Book Watchers

ಕ್ಷಿತಿಜ್ ಬೀದರ್

ಕನ್ನಡದ ಪ್ರಮುಖ ಕಥೆಗಾರ ಕ್ಷಿತಿಜ ಬೀದರ್‌ ಅವರು ಸಾಹಿತ್ಯ, ಓದಿನಲ್ಲಿ ಬಹು ಮೋಹಕತೆ ಉಳ್ಳವರು. ಅವರ ಹಲವಾರು ಕಥೆಗಳು, ಲೇಖನಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮುಕ್ತ, ಅಸ್ಪಷ್ಟ ಕಾದಂಬರಿಗಳನ್ನು ರಚಿಸಿದ್ದಾರೆ. ಮುನ್ಸಿ ಪ್ರೇಮಚಂದ ಅವರ ’ಮುದ’ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತ ’ಕಥಾ ಸ್ಪೋಟ’ ಎಂಬ ಕಥಾ ಸಂಕಲನವನ್ನು ಹೊರತರುವಲ್ಲಿ ನಿರತರಾಗಿದ್ಧಾರೆ. 

Related Articles


ಮುಕ್ತಗೊಂಡ ಸ್ನಾನ 

ಅಂಕಿತ ಪುಸ್ತಕ ಹೊರತಂದ ರಥ ,ಕ್ಷೇತ್ರ ,ಸ್ನಾನ ಮೂರು ಕಿರು ಕಾದಂಬರಿಯನ್ನೊಳಗೊಂಡ ಎಂ.ವ್ಯಾಸರ ' ಸ್ನಾನ ' ಹೊತ್ತಿಗೆಯು ಇತ್ತೀಚೆಗೆ ಮರು ಓದುವಂತಾಯಿತು.ಇದು ಎಂ.ವ್ಯಾಸರು ಮೆಚ್ಚಿಕೊಂಡ ವಿಶೇಷ ಕೃತಿಯಾಗಿದೆ.

ಈ ಕೃತಿಯ ಮುನ್ನುಡಿಯಲ್ಲಿ ರವಿ ಬೆಳಗೆರೆ ' ಸಿದ್ಧಾಂತಗಳ ಚರ್ಚೆ ಎಲ್ಲೋ ಒಂದು ಕಡೆ ಕತೆಯ ಆಚೆ ಹೋಗಿ ನಿಲ್ಲುತ್ತದೆ ' ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಸ್ವತಃ ಎಂ. ವ್ಯಾಸರ ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ಕಂಪನಗಳು ಓದುಗರಿಗೆ ನಿಜಕ್ಕೂ ಕೇಳಿಸುತ್ತವೆಯೇ ಎಂಬ ಜಿಜ್ಞಾಸೆಯಲ್ಲಿ ಕಾದಂಬರಿಯ ಹುಟ್ಟಿನ ಬಗ್ಗೆ ' ನಿಮಗೊಂದು ಪತ್ರ ' ದಲ್ಲಿ ಅವರೇ ವಿವರಿಸಿದ್ದಾರೆ. ಎರಡಕ್ಷರ ಶೀರ್ಷಿಕೆಯ ಪರಂಪರೆ ಕಾದಂಬರಿಗೂ ವಿಸ್ತರಿಸಿದೆ.

ರಥ ಕಾದಂಬರಿ ನೆನಪಿನ ಸರಪಳಿಯಲ್ಲಿ ಬಂಧಿಸಿ ಎಳೆದುಕೊಂಡು ಹೋಗುವುದರಲ್ಲಿ ಹೆಣ್ಣಿನ ಸ್ವಗತ ಪಾತ್ರವೇ ನಿರೂಪಣಾ ತಂತ್ರವಾಗಿದೆ.!. ಗಂಡಿಗೆ ಸಂಭೋಗ ಆ ಕ್ಷಣಕ್ಕಷ್ಟೆ ಅಂತ್ಯ ಆದರೆ ಹೆಣ್ಣಿಗೆ ಆ ಕ್ಷಣದಿಂದ ಪ್ರಾರಂಭ , ಅಂತ್ಯವಿಲ್ಲದ್ದು...ಜೈವಿಕ ಭೌತಿಕ ಅಳಿಸಲಾಗದ ಸಂವೇದನೆ...! ಕಥಾ ನಾಯಕಿ ಸುಶೀಲಾ ತನ್ನ ಸಂಯೋಗದ ಅನುಭವವನ್ನು ಬಾಲ್ಯದ ನೆರೆಮನೆ ಸಂಗಾತಿ ರವಿಗೆ ಸ್ವಗತವಾಗಿ ಕಥೆ ಹೇಳುವ ಪ್ರಥಮ ನಿರೂಪಣೆಯಲ್ಲಿ ಬೇಗುದಿ ಬಿಚ್ಚಿಕೊಳ್ಳುತ್ತದೆ. ಮಕ್ಕಳಾಟದಂತೆ ಗಂಡ ಹೆಂಡತಿ ಕ್ರಿಯೆಯ ಪರಿಣಾಮದಿಂದ ಹೊರಬರಲಾಗದ ಮಾನಸಿಕ ದ್ವಂದ್ವವನ್ನು ರವಿಯಲ್ಲಿ ಹಂಚಿಕೊಳ್ಳುವ ಸುಶೀಲಾಳ ಸೂಕ್ಷ್ಮ ಸಂವೇದಿನೀ ಭಾವ ಕ್ರಮಿಸುವ " ರಥ " ಹೃದಯಂಗಮವಾಗಿದೆ. ಈ ಕಾದಂಬರಿಯನ್ನು ಹಗಲು ಒಂದು ರಾತ್ರಿಯೊಳಗೆ ಎಂ.ವ್ಯಾಸರು ಬರೆದಿರುವುದು ಅಚ್ಚರಿ ಎನಿಸುತ್ತದೆ. ಹೊತ್ತುಕೊಂಡ ಭಾವದೊತ್ತಡ ಹೇಗಿರಬಹುದು ಎಂಬ ಜಿಜ್ಞಾಸೆ ಮೂಡುತ್ತದೆ. ಮುರಿದ ಸೇತುವೆಯಡಿ ಜರುಗಿದ ಕ್ರಿಯೆಯ ನೆನಪಿನ ರಥ ಬದುಕಿನುದ್ದಕ್ಕೂ ಮುಂದುವರೆಯದೆ ಕಚೇರಿಯಲ್ಲಿ ಜೊತೆಯಾದ ಸಹದ್ಯೋಗಿಯ ಒಡನಾಟದಲ್ಲಿ ಥಟ್ಟನೆ ನಿಂತುಬಿಡುವ ಅನುಭವ ಸುಶೀಲಳಿಗಾದಾಗ ಅವಳ ವರ್ತಮಾನ ಬದುಕು ಇನ್ನು ಸಂಭ್ರಮದಲ್ಲಿ ತೊನೆಯುತ್ತದೆ ಎನ್ನುವುದು ಕಾದಂಬರಿಯ ಅಂತ್ಯ ...!? 

