Book Watchers

ಶಿವು ಕೆ. ಲಕ್ಕಣ್ಣವರ

ಶಿವು ಲಕ್ಕಣ್ಣವರ ಅವರ ಶಾಲಾ ದಿನಗಳಲ್ಲೇ ಪ್ರೇಮ ಕಾವ್ಯದಿಂದ ಶುರುವಾದ ಬರವಣಿಗೆ ಮುಂದೆ ಕಾಲೇಜು ದಿನಗಳಿಂದ ಸಾಮಾಜಿಕ ಸ್ಪಂದನದ ಬರವಣಿಗೆಗೆ ಬೆಳೆಯಿತು. ಬರವಣಿಗೆ ಆದ ಒಂದು ಕವನ ಸಂಕಲನ 'ಹೀಗೊಂದು ಮುಟ್ಟಬಾರದರ ಕತೆ' ಕವನ ಸಂಕಲನ ಮತ್ತು ಕಾಲೇಜು ದಿನಗಳಲ್ಲೇ ಬರೆದ 'ಸಾಮರಸ್ಯ ಬಿಂದು' ಇನ್ನೂ ಹಸ್ತಪ್ರತಿಯಲ್ಲೇ ಇವೆ. ಅವುಗಳನ್ನು ಈಗ ಪುಸ್ತಕ ರೂಪದಲ್ಲಿ ತರುವ ಆಸೆ ಹೊತ್ತಿದ್ದಾರೆ… ಹೀಗೆ ಹವ್ಯಾಸಿ ಬರಹಗಾರನಾಗಿ ಮತ್ತು ಪತ್ರಕರ್ತರೂ ಹೌದು. ಅರಕೇರಿಯವರ ಆಗಿನ 'ಈ ವಾರ' ವಾರ ಪತ್ರಿಕೆಯಲ್ಲಿ ಕಾಲೇಜು ದಿನಗಳಲ್ಲೇ ಧಾರವಾಡ, ಹಾವೇರಿ,‌ ಗದಗ ಅಂದರೆ ಅಖಂಡ ಧಾರವಾಡ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡಿದ್ದಾರೆ. ಶೂದ್ರ ಶ್ರೀನಿವಾಸರ ವಾರ ಪತ್ರಿಕೆ 'ಸಮಕಾಲೀನ ಬದುಕಿನ ಸಂವಾದಕ್ಕೆ ಒಂದು ಸಲ್ಲಾಪ' ಪತ್ರಿಕೆಗೆ ಕೆಲ ಕಾಲ ವರದಿ ಮತ್ತು ಸಾಹಿತ್ಯಕ ಬರವಣಿಗೆ. ಆನಂತರ ಅಗ್ನಿ ಶ್ರೀಧರ ಅವರ 'ಅಗ್ನಿ' ವಾರ ಪತ್ರಿಕೆಗೆ 12 ವರ್ಷ ಹಾವೇರಿ, ಗದಗ, ಧಾರವಾಡದಿಂದ ವರದಿ, ಲೇಖನ. ಪ್ರಸ್ತುತವಾಗಿ ಈಗ ಸುಮಾರು 150ಕ್ಕೂ ಹೆಚ್ಚು ಲೇಖನಗಳನ್ನು ಮುಖ ಪುಸ್ತಕಕ್ಕೆ ಬರೆಯುತ್ತಿದ್ದಾರೆ, ಹೀಗೆ ಮುಖಪುಸ್ತಕಕ್ಕೆ ಬರೆದ ಲೇಖನಗಳನ್ನು ಒಂದು ಪುಸ್ತಕ ಮಾಡುವಾಸೆ ಹೊಂದಿದ್ದಾರೆ.

Related Articles

ನೈಜ ಚಿತ್ರಣದ 'ಕೆಂಗುಲಾಬಿ'

ಕಥೆಗಾರ, ಪತ್ರಕರ್ತ ಹನುಮಂತ ಹಾಲಿಗೇರಿ ಅವರ ಅತ್ಯಂತ ಜನಪ್ರಿಯ ಕಾದಂಬರಿ 'ಕೆಂಗುಲಾಬಿ'. ಇದು ವೇಶ್ಯಾ ಪ್ರಪಂಚದ ತೀರಾ ಮಾನವೀಯ ಕಾಳಜಿಯ ಬರಹ. ಇದು ಲೇಖಕರ ಮೊದಲ ಕಾದಂಬರಿ. ಮೊದಲನೆಯ ಕಾದಂಬರಿಯಿಂದಲೇ ಹನುಮಂತ ಹಾಲಿಗೇರಿಯವರು ಭರವಸೆ ಮೂಡಿಸುವಂತೆ ಕಥೆ ಹೇಳುವ ಕೌಶಲ್ಯ ರೂಢಿಸಿಕೊಂಡಿದ್ದಾರೆ. ಹೀಗೆ ಕತೆ, ಕಾದಂಬರಿ ಕಟ್ಟುವ ಕೌಶಲ್ಯ ರೂಢಿಸಿಕೊಂಡಿದ್ದರಿಂದಲೇ ಈ ಕಾದಂಬರಿಯು ಪ್ರಕಟವಾದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅತಿ ಹೆಚ್ಚು ಮುದ್ರಣಗಳನ್ನು ಕಂಡಿದೆ. ಅಂದರೆ ಈಗ 5ನೇ ಮುದ್ರಣವನ್ನೂ ಕಂಡಿದೆ ಈ ಕೆಂಗುಲಾಬಿ ಕಾದಂಬರಿ..

