Book Watchers

ಪಿ. ಆರಡಿಮಲ್ಲಯ್ಯ ಕಟ್ಟೇರ

ವೃತ್ತಿಯಿಂದ ಉಪನ್ಯಾಸಕರಾಗಿರುವ ಪಿ. ಆರಡಿಮಲ್ಲಯ್ಯ ಕಟ್ಟೇರ ಅವರು ಯುವ-ಉತ್ಸಾಹಿ ವಿದ್ವಾಂಸರು. ಖಚಿತ ವೈಚಾರಿಕ ನಿಲುವು, ನೇರ ನುಡಿ-ಬರವಣಿಗೆ ಅವರ ವಿಶೇಷ.

Related Articles

ಕಾರಂತಜ್ಜನ ನೆನಪಿಗೆ.....

ಯಕ್ಷಗಾನ ಬಯಲಾಟದ ಸುತ್ತಮುತ್ತ

ಸುದೀರ್ಘವಾದ ಉಲ್ಲೇಖದೊಂದಿಗೆ ಕಾರಂತರ ಪುಸ್ತಕಾವಲೋಕನಕ್ಕೆ ತೊಡಗೋಣ. ‘ಲಕ್ಷಣ ಶಾಸ್ತ್ರಗಳಿಗಿಂತ ಮುಂಚೆ ಕಲಾಸೃಷ್ಠಿಯಾಗುತ್ತದೆ. ಭಾಷೆಯ ಹುಟ್ಟು ಮೊದಲು, ವ್ಯಾಕರಣದ ಹುಟ್ಟು ಆ ಬಳಿಕ. ಪ್ರತಿಮೆ ಕುಣಿತ ಚಿತ್ರ ಹಾಡು ಇವೆಲ್ಲಾ ಮೊದಲು ಹುಟ್ಟಿಕೊಳ್ಳಬೇಕು. ಅಂಥಂತ ವಿಷಯಗಳಿಗೆ ಸಂಬಂಧಿಸಿದ ಶಾಸ್ತ್ರಗಳು ಹುಟ್ಟಿಕೊಳ್ಳುವುದಕ್ಕೆ ಹಲವೊಮ್ಮೆ ಶಾಸ್ತ್ರವೆಂಬುದು ಹುಟ್ಟಿಕೊಳ್ಳದೆಯೂ ರೂಢಿಯಿಂದಲೇ ಸಾಗಿ ಬಂದಿರುವ ಕಲಾ ಸಂಪ್ರದಾಯಗಳೂ ಜಗತ್ತಿನಲ್ಲಿವೆ. ಕಲಾವಿದನು ಮೊದಲು ಸೃಷ್ಠಿ ಮಾಡುತ್ತಾನೆ. ಅವನ ಸ್ಫೂರ್ತಿ ಪ್ರತಿಭೆಗಳ ಒತ್ತಡದಿಂದಾಗಿ ಕಲಾಸೃಷ್ಠಿಯಾಗುತ್ತೆ. ಜನರು ಅದನ್ನು ಕಂಡು ಮೆಚ್ಚಿ ಸಂತೋಷಗೊಂಡುದಾದರೆ ಅವಕ್ಕೆ ಮನ್ನಣೆ ಬಂದೇ ಬರುತ್ತದೆ. ಆಗ ಇತರರು ಆ ಬಗೆಯ ಸೃಷ್ಠಿಗಳನ್ನು ಅನುಕರಣೆ ಮಾಡುತ್ತಾರೆ. ಈ ಅನುಕರಣೆಯಿಂದ ಸಂಪ್ರದಾಯವೆಂಬುದು ಹುಟ್ಟಿಕೊಳ್ಳುತ್ತದೆ. ಸಂಪ್ರದಾಯದ ಸರ್ವಸಾಮಾನ್ಯ ನಿಯಮಗಳನ್ನು ಬರೆದಿಟ್ಟರೆ ಅದು ಶಾಸ್ತ್ರವಾಗುತ್ತದೆ. ಶಾಸ್ತ್ರಾನುಕರಣೆಯೆಂಬುದು ಸಂಪ್ರದಾಯವನ್ನು ಕಾಯುವುದಕ್ಕೆ ಸಹಾಯ ಮಾಡುತ್ತದೆ. ಅದು ಹುಟ್ಟಿದ ಆವರಣದಲ್ಲಿ ಅದೇ ಪದ್ಧತಿಯನ್ನು ಅನುಸರಿಸುವ ಕಲಾಕೃತಿಗಳನ್ನು ಜನರು ತಿಳಿಯುವ ಕೆಲಸ ಅದರಿಂದಾಗಿ ಸುಲಭವಾಗುತ್ತದೆ’. ಇದು ಕಾರಂತರ ಯಕ್ಷಗಾನ ಬಯಲಾಟದ ತಾತ್ವಿಕತೆಯೂ ಹೌದು. ಮಾನವಶಾಸ್ತ್ರೀಯ ನೆಲೆಯಲ್ಲಿ ಕಲಾಪ್ರಕಾರವೊಂದನ್ನು ಜೀವವಿಕಾಸದ ಹಂತಗಳ ಮೂಲಕ ಅರ್ಥೈಸಿಕೊಳ್ಳಬಹುದಾದ ಮಾರ್ಗವೂ ಹೌದು.

ಯಕ್ಷಗಾನವನ್ನಾಗಲಿ ಬಯಲಾಟವನ್ನಾಗಲಿ ಕುರಿತು ಸಂಶೋಧನೆ, ಅಧ್ಯಯನಕ್ಕೆ ತೊಡಗುವವರು ಗಮನಿಸುವ ಮತ್ತು ಗಮನಿಸಬೇಕಾದ ಕೃತಿ ಡಾ. ಶಿವರಾಮ ಕಾರಂತರ ‘ಯಕ್ಷಗಾನ ಬಯಲಾಟ’. ವಿಷಯ, ಪಾಂಡಿತ್ಯ ಘನತೆಯನ್ನು ಗಮನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿದೆ. ವಿಚಿತ್ರ ಮತ್ತು ಸಂಕ್ರಮಣ ಸಂದಿಗ್ಧ ಕಾಲದಲ್ಲಿ ಅವರ ಅಧ್ಯಯನ ಪ್ರಾರಂಭವಾಯಿತೆಂದು ಕಾರಂತರು ಹೇಳಿಕೊಂಡಿದ್ದಾರೆ. ಯಕ್ಷಗಾನ ಬಯಲಾಟದ ಕುರಿತ ಅವರ ಆಸಕ್ತಿ ಮತ್ತು ಬೆರಗುಗಳು ಕೃತಿಯ ಪ್ರತೀಪುಟದಲ್ಲೂ ಕಾಣತೊಡಗುತ್ತವೆ. ಬಯಲಾಟ ಪರಂಪರೆಯು ಈ ನಾಡಿನ ಸಾಂಸ್ಕøತಿಕ ಸುಭಗತೆಯ ಸುಂದರವಾದ ಅಂಗವಾಗಿರುವುದನ್ನು ಕಾರಂತರು ವಿವರಿಸುತ್ತಾ ಬಂದಿದ್ದಾರೆ. ಇದ್ದಕ್ಕಿದ್ದಂತೆ ಪ್ರಾದೇಶಿಕ ಅಂತರವನ್ನು ಗುರುತಿಸಿ ಬಯಲಾಟದಿಂದ ಯಕ್ಷಗಾನವನ್ನು ಪ್ರತ್ಯೇಕಿಸುವ ಕಾರಂತರು ‘ಮಲೆನಾಡಿನ ನಿವಾಸಿಗಳ ಭಾವ ಜೀವನವು ವಿಶೇಷವಾಗಿ ಪರಿಣಾಮಕಾರಿಯಗಿ ಪ್ರಕಟವಾದೊಂದು ಸಾಧನವಿರುವುದಾದರೆ ಅದು ನಮ್ಮ ಯಕ್ಷಗಾನ ಕಲೆಯಲ್ಲಿ’ ಎಂದು ಪ್ರಾದೇಶಿಕ ಭಾವನಾತ್ಮಕತೆಗೆ ಒತ್ತು ಕೊಡುತ್ತಾರೆ. ಬಯಲಾಟದ ನೆಲೆಯ ಕಾರಂತರ ಅರಿವು ಕ್ಷೀಣವಾಗೋದು ಇಲ್ಲಿಂದ.

ಆರಂಭಿಕ ಹಂತದಲ್ಲಿ ಜಾನಪದೀಯ ಅಧ್ಯಯನಗಳು ಆತಂಕವಾದಿ ಮತ್ತು ರಸನಿಷ್ಠನೆಲೆಯಲ್ಲಿ ನಡೆದಿರುವಂತೆಯೇ ಮೌಖಿಕ ಪರಂಪರೆಯ ಬಯಲಾಟದ ಅಧ್ಯಯನಗಳೂ ಅದೇ ನೆಲೆಯಲ್ಲಿ ನಡೆದಿರುವುದು ಕಂಡುಬರುತ್ತದೆ. ‘ನಮ್ಮಿ ಕಲಾ ಸಂಪತ್ತನ್ನು ಉಳಿಸಿ ಬೆಳೆಸಿ ಕಾಪಾಡಿಕೊಳ್ಳದಿದ್ದರೆ ಇನ್ಯಾರು ಆ ಕೆಲಸ ಮಾಡಬೇಕೆಂಬ’ ಮನೋಭಾವ ಕಾರಂತರ ಅಧ್ಯಯನದ ಆಶಯವಾಗಿದೆ. ಶಿಷ್ಟಸಾಹಿತ್ಯಕ ಮೀಮಾಂಸೆಯ ದೃಷ್ಠಿಕೋನದಲ್ಲಿ ಬಯಲಾಟವನ್ನು ಶಾಸ್ತ್ರೀಯ ಅಧ್ಯಯನದ ಮಿತಿಗೆ ಒಳಪಡಿಸುತ್ತಾರೆ. ಕಾರಂತರು ಶಿಷ್ಟ ಮತ್ತು ದಾಖಲು ಆಧಾರಗಳನ್ನು ಗಮನದಲ್ಲಿಟ್ಟುಕೊಂಡು ಬಯಲಾಟದ ಪ್ರಾಚೀನತೆಯನ್ನು ಗ್ರಹಿಸಲು, ಸೌಂದರ್ಯಶಾಸ್ತ್ರದ ಮೂಲಕ ಯಕ್ಷಗಾನವನ್ನು ಅಧ್ಯಯನ ಮಾಡಲು ತೊಡಗುತ್ತಾರೆ. ‘ಈ ದೃಷ್ಠಿಯಿಂದ ಮುಖ್ಯತಃ ಸೌಂದರ್ಯಶಾಸ್ತ್ರದ ದೃಷ್ಠಿಯಿಂದ ಯಕ್ಷಗಾನ ಬಯಲಾಟದ ಅಭ್ಯಾಸಕ್ಕೆ ಹೊರಟವನು ನಾನು’ ಎಂದು ಹೇಳಿಕೊಂಡಿದ್ದಾರೆ. ಮುಂದುವರಿದಂತೆ ‘ಸಂಸ್ಕøತ ನಾಟಕ ಪದ್ಧತಿಯನ್ನು ನೋಡಿಯೇ ಇದು ಬೆಳೆದುದಿರಬೇಕು ಸಭಾಲಕ್ಷಣದಂತ ಶಾಸ್ತ್ರಕಾವ್ಯದಲ್ಲಿ ಭರತನ ನಾಟ್ಯಶಾಸ್ತ್ರದ ಛಾಯೆ ಚೆನ್ನಾಗಿ ಕಾಣಿಸುತ್ತದೆ’ ಎನ್ನುತ್ತಾರೆ.

ಶಿವರಾಮ ಕಾರಂತರ ಪುಸ್ತಕದ ದೃಷ್ಟಿಕೋನವನ್ನು ವಿದ್ವಾಂಸರು ಇಮ್ಮುಖವಾಗಿ ಗಮನಿಸಿದ್ದಾರೆ. ನಿರೀಕ್ಷೆಗೂ ಮೀರಿ ಜನಪ್ರಿಯವಾದರೂ ಅದರಲ್ಲಿನ ಮಿತಿಗಳನ್ನು ಕಡೆಗಣಿಸದ ಅನೇಕರು  ಈ ಕೃತಿಯ ವಸ್ತುನಿಷ್ಟತೆಯನ್ನು ಪ್ರಶ್ನಿಸಿದ್ದಾರೆ. ಪ್ರಾದೇಶಿಕ ಮತ್ತು ಮೈತ್ರಿಯ ಪೂರ್ವಾಗ್ರಹದ ಛಾಯೆ ಕೃತಿಯಲ್ಲಿ ಢಾಳಾಗಿ ಕಂಡು ಬರುವುದನ್ನು ಯಾರೂ ಕಡೆಗಣಿಸಲಾರರು. ಶುದ್ದಕಲೆಯ ಮೂಲಮಾಪನದ, ರಸನಿಷ್ಟತೆಯ ದೃಷಿಕೋನದಲ್ಲಿರುವ ಮಿತಿಗಳು ಕೃತಿಯಲ್ಲಿವೆ. ‘ಜನಪದ ರಂಗಭೂಮಿಗೆ ಸಂಬಂಧಿಸಿದಂತೆ  ‘ಯಕ್ಷಗಾನ ಬಯಲಾಟ’ ಎಂಬ ಹೆಸರಿನಲ್ಲಿ ಸಾಕಷ್ಟು ಗಾತ್ರದಲ್ಲಿ ಹೊರಬಿದ್ದ ಡಾ. ಶಿವರಾಮ ಕಾರಂತರ ಕೃತಿ ಪಡುವಲಪಾಯ ಯಕ್ಷಗಾನಕ್ಕೆ ಸೇರಿದ್ದಾದರೂ ಅದರಲ್ಲಿಯೂ ಬಡಗುತಿಟ್ಟನ್ನು ಮಾತ್ರ ಒಳಗೊಂಡದ್ದು  ಎಂಬುದು ಗಮನಾರ್ಹ. ತೆಂಕುತಿಟ್ಟು ಹೆಸರಿಗಷ್ಟೇ ಇರುವಂತಹದು ಎಂದು ಹೇಳುವ ಅವರು ಮೂಡಲಪಾಯ ಯಕ್ಷಗಾನದ ಪ್ರಸ್ತಾಪವನ್ನೇ ಎತ್ತದಿರುವುದು ಆಶ್ಚರ್ಯ’. ‘ಡಾ. ಕೆ. ಶಿವರಾಮ ಕಾರಂತರು ಬಯಲಾಟದ ಆಂಗೋಪಾಯಗಳಲ್ಲಿ ದೇಶೀಯ ಮೂಲವನ್ನು ಗುರುತಿಸುತ್ತಾರಾದರೂ ಅದರ ಒಟ್ಟುರೂಪಕ್ಕೆ ಸಂಬಂಧಿಸಿದಂತೆ ನಿರ್ಣಯಿಸುವಾಗ ಬೇರೆ ನಿಲುವನ್ನು ತಾಳುತ್ತಾರೆ.’ ಇವೆರಡು ಆರೋಪಗಳನ್ನು ಮೀರಿಯೂ ಕಾರಂತರ ಕೃತಿಯನ್ನು ತರಾಟೆಗೆ ತೆಗೆದುಕೊಂಡವರ ಪಟ್ಟಿ ದೊಡ್ಡದಿದೆ. 