ಸ್ತ್ರೀ ಭೋಗದ ವಸ್ತು ಎನ್ನುವುದು ಅನಾದಿ ಕಾಲದಿಂದಲೂ ನಡೆದು ಕೊಂಡು ಬಂದಿದೆ. ಇದನ್ನು ಸುಳ್ಳು ಮಾಡಲು ಸ್ತ್ರೀ ಸ್ವಾತಂತ್ಯ್ರದ ಹೆಸರಿನಲ್ಲಿ ಪ್ರಗತಿಪರರು ಪ್ರತ್ಯೇಕತೆ ಸಾಧಿಸಿದರೂ ಕಾಮ ಕ್ಷೇತ್ರದಿಂದ ಹೊರತಾಗಿಲ್ಲ. ಮಕ್ಕಳು ಬೇಡ ಎಂದು ಸಿಡಿದಿಲ್ಲ. ಎಲ್ಲರೂ ಸನ್ಯಾಸಿನಿಯರಾಗಿದ್ದರೆ ಅದೊಂದು ಬಂಡಾಯ ಸಮಾಜ ಎನಿಸಿಕೊಳ್ಳುತ್ತಿತ್ತು. ಬರೀ ಮಾತಿನ ಶಬ್ದ ಸ್ಫೋಟ...! ಎಂ. ವ್ಯಾಸರು ಗರ್ಭಾಶಯವನ್ನೇ ಮೂಲವಾಗಿಟ್ಟುಕೊಂಡು " ಕ್ಷೇತ್ರ " ಎಂದು ಹೆಸರಿಸಿ ಅದರ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಅಸಂಗತವನ್ನೇ ಕಲಾತ್ಮಕವಾಗಿ ಸಾಹಿತ್ಯಕರಣ ಗೊಳಿಸಿದ್ದಾರೆ.ಮನುಷ್ಯ ಸಂಬಂಧಗಳಿಗೆ ನೈತಿಕ ಅನೈತಿಕದ ಕಟ್ಟುಪಾಡುಗಳೆಂದೂ ಅಡ್ಡಿಯಾಗಲಾರವು ಎನ್ನುವ ಸಂದರ್ಭದಲ್ಲಿ ವಂಶವಾಹಿನಿಯ ದೃಷ್ಟಿಯಲ್ಲಿ ಅನಿವಾರ್ಯ ಪ್ರಸಂಗವನ್ನು ಸಂಯಮತೆಯಲ್ಲಿ ಪ್ರತಿಪಾದಿಸಿದ್ದಾರೆ.

ಅನಂತ ಶರ್ಮನಿಗೆ ಇಬ್ಬರು ಗಂಡು ಮಕ್ಕಳು ,ರವಿ ನೈತಿಕ ಮಗ ತಾಯಿಯನ್ನು ಕಳೆದುಕೊಂಡವನು . ಇನ್ನೊಬ್ಬ ನಾಗಭೂಷಣ ,ಆಶ್ರಯಕ್ಕೆ ಬಂದ ಹೆಣ್ಣಿನ ಶೋಷಿತ ಮಗ.ಇಬ್ಬರ ವಿಚಾರಧಾರೆಗಳು ಭಿನ್ನ ,ದ್ವೇಷದಲ್ಲಿಯೇ ಬೆಳೆದು ದೊಡ್ಡವರಾದವರು. ರವಿ ಮದುವೆಯಾದ ಮೀನಾಕ್ಷಿಗೆ ದೈಹಿಕ ಹಿಂಸೆ ನೀಡುತ್ತಾ ಬರಲಾಗಿದೆ .ಅಪ್ಪನ ಮೇಲೆ ನಾಗಭೂಷಣನ ಮೇಲೆ ಸೇಡು ತೀರಿಸಿಕೊಳ್ಳುವಂತೆ ವಿಲಕ್ಷಣ ರಾಮಾಯಣ ಪಾತ್ರಗಳ ಸೃಷ್ಟಿಸಿ ಬೇಯುತ್ತಿದ್ದವನು ಕಡೆಗೆ ಅಪಘಾತದಲ್ಲಿ ಮರಣಿಸುತ್ತಾನೆ. ವಿಧವೆ ಮೀನಾಕ್ಷಿ ಪ್ರತಿಭಾವಂತೆ ,ವಂಶವಾಹಿನಿ ಬೆಳೆಯದ ದುಃಖ ಮಾವ ಸೊಸೆಯಲ್ಲಿ ಕುಟುಕುತ್ತಿದ್ದಂತೆ ದೂರದಲ್ಲಿ ರಂಗ ಪ್ರದರ್ಶನ ನೀಡುತ್ತಾ ನೆಲೆಸಿದ ನಾಗಭೂಷಣನ ಭೇಟಿಗೆ ಬಂದ ಮಾವ ತನ್ನ ಹಾದರ ಸತ್ಯವನ್ನೇ ತೆರೆದಿಡುತ್ತಾನೆ. ಅಮ್ಮನ ಅನೈತಿಕತೆಗೆ ಕ್ರೋಧಿತನಾಗಿದ್ದ ನಾಗಭೂಷಣ ಅನಿವಾರ್ಯ ಸನ್ನಿವೇಷಕ್ಕೆ ರಾಜಿಯಾಗಿ ಅಪ್ಪನ ಊರಿಗೆ ಬರುತ್ತಾನೆ. ಅಲ್ಲಿರುವ ಮೀನಾಕ್ಷಿಯ ಗುಣಸೌಂದರ್ಯದ ಸೆಳೆತದಲ್ಲಿ ಕ್ಷೇತ್ರವು ಯಶ್ವಸಿ ಫಲ ಪಡೆಯುತ್ತದೆ. ಕಾಮವನ್ನು ಸಂಸ್ಕರಿಸಿ ಪವಿತ್ರಗೊಳಿಸಿ ಸಂಬಂಧವನ್ನು ದೈವಿ ಹಂತಕ್ಕೆ ಕೊಂಡೊಯ್ಯಲು ಎಂ. ವ್ಯಾಸರಿಗೆ ಮಾತ್ರ ಸಾಧ್ಯ.ಹಾದರವು ಪವಿತ್ರ ಎನ್ನುವ ಅವರ ನಿರುಪಣಾ ಶೈಲಿಯೇ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾಗಿದೆ.

