Story

ಹರ ಕೊಲ್ಲಲ್ ಪರ ಕಾಯ್ವನೆ

"ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕೆ.ಎಸ್ ಗಂಗಾಧರ ಅವರ ‘ಹರ ಕೊಲ್ಲಲ್ ಪರ ಕಾಯ್ವನೆ’ ಕತೆ ನಿಮ್ಮ ಓದಿಗಾಗಿ...

ವಾರದ ದಿನವಾದ್ದರಿಂದ ಬೆಂಗಳೂರಿನಿಂದ ಮಂಜಾಲಕ್ಕೆ ಹೊರಟ ರೈಲಿನಲ್ಲಿ ಅಂತಹ ಜನಜಂಗುಳಿ ಇರಲಿಲ್ಲ. ಮುಖದ ತುಂಬಾ ಚಿಂತೆಯ ಗೆರೆಗಳನ್ನು ತುಂಬಿಕೊಂಡಿದ್ದ ಸಹದೇವ ನಾಡಿಗೇರ ಚೇರ್ ಕಾರಿನ ಖಾಲಿ ಇದ್ದ ಸೀಟೊಂದನ್ನು ಹಿಡಿದು ಕುಳಿತ.ರೈಲು ಬೋಗಿಯ ಹವಾ ನಿಯಂತ್ರಿತ ವ್ಯವಸ್ಥೆಯೂ ಕೂಡ ಅವನ ಮನಸ್ಸಿನ ತಾಪವನ್ನು ಕಡಿಮೆ ಮಾಡಿದಂತೆ ಕಾಣಲಿಲ್ಲ. ಪಕ್ಕದ ಸೀಟಿನಲ್ಲಿ ಸಫಾರಿ ಸೂಟು ಧರಿಸಿ ಕನ್ನಡಕದಾರಿ ಕಪ್ಪು ವರ್ಣದ ವ್ಯಕ್ತಿಯೊಬ್ಬರು ಆಸೀನರಾಗಿದ್ದರು.ನೋಡುವುದಕ್ಕೆ ಹಳೆಯ ಚಲನಚಿತ್ರದ ಖದೀಮನಂತೆ ಕಾಣುತ್ತಿದ್ದ ಆ ವ್ಯಕ್ತಿ ಕೈಯಲ್ಲಿ ಪ್ರಖ್ಯಾತ ದಾರ್ಶನಿಕರ ಪುಸ್ತಕವೊಂದನ್ನು ಹಿಡಿದುಕೊಂಡಿದ್ದರು.ಸಹದೇವನ ತೀವ್ರ ದುಗುಡದ ಮನಸ್ಥಿತಿ ಮತ್ತು ಚಡಪಡಿಕೆಯನ್ನು ನೋಡಿ ನಿದಾನವಾಗಿ ಮಾತಿಗೆಳೆದರು.ಎಲ್ಲಿಗೆ ಹೋಗುತ್ತಿದ್ದೀರಿ, ಏಕೆ ಹೋಗುತ್ತಿದ್ದೀರಿ ಮುಂತಾದ ಕುಶಲೋಪರಿ ಪ್ರಶ್ನೆಗಳನ್ನು ಕೇಳಿದರು.ಇದಕ್ಕೇ ಕಾಯುತ್ತಿದ್ದವನಂತೆ ಯಾರೊಡನೆಯಾದರೂ ತನ್ನ ಬೇಸರವನ್ನು ಹಂಚಿಕೊಳ್ಳುವ ತವಕದಲ್ಲಿದ್ದ ಸಹದೇವ ನಾಡಿಗೇರ ಮಾತಿನ ಸರಪಳಿಯನ್ನು ಶುರು ಮಾಡಿದ.

