Book Watchers

ಚಂದ್ರಪ್ರಭಾ

ಚಂದ್ರಪ್ರಭಾ ಅವರು ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸರಹಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು, ಬರವಣಿಗೆ ಇವರ ಇಷ್ಟದ ಹವ್ಯಾಸ.

Related Articles

ಫೆಮಿನಿಸ್ಟ್ ಮ್ಯಾನಿಫೆಸ್ಟೊ...

ಚಿಮಮಾಂಡ ಎನ್ಗೋಜಿ ಅಡಿಚಿಯೆ ನೈಜೀರಿಯಾದ ಖ್ಯಾತ ಲೇಖಕಿ, ಚಿಂತಕಿ, ಕತೆ, ಕಾದಂಬರಿ, ನಾಟಕಗಳಿಗಾಗಿ ಜಾಗತಿಕ ಪ್ರಶಸ್ತಿಗಳಿಗೆ ಭಾಜನಳಾದವಳು. ಸುಸಂಸ್ಕೃತ ತುಂಬು ಪರಿವಾರದಲ್ಲಿ ಜನಿಸಿ ವೈದ್ಯಕೀಯ ಅಧ್ಯಯನವನ್ನು ತೊರೆದು ಲೇಖಕಿಯಾಗಿ, ಅಪರೂಪದ ಚಿಂತಕಿಯಾಗಿ ಹೊರಹೊಮ್ಮಿದವಳು.

"ಫೆಮಿನಿಸ್ಟ್ ಮ್ಯಾನಿಫೆಸ್ಟೊ" ಆಕೆಯ ಪ್ರಚಲಿತ ಕೃತಿ. ತನ್ನ ಗೆಳತಿಗಾಗಿ ಆಕೆ ಸೂಚಿಸಿದ 'ಮಗಳನ್ನು ಬೆಳೆಸಲು 15 ಸಲಹೆಗಳು'. ಪುಸ್ತಕ ಎನ್ನುವುದಕ್ಕಿಂತ ಅದೊಂದು ಸುದೀರ್ಘ ಲೇಖನ. ಅಸ್ಮಿತೆಯ ಕುರಿತಾದ ಅತ್ಯಂತ ಮಹತ್ವಪೂರ್ಣ, ಮೂಲಭೂತ ಪ್ರಶ್ನೆಗಳನ್ನು ಆಕೆ ಇಲ್ಲಿ ಎತ್ತುತ್ತಾಳೆ.. ನಿರಾಕರಿಸಲು ಸಾಧ್ಯವೇ ಇಲ್ಲದಂತಹ ಅಂಶಗಳನ್ನು ಅತ್ಯಂತ ಪ್ರಬುದ್ಧವಾಗಿ ಮಂಡಿಸುತ್ತಾಳೆ. ಸಮಾನತೆ, ಸಹಭಾಗಿತ್ವ, ಸ್ವಾತಂತ್ರ್ಯ ಇತ್ಯಾದಿ ಕುರಿತು ತೋರಿಕೆಗೆ ಮೀರಿದ ನೈಜ ಪರಿಕಲ್ಪನೆಗಳನ್ನು ನಿರೂಪಿಸುತ್ತಾಳೆ.

ಎಲ್ಲರನ್ನೂ ಮೆಚ್ಚಿಸುವುದು ಅವಳ ಕೆಲಸವಲ್ಲ.

*ಅವಳ ದೇಹ ಅವಳಿಗೆ ಮಾತ್ರ ಸೇರಿದ್ದು..ಇಷ್ಟವಿಲ್ಲದ ಯಾವುದಕ್ಕೂ ಆಕೆ ಒಪ್ಪಿಗೆ ನೀಡುವ ಅಗತ್ಯವಿಲ್ಲ.

*ತನಗೆ ಬೇಡದಿರುವುದನ್ನು ಬೇಡ ಎನ್ನುವುದು ಆಕೆಗೆ ಹೆಮ್ಮೆಯ ಸಂಗತಿಯಾಗಿರಲಿ.

