ಅಂತರ್ಜಾಲದಲ್ಲಿ ಕೆಲವು ಉತ್ತಮ ಕವಿತೆಗಳೂ ತೇಲಿ ಬರುವುದುಂಟು


‘ಕವಿತೆಯೊಂದರ ಬಗ್ಗೆ ಆಳವಾಗಿ ಚಿಂತಿಸುವ, ಅದರ ಸಾರವನ್ನು ಹೀರುವ, ಅದನ್ನು ಸ್ಥಳಾಂತರಿಸಿ, ಮತ್ತೊಂದು ಅಚ್ಚಿನಲ್ಲಿ ಸುರಿದು ಹೊಸದೊಂದು ರೂಪ ಕೊಡುವಾಗ ನಮಗೇ ಅರಿವಿಲ್ಲದಂತೆ ಮರುಸೃಷ್ಟಿಯ ಪ್ರಕ್ರಿಯೆಯನ್ನು ಅರಗಿಸಿಕೊಳ್ಳುವ ಸೃಜನಶೀಲತೆಯ ಅನುಭವದ ಪುಳಕಕ್ಕಾಗಿಯಾದರೂ ಇದು ನನಗೆ ತುಂಬಾ ಪ್ರಿಯವಾಗುತ್ತದೆ’ ಎನ್ನುತ್ತಾರೆ ಮೈ.ಶ್ರೀ. ನಟರಾಜ. ಅವರು ಗಾಳಿಯಲ್ಲಿ ಹಾರಿ ಬಂದ ಹೂಗಳು’ ಕೃತಿಗೆ ಬರೆದ ಅರಿಕೆ ನಿಮ್ಮ ಓದಿಗಾಗಿ.

ಸುಮಾರು ಹತ್ತು ವರ್ಷಗಳ ಹಿಂದೆ ನಾನು ಭಾಷಾಂತರಿಸಿದ ಕವನಗಳ ಜೋಡಿ ಸಂಕಲನಗಳ ಪ್ರಕಟಣೆ ಆಯಿತು. 'ಭಾಷೆಯಿಂದ ಭಾಷೆಗೆ' ಎಂಬ ಸಂಗ್ರಹದಲ್ಲಿ ಇಂಗ್ಲಿಷ್ ಭಾಷೆಯಲ್ಲಿದ್ದ ಮೂಲಕವನಗಳೇ ಅಲ್ಲದೇ ಹಲವು ಭಾಷೆಗಳಿಂದ ಆಂಗ್ಲಭಾಷೆಗೆ ತರ್ಜುಮೆಯಾಗಿದ್ದ ಕವಿತೆಗಳನ್ನೂ ಸೇರಿಸಿಕೊಂಡಿದ್ದೆ. 'ಬಿಯಾಂಡ್ ವರ್ಡ್ಸ್' ಎಂಬ ಸಂಗ್ರಹದಲ್ಲಿ ಆಯ್ದ ಕನ್ನಡ ಕವಿತೆಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದೆ. ಎರಡೂ ಪುಸ್ತಕಗಳು ಅಭಿನವ ಮತ್ತು 'ರೂವಾರಿ ಅಭಿನವ ಇಂಪ್ರಿಂಟ್' ಸಂಸ್ಥೆಯಿಂದ ಪ್ರಕಟಗೊಂಡು ಉತ್ತಮ ಪ್ರತಿಕ್ರಿಯೆಗಳನ್ನು ದೊರಕಿಸಿಕೊಂಡವು. ಕಳೆದ ಹತ್ತು ವರ್ಷಗಳಲ್ಲಿ ಇನ್ನೂ ಹಲವಾರು ಆಂಗ್ಲ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಇವುಗಳಿಂದ ಆಯ್ದ ಕವಿತೆಗಳ ಸಂಗ್ರಹ ಇದು.