ಮತ್ತೊಂದು ಆರೋಪವನ್ನು ಗಮನಿಸುವುದಾದರೆ ‘ಡಾ. ಶಿವರಾಮಕಾರಂತರು ಯಕ್ಷಗಾನದಲ್ಲಿ ಇತ್ತೀಚೆಗೆ ಹೊಸ ಹೊಸ ವಾದ್ಯವಿಶೇಷಗಳನ್ನು ಜಾರಿಗೆ ತರುತ್ತಿರುವುದು ಯಾವ ದೃಷ್ಟಿಯಿಂದ ಕ್ಷೇಮವೊ ಯೋಚಿಸಬೇಕಾಗಿದೆ. ತೀರಾ ಅತ್ಯಾಧುನಿಕವಾದ ವಾದ್ಯಗಳನ್ನು ಅದರಲ್ಲಿ ಲೀನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಯಕ್ಷಗಾನ ಕಲೆಯಲ್ಲಿ ನಾವೀನ್ಯತೆಯನ್ನು ಸಾಧಿಸಿದಂತಾಗುತ್ತದೆಯೇ ಹೊರತು ಮೂಲಸ್ವರೂಪವನ್ನು ಉಳಿಸಿಕೊಡಂತೆ ಆಗುವುದಿಲ್ಲ. ಪಡುವಲಪಾಯದ ಯಕ್ಷಗಾನ ಬಯಲಾಟ ಸಾಕಷ್ಟು ಹೆಸರುಗಳಿಸಿ ಕೀರ್ತಿಪತಾಕೆಯನ್ನು ಎತ್ತಿ ಹಿಡಿದಿದೆಯಾದರೂ, ಅದು ಹಣದ ದೃಷ್ಟಿಯಿಂದ ಪೈಪೋಟಿಗೆ ನಿಂತ ಮೇಲೆ ಸಾಕಷ್ಟು ಪರಿಷ್ಕಾರಕ್ಕೆ ಒಳಗಾಗಿದೆ ಎಂಬುದೂ ಅಷ್ಟೇ ಸತ್ಯ’. ‘ಯಕ್ಷಗಾನ’ ಎಂಬ ಕೃತಿಯಲ್ಲಿ ಕುಬಣೂರು ಬಾಲಕೃಷ್ಣರಾವ್‍ರವರು ಕಾರಂತರ ಯಕ್ಷಗಾನ ಬಯಲಾಟ ಕೃತಿಯನ್ನು ಕುರಿತಾಗಿ ಅನೇಕ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಯಕ್ಷಗಾನ ಬಯಲಾಟವನ್ನು ಕುರಿತು ಕಾರಂತರಲ್ಲಿ ಎಷ್ಟು ದ್ವಂಧ್ವಗಳಿದ್ದವೋ ಬಾಲಕೃಷ್ಣರಾವರಲ್ಲಿಯೂ ಅಷ್ಟೇ ದ್ವಂದ್ವಗಳಿವೆ. ಇಬ್ಬರಲ್ಲೂ ಕಂಡು ಬರುವ ಖಚಿತ ನಿಲುವಿನ ಕೊರತೆ ಇದಕ್ಕೆ ಕಾರಣವಿರಬೇಕು. ಕುಬಣೂರು ಬಾಲಕೃಷ್ಣರಾವ್‍ರವರು ಆರಂಭದಲ್ಲಿಯೇ ವಿಷಯವನ್ನು ಬಿಟ್ಟು ಧರ್ಮಭೋದೆ ಮಾಡುತ್ತಾ ಕೂತಿದ್ದಾರೆ. ಕಾರಂತರು ಅದ್ರಾವಿಡ ಆಲೋಚನೆಯ ಮೂಲಕವೇ ಯಕ್ಷಗಾನವನ್ನು ವಿವರಿಸುತ್ತಾರೆ ಎಂಬುದನ್ನು ಮಾತ್ರ ಲೇಖಕರು ಎಲ್ಲಿಯೂ ಪ್ರಸ್ಥಾಪಿಸುವುದಿಲ್ಲ. 

ಡಾ. ಶಿವರಾಮ ಕಾರಂತರು ಯಕ್ಷಗಾನದ ಅರ್ಥ ಹುಡುಕುವಾಗ ಪ್ರಾಚೀನತೆಯ ಮುಖದೆಡೆಗೆ ಕಾಲು ಚಾಚುತ್ತಾರೆ. ಯಕ್ಷ ಪದೋತ್ಪತ್ತಿಯ ಜಾಡು ಹಿಡಿದು ಯಕ್ಷಿಣಿಯೇ ಕನ್ನಡದ ಜಕ್ಕಣಿ. ಹೆಂಗಸರಿಗೆ ಬರುವ ಜಗ್ಗಣಿ ಎನ್ನುವವನೋ ವಿಕಾರವೇ? ಜಕ್ಕಣಿಯನ್ನು ದೆವ್ವವೆಂದು ನಂಬಿ ಪೂಜಿಸುವ ಸಂಪ್ರದಾಯದ ಪೂಜಾಪದ್ಧತಿಯಿಂದ ಯಕ್ಷಗಾನ ಹುಟ್ಟಿಕೊಂಡಿತೇ? ಎಂದು ಅನುಮಾನಿಸುತ್ತಾರೆ. ಯಕ್ಷರು ಎಂದರೆ ಕಾಮರೂಪಿಗಳು ಎಂಬುದನ್ನು ಕಾರಂತರು ಅರ್ಥ ಮಾಡಿಕೊಂಡಿದ್ದರೆ ಯಕ್ಷಗಾನದ ಅವರ ದೃಷ್ಠಿಕೋನಗಳೇ ಬೇರೆಯಾಗಿರುತ್ತಿದ್ದವು. 

ಯಕ್ಷಗಾನದ ವಿಷಯದಲ್ಲಿ ಕಾರಂತರು ಶಿವನ ಡಮರುಗದ ಸಂಕೇತವನ್ನು ನೀಡಿದ್ದು ಬಹುಸೂಕ್ತವಾಗಿದೆ. ಢಮರುಗವು ಪುರುಷ ಮತ್ತು ಸ್ತ್ರೀಯ ಸಂಯೋಗಕ್ರಿಯೆಯನ್ನು ಸಾರುವ ಪ್ರಾದಿಮ ವಾಧ್ಯವಾಗಿದೆ. ಡಮರುಗದ ನಡುವಿನ ಕೇಂದ್ರಸ್ಥಾನವು ಪರಸ್ಪರ ಮುಖಾಮುಖಿತ್ವದ ಸಮನ್ವಯತೆಯನ್ನು ಸಂಯೋಗದ ಸೇರುವಿಕೆಯನ್ನು ಕಾಣಿಸುತ್ತದೆ. ಶಿವನಮೂರ್ತಿಯನ್ನು ಅರ್ಧನಾರೀಶ್ವರನ ಕಲ್ಪನೆಯಲ್ಲಿ ಗ್ರಹಿಸಿದಾಗ್ಯೂ ಆತನ ವಾಧ್ಯವೂ ಎರಡು ಭಿನ್ನ ಲಿಂಗಗಳನ್ನು ಹೊತ್ತ ಏಕರೂಪಿಯಾಗಿದೆ. ಎರಡು ಬದಿಗಳ ತಳಭಾಗವು ಕೇಂದ್ರದಲ್ಲಿ ಸಂದಿಸುತ್ತದೆಯಲ್ಲದೆ ಹೊರಡುವ ಓಂಕಾರ ನಾದವು ಸೃಷ್ಟಿಯ ಮೂಲನಾದವೆಂದು ಗುರುತಿಸಬೇಕಾಗಿದೆ. ನಾದ ಹೊರಡಿಸುವ ಎರಡು ದಾರಗಳು ಪ್ರತಿಮುಖ ದಾರಿಯಲ್ಲಿ ಮೈಯನ್ನು ಘರ್ಷಿಸುತ್ತವೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗಿದೆ. ಮಾಂತ್ರಿಕ ಆಚರಣೆಗಳ ಮೂಲದಲ್ಲಿ ಆದಿಕ್ರಮದಲ್ಲಿ ಸ್ತ್ರೀ ಇದ್ದರೂ ನಂತರದ ದಿನಮಾನಗಳಲ್ಲಿ ಸ್ತ್ರೀ ಮತ್ತು ಪುರುಷ ಸಂಯೋಗದ ಸಮನ್ವಯದ ಶಿವಲಿಂಗಪೂಜೆಯನ್ನು ಈ ನೆಲೆಯಲ್ಲಿ ಸಮೀಕರಿಸಲಾಗಿದೆ. ಲಕ್ಷ್ಮಿಪತಿ ಕೋಲಾರ ಅವರು ಈ ವಿಷಯದ ಮೇಲೆ ಒಳನೋಟಗಳುಳ್ಳ ಸಂಶೋಧನೆ ಮಾಡಿದ್ದಾರೆ. 

ನಾಗಮಂಡಲ ಫಲವಂತಿಕೆಯ ವಿಧಿಯಾಚರಣೆಯ ಪುನರಭಿನಯವೆಂಬುದು ಅದರ ಸಂವಿಧಾನದಲ್ಲಿ ಸಷ್ಟವಾಗುತ್ತದೆ. ಬಯಲಾಟದ ತಳಹದಿಯಾದ ನಾಗಮಂಡಲ ವರ್ತಮಾನದಲ್ಲೂ ಬಯಲಾಟದೊಂದಿಗೆ ಐಡೆಂಟಿಟಿಯನ್ನು ಉಳಿಸಿಕೊಂಡಿದೆ. ಕಾರಂತರು ಸಹ, ನಾಗಮಂಡಲವು ಇತರ ಜಾನಪದ ಕುಣಿತಗಳಂತೆ ಇದು ಕೇವಲ ಹಿಗ್ಗು, ಉತ್ಸಾಹ, ವೀರಾವೇಶ ಮೊದಲಾದುವನ್ನು ಪ್ರಕಟಿಸುವ ಬದಲು ಭಾವರಸಗಳ ಪ್ರೇರಣೆಯ ಕಾರಣವನ್ನೂ ಸೂಕ್ಷ್ಮ ವಿಸ್ತಾರಗಳನ್ನೂ ಹೇಳಲು ಪ್ರಯತ್ನಿಸಿತು. ಹಾಡುಗಳ ಮೂಲಕ ಪ್ರಕೃತಿ ಪುರುಷರ ಕಲಹಾಂತರಿಕ ಸ್ನೇಹಾಂತರಿಕ ಭಾವಗಳನ್ನು ಪ್ರಕಟಿಸುವ ಕುಣಿತವೆಂದು ಒಪ್ಪುತ್ತಾರೆ. ‘ಸಭಾಲಕ್ಷಣದಲ್ಲಿ ಈ ಆರಾಧನಾ ನೃತ್ಯಕ್ಕೇನೆ ಅದರ ಕರ್ತೃ ವಂದನೆಯನ್ನು ಆರಂಭದಲ್ಲಿ ಸಲ್ಲಿಸಿದ್ದಾನೆ. ಗಣಪತಿಯ ಸ್ತುತಿಯಾದ ನಂತರ ಆಟ ಮಂಡಲ ನಾಯಕನಾದ ಸೂರ್ಯರಾಯನಿಗೆ ಪೂಜೆ ಸಲ್ಲಿಸುವುದು ಕಾಣುತ್ತದೆ’. ಆಟದ ಮಂಡಲದ ನಾಯಕ ಸೂರ್ಯನೆಂದು ಕಾರಂತರು ಭಾವಿಸುತ್ತಾರೆ. ಆದರೆ ಮಂಡಲದ ನಾಯಕ ಸಸ್ಯದೇವತೆ ಹಾಗೂ ಫಲವಂತಿಕೆಯ ದೈವವಾದ ಚಂದ್ರನಾಗಿದ್ದಾನೆ. ರಾತ್ರಿಯಲ್ಲಿ ಬಯಲಾಟವಾಡುವ ಜನ ಸೂರ್ಯನಿಗೆ ನಮನ ಸಲ್ಲಿಸುತ್ತಾರೆಂಬುದು ಅಸಂಭವವಾಗುತ್ತದೆ. ಸೂರ್ಯನ ಕಿರಣವನ್ನೂ ಬೀಳಿಸಿಕೊಳ್ಳದ ಬಯಲಾಟದ ಜನ ಸೂರ್ಯನಿಗೆ ವಿರುಧ್ಧವಾದ ಆಚರಣೆಯಲ್ಲಿ ಸಾಂಸ್ಕøತಿಕ ಅನನ್ಯತೆಯನ್ನು ಸಾಧಿಸುತ್ತಾರೆ. ಇಂಥ ಕಡೆಯಲ್ಲೆಲ್ಲಾ ಕಾರಂತರ ವೈದಿಕಮನಸ್ಸು ಕಾರ್ಯ ನಿರ್ವಹಿಸುತ್ತದೆ. 

ಶಿವರಾಮ ಕಾರಂತರು ನಾಗಾರಾಧನೆಯ ಕುರಿತು ಸುದೀರ್ಘವಾಗಿ ಬರೆದಂತೆ ಹಲವರು ಬರೆದಿದ್ದರೂ ಔಚಿತ್ಯ ಅನಿಸುವಷ್ಟು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗುತ್ತದೆ. ಕಾರಂತರು ಬರೆಯುವಂತೆ ದ.ಕ. ಜಿಲ್ಲೆಯಲ್ಲಿ ನಡೆಯುವಂಥ ಭೂತಾರಾಧನೆಯ ಸಂಪ್ರದಾಯಗಳು ಇತರೆಡೆಗೆ ನಡೆಯುವ ಸಂಪ್ರದಾಯಗಳಿಗಿಂತ ಭಿನ್ನವಾಗಿವೆ. ತಮಿಳುನಾಡಿನ ದೆವ್ವಗಳ ಆರಾಧನೆ ಇತರ ಭಾಗಗಳಲ್ಲಿಯೂ ಆದಿಮ ಮಾತಾಚಾರಗಳನ್ನು ನಡೆಸಿಕೊಂಡು ಬಂದರೂ ನಂತರದ ದಿನಮಾನಗಳಲ್ಲಿ ಆ ಪ್ರಾಂತ್ಯಕ್ಕೆ ಬಂದಿರಬಹುದಾದ ದ್ರಾವಿಡೇತರರ ಕೈ ಸೇರಿರಬೇಕು. ಆದರೂ ನೃತ್ಯಾರಾಧನೆಯನ್ನು ದ್ರಾವಿಡವರ್ಗವೇ ಇಂದಿಗೂ ನಡೆಸಿಕೊಂಡು ಬಂದಿರುವುದು ಕಂಡುಬರುತ್ತದೆ. ಭೂತಾರಾಧನೆಯ ಸಹಜ ಸೌಂದರ್ಯವೂ ಆದಿಮ ದಿನಮಾನದ ಸಹಜತೆಯೂ ನಾಗಮಂಡಲದ ಚಾರಿತ್ರಿಕ ಕ್ರಿಯೆಗಳೂ ಅರ್ಥವಾಗಬೇಕಾದರೆ ಈ ಆರಾಧನೆಯನ್ನು ನೋಡಬೇಕೆಂದು ಕಾರಂತರು ಬರೆಯುತ್ತಾರೆ. ‘ಪರಶುರಾಮನ ಮೂಲಕ ಈ ಪ್ರದೇಶಕ್ಕೆ ಪ್ರವೇಶ ಪಡೆದ ಬ್ರಾಹ್ಮಣರು ಇಲ್ಲಿನ ಮೂಲನಿವಾಸಿಗಳ ಜೊತೆಗೆ ವ್ಯವಹರಿಸಿದ ರೀತಿ, ಆರಂಭದಲ್ಲಿ ಸಂಘರ್ಷ ಹಾಗೂ ಆನಂತರದಲ್ಲಿ ಮಾಡಿಕೊಂಡ ಒಪ್ಪಂದ ಒಂದು ಬಗೆಯ ದ್ವಂದ್ವವನ್ನು ಸೃಷ್ಟಿಸಿ, ಅದೇ ಮುಂದುವರಿಯುವಂತೆ ಮಾಡಿತು. ಈ ಸಂದರ್ಭದಲ್ಲಿಯೇ ಸ್ಥಳೀಯ ಜನರ ನಾಗಾರಾಧನೆ ಬ್ರಾಹ್ಮಣರ ಆರಾಧನೆಯೂ ಆಗಿ ಬ್ರಾಹ್ಮಣೀಕರಿಸಲ್ಪಟ್ಟಿತು. ಅಷ್ಟೇ ಅಲ್ಲದೆ ನಾಗಾರಾಧನೆ ಪ್ರಭುತ್ವದ ಅಥವಾ ಅಧಿಕಾರದ ಸ್ಥರಗಳಲ್ಲಿಯೂ ಕಾಣಿಸಿಕೊಳ್ಳಲಾರಂಭಿಸಿತು. ತುಳುನಾಡನ್ನು ದೀರ್ಘ ಅವಧಿಯವರೆಗೆ ಆಳ್ವಿಕೆ ನಡೆಸಿದ ಆಳುಪರ ರಾಜಲಾಂಛನ ಐದು ಹೆಡೆಯ ಸರ್ಪ. ಆಳುಪರ ಶಾಸನಗಳಲ್ಲಿ ನಾಗನ ಹಾಗೂ ನಂತರ ನಾಗನೊಂದಿಗೆ ಸಮೀಕರಣಗೊಂಡ ಬ್ರಹ್ಮನ ಉಲ್ಲೇಖಗಳಿವೆ’12. ನಲ್ಕೆ, ಪರವ, ಪಂಬದ, ಪಾಣ, ಡೊಂಬ, ಮನ್ಸ ಸಮುದಾಯಗಳಲ್ಲಿ ಈ ಚಹರೆಗಳು ಘನವಾಗಿವೆ. 

