Back To Top

 ಅಕ್ಷರಕ್ಕೆ ಇಳಿಸಿದ ‘ವರಂಗ’ ಸೌಂದರ್ಯ । ಪೂಜಾ

ಅಕ್ಷರಕ್ಕೆ ಇಳಿಸಿದ ‘ವರಂಗ’ ಸೌಂದರ್ಯ । ಪೂಜಾ

ಬದುಕಿನ ಜಂಜಾಟವನೆಲ್ಲ ಬದಿಗಿಟ್ಟು ಸಲ್ಪ ಸಮಯವಾದರೂ ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳಿಬೇಕು ಅಂತ ಯಾರ್ ತಾನೇ ಬಯಸೋದಿಲ್ಲ ಹೇಳಿ. ಅದ್ರಲ್ಲೂ ನದಿಯ ಮಧ್ಯೆಯಲ್ಲಿ ಕೈಗಳನ್ನು ತೇಲಿಸುತ್ತ ಸುಂದರವಾದ ಪರಿಸರವನ್ನು ಕಣ್ ತುಂಬಿಸಿ ಕೊಳ್ತ ಇದ್ರೆ ಆಹಾ.. ಸ್ವರ್ಗವೇ ನಮ್ಮ ಮುಂದಿದೆ ಅಂತ ಭಾಸವಾಗುತ್ತದೆ.
ಒಂದೆಡೆ ಮುಗಿಲಿಗೆ ಚಾಚಿದಂತ ಪಶ್ಚಿಮ ಘಟ್ಟದ ಹಸಿರು ಬೆಟ್ಟಗಳು. ಇನ್ನೊಂದೆಡೆ ಹಚ್ಚ ಹಸಿರಿನ ಗದ್ದೆ, ತೋಟಗಳು. ಮಳೆ ,ಚಳಿ, ಬೇಸಿಗೆ ಹೀಗೆ ವರ್ಷವಿಡಿ ನೀರಿರುವ 14 ಎಕರೆ ವಿಸ್ತಾರದ ಅಪೂರ್ವ ಬೃಹತ್ ಕೆರೆಯ ನಡುವೆ ಜೈನರ ಪವಿತ್ರ ಪದ್ಮಾವತಿ ದೇವಿಯ ಬಸದಿ. ಕೆರೆ ಮಧ್ಯದಲ್ಲಿರುವ ದೇವಾಲಯಗಳನ್ನು ನೋಡುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ. ನಮ್ಮ ದೇಶದಲ್ಲಿ ಈ ಕೆರೆ ಮಧ್ಯದಲ್ಲಿರುವ ಅನೇಕ ದೇವಾಲಯಗಳಿವೆ. ಇವುಗಳು ಅದ್ಭುತ ಪ್ರಕೃತಿ ಸೌಂದರ್ಯವನ್ನು ನೀಡುತ್ತದೆ. ಅಲ್ಲಿನ ಪ್ರಶಾಂತ ವಾತಾವರಣ ಯಾರನ್ನಾದರೂ ಮಂತ್ರಮುಗ್ಧಗೊಳಿಸದೇ ಇರಲಾರದು. ಅಂತಹ ತಾಣಗಳಲ್ಲಿ ಕಾರ್ಕಳದಲ್ಲಿರುವ ಒಂದು ಜೈನ ಬಸದಿಯೂ ಸೇರಿದೆ. ಇಲ್ಲಿನ ಸೌಂದರ್ಯವನ್ನು ಕಣ್ಣಾರೆ ಕಂಡರೇನೇ ಗೊತ್ತಾಗೋದು.
ಎಲ್ಲಿದೆ ಈ ಬಸದಿ?
ಉಡುಪಿಯಿಂದ 34 ಕಿ.ಮೀ ದೂರದಲ್ಲಿ, ಮಂಗಳೂರಿನಿಂದ 72 ಕಿ.ಮೀ ಮತ್ತು ಕಾರ್ಕಳದಿಂದ 22 ಕಿ.ಮೀ ದೂರದಲ್ಲಿದೆ, ಈ ಕೆರೆ ಬಸದಿ. ಇದು ಒಂದು ಸುಂದರ ಜೈನ ದೇವಾಲಯವಾಗಿದ್ದು, ಸರೋವರದ ಮಧ್ಯದಲ್ಲಿ, ಪ್ರಕೃತಿಯ ನಡುವೆ ಇದೆ.
850 ವರ್ಷಗಳ ಇತಿಹಾಸ:
ಈ ಬಸದಿ 850 ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ನಂಬಲಾಗಿದೆ. ಕೆರೆ ಬಸದಿ 23 ನೇ ತೀರ್ಥಂಕರನಾದ ಪಾರ್ಶ್ವನಾಥನಿಗೆ ಅರ್ಪಿತವಾಗಿದೆ. ಬಸದಿ ಎಂಬುದು ಚತುರ್ಮುಖವಾಗಿದ್ದು, ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರವೇಶದ್ವಾರಗಳಿವೆ. ಕೆರೆ ಬಸದಿ ನಾಲ್ಕು ವಿಭಿನ್ನ ನಿರ್ದೇಶನಗಳನ್ನು ಎದುರಿಸುತ್ತಿರುವ ಕಾಯೋತ್ಸರ್ಗ ಭಂಗಿಯಲ್ಲಿ ಪಾರ್ಶ್ವನಾಥ, ಶಾಂತಿನಾಥ, ಅನಂತನಾಥ ಮತ್ತು ನೆಮಿನಾಥರ ವಿಗ್ರಹಗಳನ್ನು ಹೊಂದಿದೆ.
ಬಸದಿಯಲ್ಲಿರುವ ಪದ್ಮಾವತಿ ಸನ್ನಿಧಿಯನ್ನು ತಲುಪಲು ದೋಣಿಯಲ್ಲದೆ ಬೇರೆ ಆಯ್ಕೆಗಳಿಲ್ಲ. ಪದ್ಮಾವತಿ ದೇವಿಯ ವಿಗ್ರಹ, ದೇವಿಯ ಯಕ್ಷಿ ಪಾರ್ಶ್ವನಾಥ ವಿಗ್ರಹದ ಮುಂದೆ ಸ್ಥಾಪಿಸಲಾಗಿದೆ. ಕೆರೆ ಬಸದಿ ಒಂದು ಕೊಳದ ಮಧ್ಯದಲ್ಲಿ ನಿರ್ಮಿಸಿರುವುದರಿಂದ ಒಂದು ಭವ್ಯವಾದ ದೃಶ್ಯವನ್ನು ನೀಡುತ್ತದೆ. ಆದ್ದರಿಂದ ಈ ಬಸದಿಗೆ ಕೆರೆ ಬಸದಿ ಎನ್ನುವ ಹೆಸರು ಬಂತು. ಇಡೀ ರಚನೆಯು ನಕ್ಷತ್ರದ ಆಕಾರದ ವೇದಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಇದು ನಾಲ್ಕು ದಿಕ್ಕುಗಳಿಂದ ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿದೆ. ಹೊರಗೆ, ಪ್ರತ್ಯೇಕ ‘ಪ್ರದಕ್ಷಿಣಾಪಥ’ ಮತ್ತು ‘ಗರ್ಭಗುಡಿ’ ಇದೆ. ‘ಗರ್ಭಗುಡಿ’ ಯಲ್ಲಿರುವ ವಿಗ್ರಹಗಳು 12 ನೇ ಶತಮಾನಕ್ಕೆ ಸೇರಿದವು ಎಂದು ನಂಬಲಾಗಿದೆ.
ಪೂಜಿಸುವ ದೇವರುಗಳು:
ಇಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿ, ಪಾರ್ಶ್ವನಾಥನನ್ನು ಪೂಜಿಸುವವರು ಸಮೃದ್ಧಿಯನ್ನು ಹೊಂದುತ್ತಾರೆ. ಭಕ್ತರ ಇಚ್ಛೆಯನ್ನು ಪೂರೈಸುತ್ತಾರೆ ಎಂಬ ನಂಬಿಕೆ ಜನರದ್ದು. ಭಗವಾನ್ ‘ಶ್ರೀ ಮಲ್ಲಿನಾಥ ಸ್ವಾಮಿ’, ದೇವತೆ ‘ಪದ್ಮಾವತಿ’ ಮತ್ತು ಶ್ರೀ ‘ಪಾರ್ಶ್ವನಾಥ ಸ್ವಾಮಿ’ಯನ್ನು ಇಲ್ಲಿ ಪೂಜಿಸಲಾಗುತ್ತದೆ.