ಹಿಂದೆ ಪ್ರಕಟವಾಗಿದ್ದ ಹಾಗೂ ಹಲವು ಗೋಷ್ಠಿಗಳಲ್ಲಿ ಓದಿದ್ದ ಕವನಗಳೂ ಇಲ್ಲಿ ಸೇರಿವೆ. ಎರಡು ವರ್ಷಗಳ ಹಿಂದೆ ಅಮೆರಿಕದ ಮೂಲನಿವಾಸಿಗಳ ಕವಿತೆಗಳನ್ನು ಅನುವಾದಿಸಿ ಒಂದು ಪ್ರತ್ಯೇಕ ಸಂಕಲನವನ್ನು ಪ್ರಕಟಿಸುವ ಯೋಜನೆ ಕೈಗೂಡಿರಲಿಲ್ಲ. ಆ ಕವಿತೆಗಳಲ್ಲಿ ಆಯ್ದ ಕೆಲವನ್ನು ಈ ಸಂಕಲನದ ಎರಡನೆಯ ಭಾಗವಾಗಿ ಸಂಕಲಿಸಿದೆ. ಈ ಕವಿತೆಗಳ ಮೂಲವಸ್ತು ಭಿನ್ನವಾಗಿರುವುದರಿಂದ ಈ ರೀತಿ ವಿಂಗಡಿಸುವ ಅಗತ್ಯ ಕಂಡುಬಂತು. ಬೇರೊಂದು ಖಂಡದ ಮೂಲನಿವಾಸಿಗಳ ಚಿಂತನೆ ಭಾರತೀಯ ಚಿಂತನೆಗಳಿಗೆ ಹತ್ತಿರವಾಗಿರುವ ಸಂಗತಿ ಕೂಡ ಕುತೂಹಲಕಾರಿಯಾದುದು. ಈ ಕುರಿತು ಎರಡನೆಯ ಭಾಗದಲ್ಲಿ ಟಿಪ್ಪಣಿಯನ್ನು ಕೊಟ್ಟಿದ್ದೇನೆ.

ಅನುವಾದ ಕ್ರಿಯೆಯಲ್ಲಿ ನನಗಿರುವ ಆಸಕ್ತಿಯನ್ನು ಬಲ್ಲ ಅನೇಕ ಸಾಹಿತ್ಯಾಸಕ್ತ ಮಿತ್ರರು ತಮಗೆ ಇಷ್ಟವಾದ ಕವಿತೆಗಳನ್ನು ಆಗಾಗ ಕಳಿಸುವುದುಂಟು. ಅಂತರ್ಜಾಲದಲ್ಲಿ ಕೆಲವು ಉತ್ತಮ ಕವಿತೆಗಳೂ ತೇಲಿ ಬರುವುದುಂಟು. ನನಗೆ ಇಷ್ಟವಾದ ಕೆಲವನ್ನು ಅನುವಾದಿಸಿ ಇಟ್ಟಿರುತ್ತೇನೆ. ಕೆಲವೊಮ್ಮೆ ಅರ್ಧ ಮುಗಿಸಿ ಮರೆತೇಬಿಟ್ಟಿರುತ್ತೇನೆ. ಯಾವಾಗಲೋ ಮತ್ತೊಮ್ಮೆ ಕೈಗೆ ಸಿಕ್ಕಾಗ ಅವು ನನ್ನನ್ನು ಉತ್ತೇಜಿಸಿದರೆ ಅನುವಾದ ಕಾರ್ಯವನ್ನು ಮುಂದುವರೆಸಿ ಮುಗಿಸುತ್ತೇನೆ. ಈ ಕೆಲಸ ನನಗೆ ಒಂದು ರೀತಿಯಲ್ಲಿ ಪ್ರಿಯವಾದ ಚಟುವಟಿಕೆ. ಯಾರೋ ಕವಿ, ಎಲ್ಲೋ ಇರುವವ(ಳು), ಯಾವುದೋ ಭಾಷೆಯಲ್ಲಿ ಯಾವಾಗಲೋ ಬರೆದ ಕವಿತೆಗಳು ನನ್ನನ್ನು ಪ್ರಚೋದಿಸುವ ಜಾದು ಒಂದು ರೀತಿಯ ಮಾದಕ ಪುಳಕವನ್ನುಂಟುಮಾಡುತ್ತದೆ. ಅದರಲ್ಲೂ, ಆ ಕವಿತೆಗಳ ಒಂದು ಸಂದೇಶವನ್ನು ಕನ್ನಡದ ಓದುಗರಿಗೆ ತಲುಪಿಸುವ ಕ್ರಿಯೆ ನನ್ನನ್ನು ಕೆಣಕಿ ಸವಾಲಾಗಿ ನಿಂತು 'ಮಾಡು ನೋಡೋಣ, ದಮ್ಮಿದ್ದರೆ' ಎಂದು ನಕ್ಕಹಾಗೆ ಅನಿಸುತ್ತದೆ. ಕನ್ನಡದಲ್ಲಿ ಎಂಥಾ ಸಾಧ್ಯತೆಗಳಿವೆ ಎಂದು ಅರಿವಾಗಬೇಕಿದ್ದರೆ, ಇಂಥಾ ಸವಾಲನ್ನು ಸ್ವೀಕರಿಸಲೇಬೇಕು. ಏನಿಲ್ಲದಿದ್ದರೂ ಕವಿತೆಯೊಂದರ ಬಗ್ಗೆ ಆಳವಾಗಿ ಚಿಂತಿಸುವ, ಅದರ ಸಾರವನ್ನು ಹೀರುವ, ಅದನ್ನು ಸ್ಥಳಾಂತರಿಸಿ, ಮತ್ತೊಂದು ಅಚ್ಚಿನಲ್ಲಿ ಸುರಿದು ಹೊಸದೊಂದು ರೂಪ ಕೊಡುವಾಗ ನಮಗೇ ಅರಿವಿಲ್ಲದಂತೆ ಮರುಸೃಷ್ಟಿಯ ಪ್ರಕ್ರಿಯೆಯನ್ನು ಅರಗಿಸಿಕೊಳ್ಳುವ ಸೃಜನಶೀಲತೆಯ ಅನುಭವದ ಪುಳಕಕ್ಕಾಗಿಯಾದರೂ ಇದು ನನಗೆ ತುಂಬಾ ಪ್ರಿಯವಾಗುತ್ತದೆ. ಮೂಲವನ್ನು ಓದಿದವರೂ ಓದದವರೂ ಇಲ್ಲಿಯ ಕೆಲವು ಅನುವಾದಗಳನ್ನಾದರೂ ಮೆಚ್ಚಿಕೊಂಡರೆ ನನ್ನ ಶ್ರಮ ಸಾರ್ಥಕವಾಗುತ್ತದೆ!