ಭಾರತೀಯ ಆಚರಣಾಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ ನಾಗಾರಾಧನೆಯು ಪ್ರಾಚೀನ ಕುರುಹುಗಳನ್ನು ಹೊತ್ತು ಇಂದಿಗೂ ಸಾಗುತ್ತಿರುವುದು ಸ್ಪಷ್ಟವಾಗಿದೆ. ಸುಬ್ರಮಣ್ಯನೆಂದು ನಂಬುವ ನಾಗನು ಮೂಲತಃ ದ್ರಾವಿಡರ ದೈವ. ಮಲೆನಾಡಿನ ಹಾಗೂ ಬಯಲುಸೀಮೆಯ ಎರಡು ಸಂಪ್ರದಾಯಗಳಲ್ಲಿ ನಾಗನಿಗೆ ಸಲ್ಲುವ ಪೂಜಾವಿಧಾನಗಳಲ್ಲಿ ಮಲೆನಾಡಿನ ನಾಗನು ವೈದಿಕೀಕರಣಗೊಂಡವನಾದರೆ, ಬಯಲುಸೀಮೆಯ ನಾಗನು ಮೂಲಸ್ವರೂಪದ ಕ್ರಿಯಾಚರಣೆಯನ್ನು ಉಳಿಸಿಕೊಂಡಿದ್ದಾನೆ. ಕುಣಿತದ ಮೂಲಕ ನಡೆಸಲಾಗುವ ನಾಗಮಂಡಲ ನಾಗನ ಪ್ರಸ್ತುತತೆಯನ್ನು ಸಾರುತ್ತದೆ. ಬಯಲುಸೀಮೆಯ ದ್ರಾವಿಡ ಆಚರಣೆಗಳಲ್ಲಿ ಚಾಚೂ ತಪ್ಪದೆ ನಡೆಸುವ ಮಣೇವು ಆದಿಮತ್ವವನ್ನು ಉಳಿಸಿಕೊಂಡ ಕ್ರಿಯೆಯಾಗಿದೆ. ಆದಿಮ ಜನಾಂಗದ ನೃತ್ಯವಿಧಾನವನ್ನು ಪುರಭಿನಯಿಸುವ ನಾಗನ ಆಹಾರಕ್ರಮವನ್ನು ಪುನರ್‍ಕ್ರಿಯಿಸುವ ಮಣೇವು ಬಯಲಾಟದೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಬಯಲಾಟದಲ್ಲಿ ಕಿರಾತ ಹಾಗೂ ರಾಕ್ಷಸಪಾತ್ರಗಳ ಕುಣಿತ ಮತ್ತು ಆರ್ಭಟ ಮಣೇವಿನ ಸ್ವರೂಪದಲ್ಲಿವೆಯೆಂಬುದು ಸ್ಪಷ್ಟ. ಬಹುಶಃ ನಾಗಾರಾಧನೆಯ ಮೂಲಸ್ವರೂಪ ಮಣೇವು ಇರಬೇಕೆನಿಸುತ್ತದೆ.

ಯಕ್ಷಗಾನದ ಬಗ್ಗೆ ಅಪಾರ ತಿಳುವಳಿಕೆಯುಳ್ಳ ಕಾರಂತರಿಗೆ ಬಯಲಾಟವು ಯಕ್ಷಗಾನಕ್ಕಿಂತ ಪ್ರತ್ಯೇಕ ಅಸ್ತಿತ್ವ ಹೊಂದಿದೆಯೆಂಬ ಸ್ಪಷ್ಟ ತಿಳುವಳಿಕೆಯಿರಲಿಲ್ಲ. ಹೀಗಾಗಿಯೇ ಕೆಲವು ಕಡೆ ಯಕ್ಷಗಾನ ಮತ್ತು ಬಯಲಾಟ ಒಂದೇ ಎಂಬಂತೆಯು ಕೆಲವೆಡೆ ಬೇರೆ ಎಂಬಂತೆಯೂ ಬರೆಯುತ್ತಾರೆ. ಯಕ್ಷಗಾನ ಮತ್ತು ಬಯಲಾಟದ ಚರಿತ್ರೆಗೂ ಶಿಷ್ಟ ಆಕರಗಳನ್ನು ನಂಬುತ್ತಾರೆ. ಡಾ. ಕೆ.ಶಿವರಾಮ ಕಾರಂತರ ಪ್ರಯೋಗಗಳು ಬಯಲಾಟದ ಮೂಲಸ್ವರೂಪದ ಲಕ್ಷಣಗಳನ್ನು ಅಭಿವ್ಯಕ್ತಿಸುತ್ತವೆಯೋ, ನೀಗಿಸಿಕೊಳ್ಳುತ್ತಿವೆಯೋ ಎಂಬುದು ಅಸ್ಪಷ್ಟವಾಗಿದೆ. ಯಕ್ಷಗಾನದ ವಿಷಯವಾಗಿ ಆಕರಗ್ರಂಥ ಬರೆದು ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಕಾರಂತರು ಯಕ್ಷಗಾನ ಮತ್ತು ಬಯಲಾಟದ ಅರ್ಥವಂತಿಕೆ, ಸಾಮ್ಯತೆ ಮತ್ತು ಭಿನ್ನತೆಗಳನ್ನು ಸ್ಪಷ್ಟವಾಗಿ ಬಿಡಿಸಿಕೊಳ್ಳುವುದಿಲ್ಲ. 

ಇಷ್ಟಾದರೂ, ಕಾರಂತರು ಒಮ್ಮೆ ಎದ್ದುಬಂದರೆ ತಬ್ಬಿಕೊಂಡು ‘ಇನ್ನೊಂದು ನೂರುವರ್ಷ ಯಾಕೆ ಬದುಕಲಿಲ್ಲ ಅಜ್ಜಾ’ ಎನ್ನಬೇಕೆನ್ನುವಷ್ಟು ಗೌರವವನ್ನು ಉಳಿಸಿಕೊಂಡೆ ಹೋಗಿದ್ದಾರೆ. 
 

                                                            * * * * * * * * * * * * * * * * * * * * * * * * * *

ಕಪ್ಪು ಕುಲುಮೆ: ವಿಶ್ಲೇಷಣಾತ್ಮಕ ನೋಟ

 

ಗುಲಾಮರ ವಿಮೋಚನೆಯ ಹೋರಾಟಗಾರ ಫ್ರಡರಿಕ್ ಡಗ್ಲಾಸ್‌ನ ಆತ್ಮಕತೆಯನ್ನು ವಿಕಾಸ್ ಆರ್ ಮೌರ್‍ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಇಂಗ್ಲೀಷಿನಲ್ಲಿ ಮುದ್ರಣವಾದ ಕೃತಿಯಲ್ಲಿ ಆ ಕೃತಿಯನ್ನು ಓದಲು ಒಂದು ಭೂಮಿಕೆಯ ಅಗತ್ಯವಿತ್ತಾದರೂ ಪ್ರಾಸ್ತಾವಿಕ ನುಡಿಗಳಿಲ್ಲದೆ ಪ್ರಕಟವಾಗಿತ್ತು. ಕನ್ನಡದಲ್ಲಿಯೂ ಯಾವುದೇ ಪ್ರಸ್ತಾವನೆ, ಮುನ್ನುಡಿಗಳಿಲ್ಲದೆ ಪ್ರಕಟವಾಗಿದೆ. ತನ್ನ ಬದುಕಿನ ಮೂಲಕವೇ ಗುಲಾಮರ ಬದುಕಿನ ಚಿತ್ರಣ ನೀಡುವ ಡಗ್ಲಾಸ್ ಅಮೆರಿಕಾದಲ್ಲಿ ತನ್ನ ಹೋರಾಟವನ್ನು ರೂಪಿಸಿಕೊಂಡ ಬಗ್ಗೆ, ತಾನು ನಿರ್ವಹಿಸಿದ ಮಹತ್ವದ ಕೆಲಸಗಳ ಬಗ್ಗೆ ಹೇಳಿಕೊಂಡಿಲ್ಲ. ಚಾರಿತ್ರಿಕ ವಿವರಣೆ ನೀಡುವುದೂ ಇಲ್ಲ. ಹೀಗಾಗಿ ಆತನ ಬಾಳಕಥನದೊಂದಿಗೆ ದೇಶದ ಹಿನ್ನೋಟದ ಪಕ್ಷಿನೋಟವೂ ಅಗತ್ಯವಿದೆ. ಕನ್ನಡಾನುವಾದದ ಕಪ್ಪುಕುಲುಮೆ ಓದುವವರಿಗೆ ಇದೊಂದು ಭೂಮಿಕೆಯಾಗಲೆಂದು ಬಯಸುತ್ತೇನೆ. ತನ್ನ ಬರೆಹ ಯಾಕೆ ಮತ್ತು ಯಾರಿಗೆ ಎಂದು ಡಗ್ಲಾಸ್ ಮಾಡಿದ ಭಾಷಣವನ್ನು ಕನ್ನಡಾನುವಾದದ ಹಿನ್ನುಡಿಯಾಗಿ ನೀಡಿದ್ದು, ನಾನು ಅದರ ಅನುವಾದ ಮಾಡಿದ್ದೇನೆ. ಈ ಕೃತಿ ಇಂಡಿಯಾವನ್ನು ಮತ್ತು ಇಂಡಿಯಾದ ಸಾಹಿತ್ಯವನ್ನು ಮತ್ತೊಂದು ಬಗೆಯಾಗಿ ನೋಡಲು ಪ್ರೇರೇಪಿಸುತ್ತದೆ. 

ಗುಲಾಮರ ಅಮೆರಿಕಾದ ಗುಲಾಮನಿಗೆ ಒಡೆಯ ಹೇಳುತ್ತಾನೆ. ನೀನೆಂದಾದರೂ ಪೆನ್ನು ಪುಸ್ತಕ, ಇಂಕು ಹಿಡಿದಿರುವುದನ್ನು ನಾನು ಕಂಡರೆ ನಿನಗೆ ಬಾರುಕೋಲಿನಿಂದ ನೂರು ಬಾರಿ ಥಳಿಸುತ್ತೇನೆ ಎಂದು. ಭಾರತೀಯ ಹಿಂದೂಧರ್ಮ ಹೇಳುತ್ತದೆ. ಶೂದ್ರನೊಬ್ಬ ಮಂತ್ರ ಪಠಣವನ್ನು ಕೇಳಿಸಿಕೊಂಡರೆ ಅವನ ಕಿವಿಗೆ ಕಾದಸೀಸೆಯನ್ನು ಹಾಕಿ, ಮಂತ್ರ ಉಚ್ಚರಿಸಿದರೆ ನಾಲಿಗೆಯನ್ನು ಕತ್ತರಿಸಿ, ಪ್ರತಿಮಾತನಾಡಿದರೆ ಶಿರವನ್ನು ಕತ್ತರಿಸಿ ಎಂದು ಈಗ ನೀವೇ ಹೇಳಿ ಯಾವುದು ಹೆಚ್ಚು ಕ್ರೂರ. ಚಾರಿತ್ರಿಕ ದಾಖಲೆಗಳನ್ನು ಗಮನಿಸಿದರೆ ಗುಲಾಮರನ್ನು ಖರೀದಿಸುವ ಮಾರುವ ವ್ಯಾಪಾರದ ಬಗ್ಗೆ ಪ್ರತಿಬಂಧಕ ನಿಯಮ ರೂಪಿಸಿದ ಭಾರತದ ಮೊದಲ ಅರಸ ಮಹಾತ್ಮ ಅಶೋಕ. ಗುಲಾಮರ ಮಾರಾಟದಿಂದಲೆ ಜಗತ್ತನ್ನು ವಸಾಹತುವಾಗಿ ಮಾರ್ಪಡೆಇಸಿಕೊಂಡಿದ್ದ ಇಂಗ್ಲೆಂಡ್ ಬ್ರಿಟೀಷ್ ವಸಾಹತು 1833ರಲ್ಲಿ ಗುಲಾಮ ಪದ್ಧತಿಯನ್ನು ಶಾಸನಬದ್ಧವಾಗಿ ಕೊನೆಗೊಳಿಸಿದರು. ಆದರೂ ಹಳೆ ಮೈಗೆ ಹೊಸ ಅಂಗಿ ತೊಡಿಸಿ ಗುತ್ತಿಗೆ ಕೆಲಸಗಾರ ಎಂಬ ನೂತನ ಗುಲಾಮ ವ್ಯವಸ್ಥೆಯೊಂದನ್ನು ಪುನರ್ ವಸಾಹತುಕರಣಗೊಳಿಸಿದರು.

ಕಾಕ್ಸ್ ಒಂದು ಮಾತು ಹೇಳುತ್ತಾನೆ. ನೀಗ್ರೋಗಳನ್ನು ಒಗ್ಗೂಡಿಸಿ ಅವರನ್ನು ಬಿಳಿಯರ ಹಿಡಿತದಿಂದ ಬಿಡುಗಡೆ ಮಾಡಿಸಬಲ್ಲ ನಾಯಕ ಅನಿವಾರ್ಯವಾಗಿ ಬಿಳಿಯನೇ ಆಗಬೇಕಾಗುತ್ತದೆ. ಆ ಬಿಳಿಯ ತನ್ನನ್ನು ತಾನು ಕರಿಯರ ಜೊತೆ ಏಕೀಕರಿಸಿಕೊಳ್ಳುವುದರಿಂದ ತಮಗಿಂದ ಶ್ರೇಷ್ಠನಾದ ಆ ಬಿಳಿಯನ ತ್ಯಾಗವನ್ನು ಕರಿಯರು ಮೆಚ್ಚುತ್ತಾರೆ. ತಮ್ಮ ನಾಯಕನನ್ನಾಗಿ ಒಪ್ಪಿಕೊಳ್ಳಲು ಅವರು ಹಿಂಜರಿಯರು. ಉಳಿದ ಬಿಳಿಯರೂ ತಮ್ಮವನೇ ಒಬ್ಬನು ಸಹಾನುಭೂತಿಯಿಂದ ಪರಿಶೀಲಿಸಲು ಸಿದ್ಧರಾಗುತ್ತಾರೆ. 

