Book Watchers

ಸಿದ್ದು ಯಾಪಲಪರವಿ

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ಇವರು ಕಳೆದ ಮೂರು ದಶಕಗಳಿಂದ ಗದುಗಿನ ಕನಕದಾಸ ಸಮಿತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ.ಸಾವಿರಾರು ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳ ಸಂಚಾರವನ್ನು ನಡೆಸಿ, ಜೀವನ ಕೌಶಲ್ಯಗಳ ಕುರಿತಾದ ತರಬೇತಿಯನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ನೂರಾರು ಲೇಖನಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. 2007 ರಲ್ಲಿ ’ನೆಲದ ಮರೆಯ ನಿಧಾ’ ಕವನ ಸಂಕಲನ, 2009 ರಲ್ಲಿ ’ಎತ್ತಣ ಮಾಮರ ಎತ್ತಣ ಕೋಗಿಲೆ ’ ಇಂಗ್ಲೆಂಡ್ ಪ್ರವಾಸ ಕಥನ, 2016 ರಲ್ಲಿ ’ಒಂದು ಬಿರುಗಾಳಿಯ ಕಥೆ’ ಅನುವಾದಿತ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. 1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

Related Articles

ಜಾದುಗಾರ ಜೋಗಿಯ 'L'

ಒಂದುನೂರಾ ಮೂವತ್ತೆರಡು ಪುಟಗಳು. ಓದಲು ತೆಗೆದುಕೊಂಡ ಸಮಯ ಒಂದು ತಾಸು ನಲವತ್ತು ನಿಮಿಷ. ಅಷ್ಟೊಂದು ಅವಸರ ಏನಿತ್ತು?
ಹೌದು ತುಂಬಾ ಹೆಸರು ಮಾಡಿದ ಪುಸ್ತಕ ಸುಂದರ ಹೆಣ್ಣಿನಂತೆ ಕಾಣುತ್ತಾ ಇದ್ದರೆ ಕನಿಷ್ಟ ನೋಡದೇ ಇರಲಾಗುತ್ತಾ! ಮುಟ್ಟುವ ಮನಸಾದರೂ!

ಕಲಾವಿದ ವಿ.ಎಂ. ಮಂಜುನಾಥ್ ಕೊಟ್ಟಿದ್ದ ಜೋಗಿ ಅವರ L ಕಾದಂಬರಿ-ನೀಳ್ಗತೆ-ಕಾವ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

"ಇಪ್ಪತ್ನಾಲ್ಕು ತಾಸು ಮೊಬೈಲ್ ಕಣ್ಣಿಗೆ ಹಿಡ್ಕೊಂಡು ಬರೆಯೋದು ನೋಡಿ ನೋಡಿ ಸಾಕಾಯಿತು,ಏನಾದ್ರೂ ಓದ್ರಿ, ಇತ್ತೀಚೆಗೆ ನೀವು ಓದಿದ್ದ ನೋಡಿಲ್ಲ" ಎಂದು ಖಾರವಾಗಿ ರೇಖಾ ಹೇಳುತ್ತಲೇ ಇದ್ದಳು.

ಓಶೋನ ಒಂದಿಷ್ಟು ಪುಸ್ತಕಗಳು, ಬುದ್ಧನ ವಿಪಸನ ಸಾರುವ ಆರ್ಟ್ ಆಫ್ ಲಿವಿಂಗ್, ವಚನಗಳನ್ನು ಬಿಟ್ಟರೆ ಇತ್ತೀಚೆಗೆ ಬೇರೆ ಏನನ್ನು ಖಂಡಿತವಾಗಿ ಓದುತ್ತಾ ಇಲ್ಲ ಎಂಬುದು ಅಷ್ಟೇ ನಿಜ.
ಬರೆಯುವುದು ಬೆಟ್ಟದಷ್ಟಿರುವಾಗ ಸದ್ಯ ಬೇರೆ ಏನೂ ಓದುವ ಅಗತ್ಯವೂ ಕಾಣಿಸಲಿಲ್ಲ.

