Book Watchers

ವಿಠ್ಠಲ ದಳವಾಯಿ

ಕವಿ ವಿಠ್ಠಲ ದಳವಾಯಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಮುಗಳಿಹಾಳದವರು. 1984 ಜೂನ್‌ 01 ರಂದು ಜನನ. ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ’ಬೋಧಿ ನೆರಳಿನ ದಾರಿ’ ಪ್ರಕಟಿತ ಕವನ ಸಂಕಲನ. ಅರಳು ಸಾಹಿತ್ಯ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಸಾಹಿತ್ಯ ಪ್ರಶಸ್ತಿ, ತೇಜಸ್ವೀ ಕಟ್ಟೀಮನಿ ಸಾಹಿತ್ಯ ಪ್ರಶಸ್ತಿ, ದ.ರಾ ಬೇಂದ್ರೆ ಯುವಗ್ರಂಥ ಬಹುಮಾನ, ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.

Related Articles

ನಂಬಿಕೆಯ ಹಂಬಲದ ನದೀಮ ಕವಿತೆಗಳು
‘ಹುಲಿಯ ನೆತ್ತಿಗೆ ನೆರಳು’ ಬೆಳಗಾವಿಯ ಯುವಕವಿ ನದೀಮ ಸನದಿಯವರ ಮೊದಲ ಕವಿತಾ ಸಂಕಲನ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ‘ಯುವ ಬರಹಗಾರರ ಚೊಚ್ಚಿಲ ಕೃತಿ’ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಕಟವಾಗಿರುವ ಇದು ಮೂವತ್ತೊಂದು ಕವಿತೆಗಳ ಗುಚ್ಛ. ‘ಮಾನವ್ಯ ಕವಿ’ಯೆಂದೇ ಹೆಸರಾದ ಬಿ. ಎ .ಸನದಿಯವರಿಂದ ಪ್ರಭಾವಿತರಾಗಿರುವ ನದೀಮ ಸನದಿಯವರ ಕವಿತೆಗಳು, ಮನುಷ್ಯರ ನಡುವೆ ಕಾಣೆಯಾಗುತ್ತಿರುವ ಮಾನವೀಯತೆಯ ಹುಡುಕಾಟಕ್ಕಾಗಿ ತುಡಿಯುತ್ತವೆ. ಹೀಗಾಗಿಯೇ ‘ನಂಬಿಕೆಯ ಗೋಡೆ/ದೃಢವಾಗಿ ನಿಂತಿರಲಿ’ ಎನ್ನುವ ಅವರ ಕವಿತೆಯ ಸಾಲುಗಳ ಆಶಯವೇ ಈ ಸಂಕಲನದ ತುಂಬ ಹಬ್ಬಿಕೊಂಡಿದೆ.
‘ಗಲಭೆಕೋರನೊಬ್ಬ

ಓಣಿಯೊಂದರಲ್ಲಿ ನುಗ್ಗಿ

ಪೇದೆಯೊಬ್ಬನ ಮನೆಗೆ

ಬೆಂಕಿ ಹಚ್ಚುತ್ತಿದ್ದ

ಬೆಂಕಿ ಬಿದ್ದ ಮನೆಯ ಪೇದೆ

ಗಲಭೆಕೋರನ ಮನೆಯ ಬೆಂಕಿ ನಂದಿಸುತ್ತಿದ್ದ'

