ಇಲ್ಲಿನ ಲೇಖನಗಳೆಲ್ಲವೂ ನಮ್ಮ ಸುತ್ತಮುತ್ತ ನಡೆಯುವಂತಹ ವಿಷಯಗಳಿಗೆ ಸಂಬಂಧಪಟ್ಟಿದ್ದು


‘ಓದಿದ ತಕ್ಷಣ ನಮ್ಮದು ಅನಿಸಬೇಕು, ಮೊದಲಿನಿಂದ ಕೊನೆವರೆಗೂ ಒಂದೇ ಓಘದಲ್ಲಿ ಓದಿಸಿಕೊಂಡು ಹೋಗಬೇಕು ಎಂಬುದು ನನ್ನ ಒಂದು ಅಭಿಮತ’ ಎನ್ನುತ್ತಾರೆ ಮಂಗಳ ಎಂ. ನಾಡಿಗ್. ಅವರು ‘ಸುತ್ತ ಮುತ್ತ’ ಲೇಖನಗಳ ಸಂಕಲನಕ್ಕೆ ಬರೆದ ಲೇಖಕರ ಮಾತು ಇಲ್ಲಿದೆ.

ನಾನು ಮಂಗಳ ಎಂ ನಾಡಿಗ್. ಗೃಹಿಣಿ, ಬರಹಗಾರ್ತಿ, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಳ ತಾಲ್ಲೂಕಿನವಳು. ಪ್ರಸ್ತುತ ಬೆಂಗಳೂರು ನಿವಾಸಿ. ಡಿಪ್ಲೋಮ ಇನ್ ಬ್ಯಾಂಕಿಂಗ್ ಪೂರೈಸಿ, ಸಾಹಿತ್ಯದತ್ತ ಹೆಚ್ಚಿನ ಒಲವು ಬೆಳೆಸಿಕೊಂಡವಳು. ನನ್ನ ಬರವಣಿಗೆ ಪ್ರಾರಂಭವಾಗಿದ್ದು ಕಾಲೇಜಿನ ದಿನಗಳಲ್ಲಿ, ಕಥೆ, ಕವನ, ಲೇಖನ, ಚುಟುಕು, ಆಶುಕವನ, ಆಶುಕಥೆ, ಸಂಭಾಷಣೆ, ಶಿಶುಗೀತೆ, ಲಾವಣಿ, ಹಾಸ್ಯ ಬರಹ, ಪ್ರಹಸನ, ಜಾನಪದ ಶೈಲಿಯ ಕವನ ಹೀಗೆ ಎಲ್ಲಾ ವಿಧದ ಬರಹಗಳನ್ನು ಬರೆಯುತ್ತೇನೆ.

1997ರಲ್ಲಿ ಪ್ರಕಟವಾದ ಡಾ॥ ಎಚ್.ಎಸ್. ವೆಂಕಟೇಶಮೂರ್ತಿಯವರ "ಯುವ ಚಿಂತನ" ಪುಸ್ತಕದಲ್ಲಿ “ಯುವ ಜನಾಂಗದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ” ಎಂಬ ಶೀರ್ಷಿಕೆಯಡಿಯಲ್ಲಿ ನನ್ನ ಪ್ರಬಂಧ ಪ್ರಕಟವಾಗಿತ್ತು. ಇದರಿಂದ ಕಾಲೇಜು ದಿನಗಳಲ್ಲಿ ನನ್ನ ಒಂದು ಗುರುತಿಸುವಿಕೆ ಹಾಗೂ ಹೆಚ್ಚಿನ ಅವಕಾಶಗಳು ನನ್ನದಾಯಿತು. ಅಂತರ ಕಾಲೇಜು ಸ್ಪರ್ಧೆಗಳು, ಪೊಲೀಸು ಇಲಾಖೆಯವರು ನಡೆಸಿದ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ದೊರೆಯಿತು. ಅಲ್ಲದೇ, ಜೆಸಿ ಕ್ಲಬ್, ಗಣೇಶ ಇಟ್ಟ ಸ್ಥಳಗಳಲ್ಲಿ, ಯುವ ಸಂಘಗಳು ನಡೆಸಿದ ಸಮೂಹ ಗಾಯನ, ಆಶುಭಾಷಣ, ನಮ್ಮ ಕಾಲೇಜಿನಲ್ಲಿ ಏರ್ಪಡಿಸುತ್ತಿದ್ದ ಚರ್ಚಾಸ್ಪರ್ಧೆ, ರಂಗೋಲಿ, ಸಮೂಹ ನೃತ್ಯ, ಆಶುಕಥೆ, ಆಶುಕವನ ಇನ್ನೂ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದದ್ದಿದೆ. ದೀರ್ಘ ವಿರಾಮದ ನಂತರ ಮತ್ತೆ ಬರವಣಿಗೆ ಪ್ರಾರಂಭಿಸಿದ್ದು 2018ರಲ್ಲಿ. ಹಾಗೆ ಬರೆದ ಎಷ್ಟೋ ಬರಹಗಳು ಬೇರೆ ಬೇರೆ ಹೆಸರಿನಲ್ಲಿ, ಬೇರೆ ಬೇರೆ ರೀತಿಯ ವಿನ್ಯಾಸದಲ್ಲಿ, ಅಲ್ಪಸ್ವಲ್ಪ ಬದಲಾವಣೆ/ ತಪ್ಪುಗಳೊಂದಿಗೆ ವಾಟ್ಸಪ್ ನಲ್ಲಿ ತಿರುಗಿ ಬಂದದ್ದಿದೆ.