    ಜಗತ್ತಿನ ಯಾವುದೇ ಪ್ರದೇಶದ ಅಧಿಕೃತ ಅನ್ನುವ ಚರಿತ್ರೆಗಿಂತ ಅದೇ ಪ್ರದೇಶದ ತಳಸಮುದಾಯದ ಶೋಷಣೆಗೆ ಒಳಗಾದ ವ್ಯಕ್ತಿಯ ಆತ್ಮಕತೆಯು ಭಿನ್ನವಾದ ಚರಿತ್ರೆಯೊಂದನ್ನು ಕಟ್ಟಿಕೊಡುತ್ತದೆ. ಸಮುದಾಯದ ದೇಶಿಕ ಚರಿತ್ರೆಗೆ ಬಾಳಕಥನಗಳು ಆಕರಗಳಾಗುತ್ತವೆ. ಅಮೆರಿಕಾ ಇಂಗ್ಲೆಂಡ್, ಆಫ್ರಿಕಾ ಮತ್ತು ಬಹುಭಾಗದ ಚಾರಿತ್ರಿಕ ವಿವರ ಮತ್ತು ವಾಸ್ತವದ ಕದಪುಗಳು  ಬಾಳಕಥನಗಳಲ್ಲಿ ಕಣ್ಣು ಇಣಿಕಿಸುತ್ತವೆ. ಹಲ್ಲೆ, ದರೋಡೆ, ಅತ್ಯಾಚಾರ, ಹಿಂಸೆ ಹೋರಾಟ, ಒಗ್ಗಿಸಿದ ಒಗ್ಗಿಸಿಕೊಳ್ಳಲೆತ್ನಿಸಿದ ಸನ್ನಿವೇಷಗಳು, ಮಾರಾಟ ಮತ್ತು ಮರು ಮಾರಾಟಗಳ ನಡುವೆ ನಲುಗಿದ ಮನೋಸ್ಥೈರ್ಯ ದೇಹ ಇವೆಲ್ಲವುಗಳನ್ನು ಗುಲಾಮರ ಆತ್ಮಕತೆಗಳು ಯಾವುದೇ ಉತ್ಪ್ರೇಕ್ಷೆಗಳಿಲ್ಲದಂತೆ ತಣ್ಣಗೆ ನಿರೂಪಿಸುತ್ತವೆ. ಈ ತಣ್ಣಗಿನ ಕೌರ್ಯ ಸಾಮಾಜಿಕವಾದ ಬದುಕನ್ನು ಇರಿಯುವ ಬಗೆಯು ಪರಿಣಾಮಕಾರಿಯಾದುದು. ಮಾನವ ಹಕ್ಕುಗಳ ಸೊಂಕು ಇಲ್ಲದ ನಿರ್ಧಯಿ ಬಂಡವಾಳಿಗರು ಗುಲಾಮರನ್ನು ಸೆರೆಯಿಡಿಯುತ್ತಿದ್ದ ಬಗೆಗಳು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಸ್ವಂತ ಅನುಭವದಲ್ಲಿ ಕಟ್ಟಿಕೊಟ್ಟ ಬಾಳಕಥನಗಳು ಚಿಂತನೆಗೆ ಹೆಚ್ಚುತ್ತವೆ.

      ಗುಲಾಮರ ಆತ್ಮಕತೆಗಳಿಗೆ ಬಹುವ್ಯಕ್ತಿತ್ವದ ಸ್ವರ್ಶಗುಣ ಬರುವುದು ಅವು ರಚಿತಗೊಂಡ ಎರಡು ರೀತಿಯ ನೆಲೆಗಳಿಂದಾಗಿ. ಅವು ಸ್ವರಚಿತವೂ ಆಗಿರಬಹುದು, ಅನುಭವವನ್ನು ಮತ್ತೊಬ್ಬರ ಮುಖಾಂತರ ಬರೆಯಿಸಿದವೂ ಆಗಿರಬಹುದು. ಗುಲಾಮಗಿರಿಗೆ ಶಿಕ್ಷಣ ಕೊಡುವುದನ್ನು ಒಡೆಯರು ನಿರಾಕರಿಸುತ್ತಿದ್ದರು. ಕೆಲವರ ಒಡೆಯರು ಒಡತಿಯರು ಇತರಿಗಿಂತ ಭಿನ್ನ ಮನಸ್ಥಿತಿಯನ್ನು ಹೊಂದಿದವರಿದ್ದರು. ಒಂದು ಸೂರಿನಡಿ ಬದುಕುತ್ತಿದ್ದ ಜನರನ್ನು ಬೇಟೆಯಾಡಿ ಹಿಡಿದು ಪಲ್ಲಟಿಸಿ ಅವರ ಬಲವನ್ನು ಕುಗ್ಗಿಸಲಾಗುತ್ತಿತ್ತು. ಬದುಕಿನ ಯಾವುದೇ ಸನ್ನಿವೇಶದಿಂದ ಆಕಸ್ಮಿಕವಾಗಿ ಕಲಿತವರು ಸರಳಶೈಲಿ, ಸರಳಭಾಷೆಯಲ್ಲಿ ತಮ್ಮ ಬಾಳ ಕಥನವನ್ನು ನಿರೂಪಿಸಿದರು. ವಿಶೇಷತಃ ಈ ನಿರೂಪಣೆಗಳು ಆ ಸಮುದಾಯಗಳ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಮಾನವಶಾಸ್ತ್ರೀಯ ದಾಖಲೆಗಳಾಗಿ ಮುಖ್ಯವಾಗುತ್ತವೆ. ಅಸಮಾನತೆ ಮತ್ತು ದಮನದ ವಿರುದ್ಧ ದನಿಯೆತ್ತಲು ಸ್ಫೂರ್ತಿಯಾಗಿಯೂ ಮುಖ್ಯವಾಗುತ್ತದೆ.

ನನ್ನದೇ ಗತವನ್ನು ನೆನೆಪಿಸಿಕೊಂಡು ಬರೆಯಲು ಕೈಗಳೀಗ ನಡುಗುತ್ತಿವೆ ಎಂದ ಡಗ್ಲಾಸ್‌ನ ಮಾನಸಿಕ ಹಿಂಸೆಯನ್ನು ಅಳೆಯಲು ವರ್ತಮಾನದಲ್ಲಿ ಮಾಪನಗಳಿಲ್ಲ. ನಾನು ಗುಲಾಮನಾಗಿ ಹುಟ್ಟಿದ್ದೇನೆ ಗುಲಾಮನಾಗಿ ಸಾಯಲಾರೆ ಎಂದ ಡಗ್ಲಾಸ್‌ಗೂ, ನಾನು ಹಿಂದೂವಾಗಿ ಹುಟ್ಟಿದ್ದೇನೆ ಹಿಂದುವಾಗಿ ಸಾಯಲಾರೆ ಎಂದ ಬಾಬಾ ಸಾಹೇಬರಿಗೂ, ಕಾರ್ಮಿಕ ಪ್ರಭುತ್ವನ್ನು ಆಶಿಸಿದ ಕಾರ್ಲ್‌ಮಾರ್ಕ್ಸ್‌ಗೂ ಹೆಚ್ಚು ಸಾಮ್ಯಗಳಿವೆ. ಮೂವ್ವರೂ ದನಿಯಿಲ್ಲದವರ ವಿಮೋಚನೆಗಾಗಿ ಜೀವನಪರ್ಯಂತ ಹೋರಾಡಿದವರೆ. ನಾವು ಗುಲಾಮರಲ್ಲ ಎನ್ನುವ ಡಗ್ಲಾಸ್‌ಗೂ ನನ್ನವರು ಆಳಬೇಕೆಂದ ಬಾಬಾ ಸಾಹೇಬರಿಗೂ ವ್ಯತ್ಯಾಸವೇನಿಲ್ಲ. ಈ ನಿಟ್ಟಿನಲ್ಲಿ ಫುಲೆ, ಪೆರಿಯಾರ್ ಮತ್ತು ಅನೇಕರ ಸಾಮ್ಯತೆಗಳು ಗಮನೀಯ. ಎಲ್ಲರಿಗೂ ಮತದಾನದ ಹಕ್ಕು ಬೇಕೆಂದು ಮುಖ್ಯವಾಗಿ ಮಹಿಳೆಗೂ ಮತದಾನ ಹಕ್ಕು ನೀಡಬೇಕೆಂದು ಡಗ್ಲಾಸ್ ಹೋರಾಡಿದರು; ಬಾಬಾ ಸಾಹೇಬರೂ ಕೂಡ. ಒಂದು ರಾಷ್ಟ್ರವನ್ನು ನಿರ್ವಚಿಸಬಹುದಾದ ಜ್ಞಾನಶಾಖೆಯನ್ನು ಕಪ್ಪುಬಣ್ಣದ ಜನರ ಕೈಗೆ ಕೊಡಲು ಡಗ್ಲಾಸ್ ಪಟ್ಟ ಶ್ರಮ, ತೆಗೆದುಕೊಂಡ ಮಾರಣಾಂತಿಕ ರಿಸ್ಕ್, ಜೋಡಿಸಿಕೊಂಡ ವ್ಯವಸ್ಥಿತ ಕ್ರಮ, ಬಳಸಿಕೊಂಡ ಮಾರ್ಗವು ಊಹಾತೀತವಾದುದು. ಅಂಬೇಡ್ಕರರ ಶ್ರಮವೂ. 

ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದ ಧರ್ಮ, ಆರ್ಥಿಕತೆ, ಸಾಂಸ್ಕೃತಿಕ, ಸಮಾಜೋ ರಾಜಕೀಯ ಬದುಕಿನೊಂದಿಗೆ ವಸಾಹತು ಮೂಲದ ಅಪಾರ್‍ಥೈಡ್ ಆಡಳಿತ ವ್ಯವಸ್ಥೆಯನ್ನು ಆಳವಾಗಿ ಅರಿತರೆ ಮಾತ್ರ ಡಗ್ಲಾಸ್‌ನ ಮಾತಿನ ಚುಂಗು ಹಿಡಿಯಲು ಸಾಧ್ಯವಾಗುತ್ತದೆ. ಸಾಂಸ್ಕೃತಿಕ ಗುರುತುಗಳು ಸಾಮಾಜಿಕವಾಗಿ ಗಾಯಗಳಾಗಿರಲೂ ಸಾಧ್ಯವೆಂದು ನಂಬಿ ಬದುಕಿದ್ದ ಡಗ್ಲಾಸ್ ಹುಟ್ಟಿ ಈ ವರ್ಷಕ್ಕೆ 201 ವರ್ಷಗಳು. 2018ನೇ ವರ್ಷವನ್ನು ಫ್ರೆರ್ಡ್ರಿಕ್ ಡಗ್ಲಾಸ್‌ನ 200ನೇ ವರ್ಷದ ಸ್ಮರಣಾರ್ಥದ ವರ್ಷವನ್ನಾಗಿ ಅಚರಿಸಲು ಆತನ ತಾಯ್ನೆಲ ಮೇರಿಲ್ಯಾಂಡ್ ನಿರ್ಧರಿಸಿದೆ. ಯಾವ ಸರ್ಕಾರಿ ದಾಖಲೆಯಲ್ಲೂ ಜನ್ಮದಿನದ ನಮೂದಿಲ್ಲದ ಕಾರಣ ೧೮೧೭-೧೮೧೮ ಇರಬಹುದು ಎನ್ನುವ ಡಗ್ಲಾಸ್, ವಯಸಿಗೆ ಸಂಬಂಧಿಸಿದಂತೆ ಯಜಮಾನನ ಕುದುರೆಗೆ ಎಷ್ಟು ಗೊತ್ತೊ ಗುಲಾಮರಾದ ನಮಗೆ ಅಷ್ಟೇ ಗೊತ್ತು ಎನ್ನುತ್ತಾನೆ. ಗುಲಾಮನಾಗಿ ಹುಟ್ಟಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ನಂತರದ ದಿನಮಾಗಳಲ್ಲಿ Anti Slavery Convention ನಲ್ಲಿ ಗುರ್ತಿಸಿಕೊಂಡು ಹೋರಾಟದ ಮೂಲಕ ಮೇಲೇರುತ್ತಾ ಬಂದವ. ಸಾಂತೆ ಡೊಮಿಂಗೋ ಕಮಿಷನ್ಗೆ ಸೆಕ್ರೆಟರಿಯಾಗಿ, ಡ್ರಿಸ್ಟ್ರಿಕ್ಟ್ ಆಫ್ ಕೊಲಂಬಿಯಾದಲ್ಲಿ ಉನ್ನತಾಧಿಕಾರಿಯಾಗಿ ಮೇಲ್ದೇಶಗಳಿಗೆ ಆಮೇರಿಕಾದ ಪ್ರತಿನಿಧಿಯಾಗಿ ದುಡಿದ ಜೀವ. ಆತನ ಹೋರಾಟದ ಬದುಕಿನ ಆತ್ಮಕತೆಯನ್ನು ಮೂರು ಆವೃತ್ತಿಗಳಲ್ಲಿ ಹೊರತರಲಾಗಿದೆ. ಜಗತ್ತಿನ ಹಲವು ಭಾಷೆಗಳಿಗೆ ಅನುವಾದವಾದ ಡಗ್ಲಾಸ್‌ನ ಆತ್ಮಕತೆ ೨೦೧೧ರಲ್ಲಿ ತೆಲುಗಿನಲ್ಲಿಯೂ ಬಂದು ಇಷ್ಟೊತ್ತಿಗಾಗಲೆ ಐದಾರು ಮುದ್ರಣಗಳನ್ನು ಕಂಡಿದೆ. 

