ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ


“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ಜೀವಪರ ಸಂವೇದನೆ ಇಲ್ಲಿ ನಿರಾಯಾಸವಾಗಿ ಹೊಮ್ಮಿದೆ ಎನ್ನುತ್ತಾರೆ ಚಿಂತಾಮಣಿ ಕೊಡ್ಲೆಕೆರೆ. ಅವರು ಮಂಗಳ ಎಂ ನಾಡಿಗ್ ಅವರ ‘ಪ್ರೀತಿಯ ಚಿಟ್ಟೆಯ ಬೆನ್ನೇರಿ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

"ತಿಳಿನೀರ ಕೊಳ"

ಶ್ರೀಮತಿ ಮಂಗಳ ಎಂ ನಾಡಿಗರದು ಮುಗ್ಧ ಭಾವನೆಗಳ ಕಾವ್ಯ ಪ್ರಪಂಚ. ಇಷ್ಟು ಕರ್ಕಶವಾದ ಈ ಲೋಕದಲ್ಲಿ ಮೃದು ಮಧುರವಾದ ಭಾವನೆಗಳು ಇನ್ನೂ ಉಳಿದಿವೆಯೇ ಎಂದು ಅಚ್ಚರಿ ಪಡುವಷ್ಟು ಅವರ ಭಾವನೆಗಳು ಸರಳ ಸುಂದರವಾಗಿವೆ. ಹೂವು, ಹಕ್ಕಿ, ಕಾಡು, ನದಿ, ಚಂದ್ರ, ಸೂರ್ಯ, ನಕ್ಷತ್ರ, ನೀಲಾಕಾಶ, ಬೆಳದಿಂಗಳಿಂದ ತುಂಬಿದ ರಮ್ಯ ಲೋಕವದು. ಒಲಿದ ಗಂಡು, ಹೆಣ್ಣುಗಳ ಮನದ ಭಾವಲಹರಿಗಳು ತಂಗಾಳಿಯಂತೆ ಅಲ್ಲಿ ಸುಳಿದಾಡುವವು. ಒಲಿದವರು ನಲಿದು ಕಟ್ಟಿರುವ ಪುಟ್ಟ ಕುಟುಂಬ ಅಲ್ಲಿದೆ. ಮಗುವಿದೆ, ಮೊಮ್ಮಗುವಿದೆ, ಅವರ ನಗುವಿದೆ. ಕುಟುಂಬ ಮೌಲ್ಯವನ್ನು ನಿಷ್ಕಲ್ಮಷ ಪ್ರೀತಿಯಿಂದ ಉಳಿಸುತ್ತಿರುವ ಹೆಣ್ಣುಮಕ್ಕಳ ಹೃದಯವಂತಿಕೆಯೇನಾದರೂ ಬರಡಾದರೆ ಏನು ಗತಿ? ಸರಳ ಹೃದಯದ ತಾಯಿಯರ ಪ್ರೇಮ, ಮಮತೆ, ಲಾಲನೆ, ಪಾಲನೆಗಳಿಂದ ಕುಟುಂಬ ವ್ಯವಸ್ಥೆ ಉಳಿದಿದೆ. ಮಂಗಳ ಈ ಇಂಥ ಲಕ್ಷಾಂತರ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ನನಗೆ ಕಾಣುತ್ತಾರೆ. ಅಲ್ಲಿ ಸೋಗಿಲ್ಲ, ಕಾವ್ಯ ಸಿದ್ಧಾಂತಗಳ ಜಂಜಡವಿಲ್ಲ, ಪ್ರತಿಭಟನೆಯ ರೌದ್ರಾವತಾರವಿಲ್ಲ, ಬದಲಾಗಿ ಎಡೆ ಸಿಕ್ಕಲ್ಲಿ ಚಿಗುರುವ ಗಿಡದ ಗುಣವಿದೆ, ಎಂಥ ತಾಮಸಿಯನ್ನೂ ತನ್ನ ಪ್ರೀತಿಯಿಂದ ಕರಗಿಸುವ ಕಲಾತ್ಮಕತೆ ಇದೆ. ‘ನಾನು ಒಲಿದಂತೆ ಹಾಡುವೆ’ ಎಂದು ಅವರು ಹೇಳುವುದೂ ಇಲ್ಲ, ಹಾಗೆ ಬರೆಯುತ್ತಾರೆ. “ಕವಿಯ ಮಾಡೆನ್ನ” ಎಂಬ ಅವರ ಕವಿತೆ ನೋಡಿ:

ಹರಿವ ನೀರಿನ
ಮೊರೆತ ಕೇಳುತ
ಹರನ ಗಂಗೆಯ
ಜಟೆಯ ನೆನೆಯುತ
ಚಿಮ್ಮೊ ನೀರಲಿ
ಪದವ ಹುಡುಕುವ ಕವಿಯ ಮಾಡೆನ್ನ

ಮೇಲಿನ ಸಾಲುಗಳಲ್ಲಿ ಮೊದಲಿಗೆ ಕೇಳುವುದು ನೀರಿನ ಮೊರೆತದ ಸದ್ದು. ಆ ಭೋರ್ಗರೆತದೊಡನೆ ಗಂಗಾವತರಣ ಮತ್ತು ಹರನ ಜಟೆ ಸ್ಮೃತಿಯಲ್ಲಿ ಮೂಡುವುದು ಸಂತಸ ಕೊಡುವಂತಿದೆ. (‘ನೆನೆಯುತ’ ಎಂಬ ಪದಕ್ಕಿರುವ ‘ಒದ್ದೆಯಾಗುತ’ ಎಂಬರ್ಥವನ್ನೂ ಸೇರಿಸಿಕೊಂಡರೆ ಈ ಸಾಲುಗಳ ಸವಿ ಇನ್ನಷ್ಟು ಹೆಚ್ಚುತ್ತದೆ). ಈ ಕವಿ ಚಿಮ್ಮುವ ನೀರಲ್ಲಿ ಪದ ಹುಡುಕುತ್ತಿದ್ದಾಳೆ. ತನ್ನ ಕವಿತೆ ನಿಸರ್ಗದ ಯಾವುದೇ ಸಂಗತಿಯಷ್ಟು ಸಹಜವಾಗಿರಬೇಕು ಎಂದವರು ಬಯಸುತ್ತಿರುವ ಹಾಗಿದೆ. ಪ್ರಕೃತಿಯ ಚೆಲುವಿಗೂ, ಅದರ ಗಾಢ ತನ್ಮಯ ಇರುವಿಕೆಗೂ ಮನಸೋತ ಕಾವ್ಯ ಅವರದು. “ಸರಳ ಪದಗಳ ಸವಿದು ಬರೆಯುವ ಕವಿಯ ಮಾಡೆನ್ನ” ಎಂಬುದು ಈ ಪದ್ಯದ ಕೊನೆಯ ಸಾಲು. ಈ ಹಂಬಲದಲ್ಲಿ ಅವರು ಸಾಕಷ್ಟು ಯಶಸ್ಸು ಪಡೆದಿದ್ದಾರೆ.

ಕೌಟುಂಬಿಕತೆಯನ್ನು ಒಪ್ಪುವ, ಬೆಳೆಸುವ, ಆರಾಧಿಸುವ ಕವಿ ಇವರು. ಅದು ಪ್ರೀತಿಯಿಂದಲೇ ಉಳಿಯುವುದು, ಬೆಳೆಯುವುದು. ಸಂಕಲನದ ಮೊದಲ ಕವಿತೆ ‘ಒಲವಧಾರೆ’ಯ ಆರಂಭದ ಸಾಲುಗಳನ್ನು ಗಮನಿಸಿ. ಅವು ತನ್ನ ಕವಿತೆಯ ಕುರಿತು ಈ ಕವಿ ಹೇಳುವ ಮಾತುಗಳೂ ಕೂಡ ಹೌದು:

ನಿನ್ನ ಸ್ಫೂರ್ತಿ ಭಾವ ತುಂಬಿ
ಬರೆದೆನೊಂದು ಕವಿತೆ
ಎನ್ನ ಮನದ ಒಲವ ತುಂಬಿ
ಹಚ್ಚಿದೊಂದು ಹಣತೆ

ಒಂದು ಹಣತೆ ಸೂರ್ಯನಲ್ಲ, ಚಂದ್ರನಲ್ಲ, ಆದರೆ ಅದು ಹೊಮ್ಮಿಸುತ್ತಿರುವುದು ಬೆಳಕೇ. ಸುತ್ತಲಿನ ಕತ್ತಲನ್ನು ತನ್ನಿಂದಾದ ಮಟ್ಟಿಗೆ ದೂರ ಮಾಡಲು ಅದು ಶಕ್ತ. ನಿರೂಪಕಿಯ ಅಂತರಂಗ ಇನಿಯನಿಗೆ ಸಲ್ಲಿಸುತ್ತಿರುವ ಈ ಪುಟ್ಟ ದೀಪದ ಕುರಿತು ಅವಳದೊಂದು ಮನ ಮುದಗೊಳಿಸುವ ಮಾತು: “ನಿನ್ನ ಕಣ್ಣ ಹೊಳಪಿನಲ್ಲೆ, ಹಣತೆಯು ತಾ ಬೆಳಗಿದೆ”. ಇದು ಕವಿತೆಗೊಲಿದ ಸಹೃದಯನ ಕಣ್ಣ ಹೊಳಪಾಗಿಯೂ ನನಗೆ ಕಾಣಿಸಿತು.

ಮುಂದಿನ ಕವಿತೆಯಲ್ಲಿ ತುಸುವೂ ತಾಳ್ಮೆಯಿಲ್ಲದ ಇನಿಯ ಹೊಳೆದಡದಲ್ಲಿ ತನ್ನ ಸಖಿಗಾಗಿ ಕಾಯುತ್ತ, ತಿಳಿನೀರಿಗೆ ಕಲ್ಲೆಸೆಯುತ್ತ ಕುಳಿತಿದ್ದಾನೆ. ಉರಿವ ಸೂರ್ಯನಂತಿರುವ ಅವನಿಗಾಗಿ ಗೆಳತಿ ಓಡಿ ಬರುತ್ತಿದ್ದಾಳೆ. ಅವಳು ಬಲ್ಲಳು, ಆತ ‘ಸನಿಹದಲಿ ನಾನಿರಲು ಚಂದಿರನ ತಂಪು’. ಅವನಿಗಾಗಿ ಓಡುವ ಆಯಾಸದಲ್ಲೂ ಅವಳಿಗೆ ಹಿತವಾದ ನೋವಿದೆ. ಆದ್ದರಿಂದಲೇ ಈ ಕವಿತೆ ಇವರಿಬ್ಬರಿಗೂ ‘ಕಾತರ’ದ್ದು. ‘ಒಲವಿನೂರ ಸಂತೆಯಲಿ’ ಇನ್ನಷ್ಟು ಭಾವಗೀತಾತ್ಮಕವಾಗಿ ಇಂಥ ಪ್ರೇಮಿಗಳ ಹೃದಯದ ಮಿಡಿತಗಳನ್ನು ಅಭಿನಯಿಸಿ ತೋರುತ್ತಿದೆ. ಒಲಿದ ಜೀವಗಳ ಸಂಬಂಧದ ಇನ್ನೊಂದು ಕವಿತೆ ‘ಮಾತಾಡದೆ’ ನಾವು ಗಮನಿಸಲೇಬೇಕಾದುದು:

ಮನದ ಭಾವನೆಗಳ ತುಂಬಿ,
ಬರೆದ ಚಿತ್ರದ ತೆರದಿ
ನೀ ಬಹಳ ಹೇಳಿದೆ- ಮಾತಾಡದೆ!