*ಬರಹ-ಧ್ಯಾನ-ಕಾಮ* ನಮಗೆ ಕೊಡುವ ಪರಮ ಸುಖ ಎಂದು ಅರ್ಥವಾದ ಮೇಲೆ ಈ ವಯಸ್ಸಿಗೆ ಇನ್ನೇನು ಮಾಡಲು ಸಾಧ್ಯ?
ಕಾಮ ಕುತೂಹಲಕರ ಖರೆ ಆದರೆ ದೇಹಕ್ಕೆ ವಯಸ್ಸಾದ ಮೇಲೆ ಅದೂ ಕಷ್ಟ‌‌. ಆದರೂ ಮನದ ಚಪಲ ಮಾತ್ರ ಬಲು ಜೋರು.

ಧ್ಯಾನ-ಬರಹ ಖಂಡಿತ ಸಾಧ್ಯ.
ಧ್ಯಾನ ಮತ್ತು ಬರಹಕ್ಕೆ ಬೇಕಾದ ಮಾನಸಿಕ ಶಿಸ್ತು ರೂಢಿಸಿಕೊಂಡರೆ ಸಾಧನೆ ಇನ್ನೂ ಸುಲಭ.

ಗಾಢವಾಗಿ ಪ್ರೀತಿಸಿ, ಇಷ್ಟಪಟ್ಟು ಕುಡಿಯುತ್ತಿದ್ದ *ಮದಿರೆ* ಈಗ ನನ್ನಿಂದ ದೂರಾಗಿ ಐದು ವರ್ಷ ಮುಗಿಯಿತು. ಯಾಕೆ ಸಂಪೂರ್ಣ ಮದಿರೆಯ ಹಂಗು ಹರಿದುಕೊಂಡೆ ಎಂಬುದು ಮುಂದೆ ಯಾವಾಗಲಾದರೂ ಹೇಳುವೆ.
ಈಗ ಏನಿದ್ದರೂ ಓದು-ಬರಹ-ಧ್ಯಾನ. ಆಗಿಷ್ಟು ಈಗಿಷ್ಟು ಕೈಲಾದಷ್ಟು ಪ್ರೇಮ\ಲವ್ ಮೇಕಿಂಗ್. ಇಷ್ಟೆಲ್ಲ ಖಾಸಾ ವಿಷಯ ಹೇಳುವಂತೆ ಉದ್ರೇಕಿಸಿದ್ದೇ ಈ 'L'.

****
ಒಂದು ಅರ್ಥವಾಗದ ಪದ್ಯದಂತೆ,ಅಸಂಗತ ನಾಟಕದಂತೆ ಮತ್ತೆ ಮತ್ತೆ ಮರು ಓದಿಗೆ ದಕ್ಕಬಹುದಾದ ಪುಸ್ತಕ ಎಂದು ಅರ್ಥವಾಯಿತು. ಒಂದಕ್ಷರ ಬಿಡದೆ between the lines ಓದುತ್ತ ಹೋದೆ.

ವಯೋಮಾನ ಸಹಜ ಮನಸಿನ ವಿಕೃತ ಭ್ರಾಂತುಗಳ ಅನಾವರಣ. ಹೆಣ್ಣು, ಪ್ರೀತಿ, ಕೌಟುಂಬಿಕ ಹಿಂಸೆ, ಕಿರಿಕಿರಿ, ಬಾಲ್ಯದಲ್ಲಿ ಅರ್ಥವಾಗದ ಸಂಕಟಗಳ ಅವ್ವ-ಅಪ್ಪ, ಕಾಮ,ಕುಡಿತ,ಹೂವಿನ ಘಮಲು ಇನ್ನೂ ಏನೆಲ್ಲಾ ಇದೆ. ಒಂದು ಸುಂದರ ಕವಿತೆಯ ಹಾಗೆ.

ಸುದೀರ್ಘ ಗಪದ್ಯದ ಈ ನೀಳ್ಗತೆಯಂತಹ ಕಾದಂಬರಿ ಹಲವು ಕಾರಣಗಳಿಂದ ಆಧುನಿಕ ಸಿನೆಮಾದ ಸ್ಕ್ರೀನ್ ಪ್ಲೇ ನೋಡಿದಂತಾಗುತ್ತದೆ.