"ನನ್ನ ಮಗಳು ಮಂಜಾಲದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾಳೆ.ಈಗ ಮೂರನೇ ವರ್ಷ. ಅವಳ ನೀಟ್ ಸ್ಕೋರಿಗೆ ಬೆಂಗಳೂರಿನ ಖಾಸಗಿ ಕಾಲೇಜುಗಳಲ್ಲೇ ಸರ್ಕಾರಿ ಕೋಟಾದ ಸೀಟು ಸಿಗುತ್ತಿತ್ತು. ಆದರೆ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕ ಖುಷಿಯಲ್ಲಿ ಮಂಜಾಲಕ್ಕೆ ಸೇರಿಸಿದೆ.ಸಣ್ಣ ಪುಟ್ಟ ದೂರುಗಳನ್ನು ಹೇಳುತ್ತಿದ್ದಳು.ಅವೆಲ್ಲಾ ಇದ್ದದ್ದೇ ಅಂತ ನಾವೂ ಸುಮ್ಮನಿದ್ದೆವು.ಇತ್ತೀಚೆಗೆ ಅವಳ ವರಾತ ಹೆಚ್ಚಾಗಿದೆ. ನಿನ್ನೆ ಫೋನ್ ಮಾಡಿ ಗೋಳಾಡುತ್ತ ಓದನ್ನೇ ನಿಲ್ಲಿಸಿ ಮನೆಗೆ ಬಂದುಬಿಡುತ್ತೇನೆಂದು ಹೇಳಿದಳು.ಅದರಿಂದ ಗಾಬರಿಯಾಗಿ ಅವಳೊಡನೆ ಮಾತನಾಡಿ ಸಮಾಧಾನ ಪಡಿಸಲು ಮಂಜಾಲಕ್ಕೆ ಹೊರಟಿದ್ದೇನೆ.

ಹೆಸರಿಗೆ ಸರ್ಕಾರಿ ಕಾಲೇಜು ಸರ್.ಬಹುತೇಕ ಅಧ್ಯಾಪಕರು ಸರಿಯಾಗಿ ಪಾಠವನ್ನೇ ಮಾಡುವುದಿಲ್ಲವಂತೆ.ತಮ್ಮ ಖಾಸಗಿ ಕ್ಲಿನಿಕ್ಕುಗಳಿಗೆ ಹೋಗುವ ದಾವಂತದಲ್ಲಿ ಪಾಠ ಪ್ರವಚನಗಳನ್ನು ನಿರ್ಲಕ್ಷ್ಯ ಮಾಡುತ್ತಾರಂತೆ.ಎಲ್ಲರೂ ಮೆರಿಟ್ ವಿದ್ಯಾರ್ಥಿಗಳಾಗಿರುವುದರಿಂದ ಕಷ್ಟಪಟ್ಟು ಓದಿ ಪಾಸಾಗುತ್ತಿದ್ದಾರೆ. ನಾಲ್ಕೈದು ಜನ ಕೀಚಕರು ಸೇರಿಕೊಂಡು ಕಾಲೇಜಿನ ವಾತಾವರಣವನ್ನೇ ಹಾಳು ಮಾಡುತ್ತಿದ್ದಾರಂತೆ. ಇಂತಹ ಕೆಲವು ವೈದ್ಯರಿಗೆ ನೈತಿಕತೆಯೇ ಇಲ್ಲವೆಂದು ಮಗಳು ಹೇಳುತ್ತಿದ್ದಳು.

ಒಬ್ಬ ಅಧ್ಯಾಪಕ ಮಹಾಶಯರಿಗೆ ಇವಳ ಸೀನಿಯರ್ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಕ್ಕೆ ಶಿಕ್ಷೆಯಾಗಿತ್ತಂತೆ.ವಿಲಕ್ಷಣವಾಗಿ ವರ್ತಿಸುವ ಅವರನ್ನು ನೋಡುವುದಕ್ಕೇ ಭಯವಾಗುತ್ತದಂತೆ. ಶಸ್ತ್ರಚಿಕಿತ್ಸೆ ಮಾಡಲು ರೋಗಿಗಳು ಕಡ್ಡಾಯವಾಗಿ ಲಂಚ ನೀಡಬೇಕಂತೆ.ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಪಾಸು ಮಾಡಲು ಏನಾದರೂ ಕೊಡಲೇಬೇಕಂತೆ.ಯಾವಾಗಲೂ ಕೂಗಾಡುತ್ತಾ ಜೋರು ಮಾಡುತ್ತಾ ವಿದ್ಯಾರ್ಥಿಗಳಿಗೆ ನೈತಿಕತೆಯ ಪಾಠ ಮಾಡುತ್ತಾರಂತೆ. ಇದು ಹಾಸ್ಯಾಸ್ಪದವಲ್ಲವೆ.