ಅಂದರೆ ಇಲ್ಲಿ ಪ್ರಿಯಕರ ಅದೇಕೋ ಮಾತಾಡದೆ ಕೂತಿದ್ದಾನೆ. ಅದು ಇವಳಿಗೆ ‘ಬರೆದ ಚಿತ್ರ’ದಂತೆ ಕಾಣುವುದು ಸೊಗಸು. ಅದು ಸರಿಯೆ, ಆದರೆ ಸನಿಹವೇ ನಾನಿರಲು, ಮುತ್ತಂಥ ಮಾತಿರಲು ಮಾತಾಡದಿರುವುದೇಕೆ? ಮಾತಿನ ಬಗೆಗೆ ಅದೆಷ್ಟು ವಿಶ್ವಾಸ, ಅದೂ ಮುತ್ತಿನಂತಿರುವ ಮಾತು! ಮಾತಿನ ಬಗೆಗೆ, ಅದು ಮುತ್ತಿನಂಥದು ಎಂಬ ಬಗೆಗೆ ಎಂಥ ಅದಮ್ಯ ವಿಶ್ವಾಸ! ಅದಲ್ಲದೇ ಸನಿಹವೇ ನಾನಿರುವೆ, ಮಾತಿಗೆ ಇದಕ್ಕಿಂತ ದೊಡ್ಡ ಕಾರಣ ಬೇಕೇ? ಹೀಗೆ ಇದೊಂದು ಅದಮ್ಯ ಪ್ರೀತಿ, ಕನಸುಗಳೇ ತುಂಬಿರುವ ಲೋಕ.

ರಾತ್ರಿ ಕಂಡ ಕನಸಿಗೆ ಬಣ್ಣ ಬೆರೆಸಿ ತುಂಬಲು ‘ನಾಳೆಗೊಂದು ಹಾಳೆಯಿರಲಿ’ ಈ ಮಾತು ಅದೆಷ್ಟು ಹೊಸದಾಗಿ ಕೇಳುತ್ತಿದೆ!

ಹದಿಹರಯದ ಹುಡುಗಿಯನ್ನು ಕೋಲ್ಮಿಂಚಿನಂಥ ನೋಟದಿಂದ ಸೆಳೆದುಬಿಟ್ಟವನ ಕುರಿತು ಮನ ತುಂಬಿ ಹಾಡುವ ಕವಿತೆ “ಕೋಲ್ಮಿಂಚು”. ಈ ಕವಿತೆಯ ಮುಂದುವರಿಕೆಯಾಗಿಯೂ ‘ತಿಳಿನೀರ ಕೊಳ’ವನ್ನು ಓದಬಹುದಾಗಿದೆ. ಒಲಿದವನ ಕಣ್ಣೋಟ ಎದೆಯ ಕೊಳವನ್ನು ಕಲಕಿ, ಕುಲುಕಿ ಬಳಿಕ ಅಲ್ಲಿಯೇ ನೈದಿಲೆಗೆ ಚಂದಿರನೂ ಕಂಡು ನೀರು ತಿಳಿಯಾಗಿದೆ! ‘ನೀಡೋದು ಶೀರ್ಷಿಕೆ’ ಸಹ ಇಂಥದೇ ಒಂದು ಭಾವಮುಗ್ಧ ಕ್ಷಣದ ಚಿತ್ರಣ. ಒಲಿದ ಹೃದಯಗಳ ಮಧುರಭಾವ, ರಾಧಾಕೃಷ್ಣರ ಮೋಹದ ಮುರಳಿಯ ಗಾನ, ಬಣ್ಣದ ಕನಸುಗಳನ್ನು ಹೊತ್ತು ತಂದಿರುವ ‘ಮಾಧವ’ ಕೂಡಾ ಈ ಗುಂಪಿಗೆ ಸಲ್ಲುವ ಪದ್ಯ.

‘ಮುಗಿಲು’ ಪದ್ಯದಲ್ಲಿ ತಾನೊಲಿದವನನ್ನು ಕಡುನೀಲಿ ಕಡಲು ಮತ್ತು ತಿಳಿನೀಲಿ ಮುಗಿಲು ಸಂಧಿಸಿದ ದೂರದ ಕ್ಷಿತಿಜ ನೋಡಲು ಕರೆಯುತ್ತಿದ್ದಾಳೆ ಅಭಿಸಾರಿಕೆ. ನೋಡು ನೋಡುತ್ತಿರುವಂತೆ ಇಳಿಹೊತ್ತಿನಲ್ಲಿ ಮಳೆ ಸುರಿದು ‘ಮುಗಿಲಲ್ಲಿ ಮಳೆಬಿಲ್ಲು’ ಸಾಕಾರಗೊಂಡಿದೆ. ಮೂರು ಸ್ಟಾಂಜ಼ಾಗಳಲ್ಲೆ ಕವಿತೆ ನಿರ್ಮಿಸಿರುವ ಚೆಲುವಿನ ಚಿತ್ತಾರ ಮನಸೂರೆಗೊಳ್ಳುವಂತಿದೆ.