ಒಬ್ಬ ಕಪ್ಪುಜಾತಿಯ ವ್ಯಕ್ತಿಯನ್ನು ವೈಟ್‌ಹೌಸ್‌ನಲ್ಲಿ ಸಂದಿಸಿದ ಮೊದಲ ಅದ್ಯಕ್ಷ ಅಬ್ರಹಾಂ ಲಿಂಕನ್ ಅವರಾದರೆ ಆ ಕಪ್ಪುಜಾತಿಯ ಆ ಮನುಷ್ಯನೆ ಡಗ್ಲಾಸ್. (ವೈಟ್‌ಹೌಸ್‌ನಲ್ಲಿ ಲಿಂಕನ್ನರ ಜೊತೆಗೆ ಸಹಬೋಜನ ಮಾಡಿದ ಮೊದಲ ಕರಿಯ ಗುಲಾಮ ಬೂಕರ್ ಟಿ ವಾಷಿಂಗ್ಟನ್) ಫ್ರೆರ್ಡ್ರಿಕ್ ಆಗಸ್ಟಸ್ ವಾಷಿಂಗ್‌ಟನ್ ಬೆಯಿಲಿ ಎಂಬ ಮೂಲ ಹೆಸರುಳ್ಳ ಆತ ಒಡೆಯರು ನೀಡುತ್ತಿದ್ದ ಮಾರಣಾಂತಿಕ ಹಿಂಸೆಯನ್ನು ತಾಳಲಾರದೆ ಓಡಿ ಹೋದಮೇಲೆ  ನೂಯಾರ್ಕಿನಲ್ಲಿ ಹೆಸರನ್ನು ಫ್ರೆರ್ಡ್ರಿಕ್ ಡಗ್ಲಾಸ್ ಎಂದು ಬದಲಾಯಿಸಿಕೊಳ್ಳುತ್ತಾನೆ. ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ ಇದ್ದಾರೆಂದೂ ಡಗ್ಲಾಸ್‌ಗೆ ತಿಳಿದಿರುತ್ತದೆ. I never saw my mother to know her as such more than four or five times in my life; and each of these time was very short in duration and at night  ಎಂದು ಬರೆಯುವ ಡಗ್ಲಾಸ್ ಮಗನನ್ನು ಬಂದು ಕಾಣಲು ಆಕೆಯ ಕಷ್ಟಗಳೇನೆಂಬುದನ್ನು ದಾಖಲಿಸುತ್ತಾನೆ. ಹುಟ್ಟಿ ಹನ್ನೆರಡು ತಿಂಗಳಿನೊಳಗೆ ತಾಯಿ ಮಗುವನ್ನು ಬೇರೆ ಮಾಡುವ ಯಜಮಾನರು ತಾಯಿ ಮಗುವಿನ ನಡುವೆ ಏರ್ಪಡಬಹುದಾದ ಮಮತೆಯನ್ನು ನಾಶ ಮಾಡುತ್ತಾರೆ. ಹೀಗಾಗಿಯೆ ತಾಯಿ ಸತ್ತಾಗ ಅವನಿಗೆ ಅಪರಿಚಿತ ವ್ಯಕ್ತಿಯ ಸಾವಿನಂತೆ ಭಾಸವಾಗುತ್ತದೆ. ಕೊನೆಯದಾಗಿ ಸತ್ತ ತಾಯಿಯ ಮುಖವನ್ನು ನೋಡಲೂ ಅವಕಾಶವಿಲ್ಲದಾಗ ಮತ್ತೇನಾಗುತ್ತದೆ? 

ಡಗ್ಲಾಸ್‌ನ ಮಾತಿನಲ್ಲೆ ಹೇಳುವುದಾದರೆ, I know nothing; the means of knowing was withheld from me. My mother and I were separated when I was but an infant before I knew her as my mother. It is a common custom, in the part of Maryland from which I ran away, to part children from their mothers at a very early age. Frequently, before the child has reached its twlfth month, its mother is taken from it and hired our on some farm a considerable distance off, and the child is placed under the care of an old woman, too old for field labor. For what this separation is done, I do not know, unless it be to hinder the development of the child’s affection toward its mother, and to blunt and destroy the natural affection of the mother for the child. This is the inevitable result. ಇಂಥ ಕ್ರೂರ ವ್ಯವಸ್ಥೆಯಲ್ಲಿ ಸತ್ತು ಬದುಕಿದವ ಡಗ್ಲಾಸ್.

ಗುಲಾಮ ಪದ್ದತಿಯಲ್ಲಿ ಒಂದು ವಿಚಿತ್ರವೆಂದರೆ ಕಪ್ಪುಜಾತಿಯ ಗುಲಾಮರಲ್ಲಿ ಹೆಣ್ಣು ಹುಟ್ಟಿದರೆ ಜನ್ಮತಃ ಗುಲಾಮರಾಗಿ ನಿರ್ಧರಿಸಲ್ಪಡುತ್ತಾರೆ. ಅವರನ್ನು ಲೈಂಗಿಕ ಗುಲಾಮರಾಗಿ ನೇಮಿಸಿಕೊಳ್ಳುತ್ತಾರೆ. ಅವರದು ಯಾವುದೆ ತಪ್ಪಿಲ್ಲದಿದ್ದರೂ ವಿನಾ ಕಾರಣ ಹೇಗೆ ಶಿಕ್ಷಿಸುತ್ತಾರೆ ಎಂಬುದನ್ನು ವರಸೆಯಲ್ಲಿ ತನಗೆ ಅತ್ತೆಯಾಗುವ ಮಹಿಳೆಯ ಬಗ್ಗೆ ಡಗ್ಲಾಸ್ ಹೀಗೆ ಬರೆಯುತ್ತಾನೆ. The lounder she screamed, the harder he whipped; and where the blood ran fastest there he whipped longest. He would whip her to make her scream, and whip her to make her hush; and not until overcome by fatigue, would he cease to swing the blood-clotted cowskin. I remember the first time I ever witnessed this horrible exhibition. I was quite a child, but I well remember it. I never shall forget it whilst I remember any thing. It was the first of a long series of such outrages, of which I was doomed to be a withness and a participant. It struck me with awful force. It was the blood-stained gate, the entrance to the hell of slavery, through which I was about to pass. It was a most terrible spectacle. I wish I could commit to paper the feelings with which I beheld it.

 ಇಂಥ ಅನೇಕ  ಘಟನೆಗಳು ಡಗ್ಲಾಸ್ ಬಾಲ ಗುಲಾಮನಾಗಿದ್ದಾಗಲೆ ಆತನ ಕಣ್ಣೆದುರು ನಡೆದು ಹೋಗುತ್ತವೆ.

ಪ್ರಪಂಚದಲ್ಲಿ ಸಾಮಾನ್ಯವಾಗಿ ಗುಲಾಮಗಿರಿಗಿಂತಲೂ ಹೀನಾಯವಾದದ್ದು ಮತ್ತೊಂದು ಕಂಡುಬಂದಿಲ್ಲ ಎಂದು ಡಾ. ಬಾಬಾ ಸಾಹೇಬರು ಬರೆಯುತ್ತಾರೆ. ಇಂಥಾ ಈ ಕ್ರೂರವ್ಯವಸ್ಥೆಯು ಸುಮೇರು ನಾಗರಿಕತೆಯಲ್ಲಿ ಕ್ರಿ.ಪೂ. 2100–2050 ವರ್ಷಗಳ ಹಿಂದೆ ದೊರೆತ ಶಾಸನಗಳಲ್ಲಿ ಗುಲಾಮ ಪದ್ಧತಿಯ ನಿಯಮ ಕಾನೂನುಗಳ ಉಲ್ಲೇಖ ಸಿಗುತ್ತದೆ. ಇದು ಅತ್ಯಂತ ಪುರಾತನ ಪುರಾವೆಯಾಗಿದೆ. ದಾಳಿಕಾರನೊಬ್ಬ ದಾಖಲಿಸಿದ್ದ ಪ್ರಕಾರ; ಅಟ್ಲಾಂಟಿಕ್ ಭೂಸಂಧಿಯಿಂದ ಪೆಸಿಫಿಕ್ ಸಾಗರಕ್ಕೆ ಹೋಗುವ ಒಂದು ಹಡಗಿಗೆ ಮರದ ದಿಮ್ಮಿಗಳನ್ನು ತುಂಬುವ ಕೆಲಸಕ್ಕಾಗಿ ಆತ ಹಲವು ನೂರು ಇಂಡಿಯನ್ನರನ್ನು ಮೂವತ್ತು ನೀಗ್ರೋಗಳನ್ನೂ ಬಳಸಿಕೊಂಡನಂತೆ. ಇಂಡಿಯನ್ನರು ನಾಮಾವಶೇಶವಾಗಿ ಹೋಗಿದ್ದರು. ನೀಗ್ರೋಗಳೂ ಬದುಕಿ ಉಳಿದಿದ್ದರು. ಒಬ್ಬ ನೀಗ್ರೋನನ್ನು ನೇಣಿಗೆ ಹಾಕಿದರಲ್ಲದೆ ಇನ್ನಾವುದೇ ರೀತಿಯಿಂದ ಆತ ಸಾಯುವುದಿಲ್ಲ. ಇಲ್ಲಿಯವರೆಗಂತೂ ದೌರ್ಬಲ್ಯದಿಂದಾಗಿ ಯಾವ ನೀಗ್ರೋನೂ ಸತ್ತಿದ್ದು ಕಾಣುವುದಿಲ್ಲ. ಒಬ್ಬ ನೀಗ್ರೋ ನಾಲ್ಕು ಇಂಡಿಯನ್ನರಿಗಿಂತ ಹೆಚ್ಚು ದುಡಿಯುತ್ತಾನೆ ಎಂಬುದನ್ನು ಕಂಡುಕೊಂಡ ಮೇಲೆ, ಕೂಡಲೇ ನೀಗ್ರೋಗಳನ್ನು ಕೊಂಡು ತರುವುದಕ್ಕಾಗಿ ಒಂದು ವ್ಯವಸ್ಥಿತ ಮಾರುಕಟ್ಟೆಯೇ ನಿರ್ಮಿತವಾಯಿತು. ಪೋರ್ಚುಗೀಸರು ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ತೆರೆದ ಇಂಥ ಮಾರುಕಟ್ಟೆ ಕೂಡಲೇ ಆ ವ್ಯಾಪಾರದಲ್ಲಿರುವ ಲಾಭವನ್ನು ಕಾಣಿಸತೊಡಗಿತು ಎಂದು ಅಂಬೇಡ್ಕರರು ಬರೆಯುತ್ತಾರೆ. ಈ ವ್ಯಾಪಾರ ಇಂಗ್ಲೆಂಡಿನಲ್ಲಿ ತೊಡಗಿದ್ದು 1535ರಲ್ಲಿ, 24 ನೀಗ್ರೋಗಳನ್ನು ಆಫ್ರಿಕನ್ ದಡದಿಂದ ತಂದು ಇಂಗ್ಲಿಷ್ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಮಾರಿದಾಗ ಈ ಉದ್ಯೋಗದಲ್ಲಿ ತೊಡಗಿದ ಅತ್ಯಂತ ಧೈರ್ಯಸ್ಥ ವ್ಯಕ್ತಿ ಆ ಮೇಲೆ ಇತಿಹಾಸದಲ್ಲೇ ಹೃದಯಹೀನ ಮನುಷ್ಯ ವ್ಯಾಪಾರಿಯೆಂದು ಕುಪ್ರಸಿದ್ದನಾದ ಜಾನ್ ಹಾಕಿನ್ಸ್. ಈ ಕುರಿತು ಅಂಬೇಡ್ಕರರ ಬರಹಗಳಲ್ಲಿ ಹೇರಳವಾದ ದಾಖಲೆಗಳಿವೆ.

ಹಿಂಸೆಯನ್ನು ಸುಂದರವಾಗಿ ಅಕ್ಷರಗಳನ್ನಾಗಿಸುವ ಕಲೆ ಸಹಜವಾಗಿಯೇ ಡಗ್ಲಾಸ್‌ಗೆ ತಿಳಿಯದು. ಅವನೊಬ್ಬ ಅನಕ್ಷರಸ್ಥ. ತನ್ನ ಯಜಮಾನಿಯ ಒಂದಷ್ಟು ಕರುಣೆಯಿಂದ ಅಕ್ಷರದ ಗೆರೆಗಳನ್ನು ಕಂಡವ. ಯಾವ ಉದ್ವೇಗಕ್ಕೂ ಒಳಗಾಗದೆ ಸರಳವಾದ ಭಾಷೆಯಲ್ಲಿ ಅಕ್ಷರಕ್ಕೆ ಕಸುವು ತುಂಬಿ ಬರೆಯುವುದು ಆತನ ಹಿರಿಮೆ. ತಿಂಗಳ ಭತ್ಯೆ ತೆಗೆದುಕೊಳ್ಳಲು ಗುಲಾಮರು ಹೋಗುವಾಗ ಹಾಡುವ ಹಾಡನ್ನು ಕುರಿತ ಆತನ ವಿಶ್ಲೇಷಣೆಯಂತೂ ಆಮೋಘವಾದುದು. ಪ್ರತೀ ಸಾಲಿನಲ್ಲೂ ನಾವ್ಯಾರು ಊಹಿಸಲು ಸಾಧ್ಯವಾಗದ ಅಸಾಧ್ಯವಾದದನ್ನು ಸಾಧಿಸಿ ನಮ್ಮ ಮುಂದಿಟ್ಟ ಗುಲಾಮನ ಯಶೋಗಾಧೆಯ ಪಯಣವನ್ನು ಡಗ್ಲಾಸ್ ನಮ್ಮ ಮುಂದಿರಿಸುತ್ತಾನೆ. ಕಂಡರಿಯದ ಗುಲಾಮರ ಹಿಂಸಾತ್ಮಕ ಬದುಕಿನ ವಾಸ್ತವಗಳನ್ನು ದಾಖಲಿಸುವ ಡಗ್ಲಾಸ್ ನಾನು ಗುಲಾಮನಾಗಿದ್ದರೂ ಬೇರೆ ಗುಲಾಮರು ಅನುಭವಿಸಿದಷ್ಟು ಹಿಂಸೆಯನ್ನು ಅನುವಾದವಿಸಿಲ್ಲವೆಂದು ಪ್ರಾಮಾಣಿಕವಾಗಿ ಬರೆಯುತ್ತಾರೆ.

ಅಮೆರಿಕಾದ ಚರಿತ್ರೆಯಲ್ಲಿ ಗುಲಾಮರೊಂದಿಗೆ ನಂಟು ಬೆಸೆದುಕೊಂದ ಆಂತರಿಕಯುದ್ಧ 12-4-1861ರಲ್ಲಿ ಆರಂಭವಾಗಿ 9-5-1865 ರಂದು ಮುಕ್ತಾಯವಾಗುತ್ತದೆ. ಈ ನಾಗರಿಕ ಸಮರದಲ್ಲಿ ಏಳುಲಕ್ಷಕ್ಕಿಂತ ಅಧಿಕ ಯೋಧರು, ಐವತ್ತು ಸಾವಿರ ನಾಗರಿಕರು, ಎಂಬತ್ತು ಸಾವಿರದಷ್ಟು ಗುಲಾಮರು ಸಾವನ್ನಪ್ಪುತ್ತಾರೆ. ಲಿಂಕನ್ನರ ಅಧ್ಯಕ್ಷತೆಯ ಕಾಲಕ್ಕಿಂತ ಮುಂಚಿನ ಎರಡು ವರ್ಷಗಳಿಂದಲೂ ಅಂತರ್ಯುದ್ಧ ನಡೆಯುವ ಸಂದರ್ಭದಲ್ಲಿ ಅಧ್ಯಕ್ಷನಾದ ಲಿಂಕ್‌ನನ್ನರಿಗೆ ಗುಲಾಮಿ ವ್ಯವಸ್ಥೆಯನ್ನು ತೊಡೆದು ಹಾಕಲು ಭಯ. ಕಾರಣಗಳು ಇಲ್ಲದಿಲ್ಲ. ಆಗ ಆತನ ಮನಸ್ಸಿನಲ್ಲಿ ಏನಿತ್ತೋ ಏನೋ ತನ್ನ ಲಕ್ಷ್ಯ ಯೂನಿಯನ್‌ನ್ನು ಕಾಪಾಡಿಕೊಳ್ಳುವುದೇ ಹೊರತು ಗುಲಾಮಿತನದ ನಿರ್ಮೂಲನೆ ಅಲ್ಲ ಎಂದು ಹೇಳಿದ್ದರು. ದಕ್ಷಿಣಾದಿ ರಾಷ್ಟ್ರಗಳಲ್ಲಿನ ಕೆಲ ಬಿಳಿಜಾತಿಯರು ಕೂಡ ಯೂನಿಯನ್ ಪರವಾಗಿ ಕರಿಯರ ಪರವಾಗಿ ಇದ್ದರೂ ಗುಲಾಮಿತನವನ್ನು ನಿರ್ಮೂಲ ಮಾಡಲು ಮುಂದೆ ಬರದಂಥ ಪರಿಸ್ಥಿತಿಯದು. ಇದನ್ನು ಡಗ್ಲಾಸ್ ಸರಿಯಾಗಿಯೇ ಅರ್ಥಮಾಡಿಕೊಂಡಿದ್ದ. ಅಂತರ್ಯುದ್ಧ ಮೊದಲಾದ ದಿನದಿಂದಲೂ ಯೂನಿಯನ್ ಸೈನ್ಯದಲ್ಲಿ ಕಪ್ಪುಜಾತಿಯ ಜನರನ್ನು ಸೈನಿಕರಾಗಿ ಸೇರಿಸಿಕೊಳ್ಳಲು ಡಗ್ಲಾಸ್ ಕೋರಿಕೆಯಿಟ್ಟಿದ್ದಲ್ಲದೆ ಊರೂರು ತಿರುಗಿ ಪ್ರಚಾರ ಕೂಡ ಮಾಡಿದ್ದ. ಗುಲಾಮಿ ಪದ್ಧತಿಯನ್ನು ನಿರ್ಮೂಲ ಮಾಡಲು ಹೋರಾಟ ಮಾಡುತ್ತಿದ್ದ ಕೆಲವು ಬಿಳಿ ಜಾತಿಯವರೂ ಕೂಡ ಡಗ್ಲಾಸ್‌ನ ಈ ಬೇಡಿಕೆಯನ್ನು ಸಮರ್ಥಿಸುತ್ತಾರೆ. ನೀವು ಕೇವಲ ಒಂದು ಕೈಯಿಂದ ಹೋರಾಡುತ್ತಿದ್ದೀರಿ ಎರಡೂ ಕೈ ಒಂದಾದರೆ ಮತ್ತಷ್ಟು ಪ್ರಬಲವಾಗಿ ಹೋರಾಡಬಹುದು ಎಂದು ಪ್ರಭುತ್ವಕ್ಕೆ ವಿಜ್ಞಾಪನೆ ಮಾಡುತ್ತಾನೆ. ಅಂತರ್ಯುದ್ಧದಲ್ಲಿ ಕಪ್ಪುಜಾತಿಯ ಜನರಿಗೆ ಹೋರಾಡಲು ಅವಕಾಶ ಸಿಕ್ಕರೆ ಅದು ಜಾತಿವಿಮೋಚನೆಗೆ ಸಹಕಾರ ಆಗುತ್ತದೆಯೆಂದು ಡಗ್ಲಾಸ್ ಪ್ರಬಲವಾಗಿ ನಂಬಿದ್ದ. 

