ಹಿಂದಿನ ನಿಲ್ದಾಣದಲ್ಲಿ...

Date: 19-03-2024

Location: ಬೆಂಗಳೂರು


'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು ಬೇಕಿರುವ ಚೈತನ್ಯ ತುಂಬುವ ಪ್ರೇರಕ ಶಕ್ತಿ' ಎನ್ನುತ್ತಾರೆ ಲೇಖಕಿ ಆಶಾ ಜಗದೀಶ್ ಅವರು ಬುಕ್ ಬ್ರಹ್ಮದ ತಮ್ಮ ಅಂಕಣ ಸರಣಿ ‘ಚಿತ್ತ ಪೃಥವಿಯಲ್ಲಿ’ 'ಹಿಂದಿನ ನಿಲ್ದಾಣ'ಗಳ ಕೌತುಕಗಳ ಕುರಿತು ತಿಳಿಸುತ್ತಲೇ ಶುಭಶ್ರೀ ಭಟ್ ಅವರ ಹಿಂದಿನ ನಿಲ್ದಾಣ ಕೃತಿಯನ್ನು ವಿಶ್ಲೇಷಿಸಿದ್ದಾರೆ.

"ಹಿಂದಿನ ನಿಲ್ದಾಣ"ವೆಂಬ ಹೆಸರೇ ನಮ್ಮೊಳಗೆ ಹಲವಾರು ಭಾವಗಳನ್ನು ಹುಟ್ಟುವಂತೆ ಮಾಡುತ್ತದೆ. ಯಾವುದದು ಹಿಂದಿನ ನಿಲ್ದಾಣ, ಆ ನಿಲ್ದಾಣದಲ್ಲಿ ಕಂಡ ಮುಖಗಳು ಯಾವುವು? ಅವುಗಳಲ್ಲಿ ಪರಿಚಿತವೆಷ್ಟು, ಅಪರಿಚಿತವೆಷ್ಟು... ಎಂಬೆಲ್ಲಾ ಚಿತ್ರಗಳು ಕಣ್ಣ ಹಿಂದಿನ ಪರದೆಯ ತುಂಬಿಕೊಳ್ಳುತ್ತವೆ. ಎಲ್ಲವೂ, ಎಲ್ಲರೂ ಗೊತ್ತಿರುವ ನಿಲ್ದಾಣದಲ್ಲಿ ಒಂದು ಬಗೆಯ ಇಬ್ಬಂದಿತನವಿದ್ದರೆ, ಯಾರೂ ಏನೂ ಗೊತ್ತಿಲ್ಲದ ನಿಲ್ದಾಣದಲ್ಲಿ ಸಿಗುವ ಸ್ವಾತಂತ್ರ್ಯ ಮತ್ತೊಂದೇ ಬಗೆಯ ವಿಶಿಷ್ಟ ಅನುಭವವನ್ನು ಉಣಿಸುತ್ತದೆ. ಆದರೆ ಗೊತ್ತಿರುವ ನಿಲ್ದಾಣದ ಸುರಕ್ಷಿತ ಭಾವ ಅಪರಿಚಿತ ನಿಲ್ದಾಣದಲ್ಲಿ ಹುಡುಕಿದರೂ ಸಿಗಲಾರದು. ಅಪರಿಚಿತ ನಿಲ್ದಾಣದಲ್ಲಿ ಅಪಾಯಕ್ಕೆ ಗುರಿಯಾಗುವ ಸಂದರ್ಭ ಬಂದರೆ ನೆರವಿಗೆ ಪರಿಚಿತರ್ಯಾರೂ ಇರುವುದಿಲ್ಲ. ಇದು