ಮತ್ತೊಬ್ಬರು ಯಾವುದೋ ಪರೀಕ್ಷಾ ಹಗರಣದಲ್ಲಿ ಸಿಲುಕಿ ಜೈಲಿಗೆ ಹೋಗಿದ್ದರಂತೆ.ಇದರ ಬಗ್ಗೆ ಯಾವುದೇ ನಾಚಿಕೆ ಇಲ್ಲದ ಅವರು ಹುಡುಗಿಯರನ್ನು ವಿಪರೀತ ಪೀಡಿಸುತ್ತಾರಂತೆ.ತಮ್ಮ ಖಾಸಗಿ ಕ್ಲಿನಿಕ್ಕಿಗೆ ಗೂಗಲ್ ರಿವ್ಯೂ ಮಾಡಿ ಒಳ್ಳೆಯ ರೇಟಿಂಗ್ ನೀಡುವಂತೆ ಕಾಡುತ್ತಾರಂತೆ.ಅವರ ಮಾತನ್ನು ಕೇಳದಿದ್ದರೆ ಹುಡುಗಿಯರ ಮೊಬೈಲ್ ಕಿತ್ತುಕೊಂಡು ಅವರೇ ತಮ್ಮ ಕ್ಲಿನಿಕ್ಕಿಗೆ ಒಳ್ಳೆಯ ರೇಟಿಂಗ್ ಕಳಿಸಿಕೊಂಡು ಖುಷಿ ಪಡುತ್ತಾರಂತೆ.ವಿದ್ಯಾರ್ಥಿಗಳ ವಲಯದಲ್ಲಿ ಇದೊಂದು ಕಾಮಿಕ್ ವಿಷಯವಾಗಿದೆಯಂತೆ. ಸ್ನಾತಕೋತ್ತರ ವಿದ್ಯಾರ್ಥಿಗಳ ಪಾಡು ಹೇಳ ತೀರದು. ಸಣ್ಣ ಪುಟ್ಟ ಶಸ್ತ್ರ ಕ್ರಿಯೆಗಳನ್ನು ಕಲಿಸುವ ನೆಪದಲ್ಲಿ ಅವರ ಮೈಕೈಗಳನ್ನು ಎಲ್ಲೆಲ್ಲೋ ಮುಟ್ಟಿ ವಿಕೃತ ಆನಂದವನ್ನು ಅನುಭವಿಸುತ್ತಾರಂತೆ.

ಮತ್ತೊಬ್ಬ ಹಿರಿಯ ಅಧ್ಯಾಪಕರು ತಮ್ಮ ಮಗಳಿಗೆ ಸರಿಯಾಗಿ ಓದಿಸಲಾಗದೆ ಯಾವುದೋ ಹಠಕ್ಕೆ ಬಿದ್ದು ಸುಳ್ಳು ಸರ್ಟಿಫಿಕೇಟ್ ಪಡೆದು ಮಗಳನ್ನು ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ಸಿಗೆ ಸೇರಿಸಿದ್ದಾರಂತೆ. ಇದು ವ್ಯಾಪಕವಾಗಿ ಸುದ್ದಿಯಾದರೂ ಏನೂ ಆಗಿಲ್ಲವೆಂಬಂತೆ ಪ್ರಾಮಾಣಿಕತೆಯ ಸೋಗು ಹಾಕಿಕೊಂಡು ನಿರಾಳವಾಗಿದ್ದಾರಂತೆ.ಈಗ ಜಾತಿಯ ಏಕೈಕ ಕಾರಣದಿಂದ ಆಸ್ಪತ್ರೆಯ ಚೀಫ್ ಸರ್ಜನರಾಗಿ ಅವ್ಯಾಹತವಾಗಿ ದುಡ್ಡು ಬಾಚುತ್ತಿದ್ದಾರಂತೆ.ಅನಗತ್ಯವಾಗಿ ಹೆಣ್ಣು ಮಕ್ಕಳ ಮೈ ಮೇಲೆ ಕೈ ಹಾಕಿ ಮಾತನಾಡಿಸುವ ದುರಭ್ಯಾಸವಿರುವ ಇವರ ಛೇಂಬರಿಗೆ ಹೆಣ್ಣು ಮಕ್ಕಳು ಹೋಗುವುದಕ್ಕೇ ಹಿಂಜರಿಯುತ್ತಾರಂತೆ.ಏನಾದರೂ ಕೆಲಸವಿದ್ದರೆ ಹುಡುಗರನ್ನೇ ಕಳಿಸುತ್ತಾರಂತೆ. ಆಸ್ಪತ್ರೆಯ ದುರುಳರಿಗೆಲ್ಲ ಈ ಚೀಫ್ ಸರ್ಜನರು ಗಾಡ್ ಫಾದರ್ ರೀತಿ ರಕ್ಷಕರಾಗಿದ್ದಾರಂತೆ.