ಈ ಸಂದರ್ಭದಲ್ಲಿ ಹಲವರ ಸಹಾಯ ಮತ್ತು ಸಹಕಾರವನ್ನು ನೆನೆಯುವುದು ನನ್ನ ಕರ್ತವ್ಯವಾಗಿದೆ. ಸಂಕಲನದ ಕರಡು ಪ್ರತಿಯನ್ನೋದಿ ತಮ್ಮ ಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡ ಸೋದರಿಯರಾದ ನಳಿನಿ ಮೈಯ ಮತ್ತು ಶಶಿಕಲಾ ಚಂದ್ರಶೇಖರ್ ಅವರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದಗಳು. ಲಿಪಿಗಳನ್ನು ಏಕರೂಪಕ್ಕೆ ತಂದು ಮುದ್ರಣಕ್ಕೆ ಸಿದ್ಧಗೊಳಿಸುವ ಕಾರ್ಯದಲ್ಲಿ ಸಹಾಯ ಮಾಡಿದ ಗೆಳೆಯ ಶ್ರೀವತ್ಸ ಜೋಷಿಯವರಿಗೆ ಹೃತೂರ್ವಕ ವಂದನೆಗಳು.

ನನ್ನ ಕೋರಿಕೆಯನ್ನು ಮನ್ನಿಸಿ ಸುಂದರವಾದ ರಕ್ಷಾಪುಟವನ್ನು ವಿನ್ಯಾಸಮಾಡಿಕೊಟ್ಟ ಕಲಾವಿದ ಚಂದ್ರನಾಥ ಆಚಾರ್ಯ ಅವರಿಗೆ, ಒಳಪುಟಗಳನ್ನು ವಿನ್ಯಾಸ ಮಾಡಿದ ಆರ್. ಎಸ್. ಶ್ರೀಧರ್ ಮತ್ತು ಅಂದವಾಗಿ ಮುದ್ರಿಸಿದ ಧರಣಿ ಪ್ರಿಂಟರ್ಸ್‌ನ ಹೂವಪ್ಪ ಮತ್ತು ಸಿಬ್ಬಂದಿ ವರ್ಗದವರಿಗೆ ನನ್ನ ಮನಃಪೂರ್ವಕ ವಂದನೆಗಳು. ಪ್ರಕಟಣೆಯ ಪ್ರತಿ ಹಂತದಲ್ಲೂ ಅಮೂಲ್ಯ ಸಲಹೆಗಳನ್ನಿತ್ತು ಸಹಾಯಹಸ್ತ ಚಾಚಿದ ಅಭಿನವ ರವಿಕುಮಾ‌ರ್, ಚಂದ್ರಿಕಾ ಮತ್ತು ಅವರ ಸಂಪಾದಕವೃಂದಕ್ಕೆ ನನ್ನ ಅಂತಃಕರಣಪೂರ್ವಕ ಕೃತಜ್ಞತೆಗಳು.

ಕವಿತೆಗಳನ್ನೋದಿ ಸೂಕ್ತವಾದ ಮುನ್ನುಡಿಯನ್ನು ಬರೆದುಕೊಟ್ಟ ಕಮಲಾಕರ ಕಡವೆ ಅವರಿಗೂ ಮತ್ತು ಅರ್ಥಪೂರ್ಣ ಬೆನ್ನುಡಿಯನ್ನು ಬರೆದ ಪ್ರೊಫೆಸರ್ ಎಸ್. ಎನ್. ಶ್ರೀಧರ್ ಅವರಿಗೂ ಅತ್ಯಂತ ಋಣಿಯಾಗಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಸಾಹಿತ್ಯದ ಕೆಲಸಕ್ಕೆ ಸಮಯ ಒದಗಿಸಿಕೊಟ್ಟು ತಾಳ್ಮೆಯಿಂದ ಸಹಕರಿಸುತ್ತ ಬಂದಿರುವ ಮಡದಿ ಗೀತಾಳಿಗೆ ಮನದಾಳದ ಪ್ರೀತಿಪೂರ್ವಕ ಮೆಚ್ಚುಗೆ ಸಲ್ಲುತ್ತದೆ.

-ಮೈ.ಶ್ರೀ. ನಟರಾಜ

MORE FEATURES

ಚಿತ್ರ ಮತ್ತು ಅಕ್ಷರದಲ್ಲಿ ಒಡಮೂಡಿದ ಅಜ್ಜ ಅಜ್ಜಿಯ ನೆನಪು

28-05-2024 ಬೆಂಗಳೂರು

'ಕನ್ನಡ ಮತ್ತು ಇಂಗ್ಲಿಷ್‌ನ ಹೆಸರಾಂತ ಪತ್ರಿಕೆಗಳಾದ ಪ್ರಜಾವಣಿ, ಡೆಕ್ಕನ್‌ ಹೆರಾಲ್ಡ್‌ನ ಸಂಸ್ಥಾಪ...

ಮನೆ ಮದ್ದು ನೀಡುವ ಪಂಡಿತರ ಸೇವಾ ಮನೋಭಾವದ ಕುರಿತ ಲೇಖನ ಇದು

28-05-2024 ಬೆಂಗಳೂರು

‘ಹಳ್ಳಿ ಮದ್ದಿನ ಚಿಕಿತ್ಸಾ ಪದ್ಧತಿಯನ್ನು ಉಳಿಸಿ ಪೀಳಿಗೆಯಿಂದ ಪೀಳಿಗೆಗೆ ಆ ವಿದ್ಯೆಯನ್ನು ಹಸ್ತಾಂತರಿಸುವ, ಬೆಳೆಸ...

ನಮ್ಮ ದೇಹ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳ ಆಕ್ರಮಣಕ್ಕೆ ತೆರೆದ ಹೆಬ್ಬಾಗಿಲು

28-05-2024 ಬೆಂಗಳೂರು

‘ಪರಿಸರ ಜ್ಞಾನದ ಹಿನ್ನೆಲೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾದ ತಿಳಿವಳಿಕೆಯನ್ನು ಸಂಶೋಧನಾತ್ಮಕ ವಿವರಗಳೊಂದ...