*ಋತುಚಕ್ರ ಅಸಹ್ಯವಾದರೆ ಅದೊಂದು ಪವಿತ್ರವಾದ ಅಸಹ್ಯ.. ಅದಿಲ್ಲದಿದ್ದರೆ ಮನುಕುಲವೇ ಇರುತ್ತಿರಲಿಲ್ಲ.

*ಪ್ರೀತಿಸುವುದೆಂದರೆ ಕೇವಲ ಕೊಡುವುದಲ್ಲ...ಪಡೆದುಕೊಳ್ಳುವುದೂ ಸಹ.

*ಬೇಕಾದ್ದನ್ನೆಲ್ಲ ಒದಗಿಸುವುದು ಕೇವಲ ಗಂಡಸಿನ ಕೆಲಸವಲ್ಲ.

*ಯಾವುದೇ ಮಹಿಳೆ ಎಂದು ತಾನು ಸ್ತ್ರೀವಾದಿ ಅಲ್ಲ ಎಂದು ಸಾಧಿಸಿದರೆ ಅದು ಪಿತೃಪ್ರಧಾನತೆಯ ಯಶಸ್ಸನ್ನು ಮತ್ತು ಸಮಸ್ಯೆಯ ಹರವನ್ನು ಎತ್ತಿ ತೋರಿಸುತ್ತದೆ.

*ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ...ಭಿನ್ನತೆ ಸಹಜ ಗುಣ..ಅದನ್ನು ಗೌರವಿಸಬೇಕು.

   ಲೇಖನದಲ್ಲಿ ಪ್ರಸ್ತಾಪಿತ ಕೆಲವು ಅಂಶಗಳಿವು. ಚಿನುವಾ ಅಚಿಬೆ ನಂತರದ ಆಫ್ರಿಕಾದ ಪ್ರಸಿದ್ಧ ಲೇಖಕಿ ಎಂದೇ ಖ್ಯಾತಿವೆತ್ತ ಚಿಮಮಾಂಡಳ ಈ ಕೃತಿಯನ್ನು ಕನ್ನಡಕ್ಕೆ ತಂದವರು ಕಾವ್ಯಶ್ರೀ ಎಚ್. ಹಿರಿಯ ವಿಮರ್ಶಕಿ ಎಂ ಎಸ್ ಆಶಾದೇವಿರವರು ಮುನ್ನುಡಿಯಲ್ಲಿ ಈ ಸಲಹೆಗಳನ್ನು "ಜೀವಸತ್ಯದ ಬೆಳಕಿನ ಕಿರಣಗಳು" ಎಂದು ಬಣ್ಣಿಸಿದ್ದು ಅರ್ಥಪೂರ್ಣವೂ ಸರ್ವಸಮ್ಮತವೂ ಆಗಿದೆ. ಲಡಾಯಿ ಪ್ರಕಾಶನದ ಈ ಪುಟ್ಟ ಪುಸ್ತಕ ಪ್ರತಿಯೊಬ್ಬರೂ ಅಗತ್ಯವಾಗಿ ಓದಲೇಬೇಕಾದ ಪುಸ್ತಕ.

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ - https://www.bookbrahma.com/book/feminist-manifesto

.........................

ಅವ್ವ ಮತ್ತು ಅಬ್ಬಲಿಗೆ ...