" ಸ್ನಾನ "ಮೈಲಿಗೆಯ ಸಂಕೇತವೆನಿಸಿದರೂ ಆಧ್ಯಾತ್ಮಿಕ ಸೂಕ್ಷ್ಮತೆಯನ್ನು ಗುರುತಿಸಬಹುದಾದ ಕಥಾ ಹಂದರ...! ಕುಂಡಲಿನಿ ಯೋಗದ ಸಾರವನ್ನು ಸತ್ಯನ ಪಾತ್ರದಲ್ಲಿ ಸಾಕ್ಷಾತ್ಕರಿಸಿದ್ದಾರೆ.ಮಠದ ಸ್ವಾಮಿಗಳಾದವರ ಆಂತರಿಕ ತುಮುಲ ತಲ್ಲಣಗಳ ಚಿಕಿತ್ಸಾತ್ಮಕ ವಿವರಣೆಗಳು ಕುತೂಹಲಕಾರಿಯಾಗಿವೆ . ಮಠದ ಭಕ್ತರ ಒತ್ತಾಸೆ , ಸ್ವಾಮಿಯ ಸಾಮಾಜಿಕ ಪಾತ್ರ ನಿರ್ವಹಣೆ , ಗುರುಗಳ ಉತ್ತರಾಧಿಕಾರಿಯಾಗಿ ಮರಿಗುರುಗಳ ನೇಮಕ ಸಹಜವೇ.,!ಸೆಕ್ಸ್ ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿಯೇ ತನ್ನ ವಿರಾಟ ಸ್ವರೂಪವನ್ನು ತೋರಿಸುತ್ತದೆ. ಆದರೆ ಬಾಲ್ಯದಲ್ಲಿಯೇ ಸನ್ಯಾಸತ್ವದ ದಾರಿಗೆ ತಳ್ಳಿದಾಗ ಕಾಮನೆಗಳು ಉಸಿರುಗಟ್ಟುವ ಸ್ಥಿತಿಯನ್ನನುಭವಿಸುತ್ತವೆ. ಬಾಲ್ಯದಿಂದಲೂ ಸಹಪಾಠಿಯಾಗಿದ್ದ ದೇವಿಕಾ ದೊಡ್ಡವಳಾಗಿ ಮದುವೆಯಾಗಿದ್ದರೂ ಗಂಡನ ಸಾವಿನಿಂದ ಪ್ರಥಮ ಮಿಲನವಿಲ್ಲದೆ ಸ್ವಾಮಿ ಮಠದ ಪಕ್ಕದ ಮನೆಯಲ್ಲಿಯೇ ಸನ್ಯಾಸಿನಿಯ ಬಾಳಾಗಿರುವುದು ಇಬ್ಬರ ಸಮಾನಾಂತರ ದೈಹಿಕ ಸ್ಥಿತಿಗಳು ಗಮನಾರ್ಹವಾಗಿವೆ. ಸ್ವಾಮಿಗೆ ಸಿಕ್ಕ ಧ್ಯಾನ ತರಬೇತಿ ಕ್ರಿಯೆ ಮಾತ್ರ ದೇವಿಕಾಗಿಲ್ಲವಷ್ಟೆ...! ಭೌತಿಕವಾಗಿ ಕಾಮನೆಗಳ ಸಂಯಮತೆಯೊಂದಿಗೆ ಸತ್ಯ ಮಠದಲ್ಲಿ ಬೇಯುತ್ತಿರುವಾಗಲೇ ದೇವಿಕಾಳ ಸಾಮಿಪ್ಯದ ಯೋಚನೆಯಲ್ಲಿ ಸಂದರ್ಭವು ಮುಖಾಮುಖಿಯಾಗುತ್ತದೆ. ಬಾಲ್ಯದ ಸ್ನೇಹಿತೆ ವಿಧವೆ ದೇವಿಕಾ ಸ್ವಾಮಿಯ ಸಂಪರ್ಕದಲ್ಲಿ ಅರಳುತ್ತಾಳೆ ಆದರೆ ದೈಹಿಕ ಕ್ರಿಯಾ ಕರ್ಮಗಳ ಧ್ಯಾನ ಯೋಗ ಸ್ವಾಮಿ ಸತ್ಯ ಅವರಿಗೆ ತಿಳಿಯದೇ ಮೂಲಾಧಾರ ಚಕ್ರದ ಶಕ್ತಿ ತನ್ನಷ್ಟಕ್ಕೆ ಮೇಲ್ಮುಖವಾಗಿ ಚಲನೆಗೈದ ಅಂಶವನ್ನು ಎಂ.ವ್ಯಾಸರು ತುಂಬಾ ಸೂಕ್ಷ್ಮವಾಗಿ ವಿಶದಪಡಿಸುತ್ತಾರೆ. ಸಹಸ್ರಾರು ಚಕ್ರಕ್ಕೆ ಚಿತ್ತವು ಕ್ರಮಿಸದಂತೆ ಮಾಯೆ ಆವರಿಸುವ ಪರಿಯೇ ಅವರ ಬಾಹ್ಯ ವರ್ತನೆ ಮತ್ತು ತಲ್ಲಣಗಳಾಗಿರುತ್ತವೆ. ದೇವಿಕಾಳ ಮಿಲನದಲ್ಲಿ ಮೂಲಾಧಾರ , ಸ್ವಾಧಿಷ್ಠಾನ ,ಮಣಿಪುರ ಚಕ್ರದಿಂದ  ಶಕ್ತಿ ಮೇಲೇರಿದ ಅನುಭಾವ ಸ್ವತಃ ಸ್ವಾಮಿ ಅವರಿಗೆ ಸತ್ಯ ತಿಳಿದಿರುವುದಿಲ್ಲ. ಗೊಂದಲದಲ್ಲಿ , " ಇದು ಹೀಗಲ್ಲ...ನನಗೆ ಗೊತ್ತಿಲ್ಲ...ಬಿಟ್ಟು ಬಿಡು ದೇವೀ..." ಎನ್ನುತ್ತಾರೆ.ನಿಜವಾದ ಸ್ವಾಮಿತ್ವ ಪ್ರಾಪ್ತಿಯಾಗುವುದೇ ಈ ಹಂತದಲ್ಲಿ. ಇಷ್ಟು ದಿನ ತಮ್ಮ ಪ್ರವರದ ಆಲೋಚನೆಯಲ್ಲಿ ( ಮೊದಲ ಗುರುಗಳ ಹಾದರಕ್ಕೆ ಹುಟ್ಟಿದ ಸಂಗತಿ ),ಮನಸ್ಸಿನ ತಳಮಳದಲ್ಲಿ ಬದುಕು ಭ್ರಮೆಯಾಗಿ ತೋರಿದರೂ ಬ್ರಹ್ಮಚರ್ಯದ ಫಲ , ಅಂತಿಮ ದರ್ಶನ ಸಾಧ್ಯವಾದುದು ದೇವಿಕಾಳೊಂದಿನ ಮಿಲನ ಕ್ರಿಯೆ ಸಂದರ್ಭದಲ್ಲಿ ಎನ್ನುವುದು ಎಂ. ವ್ಯಾಸರ ಪ್ರಬುದ್ಧ ಜೀವನ ದರ್ಶನದ ದಿವ್ಯ ಗ್ರಹಿಕೆಯಾಗಿರುತ್ತದೆ. ಅವರೇ ಒಂದೆಡೆ ಹೇಳಿಕೊಂಡಿರುವಂತೆ ಇದು ಅವರ ಜೀವಮಾನದ ಶ್ರೇಷ್ಠ ರಚನೆ ಕೂಡಾ,..!? ಸಾಹಿತ್ಯ ಲೋಕ ಅವರನ್ನು ಸಂಪೂರ್ಣವಾಗಿ ಮರೆತು ಬಿಟ್ಟ ಈ ಸಂದರ್ಭದಲ್ಲಿ ಕೃತಿಯೊಂದರ ಮರು ಓದು ಸ್ಮರಣೆಗೆ ಅವಕಾಶವಾಗಲೆಂದು ಆಶಿಸುತ್ತೇನೆ. 