ನಿಜಕ್ಕೂ ಮನುಷ್ಯರೆನ್ನಿಸಿಕೊಂಡವರು ತಮ್ಮ ಮನುಷ್ಯತ್ವವನ್ನು ಸಾಬೀತು ಮಾಡಬೇಕಾದ ಸಂದರ್ಭ. ಎಷ್ಟು ಸಾರಿ ಸಾಬೀತು ಮಾಡಿದ್ದೇವೆ ಎಂಬುದು ಮಾತ್ರ ನಮ್ಮ ನಮ್ಮ ಆತ್ಮಸಾಕ್ಷಿಗೆ ಬಿಟ್ಟ ವಿಚಾರ. ಆದರೆ ಪ್ರಯೋಗದ ವಸ್ತುವಾಗಲು ಬೇಕಾಗೇ ಒಡ್ಡಿಕೊಳ್ಳದಿರುವಷ್ಟು ವಿವೇಚನೆ ನಮಗಿದೆ ಅಲ್ಲವಾ... ಇದು ಈ ಕಾಲಮಾನ ನಮ್ಮೊಳಗೆ ಹುಟ್ಟಿಸುತ್ತಿರುವ ಆತಂಕ ಮತ್ತು ತಲ್ಲಣ. ಇಲ್ಲದೆ ಹೋಗಿದ್ದರೆ ಬಹುಶಃ ನಾವು ಹೀಗೆಲ್ಲ ಯೋಚಿಸಬೇಕಾದ ಅಗತ್ಯವೇ ಇರುತ್ತಿರಲಿಲ್ಲ. ಗೊತ್ತು ಗುರಿ ಇಲ್ಲದೆ ಅಲೆಯುವ ಪರಿಸ್ಥಿತಿಯಲ್ಲಿ ನಿಲ್ದಾಣವೊಂದು ಮಾಡಿಕೊಡುವ ಅನುಕೂಲತೆಯ ತೂಕಕ್ಕೆ ಯಾವುದು ಸಮ ಹೇಳಿ. ಅದೆಷ್ಟೋ ನವಿರಾದ ಪ್ರೇಮ ಕತೆಗಳು ಹುಟ್ಟಿಕೊಳ್ಳುವ ತಾಣಗಳಾಗಿವೆ ಈ ನಿಲ್ದಾಣಗಳು. ಅದೆಷ್ಟೋ ಜನ ಬದುಕು ಕಟ್ಟಿಕೊಳ್ಳಲಿಕ್ಕಾಗಿ ಊರು ತೊರೆದು ಪರ ಊರನ್ನು ಹುಡುಕಿಕೊಂಡು ಹೋಗಿದ್ದಾರೆ ಇಲ್ಲಿಂದ. ತನ್ನವರಿಂದ ಮೋಸ ಹೋಗಿ ಅವರಿಂದ ದೂರಾದ ಅದೆಷ್ಟೋ ಜನ ಇಲ್ಲಿ ರಾತ್ರಿಗಳನ್ನು ಕಳೆದಿದ್ದಾರೆ. ಅದೆಷ್ಟೋ ಮನೆಯಿಲ್ಲದವರು ತಾತ್ಕಾಲಿಕವಾಗಿ ಸೂರು ಪಡೆದಿದ್ದಾರೆ. ನಂತರ ಮರಳಿ ತಮ್ಮ ಗಮ್ಯವನ್ನು ತಲುಪಿಕೊಂಡಿದ್ದಾರೆ. ಹೋಗುವವರಿಗೆ ಗುರಿ ತೋರಿಸಿ, ಬಂದವರನ್ನು ಕೈಹಿಡಿದು ಹರಸಿ ಒಂದು ನಿಶ್ಚಿಂತ ಭಾವವನ್ನು ಉಂಟುಮಾಡುವ ನಿಲ್ದಾಣಗಳು ನಮ್ಮ ಬದುಕಿಗೂ ಬೇಕು...