2019ರಲ್ಲಿ ಪಾಪ ಪಾಂಡು ಧಾರವಾಹಿಯ ಒಂದು ಸಂಚಿಕೆಯಲ್ಲಿ "ನಿಮ್ಮಿ ಮದುವೆ" ಎಂಬ ನನ್ನ ಕಥೆ ಆಯ್ಕೆಯಾಗಿ ಪ್ರಸಾರವಾಗಿದ್ದು ನನ್ನ ಬರವಣಿಗೆಗೆ ಇನ್ನಷ್ಟು ಸ್ಫೂರ್ತಿ ನೀಡಿತು. ಇಂತಹ ಒಂದು ಸದವಕಾಶ ನೀಡಿದ ಶ್ರೀಯುತ ಸಿಹಿಕಹಿ ಚಂದ್ರು ಸರ್ ಅವರಿಗೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ. 2022ರ ವಿಜಯವಾಣಿಯ ದೀಪಾವಳಿ ವಿಶೇಷಾಂಕದಲ್ಲಿ ಕವನ, ವಿನಯವಾಣಿ ದಿನಪತ್ರಿಕೆಯಲ್ಲಿ "ಭಾವವರ್ಷ" ಎಂಬ ಶೀರ್ಷಿಕೆಯಲ್ಲಿ ಅಂಕಣ ಬರಹ, ವಿಶ್ವವಾಣಿ, ಬಿ ಟ್ರೆಂಡ್ಸ್, ಅಪರಂಜಿ ಮಾಸಪತ್ರಿಕೆ, ನಯನ ಮಾಸಪತ್ರಿಕೆ, ಮಂಗಳ ವಾರಪತ್ರಿಕೆ, ವಿನಯವಾಣಿ ದಿನಪತ್ರಿಕೆ, ಚೆನ್ನೈನ ಲಹರಿ ಪತ್ರಿಕೆ, ರಾಯಚೂರಿನ ಸ್ಟೇಟ್ ಎಕ್ಸ್‌ಪ್ರೆಸ್ ದಿನಪತ್ರಿಕೆ, ಶಿವಮೊಗ್ಗದ ಅಜೇಯ ಸಂಜೆ ಪತ್ರಿಕೆ, ಭೀಮ ವಿಜಯ ಪತ್ರಿಕೆ, ಸಂಜೆ ತಂತಿ ಪತ್ರಿಕೆ, ಪಾಕ್ಷಿಕ ಇ ಪತ್ರಿಕೆ-ಲೇಖನಿಯಲ್ಲಿ ಕಥೆ, ಕವನ, ಲೇಖನಗಳು ಹಾಗೂ ಕರ್ಮವೀರ ವಾರಪತ್ರಿಕೆಯಲ್ಲಿ ಹನಿಗವನ ಪ್ರಕಟವಾಗಿದೆ. ಚಿಕ್ಕಮಗಳೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಬಿಡುಗಡೆಗೊಂಡ “ಶಿವಾಮೃತ" ಸ್ಮರಣ ಸಂಚಿಕೆಯಲ್ಲಿ, 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ "ನುಡಿ ಕಲಶ" ಸ್ಮರಣ ಸಂಚಿಕೆಯಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ನೆನಪಿನಲ್ಲಿ ಬಿಡುಗಡೆಯಾದ "ಜನಪದ" ಸ್ಮರಣ ಸಂಚಿಕೆಯಲ್ಲಿ ಲೇಖನಗಳು ಪ್ರಕಟವಾಗಿವೆ. ಕಥಾಗುಚ್ಚದ ಪಯೋನಿಧಿ-6 ಮತ್ತು ಪಯೋನಿಧಿ-2ರ ಚಿರಂತನ ಕಥಾಸಂಕಲನ ಮತ್ತು ಕವನ ಸಂಕಲನದಲ್ಲಿ ಕಥೆ- ಕವನ, ಬಿ ಟ್ರೆಂಡ್ಸ್‌ರವರ ರಾಷ್ಟ್ರ್ರನಿರ್ಮಾಣ ಹಾಗೂ ಕಥಾಸಂಗಮ ಪುಸ್ತಕಗಳಲ್ಲಿ ಕಥೆ, ಲೇಖನಗಳು ಪ್ರಕಟವಾಗಿದೆ. ಅನೇಕ ಕಥೆ, ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳು ದೊರೆತಿವೆ.