 

ಭಾವಾಂದೋಲನದ ಪ್ರತೀಕವೇ 'ತಪ್ತ'

ಕನ್ನಡ ಸಾಹಿತ್ಯ ವಲಯದಲ್ಲಿ ಬಹಳಷ್ಟು ಕೃತಿಗಳು ಓದುಗರ ಗಮನಕ್ಕೆ ಬರದೇ ಮೂಲೆಗುಂಪಾಗಿ ಬಿಡುವ ಸಂಭವವೇ ಹೆಚ್ಚು . ಅಂಥದರಲ್ಲಿ ಎಂ.ವ್ಯಾಸರು ಜೀವಂತವಿರುವವರೆಗೆ ಪ್ರಾರಂಭದ ಒಂದೆರಡು ಮತ್ತು   ' ಕೃತ ' ಕಥಾಸಂಕಲನ ಬಿಟ್ಟರೆ ಅವರ ಇನ್ನುಳಿದ ಕತೆಗಳು ಸಂಗ್ರಹ ರೂಪ ಪಡೆಯಲೇ ಇಲ್ಲ. ಅವರ ಮರಣಾನಂತರದಲ್ಲಿ ಹೊರ ಬಂದ ಕಥಾಸಂಕಲನಗಳ ಲ್ಲಿ ಪುತ್ತೂರು ಕರ್ನಾಟಕ ಸಂಘವು ಪ್ರಕಾಶ ಪಡಿಸಿದ ' ತಪ್ತ ' ಕಥಾಸಂಕಲನವು ಒಂದಾಗಿದೆ. ಅವರ ಸ್ಮರಣಾರ್ಥ ಇತ್ತೀಚೆಗೆ ಮರು ಓದುವಂತಾಯಿತು.

1978 ರಿಂದ 2008 ರೊಳಗಿನ 12 ಕತೆಗಳಿವೆ. ವರ್ಷವಾರು ಕ್ರಮಾಂಕದಲ್ಲಿ ಜೋಡಿಸಿರುವುದಿಲ್ಲ. ವ್ಯಾಸರ ಯೌವನದ ಪ್ರಾರಂಭಿಕ ರಚನೆಗಳಾಗಿರುವುದರಿಂದ ಕಾಮತೃಷೆ ಕಥಾ ವಸ್ತುವಾಗಿರುವುದು ಸಹಜವಾಗಿದೆ. ವರ್ಷವಾರು ಕ್ರಮಾಂಕದಲ್ಲಿ ಕತೆಗಳನ್ನು ಅವಲೋಕಿಸುವುದಾದರೆ 1978 ರಲ್ಲಿ ಬರೆದ ' ಪಾಪಿ ' ಕತೆಯಲ್ಲಿ ಪಾಪ ಪ್ರಜ್ಞೆಯಿಲ್ಲದೆ ತನ್ನ ಸ್ನೇಹಿತನಿಗೆ ಮಗುವಿಗಾಗಿ ಮಡದಿಯನ್ನು ಅವಳ ಸಮ್ಮತಿಯನ್ವಯ ಒಪ್ಪಿಸಿ, ನಪುಂಸಕತೆ ಮರೆಮಾಡುವ ಕೋರಿಕೆಯು ಸೃಷ್ಟಿ ದಾಹ ರಕ್ತ ದಾಹದಷ್ಟೇ ಪಾಪ ಪ್ರಚೋದನೆಗೆ  ನೀಡುವ ಅಂಶವನ್ನು ಬಯಲಿಗೆಳೆಯುತ್ತಾರೆ. ಶವದ ಸ್ಥಿತಿಗತಿಯನ್ನು ಹೃದಯಂಗಮವಾಗಿ ಚಿತ್ರಿಸುತ್ತಾ ಕೆಲ ನಿಗೂಢ ಸಂಗತಿಯ ಕಲ್ಪನೆಗೆ ಅವಕಾಶ ಮಾಡಿಕೊಡುತ್ತಾರೆ. ಮುಚ್ಚಿಟ್ಟ ಮೂರು ದಿನದ ಶವದೊಂದಿಗೆ ನಡೆದ ವಿದ್ಯಮಾನ ಅಂದಾಜಿಸಬಹುದಾಗಿದೆ. ಮನುಷ್ಯನ ಕ್ರಿಯೆಯೊಂದಿಗೆ ಪ್ರಕೃತಿಯ ಚಲನೆಯನ್ನು ಏಕಕಾಲಕ್ಕೆ ಸೆರೆ ಹಿಡಿಯುವ ಕಥಾ ಕುಸುರಿ ಗಮನಾರ್ಹ. 1981 ರ ' ನೆರೆ ' ಸಮ್ಮೋಹಿನಿ ವಿದ್ಯೆಯಲ್ಲಿ ಮಗನ ಮನಸ್ಸಿನಿಂದ ಕತೆ ಹೇಳಿಸುವ ತಂತ್ರ ಜಾಳು ಎನಿಸಿದರೂ ಉಕ್ಕಿ ಹರಿಯುವ ಭಾವನೆರೆಯ ವೈಖರಿಯನ್ನು ಗುರುತಿಸಬಹುದಾಗಿದೆ.ಅಪ್ಪನಿಗೆ ಒದೆಯುವ ಮಗನ ದ್ವೇಷ...! ಅಪ್ಪ ಮಗ ಇಬ್ಬರು ಸಾಹಿತಿಯಾಗಿ ಸ್ಪರ್ಧೆಯಲ್ಲಿ ದ್ವೇಷ ಬಿತ್ತುವ ಕ್ಷಣಿಕ ನಿಲುವು ತಾಣವು ಸಮ್ಮೋಹಿನಿಯಲ್ಲಿ ತೆರೆದುಕೊಳ್ಳುವ ದೇಹದ ಅರಿವು ಎರಡು ಮುಖಗಳ ಪರಿಚಯವಾಗುತ್ತದೆ. ಇದೇ ಸಾಲಿನಲ್ಲಿ ಬರೆದ ಇನ್ನೊಂದು ಕತೆ ' ತೃಷೆ ' ಯಲ್ಲಿ ಅಪ್ಪನ ಸ್ನೇಹಿತೆ ಟೀಚರ್ ಬಾಲಕನೊಂದಿಗೆ ತಾಯಿತನ ತೋರಿದರೂ ಯವ್ವನಕ್ಕೆ ಬಂದಾಗ ಅಡಗಿದ ಕಾಮತೃಷೆ ತೀರಿಸಿಕೊಳ್ಳುವ ಪರಿ ಅಸಂಗತ ಎನಿಸಿದರೂ ಕತೆಯ ಸ್ವರೂಪದಲ್ಲಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 1983ರ ' ಆಟ ' ಕತೆಯಲ್ಲಿ ನಾಯಕನಿಗೆ ಮನೆ ತುಂಬಾ ಮಕ್ಕಳು, ಮಡದಿ ಇದ್ದರೂ ಆಳುಮಗನ ಹೆಂಡತಿಯಲ್ಲಿ ಲೈಂಗಿಕ ಬಯಕೆ ತೋರಿ ತಬ್ಬಿಕೊಳ್ಳುವ ಹುಚ್ಚುತನ ಕಾಮಶಕ್ತಿಯ ಭೀಕರತೆಯನ್ನು ಸಾಬೀತು ಪಡಿಸುತ್ತದೆ. 1986 ರ 'ಗರ'ದಲ್ಲಿ ಕತೆ, ಕವನ, ವಿಮರ್ಶೆ, ಕಿರುಕಾದಂಬರಿ, ಪ್ರಬಂಧ ಎನ್ನುವ ತುಂಡು ಅಧ್ಯಾಯಗಳಿಂದ ನಿರೂಪಿಸಿದ ಭಿನ್ನ ತಂತ್ರದ ಕತೆ.