ತನ್ನ ಮೊದಲ ಕವನಸಂಕಲನವೊಂದನ್ನು ಪ್ರಕಟಣೆಗೆ ಕೊಂಡೊಯ್ಯುವುದು ಒಂದು ರೀತಿಯ ಸವಾಲಿನ ಕೆಲಸ. ಅದರೊಂದಿಗೆ ಕಳವಳ, ಆತಂಕಗಳೂ ಬೆರೆಯುವುದು ನಿಜ. ವಾಚಕರು ಕವನಗಳನ್ನು ಹೇಗೆ ಸ್ವೀಕರಿಸುವರು.. ಎಷ್ಟರಮಟ್ಟಿಗೆ ಕವನಗಳು "ಕವನ" ಎನುವ ಪರಿಕಲ್ಪನೆಗೆ ಹತ್ತಿರವಾಗಿವೆ.. ತನ್ನೊಳಗೆ ಇಳಿದ ಕವಿತೆಯನ್ನು ಅಷ್ಟೇ ಸಶಕ್ತವಾಗಿ, ಯೋಗ್ಯ ರೀತಿಯಲ್ಲಿ ನಿರೂಪಿಸಲು ತನಗೆ ಸಾಧ್ಯವಾಗಿದೆಯೆ..? ಕಾಡುವ ಇಂಥ ಹಲವಾರು ಸಂಗತಿಗಳು. ಸ್ವತಃ ನನ್ನನ್ನು ಬಾಧಿಸುವ ಇಂಥ ವಿಚಾರಗಳು ಗೆಳತಿ ಶೋಭಾಳನ್ನು ಕಾಡಿರುವವು ಎಂದು ನನಗೆ ತೋರಿದರೆ ಅದಕ್ಕೆ ಕಾರಣವಿದೆ.

ತಮ್ಮ ಮೊದಲ ಕವನ ಸಂಕಲನವನ್ನು ಪ್ರೀತಿಯಿಂದ ಕಳಿಸಿರುವ ಶೋಭಾ ಅದರ ಜೊತೆಗೊಂದು ಅಡಿ ಟಿಪ್ಪಣಿ ಇರಿಸಿದ್ದಾರೆ.. 'ಓದಿ ಮೇಡಂ. ಮಹಿಳಾ ಓದುಗರಾಗಿ ನಿಮ್ಮ ನಾಲ್ಕು ಸಾಲಿನ ಪ್ರತಿಕ್ರಿಯೆ ನಿರೀಕ್ಷಿಸುವೆ.' ನೋಡಿದ ತಕ್ಷಣ ಗಮನ ಸೆಳೆಯುವ ಮುಖಪುಟ ಹೊತ್ತ ಸಂಕಲನದ ಶೀರ್ಷಿಕೆಯೂ ಅಷ್ಟೇ ಆಪ್ತವಾಗಿದೆ.ತಮ್ಮ ಚೊಚ್ಚಲ ಕೃತಿಯನ್ನು 'ಶ್ರಮಿಕರ ಬೆವರಿಗೆ' ಅರ್ಪಿಸುವ ಅವರ ಕಕ್ಕುಲಾತಿ ಇನ್ನೂ ಮಧುರ. ಅವರೇ ಹೇಳುವಂತೆ ಮಲೆನಾಡ ಸೆರಗಿನಲ್ಲಿ ಹುಟ್ಟಿ ಬೆಳೆದವರು.. ಕೃಷಿಯನ್ನು ಉಸಿರಾಗಿಸಿಕೊಂಡವರು. ಈ ಅಂಶ ಸಂಕಲನದುದ್ದಕ್ಕೂ ಗಮನ ಸೆಳೆಯುವುದು.

'ನನ್ನ ಕವಿತೆ ನಿಮ್ಮಂಥವರಿಗಲ್ಲವೇ ಅಲ್ಲ.. ' ಎಂದು ಸಾಗುವ ಕವನದಲ್ಲಿ ತನ್ನ ಕವಿತೆ ಜೀವಂತ ಕಾವ್ಯಗಳಾಗಿರುವ ಅಪ್ಪನಿಗಾಗಿ, ಅವ್ವನಿಗಾಗಿ, ಅಣ್ಣ-ಅಕ್ಕ-ತಂಗಿಯರಿಗಾಗಿ ಎಂಬ ಆಪ್ತ, ನಿವೇದನೆಯಿದೆ. 'ಅವರಿಗೆ ಅರ್ಥವಾಗದ ನೂರೊಂದು ಪದ ಕಟ್ಟಿ ಸಾಲಾಗಿಸಿ ಕವಿಯೆನಿಸಲಾರೆ' ಎಂಬ ದಿಟ್ಟ ನಿಲುವಿದೆ. ಹಂಚಿಕೊಂಡುಣ್ಣುವ ಕೃಷಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಜೀವ 'ಅನ್ನಕ್ಕಿಂತಲೂ ಹೆಚ್ಚೇ ಎಣ್ಣೆ ದೀಪ?' ಎಂದು ಪ್ರಶ್ನಿಸುತ್ತದೆ.. 'ತವರೆಂದರೆ ಬರಿ ಹಂಚಿನದೊಂದು ಮಾಡೆ.. ?' ಎಂಬ ಚಿಂತನೆಗೆಳಸುತ್ತದೆ.