ಇಷ್ಟಾರ್ಥ ಸಿದ್ದಿಯಾದ ವರಂಗ ಕ್ಷೇತ್ರ :
ಈ ಕ್ಷೇತ್ರವು ಹಲವು ವೈಶಿಷ್ಯಗಳನ್ನು ಹೊಂದಿದೆ ಎಂಬುದು ಪ್ರತೀತಿ ಅದಕ್ಕೆ ಇಂಬು ಕೊಡುವಂತಿದೆ ಇಲ್ಲಿಗೆ ಬರುವಂತ ಭಕ್ತರ ದಂಡು. ಅರ್ಚಕರೇ ಹೇಳುವಂತೆ ಇಲ್ಲಿಗೆ ಭೇಟಿ ಕೊಡುವ ಭಕ್ತರಲ್ಲಿ ಅನ್ಯಧರ್ಮಿಯರೇ ಹೆಚ್ಚು ಬಂದಂತಹ ಭಕ್ತರ ಇಷ್ಟಾರ್ಥಗಳನ್ನು ದೇವಿ ಈಡೇರಿಸುತ್ತಾಳೆ. ಹಾಗಾಗಿ ಇಲ್ಲಿ ಮದುವೆಗಾಗಿ ದೇವರ ಪ್ರಸಾದ ಕೇಳುವುದು ಹಾಗೆಯೆ ಮದುವೆಯಾದ ನವದಂಪತಿಗಳು ಮೊದಲ ಪೂಜೆ ಸಲ್ಲಿಸಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಅದೇ ರೀತಿ ಚರ್ಮರೋಗ ನಿವಾರಣೆಗಾಗಿ ಹರಕೆ ಹೇಳುವುದು ಹಿಂದಿನಿಂದಲೂ ನಡೆದುಬಂದಿದೆ, ಸಮಸ್ಯೆ ಪರಿಹಾರವಾದರೆ ದೇವಿಗೆ ಹುರುಳಿ ಹಾಗೂ ಬೆಳ್ತಿಗೆ ಅಕ್ಕಿ ಸಮರ್ಪಿಸುವುದು ಇಲ್ಲಿನ ವಾಡಿಕೆ. ಮತ್ತೊಂದು ವಿಶೇಷತೆಯೇನೆಂದರೆ ಭಕ್ತರು ಸಮರ್ಪಿಸಿದ ಹರಕೆಯ ಅಕ್ಕಿ, ಹುರುಳಿಯನ್ನು ಕೆರೆಯಲ್ಲಿರುವ ಮೀನು, ಆಮೆಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಇಂತಹ ವೈಶಿಷ್ಟ್ಯ ತೆಯನ್ನು ಹೊಂದಿದ ವರಂಗ ಜೈನ ಬಸದಿಯನ್ನು ಕಾಣದವರು ಒಮ್ಮೆಯಾದರೂ ಕಂಡು ಕಣ್ ತುಂಬಿಸಿಕೊಳ್ಳಬೇಕು..
– ಪೂಜಾ
ದ್ವಿತೀಯ ಎಂ ಸಿ ಜೆ ವಿದ್ಯಾರ್ಥಿನಿ
ಎಸ್ ಡಿ ಎಂ ಕಾಲೇಜು ಉಜಿರೆ
Prev Post

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ “ ಧ್ಯೇಯವಾಕ್ಯಾನಾಂ ವಿಶ್ಲೇಷಣಮ್ ”ಕಾರ್ಯಾಗಾರ

Next Post

ಹೆಸರು ಕೇಳಿದೆ ತಿಮ್ಮಕ್ಕ | ಭಾಗ್ಯ ಎಸ್. ಅಡವಿ

post-bars

Leave a Comment

Related post