ಕನ್ನಡಕ್ಕೆ ಹೊಸದು...! ವಿಮರ್ಶಕರ ಚರ್ಚೆಗೆ ಗ್ರಾಸವಾಗುವ ಕಥಾ ಸಂವಿಧಾನ. ಅಂತ್ಯಕ್ಕೆ ' ಮುನ್ನುಡಿ ' ಎಂಬ ಅಧ್ಯಾಯ ಸೇರ್ಪಡೆಯಾಗಿದೆ. ವ್ಯಕ್ತಿಯೊಬ್ಬನ ಸಂಕೀರ್ಣತೆಯನ್ನು ಚೌಕಟ್ಟಿನ ಹೊರಗೂ ವಿಸ್ತರಿಸುವುದನ್ನು ಕತೆಯ ಮೂಲಕ ಹೇಳಬಹುದಾದ ಸಾಧ್ಯತೆಗೆ ಕನ್ನಡಿ ಹಿಡಿಯುತ್ತದೆ. ೧೯೮೮ರ 'ಖೆಡ್ಡ' ಕತೆ ಸಂಕಲನದ ಕೊನೆಯ ಸೇರಿಸಲಾಗಿದೆ. ಅಪೇಕ್ಷಿತ ಗಂಡು ಮಗು ಆಗದಿದ್ದಾಗ ಗಂಡಸುತನಕ್ಕೆ ಸವಾಲಾಗಿ ಕ್ರೂರಿಯಾಗುವ ಸನ್ನಿವೇಶ. ಕೊಲೆಯಾಗುವ ಹಂತವು ಹಲವರ ದೃಷ್ಟಿಯಲ್ಲಿ ಕಾಣುವ ಭಿನ್ನ ವ್ಯಕ್ತಿತ್ವದ ಅನಾವರಣ. ಶಬ್ದ ಭಾವದಾಚೆಯೂ ವ್ಯಕ್ತಿ ಅರ್ಥವಾಗದೆ ಉಳಿದುಬಿಡುವುದನ್ನು ಕತೆಯಲ್ಲಿ ಗ್ರಹಿಸಬಹುದಾಗಿದೆ. ಇದೇ ಸಾಲಿನ ' ಪ್ರೇತ ' ಕತೆಯಲ್ಲಿ ಮೃತ್ಯುವಿಗೂ ಸೆಕ್ಸ್ ಗೂ ಒಂದು ವಿಚಿತ್ರ ಸಂಬಂಧವಿದೆ ಎಂಬ ತತ್ವ ಪ್ರತಿಪಾದನೆಯಷ್ಟೇ ಇಲ್ಲಿ ಮುಖ್ಯವಾಗಿದೆ. 1999ರ 'ಮುಖ' ಕತೆ ಸಂಕಲನದಲ್ಲಿ ಮೊದಲ ಕತೆಯಾಗಿ ಪ್ರಕಟಿಸಲಾಗಿದೆ. ರಕ್ತೇಶ್ವರಿ ಕನಸಿನಲ್ಲಿ ಸ್ಥಳ ತೋರಿಸಿದಳೆಂದು ನಂಬಿಸಬಹುದು. ನಂಬಿಕೆಗಳನ್ನು ಮಾರಬಹುದು ಎನ್ನುವ ಸ್ನೇಹಿತ. ಮನಸ್ಸೇ ಮನುಷ್ಯ ಎಂಬ ಆಲೋಚನಾ ಕ್ರಮ, ನಾಸ್ತಿಕ  ಆಸ್ತಿಕ ಮುಖಗಳ ಪರಿಚಯವಾಗುತ್ತದೆ. 20002ರ ' ಮೇಳ ' ಕತೆಯಲ್ಲಿ ಜಾನಪದ ಕಲೆ ಬಗ್ಗೆ ತಿಳಿಯಲು ಇಬ್ಬರು ಸಾಹಿತಿಗಳು ಸಂದರ್ಶನಗೈಯಲು ಬಂದವರಿಗೆ ಇಡೀ ಕಲೆ ಅವರ ಬದುಕಿನಲ್ಲಿಯೇ ತೆರೆದುಕೊಳ್ಳುವ ಮತ್ತು ದ್ವೇಷವೇ ಪ್ರಗತಿಯ ಗುರುತಾಗಿ ಗುಲ್ಲು ಮಾಡುವ ಮೇಳ ಘೋರ ಬದುಕಿನ ದರ್ಶನ ಮಾಡಿಸುತ್ತದೆ. 2003ರ ' ಬಿಂಬ ' ಕತೆಯಲ್ಲಿ ಭೌತಿಕ ಮಾನಸಿಕ ಲೋಕಗಳ ಸಮಾನ ಅಂತರ ಬಯಲು.ತಂತ್ರಶೈಲಿಯ ಶಬ್ದ ಶಕ್ತಿಯು ಸ್ಫೋಟಿಸುವ ವಿಚಿತ್ರ ಮನಸ್ಸಿನ ಹೂರಣ ಪ್ರಯೋಗ...! ಇದೇ ಸಾಲಿನಲ್ಲಿ ಬರೆದ ' ಯತಿ ' ಕತೆಯು ತಮ್ಮದೇ ಸಂದರ್ಶನ ಎನ್ನುವಂತೆ ವರ್ತಮಾನಕ್ಕೆ ತೆರೆದುಕೊಳ್ಳುತ್ತದೆ .ಅತಿಥಿಯ ಉಪಸ್ಥಿತಿಯಲ್ಲಿಯೂ ಹಲ್ಲಿ, ಜೇಡ , ದೂರದ ಎಲೆ, ಪರಿಸರ ಸಂವೇದನೆ, ಅಲ್ಲಿಯ ಸದ್ದು ಗ್ರಹಿಸುವ ಸೂಕ್ಷ್ಮಗ್ರಾಹಿ ಪ್ರಜ್ಞೆಯು ಗಮನಾರ್ಹವಾಗಿದೆ. ತಮ್ಮ ವ್ಯಕ್ತಿತ್ವವನ್ನು ತುಂಡು ತುಂಡಾಗಿ ಪಾತ್ರಗಳಿಗೆ ಹಂಚಿಕೆ ಮಾಡಿದಂತೆ ಭಾಸವಾಗುತ್ತದೆ. 2005ರ ' ತಪ್ತ ' ಕತೆಯಲ್ಲಿ ಅಪ್ಪನ ಸಾವಿನ ನಂತರ ಅಮ್ಮನಿಗೆ ನೌಕರಿ ಸಿಕ್ಕಿ, ಅವಳ ತದ್ರೂಪ ಮಡದಿಯ ಅನೈತಿಕ ಸಂಬಂಧವು ಸಂದಿಗ್ಧಕ್ಕೀಡು ಮಾಡುವಂಥದ್ದು. ಭಾವಾಂದೋಲನದ ಪ್ರತೀಕವೇ 'ತಪ್ತ'ವಾಗಿದೆ.

