Back To Top

 ಅಡಕತ್ತರಿಯಿಂದ ಪಾರಾಗಿ ಮರಳಿ ಬಂದ ನಜೀಬ್ | ಸಂತೋಷ್ ಇರಕಸಂದ್ರ

ಅಡಕತ್ತರಿಯಿಂದ ಪಾರಾಗಿ ಮರಳಿ ಬಂದ ನಜೀಬ್ | ಸಂತೋಷ್ ಇರಕಸಂದ್ರ

ಆತ್ಮವಿಶ್ವಾಸ ಎಂಬುದು ಮನುಷ್ಯನಿಗೆ ಇರಲೇಬೇಕಾದ ಮುಖ್ಯ ಅಂಶ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಜೀವನದ ಬಗ್ಗೆ ಜಿಗುಪ್ಸೆ ಬಂದೀತು. ಆದ್ದರಿಂದ ನಂಬಿಕೆ ಬಹಳ ಮುಖ್ಯ. ಆತ್ಮವಿಶ್ವಾಸ ಇದ್ದವ ಸಾವನ್ನು ಗೆಲ್ಲಬಲ್ಲ ಎಂಬುದಕ್ಕೆ ಈ ಘಟನೆಯೇ ಸೂಕ್ತ ಉದಾಹರಣೆ.

ಅದು ಏಪ್ರಿಲ್, 4 1992. ಕೇರಳದ ಅಳಪುರ ಜಿಲ್ಲೆಯ ನಜೀಬ್ ಮೊಹಮ್ಮದ್ ಎಂಬುವವನು ತನ್ನ ಸ್ನೇಹಿತರಂತೆ ಹೊರದೇಶಕ್ಕೆ ಹೋಗಿ ದುಡಿಯುವ ಕನಸನ್ನು ಕಂಡಿದ್ದನು. ಅವನ ಕೆಲ ಸ್ನೇಹಿತರು ದುಬೈನಲ್ಲಿ ಉತ್ತಮ ಬದುಕನ್ನು ಕಟ್ಟಿಕೊಂಡಿದ್ದರು. ಇದರಿಂದ ಪ್ರೇರಿತನಾದ ನಜೀಬ್ ದುಬೈನ ಸೂಪರ್ ಮಾರ್ಕೆಟ್ ವೊಂದರಲ್ಲಿ ಪ್ಯಾಕಿಂಗ್ ಕೆಲಸ ಖಾಲಿ ಇದೆ ಎಂಬುದನ್ನು ಆಪ್ತರಿಂದ ತಿಳಿದುಕೊಂಡ. ತನ್ನಲ್ಲಿದ್ದ ಅಲ್ಪ ಸ್ವಲ್ಪ ಜಮೀನನ್ನು ಮಾರಿ ಬಂದ ಹಣದಿಂದ ವೀಸಾ ಹಾಗೂ ಪಾಸ್ಪೋರ್ಟ್ ಪಡೆದುಕೊಂಡು ಹಕೀಮ್ ಎಂಬ ಹುಡುಗನೊಂದಿಗೆ ದುಬೈಗೆ ಹೊರಡುತ್ತಾನೆ.

ತನ್ನ ಕುಟುಂಬಕ್ಕೆ ಉತ್ತಮ ಜೀವನವನ್ನು ಕಲ್ಪಿಸುವ ಸಲುವಾಗಿ ನಜೀಬ್ ಹಾಗೂ ಹಕೀಮ್ ದುಬೈಗೆ ಬಂದಿದ್ದರು. ಅವರು ಬಂದದ್ದು ಶುಕ್ರವಾರವಾಗಿದ್ದರಿಂದ ಕೆಲಸ ನೀಡುವುದಾಗಿ ಹೇಳಿದ್ದ ಕಂಪೆನಿಯ ಮಾಲೀಕ ಬರಲೇ ಇಲ್ಲ. ಅಲ್ಲಿದ್ದ ಮಲೆಯಾಳಿ ಸೆಕ್ಯೂರಿಟಿಯ ಸಹಾಯ ಪಡೆದು ತಮ್ಮ ಬಳಿ ಇದ್ದ ನಂಬರಿಗೆ ಫೋನ್ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಆತಂಕಗೊಂಡ ಇಬ್ಬರೂ ದಿಕ್ಕು ತೋಚದೆ ಅಲ್ಲಿಯೇ ಕುಳಿತರು.