ಪ್ರತಿ ಹೆಣ್ಣೂ ತನ್ನ ಜೀವಮಾನದ ಅರ್ಧಕ್ಕಿಂತ ಹೆಚ್ಚು ಕಾಲ ಮುಟ್ಟಿಗೊಳಗಾಗುವಳು. ಆದರೆ ಎಷ್ಟು ಜನ ಅದನ್ನು ಕುರಿತು ಮುಕ್ತವಾಗಿ, ಬಹಿರಂಗವಾಗಿ ಮಾತಾಡುವರು!! ತನ್ನದೇ ಕಾರಣಗಳಿಂದ ಅಸಂಗತವೆನಿಸಿರುವ ಮುಟ್ಟಿನ ಕುರಿತು ಸಹಜವಾಗಿ, ಸ್ವಚ್ಛಂದವಾಗಿ ಪ್ರಸ್ತಾಪಿಸುವ ೩-೪ ಕವಿತೆ ಇಲ್ಲಿರುವುದು ವಿಶೇಷ. ಮೊದಲ ಋತು ಸಂಭವಿಸಿದಾಗ ಕಂಡ ಮೊಡವೆಯಲ್ಲಿ ಕಾಮನಬಿಲ್ಲು ಮೂಡಿತ್ತು ಎನ್ನುತ್ತಾಳೆ ಕವಯಿತ್ರಿ. ಅಲ್ಲಿ ಹೆಮ್ಮೆಯ ಭಾವವಿದೆ. 'ಪ್ರತಿ ಮಾಸವೂ ಥೇಟ್ ಹೆರಿಗೆಯದ್ದೇ ನೋವುಂಡರೂ|ಜೀವ ಜಕ್ಕಾಗಲಿಲ್ಲ.. ಬದಲು ಅರಳಿತ್ತು ಹೆಣ್ತನದ ಹೂವಾಗಿ' ಎಂಬ ಕೃತಾರ್ಥತೆಯಿದೆ.

ಎಲ್ಲರೊಡನಿದ್ದೂ ಏಕಾಂಗಿಯಾಗಿ ಬಿಡುವ, ತನ್ನವರೊಡನಿದ್ದೂ ಪರಕೀಯಳಾಗಿ ಬಿಡುವ 'ಅವಳನ್ನು' ಕವಯಿತ್ರಿ "ಅವಳು ಮುಟ್ಟಿನ ಬಟ್ಟೆಯಂತವಳು.. ಹೊರ ಜಗುಲಿಗೆ ನಿಷಿದ್ಧವಾದೊಂದು ಕೈಚೌಕದ ಚಿಂದಿ" ಎನ್ನುತ್ತಾಳೆ. ಬಾಲಕ ಅಯ್ಯಪ್ಪನನ್ನು "ಹುಲಿ ಹಾಲನುಂಡವನೆ ನೋಡು ಬಾ ತಾಯ ಹಾಲ ರುಚಿ.. " ಎಂದು ಆಹ್ವಾನಿಸುತ್ತಲೇ "ಥೇಟ್ ನನ್ನ ಮಗನಂತೆ ಎತ್ತಿಕೊಂಡು ಮುತ್ತಿಡುವೆ.. ಈಗ ಹೇಳು, ನನ್ನ ಮುಟ್ಟು ನಿನಗೆ ಮೈಲಿಗೆಯೆ? " ಎಂದು ಪ್ರಶ್ನಿಸುವ ಕವಿ ಮೂಲಭೂತವಾದಿಗಳಿಗೆ ತಣ್ಣಗೆ ಸವಾಲೆಸೆಯುತ್ತಾರೆ. ಮರಿ ಹಾಕಿದ ನಾಯಿಯಲ್ಲೂ ಬಾಣಂತಿಯನು ಕಾಣುವ ಕವಿ ಅನ್ನವಿಲ್ಲದೆ ಸತ್ತ ಜೀವಿಗಾಗಿ ಮರುಗುತ್ತಾರೆ..ಇಷ್ಟಾದರೂ "ಮರಿಗಳ ಹೆತ್ತಪ್ಪ ಮುಖ ತೋರಲೇ ಇಲ್ಲ.. ಯಾವ ಬೀದಿಯಲಿತ್ತೊ ಗಂಡು ಪ್ರಾಣಿ!" ಎಂಬ ಉದ್ಗಾರದಲ್ಲಿ ಪಿತೃ ಸಂಸ್ಕೃತಿಯ ಪಾರಮ್ಯದ ವಿರುದ್ಧ ತಣ್ಣಗಿನ ಒಂದು ಬಂಡಾಯದ ದನಿ ಎತ್ತುತ್ತಾರೆ.