 ಈ ಕವಿತೆಯಲ್ಲಿ ಎರಡು ಚಿತ್ರಗಳನ್ನು ಮುಖಾಮುಖಿಯಾಗಿಸುವ ಪರಿ ಅನನ್ಯವಾಗಿದೆ. ಗಲಭೆಕೋರ ಮತ್ತು ಪೇದೆ ಇಬ್ಬರೂ ತಮ್ಮ ತಮ್ಮ ಕರ್ತವ್ಯದಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದ್ದಾರೆ. ವ್ಯತ್ಯಾಸವೆಂದರೆ ಒಬ್ಬನ ಕೆಲಸ ಕೆಡಹುವುದಾದರೆ ಒಬ್ಬನದು ಕಟ್ಟುವುದು. ಕಟ್ಟುವವನ ಮನೆಯನ್ನೇ ಅವನು ಕೆಡವುತ್ತಿದ್ದಾನೆ ಎಂಬುದು ಕವಿತೆಗೆ ಹೆಚ್ಚು ಪರಿಣಾಮವನ್ನು ಉಂಟು ಮಾಡಿದೆ.
ವರ್ತಮಾನದಲ್ಲಿ ಹಬ್ಬುತ್ತಿರುವ ದ್ವೇಷದ ಬೆಂಕಿ, ಅನುಮಾನ ಮತ್ತು ಅಪನಂಬಿಕೆಯ ವಾತಾವರಣ ಕವಿಗೆ ಸದಾ ಕಾಡುತ್ತದೆ. ಜನರ ಮನದಲ್ಲಿರುವ ಕ್ರೋಧಾಗ್ನಿ ಎಷ್ಟು ತೀವ್ರವಾಗಿದೆಯೆಂದರೆ ಅದರ ಮುಂದೆ ಕಾಡ್ಗಿಚ್ಚು ಕೂಡ ತಂಪಾಗಿ ತೋರುತ್ತದೆ ಎನ್ನುತ್ತಾರೆ ಅವರು.
 ‘ಗಾಂಧಿ ಸಿಕ್ಕಿದ್ದ’ ಕವಿತೆ ಗಾಂಧೀಜಿಯವರ ಕುರಿತು ವಿಭಿನ್ನ ನೆಲೆಯಲ್ಲಿ ಚಿಂತಿಸುವಂತೆ ಮಾಡುತ್ತದೆ. ಗಾಂಧೀಜಿ ಮತ್ತು ಗಾಂಧಿತತ್ವಗಳು ಹೆಚ್ಚು ತಾತ್ಸಾರಕ್ಕೆ ಒಳಗಾಗುತ್ತಿರುವ ಕಾಲವಿದು. ಗಾಂಧೀಜಿಯವರ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳದೇ ಅವರನ್ನು ಅವಹೇಳನ ಮಾಡುವ, ಒಡೆಯುವ ಸಿದ್ಧಾಂತಕ್ಕೆ ತಲೆಕೊಟ್ಟಿರುವ ಯುವಕರೇ ಇಲ್ಲಿ ಗಾಂಧಿಯಾಗಿದ್ದಾರೆ. ಇಂತಹ ಗಾಂಧಿ ಕುಡಿಯುತ್ತಾನೆ, ಚಿಕನ್ ಕಬಾಬು ತಿನ್ನುತ್ತಾನೆ ಮತ್ತು ತನ್ನದೇ ಮೂರ್ತಿಗಳನ್ನು ವಿರೂಪಗೊಳಿಸುತ್ತಾನೆ. ಕಡೆಗೆ ಗೋಡ್ಸೆಯ ಹೆಗಲಿಗೆ ಕೈ ಹಾಕಿ ಹರಟೆ ಹೊಡೆಯುತ್ತಾನೆ ಎಂಬಲ್ಲಿಗೆ ವ್ಯಂಗ್ಯದೊಂದಿಗೆ ಕವಿತೆ ಧ್ವನಿಪೂರ್ಣವಾಗಿ ವಿಷಾದಿಸುತ್ತದೆ.
ಕವಿತೆ ಬರೆಯುವದೇ ಒಂದು ಆಕ್ಟಿವಿಸಂ ಎಂದು ನಂಬಿರುವ ಕವಿ, ‘ವಿಧಾನಸೌಧದ ಎ.ಸಿ ಕೋಣೆಗಳಲ್ಲಿ/ಜೀವಂತ ಹೆಣಗಳ ವಾಸ/ಬುಲೆಟ್ ಪ್ರೂಫ್ ಕಾರುಗಳಂತೆ ಸೌಂಡ್ ಪ್ರೂಫ್ ಕಿವಿಗಳು/ದುರ್ಬಲರ ದೈನ್ಯದ ಕೂಗು ಕೇಳಿಸುವುದಿಲ್ಲ ಎಂದು ಚಾಟಿ ಬೀಸುತ್ತಾರೆ. ಇದೇ ಜೀವಂತ ಹೆಣಗಳಿಗೆ ಖಾಕೀಧಾರಿ ಸೆಲ್ಯೂಟ್ ಎಸೆದು ಹಸಿದವರ ಮೇಲೆ ಲಾಠಿ ಬೀಸುತ್ತಾನೆ.
ನದೀಮ ಕವಿತೆಗಳು ಬಂಡಾಯ ಏಳುತ್ತವೆ. ಬುಲೆಟ್ ಟ್ರೇನು ಓಡಬೇಕಾದ ದೇಶದಲ್ಲಿ ರೈಫಲ್ಲಿನ ಬುಲೆಟ್ಟಿನ ನಾಗಾಲೋಟವಿದೆ. ಅದು ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹಾಗೂ ಗೌರಿಯಂತಹವರನ್ನು ಸೀಳಿಕೊಂಡು ಹೋಗುತ್ತದೆ. ಬುಲೆಟ್ ಟ್ರೇನು ತರುತ್ತೇನೆಂದವರು ಮಾತಿನ ರೈಲು ಬಿಡುವುದರಲ್ಲೇ ವ್ಯಸ್ತರಾಗಿದ್ದಾರೆ ಎಂಬ ಹಳಹಳಿಕೆ ಅವರದು.
ಅಲ್ಲಲ್ಲಿ ವಾಚ್ಯವಾದರೂ ಮೊದಲ ಸಂಕಲನದಲ್ಲೆ ನದೀಮ ಹಲವು ಉತ್ತಮ ಕವಿತೆಗಳೊಂದಿಗೆ ಗಮನ ಸೆಳೆಯುತ್ತಾರೆ. ಅವರ ಕಾವ್ಯ ಪಯಣ ನಿರಂತರವಾಗಿರಲಿ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಹುಲಿಯ ನೆತ್ತಿಗೆ ನೆರಳು

Top News
Top Events