಗಿಸಹೊರಟಾಗ ದೊಡ್ಡ ಪ್ರತಿಭಟನೆಯೇ ವ್ಯಕ್ತವಾಯಿತು. ಈ ಕೆಲವು ದಿನಗಳ ಹಿಂದೆ ಆರ್ಯರು ವಲಸಿಗರು ಎಂಬ ಮಹತ್ವದ ಸಂಗತಿ ತಿಳಿಸುವ ರಾಖಿಗರಿ ಸಂಶೋಧನೆಯ ವಿವರಗಳನ್ನು ತಿರುಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಳಿಮಲೆಯವರು “ಗಂಭೀರ ಸಂಶೋಧಕರು ಇಂದು ತಮ್ಮ ಓದಿನಲ್ಲಿ ಕಂಡುಕೊಂಡ ಅಥವಾ ಕ್ಷೇತ್ರಕಾರ್ಯದಲ್ಲಿ ತಾವು ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ತಮ್ಮ ಸಂಶೋಧನೆಯನ್ನು ಮುಂದುವರೆಸುವುದು ಕಷ್ಟವಾಗುತ್ತಿದೆ. ಬದಲು ಸಮಕಾಲೀನ ಸಮಾಜ ಏನನ್ನು ನಿರೀಕ್ಷಿಸುತ್ತದೆಯೋ ಅದನ್ನೇ ಹೇಳಬೇಕಾಗಿರುವ ಒತ್ತಡದಲ್ಲಿ ಸಂಶೋಧಕ ಸಿಲುಕಿಕೊಂಡಿದ್ದಾನೆ.” ಎನ್ನುತ್ತಾರೆ. ಹೀಗೆನ್ನುತ್ತಲೇ ಈ ಎಲ್ಲ ಅಪದ್ಧಗಳನ್ನು ಬೌದ್ಧಿಕತಯ ಮೂಲಕವೇ ಎದುರಾಗಬೇಕಿದೆಯಾದ್ದರಿಂದ “ಬೌದ್ಧಿಕತೆ ಕಳೆಗುಂದುತ್ತಿರುವಾಗ ನಾಡು ಸಂಪನ್ನಗೊಳ್ಳುವುದಿಲ್ಲ” ಎನ್ನುತ್ತಾರೆ. ಇದರ ಭಾಗವಾಗಿಯೇ ಸರಿದುಹೋದ ಕಥನಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ತುಂಬಾ ಮುಖ್ಯವಾಗುತ್ತದೆ. 

ಇಂದಿನ ಕನ್ನಡ ಸಂಶೋಧನೆಯು ಗುಣಮಟ್ಟದ ಕೊಡುಗೆ ನೀಡುತ್ತಿಲ್ಲ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಕನ್ನಡದ ಹಿರಿಯ ಸಂಶೋಧಕರು ಯುವ ತಲೆಮಾರಿಗೆ ಮಾರ್ಗದರ್ಶಕರಾಗಿ ಒದಗಿಬರುತ್ತಿರುವುದು ಹೊಸ ಭರವಸೆ ಮೂಡಿಸುತ್ತಿದೆ. ಕೆ.ವಿ.ನಾರಾಯಣ, ಪುರುಷೋತ್ತಮ ಬಿಳಿಮಲೆ, ರಹಮತ್ ತರೀಕೆರೆ ಮೊದಲಾದ ಹಿರಿಯರು ತಮ್ಮ ನಿಡುಗಾಲದ ಸಂಶೋಧನೆಯ ಮೂಲಕ ಗಳಿಸಿದ ತಿಳಿವು ಮತ್ತು ಅಗಾಧ ಅನುಭವದ ಹಿನ್ನೆಲೆಯಲ್ಲಿ ಯುವಸಂಶೋಧಕರಿಗೆ, ಅರಿಯುವ ಕುತೂಹಲ ಹೊಂದಿರುವ ಯುವಜನತೆಯೊಂದಿಗೆ ಸಂವಾದಕ್ಕೆ ಹೊರಟಿದ್ದಾರೆ. ಇವುಗಳಿಂದ ನಾವು ಪ್ರಯೋಜನ ಪಡೆದಲ್ಲಿ ನಿಜಕ್ಕೂ ಕನ್ನಡ ಸಂಶೋಧನೆ ಹೊಸ ಆಯಾಮ ಪಡೆಯಬಲ್ಲದು.

ಕನ್ನಡ ಕಥನ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ- https://www.bookbrahma.com/book/kannada-katanagalu

Top News
Top Events