"ನಾನೇ ದೇವರಾದ ದಿನ" ಮತ್ತು "ಅನುಬಂಧ" ಈ ಎರಡು ಕಥೆಗಳು ಪರಂಪರಾ ಕ್ಲಬ್‌ಹೌಸ್‌ನಲ್ಲಿ ವಾಚನ, ವಿಮರ್ಶೆಗೆ ಒಳಪಟ್ಟಿವೆ. ಮುಖಪುಟ ಸಾಹಿತ್ಯದ ಅನೇಕ ಬಳಗಗಳಲ್ಲಿ ಪ್ರಶಸ್ತಿ ಪತ್ರಗಳು ದೊರಕಿವೆ. ಪ್ರಸ್ತುತ "ಕಥಾ ಕವನಗಳ ಸಂಕಲನ" ಎಂಬ ಫೇಸ್ಟುಕ್‌ನ ಸಾಹಿತ್ಯ ಬಳಗದಲ್ಲಿ ನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹೀಗೆ ಸಿಕ್ಕಿದ ಅವಕಾಶಗಳಲ್ಲಿ ಒಳ್ಳೆಯದು ಅನಿಸಿದ್ದನ್ನು ಕಣ್ಣಿಗೊತ್ತಿಕೊಂಡು ಗೌರವಿಸಿದ್ದೇನೆ. ಈ ಕೃತಿಯಲ್ಲಿ ಬರೆದ ಲೇಖನಗಳೆಲ್ಲವೂ ನಮ್ಮ ಸುತ್ತಮುತ್ತ ನಡೆಯುವಂತಹ/ ನಡೆದಂತಹ ವಿಷಯಗಳಿಗೆ ಸಂಬಂಧಪಟ್ಟಿದ್ದು. ನೋಡಿದ, ಕೇಳಿದ, ಸ್ವಂತ ಅನುಭವಗಳ ನಿಟ್ಟಿನಲ್ಲಿ ಸಹಜವಾಗಿ ಬರೆದದ್ದು. ಓದಿದ ತಕ್ಷಣ ನಮ್ಮದು ಅನಿಸಬೇಕು, ಮೊದಲಿನಿಂದ ಕೊನೆವರೆಗೂ ಒಂದೇ ಓಘದಲ್ಲಿ ಓದಿಸಿಕೊಂಡು ಹೋಗಬೇಕು ಎಂಬುದು ನನ್ನ ಒಂದು ಅಭಿಮತ. ನನ್ನದು ಆಡು ಭಾಷೆಯ ಸರಳ ಬರವಣಿಗೆ. ಈ ಶೈಲಿಯ ಬರವಣಿಗೆ ನನಗೆ ಒಳ್ಳೆಯ ಹೆಸರು, ಇನ್ನಷ್ಟು ಉತ್ತಮ ಅವಕಾಶಗಳನ್ನು ತಂದು ಕೊಟ್ಟಿದೆ. ನನ್ನ ಈ “ಸುತ್ತ ಮುತ್ತ” ಮೊದಲ ಕೃತಿಯನ್ನು ಪ್ರಕಟಿಸುವುದರಲ್ಲಿ ನೆರವಾಗಿದ್ದಲ್ಲದೆ ಜೊತೆಗೆ ಸಲಹೆ, ಸೂಚನೆಗಳನ್ನು ನೀಡಿ, ತಿದ್ದಿ, ಚೆಂದದ ಮುನ್ನುಡಿ ಬರೆದು ಸದಾ ನನ್ನ ಬರಹಕ್ಕೆ ಪ್ರೋತ್ಸಾಹ ನೀಡುತ್ತಿರುವ ಖ್ಯಾತ ಸಾಹಿತಿಗಳು, ಪ್ರಸಿದ್ದ ಅಂಕಣಗಾರರು ಆದಂತಹ ಶ್ರೀಯುತ ಎನ್. ರಾಮನಾಥ್ ಸರ್ ಅವರಿಗೆ ನಾನು ಆಭಾರಿ.