ಸೈನ್ಯಕ್ಕೆ ಕಪ್ಪುಗುಲಾಮರನ್ನು ಸೇರಿಸಿಕೊಳ್ಳಲು ಡಗ್ಲಾಸ್ ಇಷ್ಟೊಂದು ಪ್ರಯತ್ನಿಸಿದನೆಂದರೆ ಕಾರಣ ಗುಲಾಮರನ್ನು ಸೈನ್ಯಕ್ಕೆ ಸೇರಿಸಿಕೊಂಡು ಯುದ್ಧದಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿರಲಿಲ್ಲ ಎಂದರ್ಥ. ಯುದ್ಧದಲ್ಲಿ ಭಾಗವಹಿಸಬಹುದಾದ ರಾಷ್ಟ್ರೀಯ ಗೌರವಕ್ಕೆ ಅವರನ್ನು ಅನರ್ಹರೆಂದೆ ಭಾವಿಸಲಾಗುತ್ತಿತ್ತು. ಶಸ್ತ್ರಗಳ ಬಳಕೆಯಲ್ಲಿ ಗುಲಾಮರಿಗೆ ತರಬೇತಿ ನೀಡುವುದೂ ಭವಿಷ್ಯದ ದೃಷ್ಟಿಯಿಂದ ಬಿಳಿಯರಿಗೆ ಒಳಿತಾಗಿ ಕಂಡಿರಲಿಕ್ಕಿಲ್ಲ. ಬಿಳಿಯರಿಗದು ಗುಲಾಮರ ಹೋರಾಟದ ಹಾದಿಯನ್ನು ನಿರ್ಮಿಸಬಲ್ಲದೆಂಬ ಎಚ್ಚರಿಕೆಯೂ ಆಗಿದ್ದಿರಬಹುದು. ಅಮೆರಿಕಾದಲ್ಲಿ ಶುರುವಾಗಿದ್ದ ಆಂತರಿಕಯುದ್ಧದ ತೀವ್ರ ಪರಿಣಾಮವನ್ನು ಅರಿಯದವನೇನು ಆಗಿರಲಿಲ್ಲ ಡಗ್ಲಾಸ್. ಆದರೆ ಅದರ ವಿರುದ್ಧ ಹರಿದಾಯುವ ಯಾವ ಬಲವೂ ಸಾಂದರ್ಭಿಕವಾಗಿಯಾಗಲಿ ಒದಗುವ ಅವಕಾಶವೇ ಆಗ ಗುಲಾಮರಿಗೂ ಇರಲಿಲ್ಲ. ಬದಲಾಗಿ ಈ ಆಂತರಿಕ ಯುದ್ಧದ ಸೋಲುಗೆಲುವುಗಳಲ್ಲಿ ನಮ್ಮ ಗುರುತಿಸಿಕೊಳ್ಳವಿಕೆಯ ಸ್ಪೇಸ್ ಎಷ್ಟು ಮತ್ತದನ್ನು ನಾವು ಹೇಗೆ ಬಳಸಿಕೊಳ್ಳಬಹುದು ಎಂಬುದು ನಿಟ್ಟುನಿಲುವಿನ ವಾಸ್ತವವಾಗಿತ್ತು. ಆಂತರಿಕಯುದ್ಧದಿಂದ ಜನಾಂಗೀಯ ಶಾಂತಿ ಸಾಧಿಸುವುದು ಅಸಾಧ್ಯವಾದ ಮಾತಾಗಿತ್ತು ಕೂಡ. ಹಾಗಾಗಿಯೇ ಸಿವಿಲ್‌ವಾರ್‌ನ್ನು ನೆಲ್ಲನ್ ಮಂಡೇಲಾ ಕೂಡ ಭ್ರಾತೃಘಾತಕವೆಂದು ವ್ಯಾಖ್ಯಾನಿಸುತ್ತಾನೆ.

    1863ರಲ್ಲಿ ಆರಂಭದಲ್ಲಿ ಲಿಂಕನ್ ಕಪ್ಪುಜನರನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಲು ನಿರ್ಣಯಿಸುತ್ತಾರೆ. ಆಗ ಬಿಳಿಯ ಸೈನಿಕರಿಗೆ ಹದಿಮೂರು ಡಾಲರ್ ಸಂಬಳ ಬರುತ್ತಿದ್ದು, ಕಪ್ಪುಸೈನಿಕರಿಗೆ ಕೇವಲ ಏಳು ಡಾಲರ್ ಕೊಡಬೇಕೆಂದು ಪ್ರಭುತ್ವ ನಿರ್ಣಯಿಸುತ್ತದೆ. ಡಗ್ಲಾಸ್‌ಗಾದ ನೋವು ಸಂಕಟ ಅಷ್ಟಿಷ್ಟಲ್ಲ. ತನ್ನ ಜಾತಿಯ ವೀರತ್ವಕ್ಕೆ ಪ್ರಭುತ್ವ ಕಟ್ಟಿದ ಬೆಲೆಯಿದೆಂದು ಶಾಯಿಗೆ ನೋವು ಅದ್ದಿ ಬರೆಯುತ್ತಾನೆ. ಆದರೆ ಹತಾಶನಾಗಲಿಲ್ಲ. ಜಾತಿ ವಿಮೋಚನೆಗಾಗಿ, ಸಮಾನತೆಯನ್ನು ಸಾಧಿಸುವುದಕ್ಕಾಗಿ ಇದೊಂದು ಮೆಟ್ಟಿಲೆಂದು ಭಾವಿಸಿಕೊಳ್ಳುತ್ತಾನೆ. ತನ್ನ ಇಬ್ಬರು ಮಕ್ಕಳನ್ನೂ ಯೂನಿಯನ್ ಸೈನ್ಯಕ್ಕೆ ಸೇರಿಸುತ್ತಾನೆ. ಅದೇ ವರ್ಷ ಜುಲೈ ತಿಂಗಳು ಲಿಂಕನ್ನರನ್ನು ಭೇಟಿಯಾಗಲು ಕೆಲವು ಬಿಳಿಯ ಅಧಿಕಾರಿಗಳು ಡಗ್ಲಾಸ್‌ಗೆ ಅವಕಾಶ ಒದಗಿ ಬರುವಂತೆ ಮಾಡುತ್ತಾರೆ. ಲಿಂಕನ್ ಕೂಡ ಡಗ್ಲಾಸ್‌ನನ್ನು ಅಭಿಮಾನಾಧರದಿಂದ ಬರಮಾಡಿಕೊಳ್ಳುತ್ತಾರೆ. ಮುಖ್ಯವಾದ ವಿಷಯಗಳು ಚರ್ಚೆಯಾದ ನಂತರ ಡಗ್ಲಾಸ್ ಅಧ್ಯಕ್ಷರಲ್ಲಿ ಮುಖ್ಯವಾಗಿ ಮೂರು ವಿಷಯಗಳನ್ನು ವಿನಂತಿಸಿಕೊಳ್ಳುತ್ತಾನೆ.

 *    ಬಿಳಿಯ ಸೈನಿಕರಗೂ ಕಪ್ಪುಸೈನಿಕರಿಗೂ ಸಮಾನ ವೇತನ ಕೊಡಬೇಕು.

 *    ಭಡ್ತಿಯ ವಿಷಯದಲ್ಲಿಯೂ ಸಮಾನ ಅವಕಾಶ ಕಲ್ಪಿಸಬೇಕು.

 *    ಕಪ್ಪು ಸೈನಿಕರು ಸೆರೆ ಸಿಕ್ಕರೆ ದಕ್ಷಿಣಾದಿ ಸೈನ್ಯದಲ್ಲಿ ತಕ್ಷಣ ಮರಣದಂಡನೆ ವಿಧಿಸುತ್ತಾರೆ. ಇಲ್ಲವೇ ಗುಲಾಮನನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಯುದ್ಧ ಸೂತ್ರನೀತಿಗೆ ವಿರುದ್ಧ. ಹಾಗಾಗಿ ಇದರ ಮೇಲೆ ಕ್ರಮ ಕೈಗೊಳ್ಳಬೇಕು. (ಆನಂತರದ ದಿನಗಳಲ್ಲಿ ಮತದಾನದ ಹಕ್ಕು ಮಹಿಳಾ ಮತದಾನದ ಹಕ್ಕಿಗಾಗಿ ಹೋರಾಡಿದ)

ಮೂರನೆಯದಕ್ಕೆ ತಕ್ಷಣ ಸ್ವಂದಿಸಿದ ಲಿಂಕನ್ ಯೂನಿಯನ್ ಸೈನ್ಯದ ಕಪ್ಪುಸೈನಿಕರನ್ನು ಕೊಂದರೆ ಪ್ರತಿಯಾಗಿ ನಮಗೆ ದೊರಕಿದ ದಕ್ಷಿಣಾದಿ ಸೈನ್ಯದ ಒಬ್ಬ ಸೈನಿಕನನ್ನು ಕೊಂದು ಹಾಕುತ್ತೇವೆಂದು, ನಮ್ಮ ಸೈನ್ಯದ ಯಾವುದೇ ಸೈನಿಕನನ್ನು ಗುಲಾಮನ್ನಾಗಿ ಮಾಡಿಕೊಂಡರೂ ನಾವೂ ತಕ್ಷಣ ನಿಮ್ಮ ಸೈನಿಕನನ್ನು ಗುಲಾಮನನ್ನಾಗಿ ಮಾಡಿ ಭಯಂಕರವಾದ ಕೆಲಸಗಳಿಗೆ ಗುರಿ ಮಾಡುತ್ತೇನೆಂದು ಪ್ರಕಟಿಸುತ್ತಾರೆ. 

ಅಂತರ್ಯುದ್ಧದಲ್ಲಿ ಕಪ್ಪುಜಾತಿಯ ಸೈನಿಕರು ವೀರಾವೇಶದಿಂದ ಹೋರಾಡುತ್ತಾರೆ. ಯುದ್ಧ ಪೂರ್ಣಗೊಳ್ಳುವ ವೇಳೆಗೆ ಎರಡು ಲಕ್ಷಮಂದಿ ಕಪ್ಪು ಸೈನಿಕರಿದ್ದರೆಂದರೆ ಡಗ್ಲಾಸ್‌ನ ಶ್ರಮ ಮತ್ತು ದೂರದೃಷ್ಟಿ ಅರ್ಥವಾಗುತ್ತದೆ. ಸಂತಸದ ಸಂಗತಿಯೆಂದರೆ ಯುದ್ಧ ಅಖೈರಾಗಿ ಪೂರ್ಣಗೊಳ್ಳುವುದರೊಳಗೆ ಕಪ್ಪುಜಾತಿಯ ಸೈನಿಕರು ಕೂಡ ಬಿಳಿಯರಷ್ಟೇ ಸಮಾನವಾದ ವೇತನ ಪಡೆಯುವುದರ ಜೊತೆಗೆ ಭಡ್ತಿಯ ವಿಷಯದಲ್ಲಿಯೂ ಸಮಾನ ಪ್ರಾತಿನಿಧ್ಯ ಪಡೆಯುತ್ತಾರೆ. ಬಹುಶಃ ಇದು ಡಗ್ಲಾಸ್‌ನ ಹೋರಾಟದ ಶಕ್ತಿ.

 ಹೋರಾಟವಿಲ್ಲದೆ ಹೋದರೆ ಪ್ರಗತಿ ಸಾಧ್ಯವಿಲ್ಲ. ಉಳುಮೆ ಮಾಡದೆಯೆ ಫಸಲು ಬೇಡಿಕೊಳ್ಳುವವರು ಹೋರಾಟವಿಲ್ಲದೇ ಸ್ವತಂತ್ರ್ಯವನ್ನು ಬಯಸುತ್ತಾರೆ. ಗುಡುಗು ಸಿಡಿಲು ಇಲ್ಲದೆಯೇ ಮಳೆಯನ್ನು ಬಯಸುವರು ಇವರೆ ಎಂದು ಡಗ್ಲಾಸ್ ಕಿಡಿಕಾರುತ್ತಾನೆ. ಭಾರತವು ಅಂಬೇಡ್ಕರ್ ಮೇಧಾವಿತನದ ಮೂಲಕ ಜಗತ್ತನ್ನು ಬೆರಗುಗೊಳಿಸಿ ದಲಿತರಿಗೆ ಸ್ವಾಭಿಮಾನವನ್ನು ತಂದು ಕೊಟ್ಟಂತೆಯೆ, ಡಗ್ಲಾಸ್ ಕಪ್ಪುಜಾತಿಯ ಗುಲಾಮರನ್ನು ಅವಮಾನಿಸಿದ ಯಜಮಾನರಿಗೆ ಗುಲಾಮರ ಚೈತನ್ಯವನ್ನು ಸಾಕ್ಷೀಕರಿಸಿದವರು. Being hanged in England is preferable to dying a natural death in Ireland  ಎನ್ನುವ ಮಾತಿನ ಮೂಲಕವೆ ಐರ್‍ಲ್ಯಾಂಡಿನ ಧಾರ್ಮಿಕ ರಾಜಕೀಯಾರ್ಥಿಕ ಸಾಮಾಜಿಕ ಸಾಂಸ್ಕೃತಿಕ ಬದುಕನ್ನು ಚಿತ್ರಿಸಿಬಿಡುವ ಡಗ್ಲಾಸ್ ಹುಟ್ಟು ಗುಲಾಮನಾಗಿದ್ದು ಅಕ್ಷರಗಳನ್ನು ಕಂಡವನಲ್ಲವೆಂದರೆ ಅಚ್ಚರಿಯಾಗಬಹುದು. ಕುರುಡು ಹಿಂಸೆ, ಅಲಂಕಾರಿಕ ಪದಗಳಲ್ಲಿ ದಾಖಲಿಸುವ, ರೂಪಕ ಪ್ರತಿಮೆಗಳ ಮೂಲಕ ನೋವನ್ನು ಮರೆಮಾಚುವ ಪರಿಣಾಮಕಾರಿಯಾಗಿ ಚಿತ್ರಿಸುವುದು ಡಗ್ಲಾಸ್‌ನ ಜಾಯಮಾನವಲ್ಲ. ಸರಳವಾದ ಮಾತುಗಳ ಸಹಜೋಕ್ತಿಗಳ ಮುಂದೆ ರೂಪಕ ಪ್ರತಿಮೆ ಅಲಂಕಾರಗಳು ಕುಸಿದು ಬೀಳುತ್ತವೆ.