ಹೆಂಡತಿಯ ಮುನಿಸು ಮತ್ತು ಮೌನದ ಬಿಸಿ ತಟ್ಟಿ ಗಂಡನ ಮನಸಿನಲ್ಲಾದ ಕೋಲಾಹಲ “ನೀ ಮೌನಿಯಾದಾಗ” ಕವಿತೆಯಲ್ಲಿದೆ. ಕಾಫಿ, ರಂಗೋಲಿ, ಬಿಸಿನೀರು ಹಾಗಿರಲಿ, ಹೂವೂ ಅರಳಿಲ್ಲ! ಅಂದರೆ ನಿಜವಾದ ಅರ್ಥದಲ್ಲಿ ಇನ್ನೂ ಕತ್ತಲೆಯೇ ತುಂಬಿದೆ. ಸಖನು ಹಣತೆ ಹಚ್ಚಲು ಸಖಿಯನ್ನು ಕೋರುತ್ತಿದ್ದಾನೆ. ವಿರಸದ ಹಿನ್ನೆಲೆಯ ಇನ್ನೊಂದು ಈ ಬಗೆಯ ಕವಿತೆ, ಒಲಿದವರ ನಡುವೆ ಮೂಡಿದ ಒಡಕಿಗೆ ದನಿಯಾಗಿರುವ ‘ಭಾವವೆಂಬ ಕಡಲಿಗೆ’:

ಹೇಗೆ ಮರೆಯಲಿ ಹೇಗೆ ಬರೆಯಲಿ
ನೊಂದು ಬೆಂದಿಹ ಶಾಖಕೆ
ಸುಟ್ಟ ಪದಗಳು ಬರೆಯಹೋದರೆ
ಬೂದಿ ರಾಶಿಯ ಕಾಣಿಕೆ

‘ಬೂದಿ ಮುಚ್ಚಿದ ಕೆಂಡ’ ಕೂಡ ಒಂದು ಬಿರುಕಿನ ಸಂದರ್ಭದ ರೂಪಕಾತ್ಮಕ ಅಭಿವ್ಯಕ್ತಿ.

ಉರಿಯುತ್ತಿರುವುದು ನಿನ್ನ ಕಣ್ಣೋಟವೋ
ಕೈಯಲ್ಲಿರುವ ಸಿಗರೇಟೋ ತಿಳಿಯುತ್ತಿಲ್ಲ
ಕೈ ಸುಡುವ ಮುನ್ನ ಅದನ್ನು ಆರಿಸಿಬಿಡು...

ಇಲ್ಲವಾದರೆ ‘ಬರೀ ಸುಡುವ ಸಿಗರೇಟುಗಳ ಇನ್ನಷ್ಟು ಕಟ್ಟು!’ ಕೈಗೆಟಕುವುದು, ಅಷ್ಟೇ. “ಮುರಿದ ಮನಸು” ಕವಿತೆಯ ಹೆಣ್ಣುಮಗಳು ‘ಜೀವವಿರುವ ಬೊಂಬೆ’ ತಾನೆಂದು ಮಿಡುಕುತ್ತಿದ್ದಾಳೆ. ವೀಣೆ ಇದೆ, ಆದರೆ ‘ನುಡಿಸೊ ಬೆರಳು, ಹಾಡೊ ಕೊರಳು’ ಮಾಡಿದ ಗಾಯದಿಂದ ಶ್ರುತಿ ತಪ್ಪಿದೆ. ಆದರೆ ಈ ಕವಿತೆಗಳಲ್ಲಿ ಚಲಿಸುವ ಹೆಣ್ಣು ಜೀವಗಳು ಎದ್ದು ಹೊರಡುವವಲ್ಲ, ಇದ್ದು ಜಯಿಸುವೆ ಎನ್ನುವವು. ನೋಡಲು ಮುಂದಿನ ಕವಿತೆಗೆ ಹೋಗೋಣ.