ವ್ಯಾಸರ ಕತೆಗಳಲ್ಲಿ ಬರುವ ಸಾವುಗಳು ಹಲವಾರು ಅರ್ಥದಲ್ಲಿ ಬದುಕುವ ಛಲವನ್ನು ಪ್ರತಿನಿಧಿಸುತ್ತವೆ . ಯಾರನ್ನೂ ಬಿಡದ, ಸದಾ ಕಾಡುವ ವಿಷಾದದಿಂದ ಪಾರಾಗುವ ತಂತ್ರವನ್ನು ವಿಷಾದದಿಂದಲೇ ಬಗೆದು ತೋರಲು ವ್ಯಾಸರು ಸದಾ ತಮ್ಮ ಕಥಾ ಕೃಷಿಯಲ್ಲಿ ತಪೋನಿರತರಾಗಿರುತ್ತಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಪ್ರಕಾಶಿಸುವ ನಿಮಿತ್ತ ಋಣಿಯಾಗಿದ್ದಾರೆ. ಲಕ್ಷ್ಮೀಶ ತೋಳ್ಪಾಡಿಯವರ ಕೆಲವು ಟಿಪ್ಪಣಿಗಳು ಮುನ್ನುಡಿಯಾಗಿವೆ. ಡಾ.ವರದರಾಜ ಚಂದ್ರಗಿರಿ ' ತಪ್ತ ' ಸಂಕಲನದ ಬಗ್ಗೆ ಎರಡು ಮಾತು ನಿವೇದಿಸಿಕೊಂಡಿದ್ದಾರೆ.

ಸಾಹಿತ್ಯ ಲೋಕ ಎಂ. ವ್ಯಾಸರನ್ನು ಸಂಪೂರ್ಣವಾಗಿ ಮರೆತು ಬಿಟ್ಟ ಇಂಥ ಸಂದರ್ಭದಲ್ಲಿ ಅವರ ತಪ್ತ ಕಥಾಸಂಕಲನದ ಮರು ಓದು ಸ್ಮರಣೆಗೆ ಅವಕಾಶವಾದೀತು ಎಂದೆನಿಸುತ್ತದೆ.

 

ಎಂ.ವ್ಯಾಸರ ಕಥಾ ಅಸ್ತ್ರಗಳು

ತಮ್ಮದೇ ಭಿನ್ನ ಮತ್ತು ವಿಶಿಷ್ಠ ತಂತ್ರದಲ್ಲಿ ನಿರೂಪಿಸುವ ಕಥಾ ಹಂದರವು one and only ವ್ಯಾಸ ಛಾಪು ಎಂದು  ಕರೆಸಿಕೊಳ್ಳುವಂಥದ್ದು ....!ವ್ಯಾಸರ ಗಮನಾರ್ಹ ಸಂಕಲನ....ವ್ಯಾಸರ ಕಥಾ ಚೌಕಟ್ಟೇ ಅಂಥದ್ದು...! ಎಂಥ ಸನ್ನಿವೇಶವನ್ನು ಕೂಡಾ ಈ ಚೌಕಟ್ಟಿಗೆ ತಂದು ಕಟ್ಟಿ ಹಾಕುತ್ತಾರೆ. ಓದುಗರಿಗೆ ಆಪ್ತವಾಗಿ ಬಿಡುವ ದುರ್ಗಾಪುರ, ಶಂಕರೀ ನದಿ, ಹೊಸದುರ್ಗ ಎಲ್ಲಾ ಕತೆಗಳಲ್ಲಿ  ಕಾಣುವ ಸಾಮಾನ್ಯ ಸ್ಥಳ ನಾಮಗಳು...! ಎರಡಕ್ಷರದ ಶಿರೋನಾಮೆ ಕಥೆಗಳು ಬುದ್ಧಿ ಮತ್ತು ಮನಸ್ಸಿಗೆ ಮುದ ನೀಡುವ ಅಸ್ತ್ರವಾಗಿ ಪರಿಣಮಿಸುವ ವೈಖರಿಯನ್ನು ,ನನಗೆ ದಕ್ಕಿದ ಅನುಭವದ ಅಭಿಪ್ರಾಯವನ್ನು ಸಂಕ್ಷಿಪ್ತದಲ್ಲಿ ಒಂದೊಂದಾಗಿ ಕೆಳಗಿನಂತೆ ಹೇಳಿಬಿಡುತ್ತೇನೆ. ಹೀಗೆ...ಹೀಗೆ,..ಹೀಗೆ...