ಈ ಕವಿತೆಗಳಲ್ಲಿ ಏನನ್ನೋ ನಿಷ್ಕರ್ಷಿಸುವ ತರ್ಕ, ವಾಗ್ವಾದಕೆಳಸುವ ಧಾವಂತ, ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಒಲವು..ಎಂಥದೂ ಇಲ್ಲ. ತಾನು ಕಂಡುದನ್ನು ಕಂಡಂತೆ ನಿರೂಪಿಸುವ ಸಹಜ ವಾಂಛೆಯಿದೆ, ತನ್ನ ಪಾಡಿಗೆ ತಾನು ಜುಳು ಜುಳು ಹರಿವ ತೊರೆಯಂತೆ. ಮೊದಲ ಕವನ ಸಂಕಲನ ಎಂಬ ಪರಿಮಿತಿಯನ್ನು ಮೀರುವ ಹಲವಾರು ಸಶಕ್ತ ಸಾಲುಗಳಿವೆ.. ಹೃದ್ಯವೆನಿಸುವ ಸುಂದರ ಪ್ರತಿಮೆಗಳಿವೆ. ❣❣

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ - https://www.bookbrahma.com/book/avva-mattu-abbalige

...........................

ಎಲಕುಂಚವಾರರ ಮೂರು ನಾಟಕಗಳು...

ಮರಾಠಿ ಸಾಹಿತ್ಯದಂತೆಯೇ ರಂಗಭೂಮಿಯೂ ಸಮೃದ್ಧ. ವಿಜಯ ತೆಂಡೂಲ್ಕರ್ ನಂತರದ ಮಹತ್ವದ ನಾಟಕಕಾರ ಮಹೇಶ ಎಲಕುಂಚವಾರ.  ವಸ್ತು, ವಿನ್ಯಾಸ, ತಂತ್ರಗಳ ಮೂಲಕ ಗಮನ ಸೆಳೆಯುವ ಅವರ ಮೂರು ನಾಟಕಗಳು "ಸೊನಾಟಾ", " ಧರ್ಮಪುತ್ರ", "ವಾಸಾಂಸಿ ಜೀರ್ಣಾನಿ". ಈ ಮೂರನ್ನೂ ಕನ್ನಡಕ್ಕೆ ತಂದವರು ಗಿರೀಶ ಕಾರ್ನಾಡರು. 

ಮೂರೂ ಏಕಾಂಕ ನಾಟಕಗಳು ( one act plays).