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ಜೀವಪರ ಸಂವೇದನೆ ಇಲ್ಲಿ ನಿರಾಯಾಸವಾಗಿ ಹೊಮ್ಮಿದೆ. ತನ್ನ ಭಾವನೆಗಳನ್ನು ತೆರೆದಿಡಲು ಸದಾ ಹಂಬಲಿಸುವ, ತಾಳ್ಮೆಯಿಂದ ಕಾಯುವ, ಮಳೆ ನೀರು ತೋಯಿಸಿದರೂ, ಬಿಸಿಲು ಬೆವರುಕ್ಕಿಸಿದರೂ ಒರೆಸಿಕೊಂಡು, ಬಿರುಗಾಳಿಗೂ ಬೆದರದೆ ಛಲದಿಂದ ಹೋರಾಡುತ್ತ ಗೆದ್ದು ‘ಗಾರುಡಿಯ ಪಟ್ಟ ಹಿಡಿದವಳು ನಾನು’ - ಈ ಹಾರೈಕೆ, ನಂಬಿಕೆ, ಭರವಸೆ ಇವಳ ಬದುಕು. ಬಹುಭಾಗ ಇದು ಎಲ್ಲಾ ಹೆಣ್ಣುಮಕ್ಕಳ, ಹೋರಾಟಗಾರರ ಮನದ ಭಾವದ ಸುಳಿಗಳಿಗೆ ಬಾಯಾಗಬಹುದಾದ ಕವಿತೆ.

ಕುಟುಂಬ ಪ್ರೀತಿಯ ಕವಯಿತ್ರಿ ಮಂಗಳ ಅಂದೆ. ಅದಕ್ಕೆ ಸಂಕಲನದುದ್ದಕ್ಕೂ ನಿದರ್ಶನ ಕೊಡುತ್ತ ಹೋಗಬಹುದು. ಒಂದೆರಡು ಕವಿತೆ ಸಾಲುಗಳನ್ನಷ್ಟೇ ಈಗ ಹೇಳಬಯಸುವೆ. ‘ಮುದ್ದು ಮಗಳು’ ಪದ್ಯದಲ್ಲೊಂದು ಸಾಲಿದೆ: ‘ನಿದ್ದೆಯಲ್ಲು ನಗುವವಳು’. ಇದು ನನ್ನನ್ನೊಮ್ಮೆ ಹಿಡಿದು ನಿಲ್ಲಿಸಿತು. ಎಷ್ಟು ಹೃದ್ಯವಾಗಿದೆ ಈ ಮಾತು! ಎಚ್ಚರದಲ್ಲಿಯೂ ನಗಲು ಚೌಕಾಶಿ ಮಾಡುತ್ತಿರುವ ಲೋಕದಲ್ಲಿ ಆ ದೇವನಿತ್ತ ವರದಂತಿರುವ ಮಗಳು ನಿದ್ದೆಯಲ್ಲೂ ನಗೆ ಚೆಲ್ಲುತ್ತಿದ್ದಾಳೆ. ಮರ್ತ್ಯಕ್ಕೆ ಒಮ್ಮೆಲೇ ದೇವಲೋಕದ ಸುಗಂಧ ತಾಕಿದಂತಿದೆ. ಹಾಗೆಯೇ ಮನಸರಳಿಸಿದ ಪದ್ಯ ‘ಮೊಮ್ಮಗಳು’.

ಇವಳೆ ನನ್ನ
ಮೊಮ್ಮಗಳು
ನನ್ನ ಮನೆಯ
ಬೆಳದಿಂಗಳು
ಚಂದಿರಗೂ ಟಾಟ ಮಾಡಿ
ನಾನೆ ಚೆಂದ ಎಂದವಳು

ತನ್ನ ಮನೆಗೆ ಬೆಳದಿಂಗಳಾಗಬಲ್ಲಳೆಂದ ಮೇಲೆ ಇವಳೂ ಚಂದ್ರಮುಖಿಯೇ ಸೈ.