ಪ್ರತಿಯೊಂದನ್ನು ಅತ್ಯಂತ ಗಮನಿಸುವ ಗ್ರಹಿಸುವ ಶಕ್ತಿ ಡಗ್ಲಾಸ್‌ನಿಗೆ ಇರುವಂತೆ ಆತನ ಸಮಕಾಲೀನ ನಾಯಕರಿಗೆ ಇರಲಿಲ್ಲವೆಂದು ಹೇಳಬಹುದು. ಶಿಕ್ಷಣಕ್ಷೇತ್ರದಲ್ಲಿ ಕರಿಯರ ಪರವಾಗಿ ಕ್ರಾಂತಿ ಮಾಡಿದ ಕರಿಯರ ಮಹಾನ್ ನಾಯಕ ಬೂಕರ್ ವಾಷಿಂಗ್ಟನ್ ಕೂಡ ತಮ್ಮ ಬಾಳಕಥನ  ‘Up from Slavery’ಯಲ್ಲಿ ಕರಿಯ ಗುಲಾಮರ ಹಾಡುಗಳ ಬಗ್ಗೆ ಬರೆಯುತ್ತಾರೆ. ಗುಲಾಮರ ವಸತಿಗಳಲ್ಲಿ ಸಂತಸದ ಹಾಡುಗಳು ಅಲೆಅಲೆಯಾಗಿ ಹೊಮ್ಮುತ್ತಿದ್ದವು. ಹಾಡುಗಳ ದನಿಯಲ್ಲಿ ಶಕ್ತಿ ತುಂಬಿತ್ತು ದನಿಯಲ್ಲಿ ಭಾವೋತ್ಕರ್ಷವಿತ್ತು ಸರಿರಾತ್ರಿಯವರೆಗೂ ಅನುರಣಿಸುತ್ತಿದ್ದ ಹಾಡುಗಳು ಗುಲಾಮರು ಸ್ವತಂತ್ರಗೊಂಡ ಕ್ಷಣವನ್ನು ಆರಾಧಿಸುತ್ತಿದ್ದವು. ಬಹುತೇಕ ಹಾಡುಗಳಲ್ಲಿ ಸ್ವಾತಂತ್ರ್ಯದ ಉಲ್ಲೇಖವಿತ್ತು. ಈ ಹಿಂದೆ ಅಂತಹುದೇ ಹಾಡುಗಳನ್ನು ಗುಲಾಮರು ಕಟ್ಟಿ ಹಾಡುತ್ತಿದ್ದದ್ದು ನಿಜ. ಆದರೆ ಆ ಹಾಡುಗಳಲ್ಲಿ ಪರಲೋಕದಲ್ಲಿ ದೊರೆಯುವ ಸ್ವಾತಂತ್ರ್ಯದ ಉಲ್ಲೇಖವಿತ್ತೇ ಹೊರತು ಈ ಲೋಕದ ಬದುಕಿಗೆ ಸಂಬಂಧವೇ ಇರಲಿಲ್ಲ ಎಂದು ಸರಳೀಕರಿಸುತ್ತಾರೆ. ಆದರೆ ಇಡೀ ಗುಲಾಮರ ಹಾಡುಗಳಲ್ಲಿ ಕೆಚ್ಚು, ಸ್ವತಂತ್ರಪ್ರಿಯತೆ, ಡಗ್ಲಾಸನ ಗುಲಾಮರ ವಿಮೋಚನಾ ಕಾರ್ಯಕ್ಕೆ ಒಳನೋಟ ಮತ್ತು ಮಾರ್ಗಗಳೆರಡನ್ನು ನೀಡುತ್ತದೆ. ಅತ್ಯಂತ ಒಳನೋಟವುಳ್ಳ ಬರಹವನ್ನು ಡಗ್ಲಾಸ್ ಈ ಹಾಡುಗಳ ಕುರಿತು ಬರೆಯುತ್ತಾನೆ. 

ಬೂಕರ್ ವಾಷಿಂಗ್ಟನ್ ತಮ್ಮ ಬಾಳಕಥನದಲ್ಲಿ ಡಗ್ಲಾಸ್‌ಗೆ ಇದ್ದ ಸೂಕ್ಷ್ಮತೆ ಮತ್ತು ಸ್ವಾಭಿಮಾನದ ಬಗ್ಗೆ ಬರೆಯುತ್ತಾರೆ. ಒಮ್ಮೆ ಡಗ್ಲಾಸ್ ಅವರು ಪೆನ್ಸಿಲ್ವೇನಿಯಾ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದರು. ಅವರು ಬಿಳಿಯರಷ್ಟೇ ಹಣತೆತ್ತು ಟಿಕೇಟು ಖರೀದಿಸಿ ರೈಲಿನಲ್ಲಿ ಕುಳಿತಿದ್ದರು. ಅವರ ಚಮ್ಮದ ಬಣ್ಣದಿಂದಾಗಿ ಅವರನ್ನು ಇಳಿಸಿ ಸಾಮಾನಿನ ಬೋಗಿಯಲ್ಲಿ ಬಲವಂತದಿಂದ ಕುಳ್ಳಿರಿಸಿದರು. ಕೆಲವು ಸೂಕ್ಷ್ಮ ಸಂವೇದನೆಯ ಬಿಳಿಯರು ಆ ಲಗೇಜ್ ಕಾರ್ ಬಳಿ ಹೋಗಿ ಡಗ್ಲಾಸ್ ಅವರಿಗೆ ಸಮಾಧಾನ ಹೇಳಿದರು. ಕ್ಷಮಿಸಿ ಡಗ್ಲಾಸ್ ನಿಮ್ಮನ್ನು ಈ ರೀತಿ ಅವಮಾನಿಸಬಾರದಿತ್ತು ಎಂದು ಬಿಳಿಯನೊಬ್ಬ ಹೇಳಿದ. ಆಗ ಪೆಟ್ಟಿಗೆಯೊಂದರ ಮೇಲೆ ಕುಳಿತಿದ್ದ ಡಗ್ಲಾಸ್ ನೆಟ್ಟಗೆ ಕುಳಿತು ಫ್ರೆಡ್ರಿಕ್ ಡಗ್ಲಾಸನನ್ನು ಅಪಮಾನಿಸಲು ಅವರಿಗೆಂದಿಗೂ ಸಾಧ್ಯವಿಲ್ಲ. ಆ ನನ್ನ ಆತ್ಮಚೈತನ್ಯವನ್ನು ಯಾರೂ ಅವಮಾನಿಸಲಾರರು. ಈ ರೀತಿ ತನ್ನನ್ನಿಲ್ಲಿ ಕುಳ್ಳಿರಿಸಿರುವುದಕ್ಕೆ ಅಪಮಾನವಾಗಿರುವುದು ನನಗಲ್ಲ ಅಂಥ ಕೃತ್ಯ ಎಸಗಿದ ಅವರಿಗೆ ಎಂದು ಉತ್ತರಿಸಿದ್ದರು.

ಜಗಜಗಿಸುವ ನಗರಗಳ ಕಟ್ಟಡಗಳ ಉಸುಕಿನಲ್ಲಿ ಕರಿಯರ ಗುಲಾಮರ ಬೆವರು ರಕ್ತ ಸಮನಾಗಿ ಹೋಗಿವೆ. ಕರಿಯರು ಕನಿಷ್ಟ ತಮ್ಮ ಹಕ್ಕುಗಳಿಗಾಗಿ ನಡೆಸಿದ ದೀರ್ಘ ಹೋರಾಟದ ಜೀವಂತ ಪಳಿಯುಳಿಕೆಗಳು ಅಡಗಿವೆ. 1895ರಲ್ಲಿ ಡಗ್ಲಾಸ್ ಸತ್ತ 50ವರ್ಷದ ನಂತರ ಆತನದೇ ಊರಿನಿಂದ ಥರ್‌ಗುಡ್ ಮಾರ್ಷಲ್ ಎಂಬ ಕ್ರಾಂತಿಕಾರಿ ಹುಟ್ಟಿ ವಕೀಲನಾಗಿ ಡಗ್ಲಾಸ್ ನಿಲ್ಲಿಸಿದ ತೇರನ್ನು ಎಳೆಯುತ್ತಾನೆ. ಗುಲಾಮಗಿರಿ, ವರ್ಣಬೇಧ ಜಾತಿಬೇಧದ ನಿರ್ಮೂಲನೆಯಾಗಬೇಕಾದ ತುರ್ತನ್ನು ಕುರಿತು ಚಾರ್ಲಿ ಚಾಪ್ಲಿನ್ ದ ಗ್ರೇಟ್ ಡಿಕ್ಟೇಟರ್ ಸಿನಿಮಾದಲ್ಲಿ ಮನಬುಗುವಂತಗೆ ಮಾತಾಡಿದ್ದಾನೆ. ಆತನ ಬಹುತೇಕ ಸಿನಿಮಾಗಳ ಆಶಯವೂ ಅದೇ. ಇದೇ ಕಾರಣಕ್ಕೆ ಚಾಂಪ್ಲಿನ್‌ಗೆ ಜೀವಬೆದರಿಕೆಗಳು ನಿಯಮಿತವಾಗಿ ಬರುತ್ತಲೇ ಇದ್ದವು. ಆಪಾರ್ಥೈಡ್ ಎಂಬ ಜನಾಂಗದ್ವೇಷಿ ಕೆಟ್ಟ ವಾಸ್ತವದ ಕುರಿತು ಇಂದಿನ ಕಾಲದಲ್ಲಿ ನಿಂತು ಯೋಚಿಸುವುದು ಕೂಡ ಕನ್ನಡಿ ಮತ್ತು ಆನೆಯ ಪ್ರತಿಮೆಯೇ ಆಗುತ್ತದೆ. 

ಈ ಆತ್ಮಕತೆ ಕೇವಲ ಗುಲಾಮನೊಬ್ಬನ ಆತ್ಮಕತೆ ಆಗಿರದೆ ಅಮೆರಿಕಾ ದೇಶದ ಒಳಗಿನ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಇದು ಅನೇಕ ಗುಲಾಮರ ಪ್ರಾತಿನಿಧಿಕ ಆತ್ಮಕಥೆಯೂ ಹೌದು. ಕಪ್ಪು-ಬಿಳಿಯರ ನಡುವಿನ ಅಸಮಾನತೆ, ಬದುಕಿನ ಹಿಂಸೆಗಳನ್ನು ಸ್ವಾನುಭವದಿಂದ ಕಟ್ಟಿಕೊಡುತ್ತದೆ. ಅಮೆರಿಕಾದ ಅಸಮಾನತೆಯ ಚರಿತ್ರೆಯನ್ನು ಭಾರತಕ್ಕೂ ಅನ್ವಯಿಸಿ ನೋಡುವಂತೆ ಒತ್ತಾಯಿಸುತ್ತದೆ. ಮನುಷ್ಯ ಮಾತ್ರನಾದವನು ಊಹಿಸಲು ಜೀವಿಸಲು ಸಾಧ್ಯವಾಗದ ನಾವು ಕಾಣದ ಅನೇಕ ವಾಸ್ತವ ಸಂಗತಿಗಳನ್ನು ಕಣ್ಣಮುಂದೆ ಬದುಕುತ್ತಿರುವಂತೆ ಚಿತ್ರಿಸುವ ಈ ಕೃತಿ ಆದಿಮ ಕಾಲದಲ್ಲಿ ಗುಲಾಮರನ್ನು ತೆಕ್ಕೆಗೆ ಅಪ್ಪಿಕೊಂಡು ಸ್ವತಂತ್ರರನ್ನಾಗಿಸಿದ ಮೊಸೆಸ್‌ನ ವರ್ತಮಾನದ ಕತೆಯಂತೆ ಕಾಣುತ್ತದೆ. ಗುಲಾಮರನ್ನು ಪ್ರಾಣಿಗಳಂತೆ ನಿತ್ಯಬಳಕೆಯ ವಸ್ತುಗಳಂತೆ ಮಾರುಕಟ್ಟೆಯಲ್ಲಿ ಮಾರುತ್ತಿದ್ದರೆಂದು ಈಗ ನಂಬುವುದು ಕಷ್ಟವಾಗಬಹುದು. ಕೈಕಾಲುಗಳಿಗೆ ಕಬ್ಬಿಣದ ಸರಪಳಿಗಳನ್ನು ಹಾಕಿ ಮಾನ ಮುಚ್ಚುವಷ್ಟು ಮಾತ್ರ ಬಟ್ಟೆಕೊಟ್ಟು (ಕೆಲವೊಮ್ಮೆ ಅದೂ ಇಲ್ಲದೆ) ವಯಸ್ಸು ದೇಹದಾಢ್ಯತೆ ಮುಂತಾದ ಗುಣಗಳ ಮೇಲೆ ಖರೀದಿ ಮಾಡುತ್ತಿದ್ದರೆಂಬುದು ವಾಸ್ತವ. ಕೊಂಡುಕೊಂಡ ಗುಲಾಮನಿಗೆ ಗುರುತಿಗಾಗಿ ಮುದ್ರೆಯೊತ್ತುತ್ತಿದ್ದ ಪದ್ದತಿಯೂ ಇತ್ತೆಂದು ಚರಿತ್ರೆ ದಾಖಲಿಸುತ್ತದೆ. ಅರೇಬಿಯನ್ ರಾಷ್ಟ್ರಗಳಲ್ಲಿನ ಗುಲಾಮರ ಬದುಕಿನ ಬಗ್ಗೆ ಫಿಕ್ಷನ್ ಮತ್ತು ನಾನ್ಫಿಕ್ಷನ್ ಬರಹಗಳ ಮೂಲಕ ತಿಳಿದವರಿದ್ದಾರೆ. ಆದರೆ ಮೊದಲಬಾರಿಗೆ ಗುಲಾಮನೊಬ್ಬ ಅನುಭವದ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಟ್ಟಿದ್ದಾನೆ.  