ತಮ್ಮ ಉಪ ಸಂಪಾದಕತ್ವದಲ್ಲಿ ಮೂಡಿಬರುತ್ತಿದ್ದ "ವಿನಯವಾಣಿ" ಕೊಪ್ಪಳ ಜಿಲ್ಲಾ ದಿನಪತ್ರಿಕೆಯಲ್ಲಿ ವಾರದ ಅಂಕಣ ಬರೆಯಲು ಅವಕಾಶ ನೀಡಿದ ಹಾಗೂ ಸದಾ ನನ್ನ ಬರಹಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಈ ಕೃತಿಗೆ ಚೆಂದದ ಆಶಯ ನುಡಿಯ ಮೂಲಕ ಹಾರೈಸಿದ ತಮ್ಮ ಶ್ರೀಯುತ ವಾಯ್ ಎಂ. ಕೋಲಕಾರ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮೂರಿನ (ಮಲೆನಾಡಿನ) ಹೆಮ್ಮೆಯ ವೈದ್ಯರು, ಬರಹಗಾರರು, ಸಮಾಜ ಸೇವಕರು ಆದಂತಹ ಶ್ರೀಯುತ ಡಾ. ಎಸ್ ಕೋದಂಡರಾಮ್ ಅವರು ನನ್ನ ಪ್ರತಿಯೊಂದು ಲೇಖನಗಳನ್ನು ಓದಿ ಪ್ರೋತ್ಸಾಹ ನೀಡಿದವರು. 'ಅಂಕಲ್ ಹೇಗಿದೆ, ಇದು ಸರಿ ಇದೆಯಾ/ಇಲ್ಲವಾ?' ಎಂದು ಕೇಳಿದಾಗ ತಪ್ಪು, ಒಪ್ಪು ತಿಳಿಸಿದವರು. ಕಥೆ, ಕವನ, ಲೇಖನ ಏನಾದರೂ ಇವರು ಮೊದಲು ಓದಿ ಸೈ ಎಂದರೆ ನನಗೆ ಒಂದು ರೀತಿಯ ಸಮಾಧಾನ. ಹೊತ್ತುಗೊತ್ತಿಲ್ಲದೇ, ಯಾವಾಗ ಮಾಹಿತಿ, ಅಭಿಪ್ರಾಯ ಕೇಳಿದರೂ ಒಂದು ಚೂರೂ ಬೇಸರಿಸದೆ ಸದಾ ನೀಡುವ ಪ್ರೋತ್ಸಾಹಕ್ಕೆ ಹಾಗೂ ಈ ಕೃತಿಗೆ ಚೆಂದದ ಆಶಯ ನುಡಿ ಬರೆದುಕೊಟ್ಟು ಹಾರೈಸಿದ ಶ್ರೀಯುತ ಡಾ. ಎಸ್ ಕೋದಂಡರಾಮ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