‘ನೀ ಬಹಳ ಹೇಳಿದೆ’ ಹಠಾತ್ತನೆ ಒಂದು ನೆನಪಿನ ಕವಿತೆಯಾಗಿ ಬದಲಾಗುವುದು ಮೆಚ್ಚುಗೆ ಹುಟ್ಟಿಸುತ್ತದೆ. ಕವಿತೆಯ ನಿವೇದಕ ಗಂಡು. ತನ್ನವಳು ಮೊದಲ ದಿನದಿಂದಲೂ ಮಾತಾಡದೆಯೇ ‘ಬಹಳಷ್ಟು ಹೇಳಿದವಳು’ ಎಂದು ನೆನೆಯುತ್ತಿದ್ದಾನೆ. ಅವಳ ಮೌನ ಅವನಿಗೆ ಹಿಡಿಸಿದೆ ಮತ್ತು ಅದು ಅವನಿಗೆ ಹೇಳತೀರದಷ್ಟನ್ನು ಹೇಳಿದೆ. ಅದರಲ್ಲಿ ಕಷ್ಟಗಳನ್ನು ನುಂಗಿದ ಅವಳ ಅಪಾರ ಸಹನೆಯದೂ ದೊಡ್ಡ ಪಾಲಿದೆ. ಈಗವಳು ನೆನಪು, ಚಿರಮೌನದಲ್ಲಿ ಮುಚ್ಚಿರುವ ತೆರೆ ಎಂದಾಗ ಒಮ್ಮೆಲೆ ವಿಷಾದ ಆವರಿಸುತ್ತದೆ. ಇಂಥದೇ ಇನ್ನೆರಡು ಪದ್ಯಗಳು ‘ಅವಳು’ ಮತ್ತು ‘ಮುಂಬಾಗಿಲು’.

ಬದುಕಬೇಕೆಂಬ, ಚಿಗುರಬೇಕೆಂಬ ಪ್ರಕೃತಿಯ ಪಾಠ ಹೇಳುವ ‘ಛಲ’, ‘ಕುಡಿಯೊಡೆಯುತಿದೆ ತಡಿ’, ‘ಬಿಡಿ ನನ್ನನು ಸುಮ್ಮನೆ’, ದುರಾಸೆಯ ದುರುಳರಿಂದ ಅತ್ಯಾಚಾರಕ್ಕೀಡಾಗುತ್ತಿರುವ ಅವನಿಯ ಧಮನಿಯ ಕುದಿತ, ವೇದನೆ, ರೆಕ್ಕೆ ಮುರಿದ ಹಕ್ಕಿಯ ಅಸಹಾಯಕತೆಯ ಮೂಲಕ ನಂಬಿ ಮೋಸಹೋದವರ ಕತೆ ಹೇಳುವ ‘ಒಂಟಿ ಬಾನ ಹಕ್ಕಿ’, ಜಗಳಗಂಟ ಸ್ವಭಾವವನ್ನು ಸ್ವತಃ ತೋರುವ ‘ಜಗಳಗಂಟಿ’ ಪದ್ಯ, ಕಲಾಕೃತಿಯೊಂದನ್ನು ನೋಡುತ್ತಾ ‘ಮರದ ಕಲಾಕೃತಿಯೋ, ಮೆರೆದವನ ಆಕೃತಿಯೋ’ ಎಂದು ವಿಸ್ಮಯಗೊಳ್ಳುವ ‘ಹಿರಿತನ’, ತನ್ನ ‘ಕಲೆಯ ಬಲೆ’ಯಲ್ಲಿ ತಾನೇ ಕೊನೆಗೊಮ್ಮೆ ಬಲಿಯಾಗುವ ಕೀಟದ ಕವಿತೆ (ಜೇಡರ ಬಲೆ), ಸಾಮಾನ್ಯನೊಬ್ಬನ ದೈನಿಕಕ್ಕೆ ಪ್ರಕೃತಿಯ ನಿತ್ಯ ವಿದ್ಯಮಾನದ ದೈವಿಕ ಆವರಣ ರಚಿಸುವ ‘ಇರುಳ ಪರದೆ’, ಹಕ್ಕಿಗಳ ಮೂಲಕ ತಾಯಿ ಮಕ್ಕಳ ಪ್ರೀತಿಯ ನವಿರನ್ನು ಮುಟ್ಟಿಸುವ ‘ನೆಮ್ಮದಿ’ ಇವೆಲ್ಲವೂ ಓದುಗರ ಮನಸಿನಲ್ಲಿ ಆಸರೆ ಪಡೆಯಬಲ್ಲ ಕವಿತೆಗಳು. ಹೆಣ್ಣುಮಕ್ಕಳ ಸೀರೆ ಪ್ರೀತಿಗೆ ಇಲ್ಲಿಯ ಒಂದು ಕವಿತೆ ದನಿಯಾಗಿರುವಂತೆಯೇ, ಇನ್ನೊಂದು ಕವಿತೆ ಹೊಸ ಬಗೆಯ ಬಟ್ಟೆ ತೊಡಲು ತವಕಿಸುವ ನವತರುಣಿಯ ಆಧುನಿಕ ಅಪೇಕ್ಷೆಗೂ ದನಿಗೂಡಿಸಿದೆ(ಠಾಕು ಠೀಕು). ‘ಸಂಜೆಯೇ’ ಸುಂದರ ಪ್ರಕೃತಿಗೀತ. ನಸುನಗುವ ಸಂಜೆಯ ಸುಂದರ ರಂಗು ರಂಗಿನಾಟ ತೋರುತ್ತಲೇ ‘ನಿನಗೂ ಬೇರೆ ಲೋಕವುಂಟೆ’, ಹೊರಟೆಯೇಕೆ, ಎಲ್ಲಿಗೆ ಎಂದು ಉದ್ಗರಿಸಿರುವುದು ಆಕರ್ಷಕವಾಗಿದೆ.