ಕೆಲವು ಅಧ್ಯಾಪಕರಿಗೆ ಪರೀಕ್ಷೆಯಲ್ಲಿ ಪಾಸಾಗಲು ಹಣ ನೀಡಲೇಬೇಕಂತೆ. ಆಂತರಿಕ ಮೌಲ್ಯ ಮಾಪನಕ್ಕೂ ಉಡುಗೊರೆಗಳನ್ನು ನಿರೀಕ್ಷಿಸುತ್ತಾರಂತೆ.

ಈ ಎಲ್ಲಾ ರಂಪಾಟಗಳನ್ನು ಅನುಭವಿಸಿ ಹೇಸಿಗೆಯಾಗಿ ಮಗಳು ವೈದ್ಯಕೀಯ ಕೋರ್ಸನ್ನು ಅರ್ಧಕ್ಕೇ ನಿಲ್ಲಿಸಿಬಿಡುತ್ತೇನೆಂದು ಹೇಳುತ್ತಿದ್ದಾಳೆ.ಇವರೆಲ್ಲ ಮನುಷ್ಯರಾ ಸರ್. ಹೊಟ್ಟೆಗೆ ಏನು ತಿನ್ನುತ್ತಾರೋ ಗೊತ್ತಿಲ್ಲ. ಪಾಠ ಹೇಳುವ ಸ್ಥಾನದಲ್ಲಿರುವವರೇ ಇಷ್ಟು ಕುಲಗೆಟ್ಟು ಹೋಗಿರುವಾಗ ಸರ್ಕಾರಿ ವ್ಯವಸ್ಥೆಯನ್ನು ಯಾರು ಕಾಪಾಡುತ್ತಾರೆ ಸರ್. ಹರ ಕೊಲ್ಲಲ್ ಪರ ಕಾಯ್ವನೇ ಎಂಬಂತಾಗಿದೆ ಮಂಜಾಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸ್ಥಿತಿ. ಅದರಲ್ಲೂ ಹೆಣ್ಣು ಮಕ್ಕಳ ಪಾಡಂತೂ ಹೇಳತೀರದು.ನೀಚರೆಲ್ಲಾ ಒಂದಾಗಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದರೂ ಸಜ್ಜನರು ನೋಡಿಕೊಂಡು ಸುಮ್ಮನೆ ಇರುವುದು ಈ ವ್ಯವಸ್ಥೆಯ ದುರಂತವೇ ಸರಿ"

ಸಹದೇವನ ನಿರರ್ಗಳ ವಾಗ್ಝರಿಯ ಹರಿತವನ್ನೂ ಆರ್ಭಟವನ್ನೂ ತುಂಡರಿಸುವಂತೆ ಪಕ್ಕದಲ್ಲಿರುವ ವ್ಯಕ್ತಿ ತನ್ನ ಕೈಯಲ್ಲಿದ್ದ ದಾರ್ಶನಿಕರ ಪುಸ್ತಕವನ್ನು ಮುಚ್ಚಿಕೊಳ್ಳುತ್ತಾ "ನಾನು ಡಾ.ಪದ್ದಪ್ಪ. ಮಂಜಾಲದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಚೀಫ್ ಸರ್ಜನ್" ಎಂದು ಹೇಳಿದರು.