ಪ್ರತಿ ನಿಲ್ದಾಣದಲ್ಲೂ ಪ್ರಯಾಣ ಕೊಂಚ ನಿಂತು ಸುಧಾರಿಸಿಕೊಳ್ಳುತ್ತದಲ್ಲ ಹಾಗೆ ಬದುಕು ಆಗಾಗ ನಿಂತು ಸುಧಾರಿಸಿಕೊಳ್ಳುವಂತಿದ್ದಿದ್ದರೆ?! ಒಂದೇ ಸಮ ತಿರುಗುವ ಕಾಲ ಕೊಂಚ ನಿಂತು ನೀರು ಕುಡಿದು ಹೊರಟಿದ್ದರೆ?! ಬಸ್ಸಿನ (ಅಥಾವ ರೈಲು, ವಿಮಾನ, ಹಡಗು ಯಾವುದಾದರೂ ಆದೀತು...) ಸುಪರ್ದಿಗೆ ಒಪ್ಪಿಸಿಕೊಂಡು ಹೊರ ಕಾಣುವ ಜಗತ್ತನ್ನು ಈಕ್ಷಿಸುತ್ತಾ ಕ್ಷಣ ಕಾಲ ನಮ್ಮ ನಾವೇ ಕಳೆದುಕೊಳ್ಳುವ ಸುವರ್ಣ ಘಳಿಗೆ ಈ ಪ್ರಯಾಣದಿಂದಲೇ ನಮಗೆ ಸಿಗುವುದು. ಯಾವುದೋ ಪ್ರಯಾಣಿಕ, ಎಷ್ಟೋ ಪ್ರಯಾಣ, ಎಲ್ಲರೂ ಅವರವರ ಪ್ರಯಾಣ ಮುಗಿಸಿ ಇಳಿದು ಹೋಗುತ್ತಾರೆ. ನಮ್ಮ ಪ್ರಯಾಣ ಮುಗಿಯುವವರೆಗೂ ನಾವು ಕಾಯಲೇ ಬೇಕು. ಚಲಿಸುತ್ತಿರುವ ಬಂಡಿಯಿಂದ ಜಿಗಿಯುತ್ತೇನೆ ಎಂಬುದನ್ನು ಯಾರೂ ಒಪ್ಪಲಾರರು. ನಮ್ಮ ಪ್ರಯಾಣದಿಂದ ನಾವು ತಪ್ಪಿಸಿಕೊಳ್ಳಬಾರದು. ಆದರೆ ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು ಬೇಕಿರುವ ಚೈತನ್ಯ ತುಂಬುವ ಪ್ರೇರಕ ಶಕ್ತಿ.

ಅಂತಹ ಅದೆಷ್ಟೋ ನಿಲ್ದಾಣಗಳು ಶುಭಶ್ರೀಯವರ 'ಹಿಂದಿನ ನಿಲ್ದಾಣ' ಪುಸ್ತಕದಲ್ಲಿವೆ. ಈ ಪುಸ್ತಕ ಲೇಖಕಿಯ ಬಾಲ್ಯಕಾಲದ ಅನುಭವಗಳಿಂದ ಸಮೃದ್ಧವಾಗಿದೆ. ಅದರಲ್ಲು ಅವರ ಅಜ್ಜಿ ಅವರ ಮೇಲೆ ಬೀರಿರುವ ಪ್ರಭಾವ ಹೆಚ್ಚು ಖುಷಿ ಕೊಡುತ್ತದೆ. ಕುಟುಂಬವೊಂದು ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೊಮ್ಮೊಗಳು