Poem

ಬೆಳ್ಳಿಚುಕ್ಕಿ

ಬೆಳಗಿನ ಝಾವದ ಭೀಕರ ಶಾಂತಿ
ಕಮಟು ಹಿಲಾಲಿನ ವಿಕಾರ ಕಾಂತಿ
ಏರುಮುಖದ ಕೊಳವೆಯುಸುರಿತು
ತೋಪಾಗಿದ್ದರೆ ಸಿಡಿದು ಬಿಡುತ್ತಿದ್ದೆ.

ಎದೆಗೊಟ್ಟು ಬರದೇ ಯುದ್ಧಭೂಮಿಯಲಡಿ
ಹೊಂಚುಸಂಚುಗಳಿಂದಲೇ ರಣತಂತ್ರ ಹೂಡಿ
ಉಂಡ ಮನೆಯ ಜಂತಿಯನು ಅಳೆಯುವ
ಬಿಳಿದೊಗಲಿನ ಬೆರ್ಚಪ್ಪರನು ದಹಿಸುತ್ತಿದೆ.

ಎಲ್ಲಿ? ಸ್ತಬ್ಧತೆಯ ಸೀಳುವ ದೃಢ ಹೆಜ್ಜೆಗಳು
ಕಟಿಸೂತ್ರದಿ ಬಂಧಿಯಾದವೇ ತೇಜಪುಂಜಗಳು
ತೊಲೆ ಗೋಡೆ ಬುರುಜುಗಳೆಲ್ಲ ತಲ್ಲಣಗೊಂಡಿವೆ
ಅರೆತೆರೆದ ಕಿಟಕಿ, ಬಾಗಿಲುಗಳತ್ತಿತ್ತ ಜೀಕುತಿವೆ.

ಅದೊಂದು ಮುಂಜಾನೆ ಕೊಳವೆಯದಿರು ಹೆಣ್ಣೆಂಗಸು
ನೀರವತೆಯ ತುಂಬ ಮೀರಸಾದಿಕನ ಗುಸುಗುಸು
ಧ್ರುವತಾರೆಯ ಬೆನ್ನಿಗೆ ಕೇತುವಿನ ಹೊಗೆಯಾದಿ
ಸ್ಫೋಟಗೊಂಡ ನೀಹಾರಿಕೆ ಭುವಿಯ ಮೈಗೆ ಬೂದಿ.

ಕಾರಬಾರಿ ಸರದಾರ ಕಾಲಾಳು ಶೇತ್‌ಸನದಿ
ಮದ್ದು ಗುಂಡುಗಳಿಗೆ ಕಲಬೆರಕೆಯ ಬೇಗುದಿ
ಪರಕೀಯ ಹೇಷಾರವ ಹೊರದಬ್ಬಿ ಹೆಡೆಮುರಿಗೆ
ಒರೆಗಳೆಯದ ಮೊಂಡಗತ್ತಿ, ತಲೆಯೊಳಗೆ ಬೈರಿಗೆ.

ಘೀಳಿಡುವ ಆನೆಗಳ ಮೈ ತುಂಬಿರಿಯುವ ಈಟಿ
ಖಜಾನೆಯ ಕರಗಿಸುವಾಸೆಗೆ ರಹದಾರಿ ಲೂಟಿ
ಕುಸಿದ ಸಿಂಹಾಸನದಡಿ ಮೊಳೆಯುವ ಕನಸು
ಸ್ವಾತಂತ್ರö್ಯದ ಸಸಿಗೆ ಬೊಗಸೆನೀರ ಹನಿಹನಿಸು

ಇಂದಲ್ಲ ನಾಳೆ ಬಂದೇ ಬರುವ ರಾಯಣ್ಣ
ತಾಯ್ನೆಲದ ಬಿತ್ತಿ ಬೆಳೆಯುವ ಮಣ್ಣ-
ನು ವೀರತಿಲಕವ ಮಾಡಿ ನೊಸಲಿಗೊತ್ತಿ
ಬಂಡೇಳುವ ತಲೆಯನೆತ್ತಿ, ರುದ್ರನಾಗಿ ಬಿಚ್ಚುಗತ್ತಿ

ಇನ್ನೇನು ಬರಲಿದೆ ಹೊಚ್ಚಹೊಸ ಬೆಳಗು
ಕಂಡು ಮರೆಯಾಗುವ ತವಕ ನಕ್ಷತ್ರಗಳಿಗು
ವೀರವನಿತೆಯ ಹೆಜ್ಜೆಗೆ ಕಾಯುತಿದೆ ಚುಕ್ಕಿ
ಕೊಳವೆಯಾಚೀಚೆ ಹೊಳೆಯುವೆರಡು ಬೆಳ್ಳಿಚುಕ್ಕಿ!

-ಚನ್ನಪ್ಪ ಅಂಗಡಿ

ಚನ್ನಪ್ಪ ಅಂಗಡಿ

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.  

ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.  

ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ.

ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಪೇಜಾವರ ಸದಾಶಿವವರಾವ್ (ಮುಂಬೈ) ಪ್ರಶಸ್ತಿ, ಪೆರ್ಲ ಕಾವ್ಯ (ಕಾಸರಗೋಡು-ಕೇರಳ) ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ನಗದು ಪುರಸ್ಕಾರ, ಬೆಟದೂರ ಪ್ರತಿಷ್ಠಾನ ಪ್ರಶಸ್ತಿ, ಸಂಗಮ ಸಾಹಿತ್ಯ ಪ್ರಶಸ್ತಿ (ಹುನಗುಂದ), ಅಸರ್ ಪುಸ್ತಕ ಪ್ರಶಸ್ತಿ, 'ಶ್ರೀಲೇಖಿಕಾ' ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 'ಹಣತೆ' ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸಂಕ್ರಮಣ ಕಥೆ ಹಾಗೂ ಕಾವ್ಯ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಸ್ಪರ್ಧೆಯ ಕಾವ್ಯ ಹಾಗೂ ಕಥಾ ಪ್ರಶಸ್ತಿ, ಸಂಯುಕ್ತ ಕರ್ನಾಟಕದ 'ವರ್ಷದ ಕಥೆ' ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ತರಂಗ ಕಥಾ ಸ್ಪರ್ಧೆಯಲ್ಲಿ “ಅತ್ಯುತ್ತಮ ಕಥೆ' ಪ್ರಶಸ್ತಿ, ತುಷಾರ ಕಥಾ ಪ್ರಶಸ್ತಿ, ವಿಜಯವಾಣಿ ದೀಪಾವಳಿ ಕಥಾ ಪ್ರಶಸ್ತಿ, ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ.

 

More About Author