“ಶತಕೃತಿ" ಕರ್ತೃಗಳಾದ ಶ್ರೀಯುತ ಬೇಲೂರು ರಾಮಮೂರ್ತಿ ಸರ್ ಅವರು ಫೇಸ್ಟುಕ್‌ನಲ್ಲಿ ನನ್ನ ಬರಹ ಗುರುತಿಸಿ ಅವರ "ಅಪರಂಜಿ" ಮಾಸ ಪತ್ರಿಕೆಯಲ್ಲಿ ನನಗೆ ಬರಹದ ಅವಕಾಶ ನೀಡಿದವರು. ಅಪರಂಜಿ 40ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಪರಿಚಯಿಸಿದವರು. ಸದಾ ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಈ ಕೃತಿಗೆ ಚೆಂದದ ಬೆನ್ನುಡಿ ಬರೆದು ಹರಸಿ ಹಾರೈಸಿದ ಶ್ರೀಯುತ ಬೇಲೂರು ರಾಮಮೂರ್ತಿ ಸರ್ ಅವರಿಗೆ ನಾನು ಆಭಾರಿ. ನಾನು ನಂಬಿದ ಶ್ರೀ ಶೃಂಗೇರಿ ಶಾರದಾಂಬೆ ತಾಯಿ, ನನ್ನ ಇಷ್ಟ ದೇವರಾದ ಶ್ರೀಗಣೇಶ, ಶೃಂಗೇರಿ ಹಾಗೂ ಹರಿಹರಪುರ ಮಠದ ಪೂಜ್ಯ ಗುರುಗಳು ಮತ್ತು ನನ್ನ ತಂದೆತಾಯಿಗೆ ಈ ಚೊಚ್ಚಲ ಕೃತಿಯನ್ನು ಸಮರ್ಪಿಸುತ್ತಿದ್ದೇನೆ. ಇಂದು ಬರಹ ಕ್ಷೇತ್ರದಲ್ಲಿ ನಾನು ಇದ್ದೇನೆಂದರೆ ಅದಕ್ಕೆ ಬೆನ್ನುಲುಬಾಗಿ ನಿಂತವರು ನನ್ನ ಮಕ್ಕಳಾದ ಮೈತ್ರಿ ಎಂ ನಾಡಿಗ್ ಹಾಗೂ ಮೇಘ ಎಂ ನಾಡಿಗ್ ನನ್ನ ಬರಹದ ಮೊದಲ ಓದುಗರು/ ಕೇಳುಗರು, ಅಗತ್ಯ ಮಾಹಿತಿ ಒದಗಿಸುವವರು ಹಾಗೂ ಹಲವು ಲೇಖನ ಬರೆಯಲು ಕಾರಣಕರ್ತರಾದವರು. ನನ್ನ ಬರಹದ ಶಕ್ತಿ, ಪ್ರೇರಣೆ, ಸ್ಫೂರ್ತಿ, ನನ್ನ ಬದುಕಿನ ಸೆಲೆ ಎಲ್ಲವೂ ಇವರುಗಳೇ, ಹಾಗಾಗಿ ಈ ಸಂದರ್ಭದಲ್ಲಿ ನನ್ನ ಮುದ್ದು ಮಕ್ಕಳಿಬ್ಬರಿಗೂ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೆಯೇ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸುತ್ತಿರುವ ನನ್ನ ಯಜಮಾನರಾದ ಶ್ರೀಯುತ ಎಸ್. ಮಧು ನಾಡಿಗ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಬರಹಕ್ಕೆಂದೇ ಫೇಸ್ಟುಕ್‌ಗೆ ಬಂದವಳಿಗೆ ಸಮಾನ ಮನಸ್ಕರಿಂದ, ಹಿರಿಯ ಸಾಹಿತಿಗಳಿಂದ, ಸಾಹಿತ್ಯ ಬಳಗಗಳಿಂದ ಸಿಕ್ಕಿದ್ದು ಭರಪೂರ ಪ್ರೋತ್ಸಾಹ. ಆನೇಕರು ಫೇಸ್ಟುಕ್‌ನಲ್ಲಿ, ಪತ್ರಿಕೆಗಳಲ್ಲಿ ನನ್ನ ಬರಹ ಓದಿ, ಮೆಚ್ಚಿ, ಚೆಂದದ ಪ್ರತಿಕ್ರಿಯೆಯ ಮೂಲಕ ನೀಡಿದ ಪ್ರೋತ್ಸಾಹ ನನ್ನ ಬರವಣಿಗೆಗೆ ಇನ್ನಷ್ಟು ಸ್ಫೂರ್ತಿ ತುಂಬಿದೆ. ನನ್ನ ಲೇಖನಗಳನ್ನು ಓದಿ ಈ ಎಲ್ಲಾ ಲೇಖನಗಳು ಸಂಗ್ರಹ ಯೋಗ್ಯ, ಆದಷ್ಟು ಬೇಗ ಪುಸ್ತಕದ ರೂಪದಲ್ಲಿ ಹೊರಬರಲಿ ಎಂದು ಹಾರೈಸಿದವರು ಹಲವರು. ಈ ಕೃತಿ ಪ್ರಕಟಿಸಿದ ನ್ಯೂ ವೇವ್ ಬುಕ್ಸ್‌ನ ಶ್ರೀ ಬಿ.ಎಸ್. ಮಧು ಅವರಿಗೂ, ಪುಸ್ತಕಕ್ಕೆ ಅತ್ಯಂತ ಅರ್ಥಪೂರ್ಣ, ಮುಖಪುಟ ರಚಿಸಿದ ಮೈತ್ರಿ ಎಂ. ನಾಡಿಗ್ ಅವರಿಗೂ, ಪುಟವಿನ್ಯಾಸ ಮಾಡಿರುವ ಪೇಜ್ ಡಿಸೈರ್ನನವರಿಗೂ, ಸುಂದರ ಮುದ್ರಣವನ್ನು ಮಾಡಿಕೊಟ್ಟ ಸತ್ಯಾನಂದ ಪ್ರಿಂಟರ್ಸ್‌ನ ಸೋಮಶೇಖರ್ ಅವರಿಗೂ ನನ್ನ ಮನದಾಳದ ಕೃತಜ್ಞತೆಗಳು.