'ಸೊನಾಟಾ' ಮುಂಬೈ ಮಹಾನಗರದಲ್ಲಿ ನೆಲೆಸಿದ ಮಧ್ಯಮವರ್ಗದ, ಆಧುನಿಕತೆಗೆ ತೆರೆದುಕೊಂಡ ಮೂವರು ಹೆಂಗಳೆಯರ ಕಥನ. ಉಡುಪು, ಆಹಾರ-ವಿಹಾರ, ವೃತ್ತಿ, ಹವ್ಯಾಸ ಒಂದೊಂದರಲ್ಲೂ ಅವರಿಗಿರುವ ವೈರುಧ್ಯ.. ಅವರ ಜೀವನದಲ್ಲಿ ಸುಳಿಯುವ ಪುರುಷರು.. ಮೂವರ ಮನೋಭೂಮಿಕೆಯ ತವಕ, ತಲ್ಲಣಗಳು.. ಕಳವಳಕಾರಿ ಸಂಗತಿಗಳು..ಏಕಾಂಗಿಯಾಗಿ ಬದುಕಿನ ಸವಾಲುಗಳನ್ನು ಮೆಟ್ಟುತ್ತಲೇ ಪರಸ್ಪರರನ್ನು ವಂಚಿಸುವ ಅನಿವಾರ್ಯತೆ.. ಬಿಡುಬೀಸು ಎನಿಸುವ ಅವರ ನಡೆನುಡಿ.. ಸದಾ ಗಿಜಿಗುಡುವ ಮಹಾನಗರದಲ್ಲಿ ಕಳೆದು ಹೋಗುವ ಬದುಕಿನ ಚಿತ್ರಣ. 

'ಧರ್ಮ ಪುತ್ರ'  ಕೇವಲ ಇಬ್ಬರು ಪಾತ್ರಧಾರಿಗಳಿರುವ ಮೂರು ಪಾತ್ರಗಳಿರುವ ನಾಟಕ. ಹೆಸರೂ ಇಲ್ಲದ ಪಾತ್ರಗಳು.. ಗೃಹಸ್ಥ,  ಮಹಿಳೆ ಮತ್ತು ಅವರು ದತ್ತು ತೆಗೆದುಕೊಂಡ ಅನಾಥ ಮಗು. ಅವರಿಬ್ಬರೂ ಒಬ್ಬರಾದ ನಂತರ ಒಬ್ಬರು ಮಗುವಿನ ಪಾತ್ರವನ್ನು ನಿರ್ವಹಿಸುವ ರೀತಿಯೇ ಅದ್ಭುತ. ಸಂಗಾತಿಯಲ್ಲಿ ಸಹಜ ನಿರೀಕ್ಷೆಗಳನ್ನು ಇರಿಸಿಕೊಂಡ ಪತಿ. ಆತನ ಕೈ ಸೋಕುವುದು ದೂರದ ಮಾತು; ಮಾತೆತ್ತಿದರೆ ಅಸಹ್ಯ ಎಂಬ ಮನೋಭಾವದ ಪತ್ನಿ. 

ಬಾಲಮಾನಸ ಶಾಸ್ತ್ರ (child psychology) ದ ಪ್ರಕಾರ ಮಗುವನ್ನು ಬೆಳೆಸುತ್ತಿದ್ದೇವೆಂಬ ಭ್ರಮೆಯಲ್ಲಿ ಕೊನೆವರೆಗೂ ತೇಲಾಡುವ ಪಾತ್ರಗಳು. ಅವರಿಬ್ಬರ ಅಸಹಜ ವರ್ತನೆ, ಆಂತರ್ಯದ ಕ್ರೌರ್ಯ.. ಸಮಾಜದೆದುರು ಅವರು ಹಾಕುವ ಸೋಗು.. ಕೊನೆಯಲ್ಲಿ ಅವರ ವಿಕೃತಿಗೆ ಬಲಿಯಾಗಿ ಜೀವ ತೆರುವ ಅನಾಥ ಮಗು. ಧರ್ಮ ಅಧರ್ಮಗಳ ಬಗೆಗಿನ ಅವರ ಹಸಿಬಿಸಿ ನಂಬಿಕೆಗಳು, ಮೌಡ್ಯ.. ಹುಸಿ ಆದರ್ಶಗಳು.. ಗೆದ್ದೆವೆಂದು ಬೀಗುವಾಗಲೂ ಸೋತು ಬಸವಳಿಯುವ ಪಾತ್ರಗಳು. ಮಿಥ್ಯೆಯೇ ಆದರ್ಶವಾಗಿ,  ವಿಕೃತಿಯೇ ಸಂಸ್ಕೃತಿಯಾಗಿ ನೆಲೆಗಾಣದ ಜೀವಗಳ ಹೃದಯವಿದ್ರಾವಕ ಕಥನ. 