ಸಹದೇವನ ಬಾಯಿ ಒಮ್ಮೆಲೇ ಸ್ತಬ್ಧವಾಯಿತು.ಟಾಯ್ಲೆಟ್ಟಿಗೆ ಹೋಗುವ ನೆಪದಲ್ಲಿ ಎದ್ದವನು ಸೀದಾ ರೈಲು ಬೋಗಿಯ ಬಾಗಿಲ ಬಳಿ ಹೋಗಿ ಮುಂದಿನ ನಿಲ್ದಾಣದಲ್ಲಿ ಇಳಿದ.ತಾನು ಪಕ್ಕದ ವ್ಯಕ್ತಿಯೊಡನೆ ಆಡಿದ ಮಾತುಗಳೆಲ್ಲವನ್ನೂ ಮತ್ತೊಮ್ಮೆ ನೆನಪಿಸಿಕೊಂಡ.ಎಲ್ಲೂ ತನ್ನ ಹೆಸರನ್ನಾಗಲೀ ಅಥವಾ ಮಗಳ ಹೆಸರನ್ನಾಗಲೀ ಉಚ್ಚರಿಸದೇ ಇರುವುದನ್ನು ಖಾತರಿ ಪಡಿಸಿಕೊಂಡ.ತನ್ನ ಮಗಳ ಐಡೆಂಟಿಟಿ ಗೊತ್ತಾಗದೆ ಇರುವುದರಿಂದ ಅವಳನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡುವುದು ಸಾಧ್ಯವಿಲ್ಲವೆಂಬುದನ್ನು ನೆನೆದು ಖುಷಿ ಪಟ್ಟ.

ಸಹದೇವ ತನ್ನ ಮಗಳನ್ನು ಮಂಜಾಲದ ಕಾಲೇಜಿಗೆ ಸೇರಿಸಲು ಹೋದಾಗ ಡಾ.ಪದ್ದಪ್ಪನವರನ್ನು‌ ನೋಡಿದ್ದ. ಬೆಂಗಳೂರಿನಲ್ಲಿ ರೈಲು ಬೋಗಿಯನ್ನು ಹತ್ತಿದ ಕೂಡಲೇ ಅವರನ್ನು ಗುರುತು ಹಿಡಿದಿದ್ದ.ಉದ್ದೇಶಪೂರ್ವಕವಾಗಿ ಅವರ ಪಕ್ಕದ ಸೀಟಿನಲ್ಲಿ ಕುಳಿತು ಅಚಾನಕ್ಕಾಗಿ ತನಗೆ ಸಿಕ್ಕ ಅವಕಾಶವನ್ನು ಹೀಗೆ ಬಳಸಿಕೊಂಡಿದ್ದ. ತಕ್ಷಣಕ್ಕೆ ತಾನು ಆಡಿದ ತರ್ಕಬದ್ಧವಾದ ಮತ್ತು ಸಮಯೋಚಿತವಾಗಿ ಮರ್ಮಕ್ಕೆ ತಾಗುವಂತಿದ್ದ ಮಾತುಗಳನ್ನು ನೆನೆದು ಪುಳಕಗೊಂಡ.ತನ್ನ ಮಗಳಿಗೆ ಈ ರೀತಿ ವಾಟ್ಸ್ಆಪ್ ಸಂದೇಶ ಕಳಿಸಿದ "ನಿಶ್ಚಿಂತೆಯಿಂದ ಇರು. ನಿಮ್ಮ ಕಾಲೇಜಿನಲ್ಲಿ ಯಾರಿಗೆ ಬುದ್ದಿ ಕಲಿಸಬೇಕಾಗಿತ್ತೋ ಅಂತವರಿಗೆ ಒಂದು ಹಂತಕ್ಕೆ ವಿಷಯವನ್ನು ಮುಟ್ಟಿಸಿದ್ದೇನೆ.ಸ್ವಲ್ಪ ದಿನ ಏನೂ ತೊಂದರೆ ಇರುವುದಿಲ್ಲವೆಂಬ ಭರವಸೆ ಇದೆ. ಮನೆಗೆ ಬಂದಾಗ ಉಳಿದದ್ದನ್ನು ಮಾತನಾಡುವ"

ಸಹದೇವ ನಾಡಿಗೇರ ಸ್ವಲ್ಪ ನಿರಾಳತೆಯಿಂದ ಬೆಂಗಳೂರಿಗೆ ವಾಪಸು ಹೋಗುವ ರೈಲಿಗೆ ಕಾಯುತ್ತಾ ಪ್ಲ್ಯಾಟ್ ಫಾರಂನಲ್ಲೇ ಕುಳಿತ.

- ಡಾ.ಕೆ ಎಸ್ ಗಂಗಾಧರ

ಕೆ.ಎಸ್ ಗಂಗಾಧರ

ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author