ಪ್ರೀತಿಯ ರೇಷಿಮೆ ಎಳೆಗಳಿಂದ ಅಜ್ಜಿಯನ್ನು ದಾಖಲಿಸುತ್ತಿರುವುದು ವಿಶಿಷ್ಟವೆನಿಸುತ್ತದೆ. "ದಣಪೆಯೊಳಗಿನ ಅಕ್ಷರ ಮೋಹ" ಎನ್ನುವ ಈ ಸಂಕಲನದ ಮೊದಲ ಪ್ರಬಂಧದಲ್ಲಿ ಲೇಖಕಿ ತನ್ನ ಅಬ್ಬೆಯ ಬಗ್ಗೆ ಬರೆಯುತ್ತಲೇ ಎಲ್ಲರ ಅಬ್ಬೆಯನ್ಬೂ ನೆನಪಿಸಿಬಿಡುವ, ಕಣ್ಣ ತೇವಗೊಳಿಸಿ ಮನಸನ್ನು ಹಸಿಯಾಗಿಸುವ ಪರಿಯನ್ನು ಓದಿಯೇ ಸವಿಯಬೇಕು. ಅಕ್ಷರವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅನಕ್ಷರಸ್ಥ ಅಜ್ಜಿ ತನ್ನ ಆಸೆಯ ಬೀಜವನ್ನ ಮೊಮ್ಮಗಳಲ್ಲಿ ಬಿತ್ತಿ ಬೆಳೆಸಿದ ರೀತಿ ಮತ್ತು ಆ ಮೊಮ್ಮೊಗಳಾದರೂ ತನ್ನ ಅಜ್ಜಿಯ ಆಸೆಯನ್ನು ಬಹಳ ಎತ್ತರಕ್ಕೆ ಈಗ ಕೊಂಡೊಯ್ದಿದ್ದಾಳೆ ಎನ್ನುವುದು ಕಾಕತಾಳೀಯವೋ ಋಣಾನುಬಂಧವೋ ತಿಳಿಯದೆ ಸೋಜಿಗಕ್ಕೆ ಬೀಳುವಂತಾಗುತ್ತದೆ. ಯಾಂತ್ರಿಕ ಯುಗದಲ್ಲಿ ಕಳೆದುಹೋಗುತ್ತಿರುವ ಮಾನವ ಸಂಬಂಧಗಳ ತಂತುವಿನಲ್ಲಿ ಇನ್ನೂ ಜೀವಂತಿಕೆ ಇದೆ, ಒಂದು ಸಣ್ಣ ಪ್ರೀತಿಯ ಹನಿ ಎರೆದರೂ ಅದು ಚಿಗಿತು ಬಲಿಷ್ಠವಾಗಬಲ್ಲದು ಎನ್ನುವ ಭರವಸೆಯ ಎಳೆಯೊಂದನ್ನು ಜತನವಾಗಿ ತೆಗೆದು ಈ ಪ್ರಬಂಧದ ಹೆಣಿಗೆಯ ಜರಿಯಂಚಾಗಿಸಿದಂತಿದೆ. ಓದುವ ನಮ್ಮ ಮನಸಿಗೆ ಲೇಖಕಿಯ ಸಾರ್ಥಕ ಭಾವವೂ ದಾಟುತ್ತದೆ. ಆದರೆ ಕೊನೆಗೆ ಲೇಖಕಿ ಅಜ್ಜಿಯ ನೆನೆಸಿಕೊಂಡು ಭಾವುಕರಾದಾಗ ಮಾತ್ರ ಓದುವ ನಮ್ಮ ಕಣ್ಣೂ ಒದ್ದೆಯಾಗದೆ ಇರದು.