ಒಂದಷ್ಟು ಸಮಯದ ಬಳಿಕ ಒಬ್ಬ ವಯಸ್ಸಾದ ವ್ಯಕ್ತಿ ಇವರನ್ನೇ 5,10 ನಿಮಿಷ ಗಮನಿಸಿದನು. ಇವರ ಬಳಿ ಬಂದು ಪಾಸ್ಪೋರ್ಟ್ ಅನ್ನು ಕಸಿದುಕೊಂಡು ತನ್ನೊಂದಿಗೆ ಬರಲು ಹೇಳಿದನು. ನಿಸ್ಸಾಹಯಕರಾಗಿದ್ದರಿಂದ ಬೇರೆ ದಾರಿ ಇಲ್ಲದೆ ಆ ವ್ಯಕ್ತಿಯೊಂದಿಗೆ ಕಾರಿನಲ್ಲಿ ಪ್ರಯಾಣವನ್ನು ಶುರು ಮಾಡಿದರು. ಅನೇಕ ಗಂಟೆಗಳ ಪ್ರಯಾಣದ ನಂತರ ಆ ಕಾರು ಒಂದು ಟೆಂಟ್ ಮುಂದೆ ಬಂದು ನಿಲ್ಲುತ್ತದೆ. ಜನನಿಬೀಡ ಪ್ರದೇಶದಲ್ಲಿದ್ದ ಆ ಟೆಂಟ್ ನಲ್ಲಿ ಇಬ್ಬರು ಶೇಕ್ ಗಳಿದ್ದರು.

ವಯಸ್ಸಾದ ವ್ಯಕ್ತಿ ಹಕೀಮ್ ನನ್ನು ಹೆದರಿಸಿ ಶೇಕ್ ಗಳಿಗೆ ಒಪ್ಪಿಸುತ್ತಾನೆ. ಬಳಿಕ ನಜೀಬ್ ನನ್ನು ತನ್ನ ಜೊತೆಯಲ್ಲಿಯೇ ಇನ್ನಷ್ಟು ದೂರ ಕರೆದೊಯ್ದು ಹಕೀಮ್ ಅನ್ನು ಬಿಟ್ಟಂತಹ ಟೆಂಟ್ ಒಂದಕ್ಕೆ ಬಿಡುತ್ತಾನೆ. ಅಲ್ಲಿರಲು ಒಪ್ಪದ ನಜೀಬ್‌ನನ್ನು ಹೊಡೆದು ಒತ್ತಾಯ ಪೂರ್ವಕವಾಗಿ ಇರುವಂತೆ ಹೆದರಿಸಿ ಅಲ್ಲಿಂದ ಹೊರಟುಹೋಗುತ್ತಾನೆ. ಆ ವೇಳೆಗಾಗಲೇ ನಜೀಬ್‌ನಿಗೆ ನಾವು ಮೋಸದ ಜಾಲದಲ್ಲಿ ಸಿಕ್ಕಿರುವ ಬಗ್ಗೆ ಅರ್ಥವಾಗಿರುತ್ತದೆ. ಗೊತ್ತಿಲ್ಲದ ಭಾಷೆ, ಗೊತ್ತಿಲ್ಲದ ಊರಿನಲ್ಲಿ ನಿಸ್ಸಹಾಯಕನಾದ ನಜೀಬ್ ಆ ಟೆಂಟ್‌ನಲ್ಲಿದ್ದ ಶೇಕ್ ತೋರಿಸಿದ ಜಾಗದಲ್ಲಿ ಮಲಗಿಕೊಳ್ಳುತ್ತಾನೆ.

ಅಲ್ಲಿ ಅದಾಗಲೇ ಓರ್ವ ಹಿಂದಿ ಮಾತನಾಡುವ ವಯಸ್ಸಾದ ವ್ಯಕ್ತಿ ವಾಸವಾಗಿರುತ್ತಾನೆ. ಕೂದಲು ಬಿಟ್ಟುಕೊಂಡು ಹರುಕಲು ಬಟ್ಟೆ ತೊಟ್ಟು ಆ ಟೆಂಟಿನಲ್ಲಿರುವ ಮೇಕೆ, ಒಂಟೆಗಳನ್ನು ನೋಡಿಕೊಳ್ಳುವುದು ಅವನ ಕೆಲಸವಾಗಿರುತ್ತದೆ.. ಶೇಕ್‌ಗಳು ನಜೀಬನಿಗೆ ಅವನ ಜೊತೆಗೂಡಿ ಕೆಲಸ ಕಲಿತುಕೋ ಎಂದು ಹೇಳಿದಾಗ ಒಪ್ಪದ ನಜೀಬನಿಗೆ ಹೊಡೆಯುತ್ತಾರೆ. ಬಲವಂತವಾಗಿ ಕೆಲಸ ಮಾಡಿಸುತ್ತಾರೆ. ಕೆಲ ದಿನಗಳಲ್ಲಿ ಹಿಂದಿ ಮಾತನಾಡುವ ವಯಸ್ಸಾದ ವ್ಯಕ್ತಿ ತೀರಿಕೊಳ್ಳುತ್ತಾನೆ.