ಕಣ್ಣಿಗೆ ಕಟ್ಟುವ ದೃಶ್ಯಗಳನ್ನು ಸಿನಿಮಾ ಮಾಡಿದರೆ ಛಂದ ಅನಿಸುವಷ್ಟು.
ಕವಿಯ ಸಿನಿಕ ಕಲ್ಪನಾ ಲೋಕದ ವಾಸ್ತವವನ್ನು ಲೀಲಾಜಾಲವಾಗಿ ಹೆಣೆಯಲಾಗಿದೆ.

ಇಂಗ್ಲಿಷ್ ಅಸಂಗತ ನಾಟಕಗಳ ಪಾತ್ರಗಳಂತೆ ಎಲ್ಲರೂ ಬಂದು ಹೋಗಿ ಕವಿ ಲಕ್ಷ್ಮಣನಿಗೆ ಪಾಠ ಕಲಿಸುತ್ತಾರೆ.
ಲಕ್ಷ್ಮಣ ಕಂಡ ಸಂಗತಿಗಳನ್ನು ನಾವು ಕಂಡು ಅನುಭವಿಸಿದ್ದೇವೆ ಆದರೆ ಹೇಳಿಕೊಳ್ಳಲು ವಿಫಲರಾಗಿದ್ದೇವೆ.

ಪ್ರೀತಿಯ ನಶೆ ಇಳಿದಾಗ ಮನುಷ್ಯನಿಗೆ ವಾಸ್ತವ ಅರ್ಥವಾಗುತ್ತದೆ. ಆದರೆ ಬರೀ ಪ್ರೀತಿಯಷ್ಟೇ ನಶೆಯಲ್ಲ ನಮ್ಮ ಎಲ್ಲ ಪ್ಯಾಶನ್ ಹೆಸರಿನ ತೆವಲುಗಳು ನಶೆ. ಮನುಷ್ಯ ಆ ನಶೆಗಳಿರದಿದ್ದರೆ ಅವನು ಮನುಷ್ಯನೇ ಅಲ್ಲ.

ವಾಸ್ತವವಾದ ಹೇಳುತ್ತ ಬದುಕುವ ವ್ಯಕ್ತಿಗಳು ಪ್ರಾಣಿಗಳ ಹಾಗೆ ತೀವ್ರತೆ ಇಲ್ಲದೆ ಸತ್ತು ಹೋಗುತ್ತಾರೆ.
ಆದರೆ ಕಲಾವಿದ,ಕವಿ ಹಾಗೆ ಸಾಯುವುದಿಲ್ಲ ಸತ್ತ ಮೇಲೂ ಬದುಕುತ್ತಾನೆ.

ಜೋಗಿ ಅಂತಹ ಬದುಕುವ ಮನಸುಗಳ *ಪ್ರತಿನಿಧಿಯನ್ನು* ಸೃಷ್ಟಿ ಮಾಡಿದ್ದಾರೆ.
ಅದೆಲ್ಲಕ್ಕಿಂತ ಮುಖ್ಯ ಅಂದರೆ ತುಂಬ ಚಿಕ್ಕದಾಗಿ ಕಾವ್ಯಾತ್ಮಕವಾಗಿ ನಿವೇದಿಸಿ ಆಧುನಿಕ ಓದುಗರ ಓದುವ ದಾಹ ಹೆಚ್ಚಿಸಿದ್ದಾರೆ.

ಓದುವ ರಸಗವಳದ ಘಮಲಿದೆ.
"ಸಂತೆಯಲಿ ಸಿಕ್ಕವಳು ಸಂಜೆ ಸಿಗ್ತೀಯಾ ಅಂದರೆ ಏನಾಗಬೇಡ ?"
ಒಲವಿನ ಓಲೆ ಓದದ ಲೀಲಾವತಿ ಲೀಲೆ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.

"ರಜೆಗೆ ಬಂದಾಗ ಮದುವೆಯಾಗೋಣ" ಅಂದವಳು ತೋಟದ ಬದುವಲ್ಲಿ ಮಾತ್ರ ದಕ್ಕುತ್ತಾಳೆ, ಬದುಕ ತುಂಬಾ ಅಲ್ಲ.

ಲೀಲಾವತಿ ಕೊಟ್ಟ ಒಂದೇ ಒಂದು ಮುತ್ತು ಇಡೀ ಜೀವಮಾನ ಜೀವ ತಿಂದರೆ ಈಗ ಇಂತಹ ಮುತ್ತುಗಳು ಬೀದಿಯಲ್ಲಿ ಬಿಕರಿಯಾಗುತ್ತಿವೆ.