ಇನ್ನು "ನಾಗಿಮಳ್ಳಿಯೊಳಗಿನ ಮಮತೆಯ ಸೆಲೆ" ಪ್ರಬಂಧದಲ್ಲಿನ ನಾಗಿಮಳ್ಳಿ ಸಖ್ಖತ್ ಕಾಡುತ್ತಾಳೆ. ಸಹಜ ತಾಯಿಯೊಬ್ಬಳನ್ನು ನಾಗಿಮಳ್ಳಿಯಾಗುವಂತೆ ಮಾಡಿದ ಕುಟುಂಬದವರ ಬಗ್ಗೆ ಆಕ್ರೋಶ ಹುಟ್ಟುವಂತೆ ಮಾಡುತ್ತದೆ. ಅವಳ ಆಕ್ರೋಶಕ್ಕೆ ಮಳ್ಳು ಎನ್ನುವ ಹೆಸರು ಕೊಟ್ಟ ಸಮಾಜ ಅವಳನ್ನು ಮರ್ಯಾದೆಯಿಂದ ಬದಕಲಂತೂ ಬಿಡಲಿಲ್ಲ. ಕೊನೆಗೆ ಅವಳ ಆಕ್ರೋಶ ಮತ್ತು ಮಳ್ಳುತನವೇ ಅವಳನ್ನು ಕಾಪಾಡಿದ್ದು. ಇಲ್ಲವಾಗಿದ್ದಿದ್ದರೆ ಈ ದುಷ್ಟ ಜನ ಅವಳನ್ನು ಹುರಿದು ಮುಕ್ಕಿರುತ್ತಿದ್ದರು. ಹೆಣ್ಣೊಬ್ಬಳು ತೀರಾ ಈ ಮಟ್ಟದ ಶೋಷಣೆಗೆ ಒಳಪಡುವ ಪರಿಸ್ಥಿತಿಯ ಬಗ್ಗೆ ಒಂದು ಧಿಕ್ಕಾರವಿದೆ. ಸಮಸ್ಯೆಯ ಸ್ವರೂಪ ಬದಲಾಗಿರಬಹುದು, ಆದರೆ ಸಮಸ್ಯೆ ಇಗಲೂ ಇದೆ ಎನ್ನುವುದು ವಿಷಾದದ ಸಂಗತಿ. ಇಲ್ಲಿ ನಾಗಿಮಳ್ಳಿಯ ಮಳ್ಳು ನಿಜವಾ, ಅಭಿನಯವಾ ಎನ್ನುವ ಅನುಮಾನವೂ ಕಾಡುತ್ತದೆಯಾದರೂ ಅದೇ ಅವಳನ್ನು ಕಾಪಾಡಿದ್ದರಿಂದಾಗಿ ಅದೇನು ಮಹಾ ತಪ್ಪು ಅಂತಲೂ ಅನಿಸುವುದಿಲ್ಲ. ಮಳ್ಳುತನವಿದ್ದರೂ ಪುಟ್ಟ ಪುಟ್ಟ ಹೆಣ್ಣು ಮಕ್ಕಳ ಬಗ್ಗೆ ಅವಳಿಗಿದ್ದ ಮಮತೆ, ಕಾಳಜಿ ನೋಡುವಾಗ ಅವಳು ಏನೇನೆಲ್ಲಾ ಪಡಿಪಾಟಲು ಪಟ್ಟಿರಬಹುದು ಎನಿಸಿ ನೋವಾಗುತ್ತದೆ. ಅಷ್ಟೂ ಅನಿಸದಿದ್ದರೆ ಅದು ಸಭ್ಯ ಸಮಾಜಕ್ಕೇ ಆಗುವ ಅವಮಾನ ಅಲ್ಲವೇ...

