Back To Top

 ಅವ್ವ ಹೆಣೆದ ಜೋಳಿಗೆ | ದಾವಲಸಾಬ ನರಗುಂದ

ಅವ್ವ ಹೆಣೆದ ಜೋಳಿಗೆ | ದಾವಲಸಾಬ ನರಗುಂದ

ಅವ್ವ ಹೆಣೆದ ಜೋಳಿಗೆ
ತುಂಬಾ ಬದುಕು ಇರಿದ
ಹದವಾದ ಪದಗಳಿವೆ

ಅವ್ವನ ಮುಖ ಕಂಡಾಗೆಲ್ಲ
ಜನಕರಾಯನ ಮಗಳು
ಬನಕೆ ತೊಟ್ಟಿಲು ಕಟ್ಟಿ
ಮಕ್ಕಳನು ತೂಗಿದ ನೆನಪು

ಮಕ್ಕಳ ಮುಡಿಗೆ ಕಾಡುಮಲ್ಲಿಗೆಯ ಮುಡಿಸಿ
ಕಾರೆ ಡಬಗೊಳ್ಳಿ ಬಾರಿ ನೇರಳೆ ಪೇರಲ
ಬಗೆಬಗೆಯ ಫಲಗಳನುಣಿಸಿ
ಪಾದಗಳನು ಕಿತ್ತಿ ನಡೆದರೂ
ದಕ್ಕಿಲ್ಲ ಬದುಕ ನಿಲ್ದಾಣ

ಅವ್ವನಿಗೆ ಈ ಬದುಕು
ಮಾತು ಕಲಿಸಿತು
ಹಾಡು ಕಲಿಸಿತು
ನೋವ ಮರೆಸಿತು
ಜೊತೆಗೆ ಒಂದಿಷ್ಟು
ಮೌನವೂ ದೊರಕಿಸಿತು

ಅವ್ವ
ಬದುಕ ಹುಡುಕುತ್ತಾ
ಅಲೆದ ದಿನಗಳನು
ಸೂಜಿ ಚುಚ್ಚಿದ ನೋವಿನಷ್ಟೇ
ಕಾಪಿಟ್ಟುಕೊಂಡಿದ್ದಾಳೆ

ನೋವ ಗಂಧವನು
ಮೆತ್ತಿಕೊಂಡ ಅವ್ವ
ಬೇರೆ ಸುವಾಸನೆಯನು
ಘಮಿಸಿಲ್ಲ

ಅವ್ವ ಬದುಕಿದ್ದು ಹೀಗೆಯೇ;
ಆರೈಕೆ ಇಲ್ಲದ ಕಾಡು ಹೂವಂತೆ
ಅನಾಮಿಕ ಗಾಳಿಯಂತೆ
ಬಾಳ ತೊಡಕುಗಳು ತೊಡವಾಗಿ
ನುಂಗಿಕೊಂಡ ನೋವೆಲ್ಲಾ
ಎದೆಗಿಳಿಸಿಕೊಂಡು ನಗುವಳು
ಬಾಳ ಬೇಗೆಯಲಿ ಅವಳ
ನಗೆ ಹೂವು ಎಂದೂ ಬಾಡಲಿಲ್ಲ

ದಾವಲಸಾಬ ನರಗುಂದ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

Prev Post

ಓ.. ಓ.. ಪ್ರಿಯತಮ | ರಕ್ಷಿತಾ ಜೈನ್

Next Post

ಹೇ ಮನ ಇದು ನಿನ್ನದೇನಾ | ಮನೋಜ ಚಂದಾಪುರ

post-bars

2 thoughts on “ಅವ್ವ ಹೆಣೆದ ಜೋಳಿಗೆ | ದಾವಲಸಾಬ ನರಗುಂದ

ತುಂಬಾ ಚೆನ್ನಾಗಿ
ಬರೆದಿರುವಿರಿ

Reply
Mahanteshsays:

ತುಂಬಾ ಚೆನ್ನಾಗಿದೆ

Reply

Leave a Comment

Related post