ನಿಮ್ಮೆಲ್ಲರ ಹಾರೈಕೆಯಂತೆ, ಸಹೃದಯರ ಸಹಕಾರದಲ್ಲಿ ಈ ಕೃತಿ ಪ್ರಕಟವಾಗುತ್ತಿದೆ. ನಿಮ್ಮೆಲ್ಲರ ಚೆಂದದ ಹಾರೈಕೆಗೆ, ನೀಡಿದ ಅನವರತ ಪ್ರೋತ್ಸಾಹಕ್ಕೆ ಮನದಾಳದ ವಂದನೆಗಳನ್ನು ತಿಳಿಸುತ್ತಾ ಮುಂದೆಯೂ ನಿಮ್ಮೆಲ್ಲರ ಪ್ರೋತ್ಸಾಹ, ಆಶೀರ್ವಾದ ನನ್ನ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,

-ಮಂಗಳ ಎಂ. ನಾಡಿಗ್

MORE FEATURES

ಅಂಧಶ್ರದ್ಧೆಯ ಕತ್ತಲ ದಾರಿಗೆ, ಬುದ್ಧ ಬೆಳಕು; ಮೋದೂರು ತೇಜ

31-12-1899 ಬೆಂಗಳೂರು

"ಬುದ್ದ, ಈ ಲೋಕ ಕಂಡಂತಹ ಅಪರೂದ ದಾರ್ಶನಿಕ. ಸಕಲ ಜೀವಿಗಳಿಗೆ ಒಳಿತನ್ನೇ ಬಯಸುವ ಕರುಣಾ ಮೂರ್ತಿ," ಎನ್ನತ್ತಾರ...

ಬಿಳಿ ಹಾಳೆಯ ಭಾವಗಳಿಗೆ ಕೆಂಪು ಶಾಯಿಯ ಅನಿಸಿಕೆಗಳು

23-05-2024 ಬೆಂಗಳೂರು

"ಸ್ವತಂತ್ರದ ಸೋಗಿನಲ್ಲಿ ಹೆಣ್ಣಿನ ಭಾವಗಳ ಬಂಧನದ ಕೀಲಿ ತೆರೆದಿದ್ದಾರೆ. ದೇಶ ಹಾಗೂ ನಾಡಿನ ಭಕ್ತಿಯನ್ನು ಮೆರೆದಿದ್ದ...

ಪೋರ್ಚುಗೀಸರ ಮತಾಂತರ ಪ್ರಯತ್ನಕ್ಕೆ ಅಡ್ಡಿಯಾಗಿದ್ದವಳು ಚೆನ್ನಾಭೈರಾದೇವಿ

23-05-2024 ಬೆಂಗಳೂರು

"ಧೀರ ವನಿತೆಯ ಜೀವನವನ್ನು ಆಧರಿಸಿ ನಾನು ಬರೆದ 'ಚೆನ್ನಾಭೈರಾದೇವಿ'- ಕರಿಮೆಣಸಿನರಸಿಯ ಅಕಳಂಕ ಚರಿತೆ ಎಂಬ ...