1973 ರ ಕತೆ " ನದಿ " ಊಹಾ ಪ್ರಪಂಚದ ವಿಸ್ತಾರ ಹರಿಯುವಿಕೆಯಲ್ಲಿ ಜೀವ ನದಿಯಾಗಿ ಪ್ರಶ್ನಾತೀತವಾಗಿದೆ.ಅರ್ಥೈಸಿಕೊಳ್ಳದ , ಆತ್ಮಿಯತೆ ಇಲ್ಲದ ಮಡದಿಯಿಂದ ಅತೃಪ್ತಗೊಂಡ ನಾಯಕನ  ಸುಖಾಪೇಕ್ಷೆಯಲ್ಲಿ ದಿಕ್ಕುಗಾಣದೆ ಚಿಮ್ಮಿ ನದಿಯಾಗುವ ಚಿತ್ರಣ ಮಾರ್ಮಿಕವಾಗಿದೆ.ಹಾದರಕ್ಕೆ ಎಳೆಸುವ ಮನಸ್ಸಿನ ಪರಿಯನ್ನು ವೈಚಾರಿಕವಾಗಿ ವಿಶ್ಲೇಷಿಸುವ " ಕೊಲೆ " ಕತೆಯ ಅಸಂಗತ ನಿರೂಪಣಾ ಶೈಲಿ ಮುದ ನೀಡುತ್ತದೆ.ದಾಂಪತ್ಯದಲ್ಲಿ ಮನಸ್ಸು ದೈಹಿಕ ವಲ್ಲದೆ  ಮಾನಸಿಕವಾಗಿಯೂ ಭ್ರಷ್ಠ ಗೊಂಡರೆ ಅದು ಸುಖದ ಕೊಲೆ ಎಂಬ ಚಿಂತನೆ ರಸವತ್ತಾಗಿ ಮೂಡಿದೆ. "ಕೂಪ " ದಲ್ಲಿ ಮೂಲ ಘಟನೆಯು ಕಾಮ ಕೇಂದ್ರಿತ ಸಂಕೀರ್ಣ ಒಳ ಹರವು ಹೊಂದಿದ್ದು ,ಮಾಂಸ ಗೋಪುರದಲ್ಲಿ ಅಡಗಿಸಿಟ್ಟ ಆತ್ಮ ಎನ್ನುವಂತೆ ಸೂಚ್ಯವಾಗಿ ಸಾಕ್ಷಾತ್ಕರಿಸುವ ಕತೆ.ಇಡೀ ಕತೆ ಪೀಠಿಕೆಯಾಗಿಯೇ ತೋರುತ್ತದೆ." ಲಾವಾ " ಕತೆಯು ಸತ್ತ ಮನಸ್ಸು ಒಳಗಿನಿಂದ ಎಲ್ಲವನ್ನು ಸುಟ್ಟು ನವೀನತೆಗೆ ಸಜ್ಜುಗೊಳ್ಳುವ ,ಕಾಮದ ಪರಿಪಾಕವು ಗುರಿ ಸೇರುವ ಧಾವಂತದಲ್ಲಿ ಅಸ್ಪಷ್ಟ ಭಾವ ರಾಶಿ ಅಗ್ನಿ ಪರೀಕ್ಷೆಗೀಡಾಗುವ ಸನ್ನಿವೇಶ ಭೀಭತ್ಸವಾಗಿದೆ.ಕಾಮದಾಹದ ಮುಂದೆ ಎಲ್ಲವು ನಗಣ್ಯ.ಮರ್ಮಾಂಗವೇ ಅಸ್ತ್ರವಾಗಿ ಪಾತ್ರವಹಿಸುವುದು ಕತೆಯ ಸಾರ.ಸ್ನೇಹಿತರಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡವನ ಮುಖವಾಡದ ಬದುಕಿನಲ್ಲಿ ಸೆಕ್ಸ್   ಅಸ್ತ್ರವಾಗದ ಅಚ್ಚರಿ " ಅಸ್ತ್ರ " ಕತೆ ವ್ಯಕ್ತಪಡಿಸುತ್ತದೆ.ವಾಸ್ತವ ಮತ್ತು ಕಲ್ಪನೆಯ ಬದುಕಿನ ವಿವಿಧ ಆಯಾಮದಲ್ಲಿ ತನ್ನತನದ ಹುಡುಕಾಟದಲ್ಲಿ ಬುದ್ಧತ್ವ ಮನಗಾಣುವ ,ಕ್ರೂರವಾಗುವ ,ಅಸಂಗತ ಜೀವ ಪ್ರವಾಹದ ವೈಚಿತ್ಯ್ರವನ್ನು " ಬಕ " ಕತೆಯಲ್ಲಿ ಕಾಣಬಹುದಾಗಿದೆ.ಪ್ರೀತಿ ಶಬ್ದಕ್ಕೆ ತೀರಗಳಿರಲಿಲ್ಲ ಎಂಬ ತಾತ್ವಿಕ ಹಿನ್ನೆಲೆಯಲ್ಲಿ " ತೀರ " ಕತೆ ಭಾವ ಲಹರಿಯ ಕೊರತೆಯಲ್ಲಿ ಸೋತಿರುವಂತೆ ಕಂಡಿತು.ಗುಟುಕು ಕುಡಿದು ಕ್ಷಣ ಹೊತ್ತು ವಿರಮಿಸುವಂತೆ ಸಂಭಾಷಣೆಯ ವಿನೂತನ ತಂತ್ರ ವೈಖರಿ "ಜಡ " ಕತೆಯಲ್ಲಿದೆ.ಪ್ರೇಮಕ್ಕೆ ಅವಕಾಶವಿಲ್ಲದಂತಾಗಿ ಅಸ್ವಸ್ಥ ಮಡದಿಯ ವಿರಹ ತಪ್ತ ದೇಹದಿಂದ ಪಡೆದ ಹುಚ್ಚನ ಆನಂದ ಲಹರಿ ಬದುಕಿನ ವಿಪರ್ಯಾಸದ, ಹುಚ್ಚು ಆವೇಶವನ್ನು ಜಡದಲ್ಲಿ ಕಾಣುವ ಚೈತನ್ಯದ ಸಂಕೀರ್ಣ ಹಂದರ ಬೆರಗುಗೊಳಿಸುತ್ತದೆ. ಸೆಲೆಬ್ರಿಟಿಗಳ  ಆಕರ್ಷಣೆ, ಕೌತುಕ, ಒಂದಾಗುವ ತುಡಿತ ಬರಹಗಾರ ಮತ್ತು ಅಭಿಮಾನಿ ನಡುವಿನ ಸಂಬಂಧದಲ್ಲಿ ಅವರ ಪ್ರವರ ಬಿಚ್ಚಿ ಕೊಳ್ಳುವ ಕತೆ " ಕುಜ ". ಋಗ್ಣ ಶಯ್ಯದಲ್ಲಿರುವ ವ್ಯಕ್ತಿಯು ದೈವಿ ಸುಖವೆಂಬ ಭ್ರಮೆಯಲ್ಲಿ ಆಲಿಂಗನಕ್ಕೆದುರಾಗುವುದು ,ಬೆತ್ತಲೆಯಿಂದ ಭ್ರಮೆ ಕಳೆದು ಕೊಳ್ಳ ಬೇಕೆಂಬ ಬಿಡುಗಡೆ ಭಾವ ....,ಭ್ರಮನಿರಸನದಲ್ಲಿ ಮಡದಿ ಮನೆ ಬಿಟ್ಟಂತೆ, ಕತೆ ಅಂತ್ಯಗೊಳಿಸದೆ ಹಲವಾರು ಅಸಂಗತ ಘಟನೆಯ ಪ್ರಸ್ತಾಪದೊಂದಿಗೆ ಕೊನೆಯಲ್ಲಿ ರಹಸ್ಯ ಬಿಡಿಸಿ " ಭ್ರಷ್ಟ " ಕತೆಯನ್ನು ಸತ್ವಪೂರ್ಣಗೊಳಿಸಿರುತ್ತಾರೆ. ಬದುಕಿಸುತ್ತಾ ಕೊಲ್ಲುವ ದೇವರು ಎಂಬದ್ವಂದ್ವಮೂಡಿಸುತ್ತಾ, ದೃಶ್ಯ ತುಂಡುಗಳ ಜೋಡಣೆಯ ತಂತ್ರದಲ್ಲಿ ತಳಮಳಿಸುವ ಅಮೂರ್ತ ಭಾವಲೋಕದ ಅನಾವರಣ " ಅಮ್ಮ " ಕತೆಯಲ್ಲಿ ಗ್ರಹಿಸಬಹುದಾಗಿದೆ.