'ವಾಸಾಂಸಿ ಜೀರ್ಣಾನಿ'  ಮರಣ ಶಯ್ಯೆಯ ಮೇಲಿರುವ ಅಪ್ಪ. ಅಸಹನೆಯಿಂದ ಆತನ ಅಂತ್ಯವನ್ನು ಕಾಯುತ್ತ ಕುಳಿತ ಹೆಂಡತಿ, ಮಕ್ಕಳು, ಸಂಬಂಧಿ.. ಫ್ಲ್ಯಾಶ್ ಬ್ಯಾಕ್ ರೀತಿಯಲ್ಲಿ ಬಿಚ್ಚಿಕೊಳ್ಳುವ ಕತೆ. ಓದುಗ ನಿರೀಕ್ಷೆಯನ್ನೇ ಮಾಡಿರದಂಥ ತಿರುವುಗಳು, ಪಾತ್ರಗಳ ಒಳತೋಟಿ.. ಗೀತೆಯ ಒಂದು ಶ್ಲೋಕದಿಂದ ಆರಿಸಿಕೊಂಡ ಸಾಲು ಕಥೆಯ  ಶೀರ್ಷಿಕೆ. ಜೀವಿಗೆ ಸಾವು ಖಚಿತ.. ಬಟ್ಟೆ ಬದಲಾಯಿಸಿದಂತೆ ಶರೀರ ಬದಲಾಯಿಸುವ ಆತ್ಮ ಎಂಬರ್ಥದ ಶ್ಲೋಕ.. ಶರೀರ ಕಳಚುವ ಆತ್ಮದ ಮಾತು ದೂರ,  ಮನುಷ್ಯ ಕಳಚುವ ಮುಖವಾಡಗಳೇ ಲೆಕ್ಕವಿಲ್ಲದಷ್ಟು ಎಂಬ ದಿಗ್ಭ್ರಮೆಗೆ ದೂಡುವ ಕಥನ. 

ನಾಟಕಕಾರರು ಬಳಸುವ ಆಧುನಿಕ ತಂತ್ರಗಳು ನೇರವಾಗಿ ನಿರೂಪಿಸದೇ ಪಾತ್ರಗಳ ಮನೋವ್ಯಾಪಾರದ ಮೂಲಕವೇ ಕಥನದ ಆಗುಹೋಗುಗಳನ್ನು ಸೂಚಿಸುತ್ತ ಹೋಗುವ ಕೃತಿಕಾರರ ಕೌಶಲ ಅನ್ಯಾದೃಶ. ಓದುಗರ ಕಲ್ಪನೆಯಲ್ಲಿ ಬಿಚ್ಚಿಕೊಳ್ಳುವ ಪಾತ್ರಗಳನ್ನು ರಂಗದ ಮೇಲೆ ನೈಜವಾಗಿ ನೋಡುವ ಅನುಭವ ವರ್ಣನಾತೀತ. 'ತಮ್ಮ ವಿಶಿಷ್ಟ ಶೈಲಿ,  ನಿರೂಪಣೆಯ ಮೂಲಕ ಸಾಮಾನ್ಯ ಮನುಷ್ಯನಲ್ಲಿ ಹುದುಗಿದ ಆತಂಕ-ಕ್ರೌರ್ಯ, ಆತ್ಮ ಭೀತಿ, ದುಸುಮುಸಿಗಳ ಆಂತರಿಕ ಜಗತ್ತನ್ನು ತೆರೆದಿಡುವ ಎಲಕುಂಚವಾರರ ನಾಟಕಗಳು ವಾಸ್ತವವಾದದ ಮಿತಿಯನ್ನು ದಾಟುತ್ತವೆ' ಎಂಬ ಮಾತು ಅಕ್ಷರಶಃ ಸತ್ಯ. 

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ - https://www.bookbrahma.com/book/sonata-dharmaputra-vasansi-jeernani

Top News
Top Events