ಅವನು ಮಾಡುತ್ತಿದ್ದ ಕೆಲಸದ ಸಂಪೂರ್ಣ ಜವಾಬ್ದಾರಿ ನಜೀಬ್‌ನ ಮೇಲೆ ಬೀಳುತ್ತದೆ. ನಜೀಬನಿಗೆ ಸ್ನಾನಕ್ಕಾಗಲಿ, ಕುಡಿಯುವುದಕ್ಕಾಗಲಿ, ಹಲ್ಲು ಉಜ್ಜುವುದಕ್ಕಾಗಲಿ ನೀರು ಕೊಡದೆ ಹಿಂಸಿಸುತ್ತಾರೆ. ದಿನಕ್ಕೆ ಒಂದು ಪೀಸ್ ರೊಟ್ಟಿ ಮಾತ್ರ ನೀಡುತ್ತಾರೆ. ಸಂಬಳವಿಲ್ಲದ ಕುರಿಗಾಹಿ ಕೆಲಸ ಪ್ರತಿನಿತ್ಯ ಒಂಟೆಗಳಿಗೆ ಮೇವು ಹಾಕುವುದು, ಮೇಕೆಗಳ ಚಾಕರಿ ಮಾಡುವುದು, ಜೊತೆಗೆ ಶೇಕ್ ಗಳ ಸೇವೆ ಮಾಡುವ ಕೆಲಸವನ್ನು ನಿರ್ವಹಿಸಬೇಕಾಗಿತ್ತು.

ದುಡಿಯುವ ಕನಸು ಹೊತ್ತು ಬಂದಿದ್ದ ನಜೀಬ್ ಕುಗ್ಗಿ ಹೋದ. ಹಸಿವಾದಾಗ ಒಂಟೆಗಳಿಗೆ ಹಾಕುವ ಮೇವನ್ನು ತಿನ್ನುತ್ತಿದ್ದ. ಮೇಕೆಗಳು ಕುಡಿಯುತ್ತಿದ್ದ ನೀರನ್ನು ಕುಡಿಯುತ್ತ ಅವುಗಳ ನಡುವೆಯೇ ಮಲಗುತ್ತಿದ್ದನು. ತನ್ನ ಸ್ನೇಹಿತರ ಹೆಸರುಗಳನ್ನು ಆಡುಗಳಿಗೆ ಹಾಗೂ ಒಂಟೆಗಳಿಗೆ ಇಟ್ಟು ಕರೆಯುತ್ತಿದ್ದನು. ಹೀಗೆ ಬರೋಬ್ಬರಿ ಮೂರುವರೆ ವರ್ಷಗಳನ್ನು ಕಳೆದ. ಅಲ್ಲಿಂದ ತಪ್ಪಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದರೂ ಸಿಕ್ಕಿ ಬೀಳುತ್ತಿದ್ದ. ಆದರೂ ಮರಳಿ ತಾಯ್ನಾಡಿಗೆ ಹೋಗುತ್ತೇನೆ ಎಂಬ ಆತ್ಮವಿಶ್ವಾಸ ಅವನಲ್ಲಿತ್ತು.

ಹೀಗೆ ನಿತ್ಯ ಮೇಕೆ ಮೇಯಿಸಲು ಹೋಗುತ್ತಿದ್ದ ನಜೀಬನಿಗೆ ಅಚನಕ್ಕಾಗಿ ತನ್ನೊಂದಿಗೆ ಬಂದಿದ್ದ ಹಕೀಮ್‌ನ ಭೇಟಿಯಾಗುತ್ತದೆ. ಅವನು ಸಹ ಇವನ ಪರಿಸ್ಥಿತಿಯಲ್ಲಿಯೇ ಬದುಕುತ್ತಿದ್ದನು. ಶೇಕ್‌ಗಳಿಗೆ ತಿಳಿಯದಂತೆ ಇಬ್ಬರೂ ಭೇಟಿಯಾಗಿ ಅಲ್ಲಿಂದ ಪಲಾಯನ ಮಾಡಲು ನಿರ್ಧರಿಸುತ್ತಾರೆ. ಇವರ ಹಾಗೆ ಸಿಕ್ಕಿಹಾಕಿಕೊಂಡಿದ್ದ ಆಫ್ರಿಕ ಮೂಲದ ಇಬ್ರಾಹಿಂ ಖಾದ್ರಿ ಎಂಬುವವನೊಂದಿಗೆ ತಪ್ಪಿಸಿಕೊಳ್ಳಲು ಸಿದ್ದರಾಗುತ್ತಾರೆ.