ಗುಲಾಮಗಿರಿಯ ಸೃಷ್ಟಿಗೆ ಆರ್ಥಿಕ ಅಸಮಾನತೆಯನ್ನು ಹುಟ್ಟು ಹಾಕಿದ ಯುದ್ಧಗಳು ಕಾರಣವೆಂದರೆ ಸೋಜಿಗವಾಗಬಹುದು. ಕೂಡು ಆಸ್ತಿಯಿಂದ ಖಾಸಗಿ ಆಸ್ತಿಗೆ ಪರಿವರ್ತಿವಾದ ಕಾಲಘಟ್ಟವು ಗುಲಾಮಗಿರಿಗೆ ಬೀಜ ವೂರಿತು.  ವ್ಯವಸ್ಥೆಯನ್ನು ನಿಯಂತ್ರಿಸುವ ಸಾಮಾಜಿಕ ವರ್ಗವೊಂದು ಆರ್ಥಿಕ ಶಕ್ತಿಯನ್ನು ಕೇಂದ್ರಿಕರಿಸಿಕೊಂಡು ರೂಪಿಸುವ ಸೂತ್ರಗಳು ಉತ್ಪಾದಕ ವರ್ಗದ ಮೇಲೆ ಭೌತಿಕವಾದ ಪರಿಣಾಮವನ್ನು ಬೀರುತ್ತದೆ. ರಾಜಕೀಯ ವ್ಯವಸ್ಥೆಯಲ್ಲಿನ ಬಂಡವಾಳರಹಿತ ಜನರ ಸಾಮಾಜಿಕ ಕಗ್ಗಗಳು ಸರಪಳಿಗಳಿಂದ ಬಿಗಿಸಿಕೊಳ್ಳುವುದು ಈ ನೆಲೆಯಲ್ಲಿಯೆ. ಹೀಗಾಗಿ ಆ ಜ್ಞಾನ ಉತ್ಪಾದನೆಗಷ್ಟೆ ಸೀಮಿತವಾಗುತ್ತದೆ. ಉತ್ಪನ್ನಗಳು ಸಹಜವಾಗಿಯೇ ಮಾಲೀಕನ ಹೆಸರಿನೊಂದಿಗೆ ಅಂಟಿಕೊಂಡು ಉತ್ಪಾದಿತವಾಗುತ್ತವೆ. ಇದರಿಂದಾಗಿಯೇ ಆಧುನಿಕತೆಯನ್ನು ಭೌತವಸ್ತುಗಳ ಸ್ವರೂಪ ಬದಲಾವಣೆಯೆಂದು ನಿರ್ಧರಿಸಿದಾಗಲೂ ಭೌತವಸ್ತುವನ್ನು ಉತ್ಪಾದಿಸಿದ ವರ್ಗದ ಭೌತರೂಪದ ಬದುಕು ಚಲನರಹಿತವಾಗಿರುತ್ತವೆ. ನಾವು ನಿರ್ವಚಿಸುವ ಆಧುನಿಕತೆಯೂ ಶೋಷಕ ನೆಲೆಯ ವ್ಯಾಖ್ಯಾನವನ್ನು ಅವಲಂಬಿಸಿ ಬಿಡುತ್ತದೆ. ನಾವು ಉತ್ಪಾದಿಸಿದ್ದನ್ನು ವಿತರಣೆ ಮಾಡುವುದರಲ್ಲಿ ಅಪಾರ ಅಸಮಾನತೆಯಿದೆ. ಒಂದು ತುದಿಯಲ್ಲಿ ಸಂಪತ್ತಿನ ಅಗಾಧ ಕೇಂದ್ರಿಕರಣ ಇನ್ನೊಂದು ತುದಿಯಲ್ಲಿ ಅತಿ ವಿಪರೀತವೆನಿಸುವಷ್ಟು ಬಡತನದ ಕೇಂದ್ರಿಕರಣ. ಇದು ನಮ್ಮ ಸಾಮಾಜಿಕ ತಕ್ಕಡಿಯ ವಿಪರ್ಯಾಸ. ನಗರಗಳ ಶ್ರೀಮಂತಿಕೆ ಝಗಝಗಿಸುವಷ್ಟು ಕಣ್ಣು ಕೋರೈಸುತ್ತದೆ. ಆದರೆ ವಸಾಹತು ದೇಶಗಳಲ್ಲಿ ಮತ್ತು ಅಮೆರಿಕಾದಂತಹ ಅತ್ಯಂತ ಅಭಿವೃದ್ದ ದೇಶದಲ್ಲಿ ಸಾಮಾಜಿಕ ತುಳಿತಕ್ಕೆ ಸಿಲುಕಿರುವವರ ಹೀನಸ್ಥಿತಿ ಹೃದಯ ವಿದ್ರಾವಕವಾಗಿದೆ. ಅದನ್ನು ಮುಚ್ಚಿಡುವ ಎಲ್ಲಾ ಪ್ರಯತ್ನಗಳೂ ವ್ಯರ್ಥವೇ. ಕಣ್ತೆರೆದ ಯಾರಿಗಾದರೂ ಇದು ಸ್ವಯಂ ಗೋಚರ. ಅಕ್ಷಮ್ಯವಾದ ಅನ್ಯಾಯ ಮತ್ತು ಮೋಸ ಇಷ್ಟೂಂದಿರುವಾಗ ಅಂಥದೇನೂ ಇಲ್ಲವೆಂದು ಕಣ್ಣು ಮುಚ್ಚಿರಲು ಸಾಧ್ಯವೇ?

ಒಂದು ವಿಚಿತ್ರ ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಕಪ್ಪು ಗುಲಾಮರ ಪರವಾದ ಬಿಳಿಯನಾಗಿರಲಿ ದೇಶದ ಅಧ್ಯಕ್ಷನಾಗಿರಲಿ ಬಿಳಿಯರ ಗುಂಡಿನ ಬಲಿಯಾಗಲೇಬೇಕಿತ್ತು ಎಂಬುದು ಚಾರಿತ್ರಿಕ ಸತ್ಯವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಗುಲಾಮಪದ್ದತಿಯ ವಿಮೋಚನೆಗಾಗಿ ಹೋರಾಡಿ ಪ್ರಾಣ ಕಳೆದುಕೊಂಡವರ ಶೇಕಡಾವಾರು ಇಪ್ಪತ್ನಾಲ್ಕು ಇದೆಯೆಂಬುದನ್ನು ದಾಖಲೆಗಳು ಸಾಕ್ಷಿಕರಿಸುತ್ತವೆ. 22-9-1862ರಂದು ಗುಲಾಮರ ವಿಮೋಚನಾ ಘೋಷಣೆ (Emanicipation Proclamation)ಯಾಗುತ್ತದೆ. 1863ರಿಂದಲೇ ಈ ಘೋಷಣೆಯ ಅಂಶಗಳು ಜಾರಿಗೆ ಆದೇಶವಿರುತ್ತದೆ. 11-4-1865 ರ ಮಂಗಳವಾರ ಕಪ್ಪುವರ್ಣೀಯರಿಗೆ ಮತದಾನದ ಹಕ್ಕಿನ ಪರವಾಗಿ ಲಿಂಕನ್ ತಮ್ಮ ನಿಲುವನ್ನು ಘೋಷಿಸುತ್ತಾರೆ. ಅವರ ವಿರೋಧಿ ಬಣದ ಜಾನ್ ವಿಲ್ಕಸ್ ಬೂತ್ 14-4-1865ರ ಶುಕ್ರವಾರ ರಂಗಮಂದಿರಲ್ಲಿ ಲಿಂಕನ್ ಮೇಲೆ ಗುಂಡು ಹಾರಿಸುತ್ತಾನೆ. ಲಿಂಕನ್ 15-4-1865ರ ಶನಿವಾರ ಸಾವನ್ನಪ್ಪುತ್ತಾರೆ. 4-4-1968ರಲ್ಲಿ ಮಾರ್ಟಿನ್ ಲೂಥರ್‌ಕಿಂಗ್ ಸಹ ಲೊರೈನ್ ಹೋಟೆಲ್‌ನ ಬಾಲ್ಕನಿಯಲ್ಲಿ ನಿಂತು ಕರಿಯರ ನೋವುಗಳು ಮತ್ತು ಅವನ್ನು ಮೆಟ್ಟಿ ನಿಲ್ಲಬೇಕಾದ ಹಕ್ಕುಗಳ ಬಗ್ಗೆ ಮಾತಾಡುವಾಗ ರಸ್ತೆಯ ಆಚೆ ಅಡಗಿದ್ದ James Earl Ray ಎಂಬ ಬಿಳಿಯ ಹಾರಿಸಿದ ಗುಂಡಿಗೆ ಬಲಿಯಾದರು. ಆತ ಬಿದ್ದ ಜಾಗದಲ್ಲಿ ಈಗ Sixth Floor Museum ಇದೆ. ಮುಂದುವರಿದಂತೆ ಜಾನ್. ಎಫ್. ಕೆನಡಿ ಕೂಡ ಲೀ ಆರ್ವೆಲ್ ಓಸ್ವಾಲ್ಡ್ ಎನ್ನುವ ಬಿಳಿಯನ ಗುಂಡಿಗೆ ಬಲಿಯಾದರು.  ಆ ಜಾಗದಲ್ಲಿಯೂ National Association for the advancement of Coloured people

ಕರಿಯರ ಹಕ್ಕಿಗಾಗಿ ಹೋರಾಡಲು ರೂಪುಗೊಂಡದ್ದು ಚರಿತ್ರೆಯನ್ನೆ ನಿರ್ಮಿಸಿದೆ. ಮಾರ್ಗನ್ ಸ್ಟೇಟ್ ವಿಶ್ವವಿದ್ಯಾಲಯವಂತೂ ಕರಿಯರಿಂದ ಕರಿಯರಿಗಾಗಿ ಕರಿಯರಗೋಸ್ಕರ ಕಟ್ಟಿ ಸಾವಿರಾರು ಕರಿಯರ ಆತ್ಮಗೌರವವನ್ನು ಎತ್ತಿ ಹಿಡಿದಿದೆ.

ವರ್ಗರಹಿತ ಆರ್ಥಿಕ ಪ್ರಜಾಪ್ರಭುತ್ವ, ಡಗ್ಲಾಸ್‌ನ ಆಶಯವಾಗಿತ್ತು. ಡಗ್ಲಾಸ್ ಬಯಸುವ ಸ್ವಾತಂತ್ರ್ಯ ಮತ್ತು ಸುಭದ್ರತೆಯು ಸಾಮಾಜಿಕ ಮಾನ್ಯತೆಯ ಮೂಲದಿಂದ ಉದಯಿಸಿ ರಾಜಕೀಯಾರ್ಥಿಕ ಕ್ಷೇತ್ರಗಳಿಗೆ ವಿಸ್ತರಿಸುತ್ತದೆ. ವ್ಯವಸ್ಥೆಯು ರೂಪಿಸಿಕೊಂಡ ಗುಲಾಮರು ಸರ್ವಮಾನ್ಯವಾದ ಅಸಮರ್ಥರು ಎಂಬ ಬಹುಮುಖ್ಯ ಚಾರಿತ್ರಿಕ ಸತ್ಯವನ್ನೇ ಶ್ರಮಿಕ ಜ್ಞಾನದಿಂದ ಉರುಳಿಸಿದ ಡಗ್ಲಾಸ್. ಒಂದು ಸಮುದಾಯದ ಸಮಾಜೋ ಸಾಂಸ್ಕೃತಿಕ ಕ್ರಮದ ಘನತೆಯನ್ನು ಜಗತ್ತಿನೆದುರು ಸಾಬೀತು ಪಡಿಸಿದ ಶ್ರೇಯಸ್ಸು ಡಗ್ಲಾಸ್‌ನದು. 

ಯಾವುದೇ ಜಾತಿಯನ್ನಾಗಲೀ ಸಮುದಾಯವನ್ನಾಗಲೀ, ಜನಾಂಗವನ್ನಾಗಲೀ ಸದಾ ಕಾಲ ಗುಲಾಮಗಿರಿಯಲ್ಲಿ ಇರಿಸಲು ಸಾಧ್ಯವಾಗದೆಂಬುದನ್ನು ಜಗತ್ತಿನ ಹೋರಾಟದ ಚರಿತ್ರೆ ನಮ್ಮ ಮುಂದೆ ತಂದು ನಿಲ್ಲಿಸುತ್ತದೆ. ಇಂಡಿಯಾದಲ್ಲಿ ಇಂದಿಗೂ ಕೆಲವೆಡೆ ವಿವಿಧ ರೂಪಗಳಲ್ಲಿ ಆಧುನಿಕಗೊಂಡು ಜೀವಂತವಿರುವ ಜೀತಪದ್ದತಿ ಗುಲಾಮಿಪದ್ದತಿಯ ಒಡಹುಟ್ಟು. ಗುಲಾವ್ಯವಸ್ಥೆಗೆ ಸೋತು ಸುಣ್ಣವಾದ ಡಗ್ಲಾಸ್ ಇಡೀ ಅಮೆರಿಕಾದ ಕ್ರೂರತ್ವವನ್ನು ಪದಪದದಲ್ಲಿ ತುಂಬಿ ನಮ್ಮ ಮುಂದಿರಿಸುತ್ತಾನೆ. ಇಂಡಿಯಾದ ಅಸ್ಪೃಷ್ಯನ ಬದುಕು ಅಮೆರಿಕಾದ ಗುಲಾಮನಿಗಿಂತ ಬರ್ಭರವಾದುದು. ಅಮೆರಿಕಾದ ಗುಲಾಮನಿಗೆ ಅಸ್ಪೃಷ್ಯತೆಯ ಕಾವು ತಾಗುವುದಿಲ್ಲ. ಬಿಳಿಯರು ಕರಿಯರನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆಯೆ ವಿನಃ ಮುಟ್ಟಿಸಿಕೊಳ್ಳದೆ ಇರುವುದಿಲ್ಲ. ಇಂಡಿಯಾದಲ್ಲಿ ಅಸ್ಪೃಷ್ಯನೋರ್ವ ಗುಲಾಮತನದ ಜೊತೆಗೆ ಮುಟ್ಟಿಸಿಕೊಳ್ಳದ ಸಾಮಾಜಿಕ ಬಹಿಷ್ಕಾರವನ್ನೂ ಒಟ್ಟಿಗೆ ಅನುಭವಿಸಬೇಕಾಗಿದೆ. ವಿಚಿತ್ರವೆಂದರೆ ಡಗ್ಲಾಸ್‌ನಂತೆ ನಮ್ಮ ಪೂರ್ವಿಕರಾರೂ ಆತ್ಮಕಥೆ ಬರೆಯಲಾಗಲಿಲ್ಲ. ಅಕ್ಷರದ ಹಕ್ಕೇ ನಿರಾಕರಣೆಯಾದಾಗ ಮತ್ತೇನಾಗಲು ಸಾಧ್ಯ. ಇಂಡಿಯಾದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಂಡ ಅಂಬೇಡ್ಕರ್‌ರ ನಂತರವೂ ಡಗ್ಲಾಸ್‌ನ ಆತ್ಮಚರಿತ್ರೆಯಂಥ ಕೃತಿ ಕನ್ನಡದಲ್ಲಿ ಬರದೇ ಇರುವುದು ವಿಪರ್‍ಯಾಸ. ಲಿಂಕನ್ ಕಾನೂನಾತ್ಮಕೂಗಿ ಗುಲಾಮಿ ಪದ್ಧತಿಯನ್ನು ನಿಷೇಧಿಸಿದ ಕೆಲವೆ ದಿನಮಾನಗಳಲ್ಲಿ ಅದು ನಿರ್ಮೂಲವಾಗಿರಬಹುದು. ಇಂಡಿಯಾದ ಜಾತಿ ವ್ಯವಸ್ತೆಯನ್ನು ಕುರಿತು ಮತ್ತಷ್ಟು ಗಂಭೀರವಾಗಿ ಆಲೋಚಿಸಲು ಈ ಕೃತಿ ಒತ್ತಾಯಿಸುತ್ತದೆ.

Top News
Top Events