" ಹಕ್ಕಿ " ಕತೆಗೆ ಅಮ್ಮ ಎಂಬ ಶೀರ್ಷಿಕೆ ಬೇಕಿತ್ತೇ...? ಎಂದೆನಿಸಿತು. ಇಬ್ಬರು ಕುಡುಕರು ಬಾರ್‍ನಿಂದಹೊರಗಾದ ನಂತರ ಮಾತಿನಲ್ಲಿ ಬಿಚ್ಚಿಕೊಳ್ಳುವ ಕತೆ " ಹಕ್ಕಿ ",ಅತೃಪ್ತ ಕಾಮ ತೃಷೆಯ ಹುಡುಕಾಟದಲ್ಲಿ ಅಮ್ಮ ರೂಪುಧಾರಿ ಕಳೆದು ಹೋಗುವ ಸನ್ನಿವೇಶಗಳು.ಕ್ಷಣಿಕ ಆವೇಶದ ಹಕ್ಕಿ ಬದುಕಿನ ಭಾವ ಲಹರಿಗೆ ಸಂಕೇತವಾಗಿದೆ.ಕ್ರೂರ ಅಪ್ಪನ ಅಹಂ ಅಡಗಿಸಲು ಪ್ರಿಯಕರನನ್ನು ಗುಲಾಮನಂತೆ ನಡೆಸಿಕೊಳ್ಳುವ ಮಗಳ ಪ್ರವೃತ್ತಿ ,ಮಾನಸಿಕ ದುಃಖದ ಬಿಡುಗಡೆಗೆ ದೈಹಿಕ ಕ್ರಿಯೆಯಲ್ಲಿ ಸುಖ ಕಾಣಲು ನುಗ್ಗುವ ಪ್ರಿಯಕರ,ಬಲತ್ಕಾರವಾಗಿ ಗುರಿ ಕಾಣುವ ಬಾಣದ ತೀವ್ರತೆ .ಸುಖ ದುಃಖ ಏಕ ಕಾಲಕ್ಕೆ ಮನಸ್ಸು ದೇಹ ಪ್ರತಿಕ್ರಿಯಿಸುವ ಪ್ರಯೋಗವನ್ನು  "ಬಾಣ " ಕತೆಯಲ್ಲಿ ಸೆರೆಹಿಡಿಯಲು ಬಳಸಿದ ನವೀನ ತಂತ್ರ ಕಥಾ ಪ್ರಕಾರಕ್ಕೆ ಮಾದರಿಯಾಗಿದೆ.ಭಾವನೆಗಳ ಮಹಾಪೂರದಲ್ಲಿ ಅಡ್ಡಗಟ್ಟುವ ವಸ್ತುಸ್ಥಿತಿ ಬುಡಮೇಲು ಮಾಡುವ ಬದುಕಿನ ಚಿತ್ರಣ 2007 ರ " ಓ..ಮ್ " ಕತೆಯಲ್ಲಿದೆ. ಓಮ್ ಒಂದುವರೆ ಧ್ವನಿ ಓಂಕಾರದ ಪ್ರತೀಕವಾಗಿ ನೆರಳಾಗಿ ಕಾಡುವ ಮೋಟು ಕೈಯ ವಿಕಲಚೇತನ ಮಗುವಿನ ಜನನ , ಅಹಂ ನಲ್ಲಿ ಮೆರೆಯುವ ಪ್ರತಿಷ್ಠೆಗೆ ಪ್ರಕೃತಿ ಸವಾಲು ಎಸೆಯುವ ,ಹೆಪ್ಪುಗಟ್ಟುವ ಸನ್ನಿವೇಶ ಮನವನ್ನು ತಟ್ಟಿ ಬಡಿದೆಬ್ಬಿಸುತ್ತದೆ. ವಿಷಾದವಾಗಿ ಓ..ಮ್ ಝೇಂಕಾರದ ಶಬ್ದ ಅಲೆಗಳು ಮಂತ್ರಮುಗ್ಧಗೊಳಿಸುತ್ತವೆ....!? ಕಥಾ ತಿರುಳು ಗೌಣವೆನಿಸಿದರೂ ನಿರೂಪಣಾ ಶೈಲಿ ತಂತ್ರಕ್ಕಾಗಿ ಎಂ.ವ್ಯಾಸರ ಕತೆಗಳನ್ನು ಕನ್ನಡಿಗರು ತಪ್ಪದೇ ಓದಬೇಕು.

 

Top News
Top Events