ಶೇಕ್‌ಗಳು ಮದುವೆಗೆ ಹೋದ ಸಂದರ್ಭದಲ್ಲಿ ಪಲಾಯನ ಮಾಡಲು ಶುರು ಮಾಡಿದ ಮೂವರು ಎರಡು ದಿನಗಳು ಹಗಲಿರುಳೆನ್ನದೇ ಊಟ ನೀರಿಲ್ಲದೆ ಪ್ರಯಾಣಿಸುತ್ತಾರೆ. ಹಸಿವು ಹಾಗೂ ನಿಶಕ್ತಿಯಿಂದಾಗಿ ಹಕೀಮ್ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪುತ್ತಾನೆ. ಬಳಿಕ ಪ್ರಯಾಣ ಮುಂದುವರಿಸಿದ ನಜೀಬ್ ಹಾಗೂ ಇಬ್ರಾಹಿಂ ಖಾದ್ರಿ ಸ್ವಲ್ಪ ದೂರ ಕ್ರಮಿಸುತ್ತಾರೆ. ಆಗ ನಜೀಬ್ ತಲೆ ತಿರುಗಿ ಬೀಳುತ್ತಾನೆ. ಎದ್ದು ನೋಡುವಷ್ಟರಲ್ಲಿ ಇಬ್ರಾಹಿಂ ಖಾದ್ರಿ ಕಣ್ಮರೆಯಾಗಿರುತ್ತಾನೆ. ಕೊನೆಗೂ ನಜೀಬ್ ದುಬೈನ ಮುಖ್ಯ ರಸ್ತೆಗೆ ಬಂದು ತಲುಪುತ್ತಾನೆ.

ಕಾರಿನ ಪ್ರಯಾಣಿಕರೊಬ್ಬರ ಸಹಾಯದಿಂದ ನಜೀಬ್ ದುಬೈನ ಮಧ್ಯಭಾಗಕ್ಕೆ ತಲುಪುತ್ತಾನೆ. ಬಳಿಕ ಹೋಟೆಲ್‌ವೊಂದರ ಮಲೆಯಾಳಿ ಮಾಲೀಕರೊಬ್ಬರು ನಜೀಬ್‌ನನ್ನು ಕರೆದುಕೊಂಡು ಹೋಗಿ ಊಟ ನೀಡಿ ಅವನಿಗೆ ಚಿಕಿತ್ಸೆಯನ್ನು ಕೊಡಿಸುತ್ತಾರೆ. ಅವನ ಮನೆಯವರಿಗೂ ಫೋನ್ ಮಾಡಿಸುತ್ತಾರೆ. ಪಾಸ್ಪೋರ್ಟ್ ಇಲ್ಲದ ನಜೀಬ್ ದುಬೈನ ಕಾನೂನಿನನ್ವಯ ಕೆಲ ದಿನಗಳ ಜೈಲುವಾಸ ಅನುಭವಿಸಿ ಆಗಸ್ಟ್ 13, 1995 ರಂದು ತನ್ನೂರಿಗೆ ಮರಳುತ್ತಾನೆ.

ಈ ಘಟನೆಯನ್ನು ನಂಬಲು ತುಸು ಕಷ್ಟವೆನಿಸಿದರು ನಿಜ. ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಲೇಖಕರಾದ ಬೆಂಜಮಿನ್ 2008ರಲ್ಲಿ ದಿ ಲೈಫ್ ಆಫ್ ಗೋಟ್ ಎಂಬ ಕಾದಂಬರಿಯನ್ನು ಬರೆಯುತ್ತಾರೆ. ನಂತರದ ದಿನಗಳಲ್ಲಿ ಈ ಘಟನೆಯನ್ನಾದರಿಸಿದ ಆಡು ಜೀವಿತಂ ಎಂಬ ಸಿನಿಮಾ ಸಹ ತೆರೆ ಕಾಣುತ್ತದೆ. ಸದ್ಯ ನಜೀಬ್ ಅವರಿಗೆ ಈಗ 61 ವರ್ಷ. ಬಹುತೇಕ ಸಂದರ್ಶನಗಳಲ್ಲಿ ತಮ್ಮ ಕಷ್ಟ ದಿನಗಳ ಬಗ್ಗೆ ನೆನೆದು ಕಣ್ಣೀರಿಡುತ್ತಾರೆ.


ಸಂತೋಷ್ ಇರಕಸಂದ್ರ
ತುಮಕೂರು ವಿಶ್ವವಿದ್ಯಾನಿಲಯ
ಪತ್ರಿಕೋದ್ಯಮ ವಿದ್ಯಾರ್ಥಿ

Prev Post

ಪ್ರೇಮ ಪದಗಳಿಲ್ಲದ ಬಂಧ | ಸೌಮ್ಯ ನೇತ್ರೇಕರ್‌

Next Post

ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

post-bars

Leave a Comment

Related post