ಲೈಂಗಿಕ ವೃತ್ತಿಯು ಸರಿ ಅಥವಾ ತಪ್ಪು ಎಂದು ವಾದಿಸದೇ ಇರುವ ಕಾದಂಬರಿಯು ಒಂದು ಹೊತ್ತಿನ ಅನ್ನಕ್ಕಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಬದುಕಬೇಕಾದ ಅನಿವಾರ್ಯ ಸ್ಥಿತಿ ರೂಪುಗೊಳ್ಳುವ ರೀತಿಯನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ವೇಶ್ಯೆಯರ ಬದುಕಿನ ಅನಾವರಣ ಎಂಬ ಟ್ಯಾಗ್ ಲೈನ್ ಹೊಂದಿದೆ ಈ ಕಾದಂಬರಿ. ಆದರೆ ಹಾಗಂತ ಇಡೀ ಪುಸ್ತಕದಲ್ಲಿ ಒಮ್ಮೆಯೂ ಓದುಗನನ್ನು ತಣಿಸುವುದಕ್ಕಾಗಿ ರೋಚಕ ತಂತ್ರ ಬಳಸಿಲ್ಲ. ಬದುಕಿನ ಘಟನೆಗಳ ಮೂಲಕ ಕಥೆ ಹೇಳುತ್ತ ಹೋಗುವ ಹನುಮಂತ ಹಾಲಿಗೇರಿಯವರು ಜನಪ್ರಿಯತೆಯ ಆಮಿಷಕ್ಕೆ ಒಳಗಾಗದೇ ಸಂಯಮದಿಂದ ಕಥೆ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಮಹಿಳೆ, ಕೆಳಜಾತಿ, ವರ್ಗದ ಮಹಿಳೆಯರ ಬದುಕಿನ ದುಸ್ಥಿತಿಯ ಚಿತ್ರಣವು ದೊರೆಯುತ್ತದೆ ಇಲ್ಲಿ. ಗ್ರಾಮೀಣ ಬದುಕಿನ ಊಳಿಗಮಾನ್ಯ ಶೋಷಕ ವ್ಯವಸ್ಥೆ, ಅದು ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕಟ್ಟಿದ ಸಂಪ್ರದಾಯದ ಗೋಡೆಗಳು, ಜಾತೀಯತೆ, ಅಸಹಾಯಕ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ, ಮಧ್ಯವರ್ತಿಗಳ ಹಾರಾಟ, ಮಾರಾಟಗಾರರ ಜಾಲ, ಅಸಹಾಯಕತೆಗಳು ಮನ ಮಿಡಿಯುವಂತೆ ಚಿತ್ರಿತವಾಗಿವೆ.

ಮುನ್ನುಡಿಯಲ್ಲಿ ಲೇಖಕರು 'ಪ್ರಕೃತಿಯ ಎಲ್ಲ ಜೀವಿಗಳಿಗೆ ಊಟ ನೀರಡಿಕೆಯಷ್ಟೆ ಮೈಥುನವು ಪ್ರಾಥಮಿಕ ಅಗತ್ಯ ಮತ್ತ ನಿಸರ್ಗ ನಿಯಮ. ಅದನ್ನು ಬಂಧಿಸಲು ಹೋದಷ್ಟೂ ಅಪಾಯ ಹೆಚ್ಚು. ಬಂಧಿಸಿದ್ದರ ಪ್ರತಿರೋಧವಾಗಿ, ಈ ಅಮಾಯಕ ಹುಡುಗಿಯರು ಈ ವಿಷವರ್ತುಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವರು ನಮ್ಮಂಥವರ ತಾಯಿ, ಮಗಳು, ಹೆಂಡತಿ, ಅಕ್ಕ-ತಂಗಿಯರಾಗಬಹುದಿತ್ತು. ಆಗಿರಬಹುದು ಕೂಡ... ಇದೆಲ್ಲಕ್ಕೂ ಅವಕಾಶವಾಗದೆ ಈ ವೇಶ್ಯೆಯರು ಬೀದಿಗಿಳಿಯಬೇಕಾಗಿ ಬಂದದ್ದು ದುರಂತ ಸತ್ಯ’ ಎಂದು ಹೇಳಿರುವುದು ಕಾದಂಬರಿಯಲ್ಲಿ ಕಥೆಯು ನಡೆಯವ ಸ್ವರೂಪವನ್ನು ಕುರಿತು ಸೂಚ್ಯವಾಗಿ ಹೇಳಿದಂತಿದೆ.

ಮುಖ್ಯವಾಗಿ ಈ ಕಾದಂಬರಿ ಹನುಮಂತ ಹಾಲಿಗೇರಿಯವರ ಕಲ್ಪನೆಯ ಕೂಸಲ್ಲ. ವೇಶ್ಯಾ ಜಗತ್ತಿನೊಳಗಿನ ತಿರುಗಾಟದನುಭವ ಮತ್ತು ಅಲ್ಲಿಯ ಕರಾಳ ಮುಖವನ್ನು ಪರಿಚಯಿಸುವ ಕೈಗನ್ನಡಿಯಾಗಿದೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕೆಂಗುಲಾಬಿ

Top News
Top Events