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ. ಇಳಿದು ನೀರು ಕುಡಿಯ ಬಯಸುವವರಿಗೆ ಅವರು ಸುತ್ತಲೂ ಪಾವಟಿಗೆಗಳನ್ನೂ ರಚಿಸಿಕೊಟ್ಟಿದ್ದಾರೆ. ಅಲ್ಲಿ ಕುಳಿತು ಅವರು ತೋರುವ ಹಕ್ಕಿಗಳನ್ನೂ, ಆಕಾಶವನ್ನೂ ನೋಡಬಹುದು, ನೀರು ಕುಡಿಯಬಹುದು, ಹಣ್ಣುಗಳೂ ಸಿಗುತ್ತವೆ. ಎಂದೋ ಕೇಳಿ ಮರೆತ ಸುಂದರ ರಾಗಗಳು ನಿಮಗೆ ಮತ್ತೆ ಒದಗಿ ಬರಬಹುದು. ಅಲ್ಲಿಂದ ಎದ್ದು ಬಂದರೆ ನಿಮ್ಮ ಜಗತ್ತು ನಿಮಗೆ ಇದ್ದೇ ಇದೆ. ಎಲ್ಲ ಶುಭಗಳಿರಲಿ ಕವಯಿತ್ರಿ.

- ಚಿಂತಾಮಣಿ ಕೊಡ್ಲೆಕೆರೆ

MORE FEATURES

'ಹೊಂಬಳ್ಳಿ' ಹಗುರ ಪ್ರಬಂಧ ಅಂತ ಹೇಳಿದರೂ ಗಂಭೀರ ಮಾತುಗಳು ಇಲ್ಲಿವೆ

20-05-2024 ಬೆಂಗಳೂರು

'ಈ ಪುಸ್ತಕದಲ್ಲಿರುವ ಲೇಖನಗಳನ್ನು ಓದುವಾಗ ನಾನು ನನ್ನ ಅಮ್ಮನ ಜೊತೆಗೆ ಗೆಳತಿ ಜೊತೆ ಮಾತನಾಡುತ್ತಿದ್ದೇನೆ ಎಂಬ ಆಪ್ತ...

'ಡೇರ್ ಡೇವಿಲ್ ಮುಸ್ತಫಾ' ಚಿತ್ರಕಥೆ ಪುಸ್ತಕ ಬಿಡುಗಡೆ 

19-05-2024 ಬೆಂಗಳೂರು

ಬೆಂಗಳೂರು: ಡೇರ್ ಡೆವಿಲ್ ಮುಸ್ತಫಾ ಚಿತ್ರಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು 2024 ಮೇ 19ರಂದು ಬೆಂಗಳೂರಿನ ಸುಚಿತ್ರ...

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...