ಹೀಗೆ ಮುಂದುವರಿಯುವ ಇಲ್ಲಿನ ಪ್ರತಿ ಪ್ರಬಂಧಗಳೂ ಅಂತಃಕರಣದಿಂದ ನೇರವಾಗಿ ಇಳಿದು ಬಂದಂತೆ ಹೃದಯಕ್ಕಿಳಿಯುತ್ತವೆ. ದಕ್ಷಿಣ ಕನ್ನಡದ ಹಚ್ಚ ಹಸಿರು ಪರಿಸರ, ಸಾಮಾಜಿಕ ಜೀವನ, ಸಂಸ್ಕೃತಿ, ಭಾಷೆಯ ಸೊಗಡು, ಮಾನವೀಯ ಸಂಬಂಧಗಳು ಎಲ್ಲವನ್ನೂ ನಾವು ಇಲ್ಲಿನ ಪ್ರತಿ ಪ್ರಬಂಧದಲ್ಲೂ ಬಲವಂತವಾಗಲ್ಲದೆ ಸಹಜವಾಗಿ ಬೆರೆತಿರುವುದನ್ನು ಕಾಣಬಹುದು. ನೂಲು ಒಂದೇ ಆದರೂ ವೈವೀಧ್ಯಮಯ ಉಡುಪು ಹೇಗೆ ತಯಾರಾಗುತ್ತದೋ ಹಾಗೆ ಭಾವವೆಂಬ ಗುಪ್ತಗಾಮಿನಿಯ ಸೆಲೆ ಒಂದೇ ಆದರೂ ವೈವೀಧ್ಯಮಯ ಅನುಭವಗಳು ಬರಹಗಳನ್ನು ಸಮೃದ್ಧವಾಗಿಸಿವೆ. ಯಾವುದೇ ತತ್ವ, ಆದರ್ಶಗಳ ಭಾರವಿಲ್ಲದೆ, ಇದ್ದದ್ದನ್ನು ಇದ್ದಷ್ಟೇ ಖಂಡಿತವಾಗಿ ದಾಖಲಿಸುವ ಕಲೆ ಶುಭಶ್ರೀಯವರಿಗೆ ಒಲಿದಿದೆ. ಅವರ ಭಾಷೆ ಬಹು ಸರಳ ಮತ್ತು ಗುರಿ ತಲುಪುವಷ್ಟು ನೇರ. ಹಾಗಾಗಿಯೇ ಇಲ್ಲಿನ ಎಲ್ಲ ಪ್ರಬಂಧಗಳೂ ಪುಸ್ತಕವನ್ನು ಕೆಳಕ್ಕಿಡದಂತೆ ಓದಿಸಿಕೊಳ್ಳುತ್ತವೆ. ಒಂದೇ ಒಂದು ತಕರಾರೆಂದರೆ, ಪ್ರಬಂಧಗಳ ಸಣ್ಣ ಗಾತ್ರ. ಇನ್ನೂ ಬೇಕು, ಇನ್ನೂ ಬೇಕು ಎನಿಸುತ್ತಿರುವಾಗಲೇ ಪ್ರಬಂಧ ಮುಗಿದುಹೋಗಿ ರಸಭಂಗವಾದಂತೆ ಅನಿಸಿಬಿಡುತ್ತದೆ (ಅದು ನನ್ನ ಮಿತಿಯೂ ಇರಬಹುದು). ಶುಭಶ್ರೀ ಇದನ್ನು ತಮ್ಮ ಮುಂದಿನ ಪುಸ್ತಕದಲ್ಲಿ ಸುಲಭವಾಗಿ ಮೀರಬಲ್ಲವರು. ಅವರಿಂದ ಇಂತಹ ಮತ್ತಷ್ಟು ಜೀವಂತಿಕೆಯ ಪ್ರಬಂಧಗಳು ಹೊರಬರಲಿ ಮತ್ತು ನಾವೆಲ್ಲ ಓದುವಂತಾಗಲಿ ಎಂದು ನಿಷ್ಕಲ್ಮಷವಾಗಿ ಆಶಿಸುತ್ತೇನೆ. ಈ ಸುಂದರ ಪುಸ್ತಕವನ್ನು 'ವೀರಲೋಕ' ಪ್ರಕಾಶನ, ಅಷ್ಟೇ ಆಪ್ತವಾಗಿ ಪ್ರಕಟಿಸಿದೆ. ಪ್ರಾಮಾಣಿಕ ಬರಹಗಳಿಗೆ ಸಲ್ಲಬೇಕಾದ ಮನ್ನಣೆ ಎಂಬಂತೆ ಇತ್ತೀಚೆಗಷ್ಟೇ ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನಕ್ಕೂ ಪಾತ್ರವಾಗಿದೆ.

-ಆಶಾ ಜಗದೀಶ್
ಅಂಕಣದ ಹಿಂದಿನ ಬರಹಗಳು:
ನಾವ್ಯಾಕೆ ಇನ್ನೊಬ್ಬರನ್ನು ಕಾಳಜಿಯಿಂದ ಓದಲಾರೆವು...

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...