ಗಂಡನನ್ನು ನೀರಿಗೆ ತಳ್ಳಿ ಮುಕ್ತಳಾದವಳು ಸುಖವಾಗಿದ್ದಾಳೆ.
ಯಾವುದು ನಿಜವಾದ ಸುಖ…
ಪ್ರೀತಿಯೋ, ಪ್ರೇಮವೋ, ಕವಿತೆಯೋ, ಕಾಮವೋ, ಮದಿರೆಯೋ ಹೂಂ ಹೂಂ ಅರ್ಥವಾಗುವುದರೊಳಗೆ ಮುಪ್ಪು ಆವರಿಸಿ,ಹಾಸಿಗೆ ಹಿಡಿದು ಸತ್ತೇ ಹೋಗುತ್ತೇವೆ.

ಬದುಕಿನ ಇಂತಹ ಅನೇಕ ವಿಪರೀತಗಳನ್ನು ಕೆಲವೇ ಕೆಲವು ಪಾತ್ರಗಳ ಮೂಲಕ ಹೇಳುವದು ಬಹು ದೊಡ್ಡ ಸವಾಲು.
ಅನಗತ್ಯ ಎಳೆದಾಡದೇ, ಓದುಗರ ಸಹನೆ ಕೆಣಕದೆ ಸರಸರ ಹೇಳಿ ಬಿಡುವ ವಿಧಾನ ಖುಷಿ ಕೊಡುತ್ತದೆ.
ಮನುಷ್ಯನ ತುಮುಲಗಳ ವಿಕಾರ ಹೊಸ ಹೊಸ ರೂಪ ತಾಳುವ ಕಾಲದಲ್ಲಿ ನಾವಿದ್ದೇವೆ.

ಗಂಡು ಹೆಣ್ಣಿನ ಸಂಬಂಧ, ಹಣದ ವ್ಯಾಮೋಹ ಭಿನ್ನ ಅವತಾರದಲ್ಲಿ ಒಕ್ಕರಿಸುತ್ತಿರುವಾಗ ಮನುಷ್ಯ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂಬುದನ್ನು ಜೋಗಿ ಬೆಂಗಳೂರಿನ ಜನಸಂದಣಿಯಲ್ಲಿ ಕಂಡುಕೊಂಡಿದ್ದಾರೆ ಆದರೆ ಕಳೆದು ಹೋಗಿಲ್ಲ.

ಪ್ರೀತಿಯ ಹುಡುಕಾಟ ಜೀವಂತವಾಗಿಟ್ಟುಕೊಂಡು ಅಕ್ಷರಗಳ ಅನುಸಂಧಾನ ಮುಂದುವರೆಸಿದ್ದರ ಪ್ರತಿಫಲವೇ L.
*ಏನೇ ಆದರೂ ನಮ್ಮೊಳಗಿನ ಮನುಷ್ಯತ್ವ ಸಾಯಬಾರದೆಂಬ ಕಾಳಜಿ,ಕಳಕಳಿ ಇದೆ*.

ಬದುಕಿನ ಸತ್ಯದ ಮಗ್ಗುಲು ನೋಡುವ ಇನ್ನೊಂದು ಬಗೆಯ ಪ್ರಯತ್ನದಲ್ಲಿ ಜೋಗಿ ಗೆದ್ದಿದ್ದಾರೆ.
ಹೊಸ ಪ್ರಯೋಗಕ್ಕೆ ಹಾತೊರೆಯವ ಕಸುವು ಹೆಚ್ಚಾಗಿ ಪುಸ್ತಕ ಪ್ರೀತಿ ಹುಟ್ಟಿಸುವ ಕೆಲಸದಲ್ಲಿ ನಾನಿಂದು ನನ್ನ ಸಮಯ ಹಾಕಿದ್ದು ಸಾರ್ಥಕ ಎನಿಸಿದೆ.
ಕನ್ನಡ ಭಾಷೆಗೆ ಆ ಕಸುವಿದೆ,ಕನಸಿದೆ,ಮನಸೂ ಇದೆ.

ಪುಸ್ತಕದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಎಲ್‌

 

Top News
Top Events