Back To Top

 ಸುಂದರಿಗೆ ಸ್ವಪ್ನದಲ್ಲಿ ಕಾಡಿದ ಬದುಕಿನ ರಹಸ್ಯ | ಶಿಲ್ಪ. ಬಿ

ಸುಂದರಿಗೆ ಸ್ವಪ್ನದಲ್ಲಿ ಕಾಡಿದ ಬದುಕಿನ ರಹಸ್ಯ | ಶಿಲ್ಪ. ಬಿ

ಆ ಕೀಕೀ ಕೀ ಎಂಬ ಶಬ್ದದ ನಡುವೆ, ಒಂದು ದೊಡ್ಡ ದಿಗ್ಬಂಧನದಂತೆ ಕಾಣುತ್ತ ಎಲ್ಲರ ಕೋಪವನ್ನು ನೆತ್ತಿಗೇರಿಸುತ್ತಿದ್ದ ಆ ಭಯಂಕರ ಟ್ರಾಫಿಕ್ ಜಾಮು. ಅದರ ನಡುವೆಯೂ ಆರಾಧ್ಯ ದೂರದಲ್ಲಿದ್ದ ಆ ಒಂದು ಆಟೊವನ್ನು ದಿಟ್ಟಿಸುತ್ತ ನೋಡುತ್ತಿದ್ದಳು. ಪದಗಳ ನಡುವೆ ಒಂದು ಸುಮಧುರ ಬಂಧವನ್ನು ರೂಪಿಸಿ ರಚಿಸಿದ್ದ, ಆಟೊ ಹಿಂದಿದ್ದ ಆ ಒಂದು ಸುಂದರ ಕವನ ಅವಳ ಕಣ್ಣನ್ನು ಸೆಳೆಯತೊಡಗಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಆಟೋವನ್ನು ಹಿಂಬಾಲಿಸ ಹೊರಟಿದ್ದಳು.

ಅಷ್ಟರಲ್ಲಿ ಗಟ್ಟಿ ದನಿಯೊಂದು “ಊರಿಗೆಲ್ಲ ಸೂರ್ಯ ಹುಟ್ಟಿದರೂ ನಿನಗಿನ್ನು ಬೆಳಗಾಗಿಲ್ಲ. 10 ಗಂಟೆಯಾದರು ಇನ್ನೂ ಮಲಗೆ ಇದ್ದಿಯಾ. ಈ ಹಾಳಾದ ಬೇಸಿಗೆ ರಜೆ ಬಂತೆಂದರೆ ನಿಮಗೆಲ್ಲ ನಿದ್ದೆ ಬಿಟ್ಟು ಬೇರೇನೂ ಇಲ್ಲ. ಒಂದು ಪಾತ್ರೆ ತೊಳೆಯಲ್ಲ, ಒಂದು ಬಟ್ಟೆ ಒಗೆಯಲ್ಲ, ಅಡುಗೆ ಮಾಡಲ್ಲ, ಎಮ್ಮೆ ಬೆಳೆಯುವ ಹಾಗೆ ಬೆಳೆದಿದ್ದಿಯ ಅಷ್ಟೇ.. ಎದ್ದೇಳು ಸಾಕು ನಿದ್ದೆ…” ಎಂದು ಬೆಳಗಿನ ಸುಪ್ರಭಾತ ಎಂದಿನಂತೆ ಮೊಳಗಿಸಿದರು.

ಕನಸಿನಲ್ಲಿ ಆಟೋದ ಹಿಂದೆ ಮೂಡಿ ಬಂದಿದ್ದ ಸುಂದರ ಬೀದಿ ಸಾಹಿತ್ಯವನ್ನು ಓದಿ ಆಸ್ವಾದಿಸಲು ಆರಾಧ್ಯಳಿಗೆ ಸಾಧ್ಯವಾಗಲಿಲ್ಲ. ಅಮ್ಮ ಪ್ರಭಾತ ಅವರ ಕನಸನ್ನು ಅಪೂರ್ಣಗೊಳಿಸಿತ್ತು. ಇದು ಅವಳಿಗೆ ಮುಂಜಾನೆಯೇ ಅಮ್ಮನ ಮೇಲೆ ಕೋಪಕ್ಕೆ ಕಾರಣವಾಗಿತ್ತು. ಅಲ್ಲದೇ ತಡವಾಗಿ ಮಲಗಿದ್ದ ಅವಳಿಗೆ ಇದು ಅರ್ಧ ನಿದ್ದೆಯಂತೆ ಆಗಿತ್ತು. ಇನ್ನೂ ಅವಳ ತಲೆಯಲ್ಲಿ ನಿದ್ದೆಯ ಮಂಪರು ಕವಿದಿತ್ತು. ಮಲಗಿದರೆ ಮತ್ತೆ ಅಮ್ಮ ಗದರುವಳೆಂದು ನಿತ್ಯಕಾರ್ಯಕ್ಕೆ ಮುಂದುವರೆದಳು.

ಹತ್ತನೇ ತರಗತಿಯನ್ನು ಮುಗಿಸಿದ ಆರಾಧ್ಯಳ ಜೀವನದಲ್ಲಿ ಬೇಸಿಗೆ ರಜೆ ಉದಯಿಸಿತ್ತು. ಹತ್ತರ ಮಹ್ವದ ಘಟ್ಟ ಎಂದು ವರ್ಷವಿಡೀ ಹೇರಿದ್ದ ಒತ್ತಡವೆಲ್ಲಾ ಪರೀಕ್ಷೆ ಎಂಬ ಭೂತದಿಂದ ಮುಕ್ತಾಯವಾಗಿತ್ತು. ಈಗ ಆಕೆಯಲ್ಲೊಂದು ನಿರಾಳತೆಯೂ ಇತ್ತು. ರಜೆ ಒಂದು ಎರಡು ದಿನಕ್ಕೆ ಮಜವೇ ಆದರೆ ನಂತರ ಅದುವೇ ಸಜ ಎಲ್ಲರಿಗೂ. ಹಾಗೇ ಇಕೆಗೂ ರಜೆ ಒಂದುತರಾ ಸಜವೇ. ಆದರೆ ಅವರಳ ಹುಚ್ಚು ಅವಳ ಸಜವನ್ನು ಅಷ್ಟೋಂದು ಬೇಸರ ಅವಕಾಶ ಕೊಟ್ಟಿರಲಿಲ್ಲ.

ಆರಾಧ್ಯಳಿಗೆ ಇದ್ದದ್ದು ಕವನಗಳ ಹುಚ್ಚು. ಆ ಕವನಗಳ ಹುಚ್ಚು ಅವಳನ್ನು ಯಾವ ಮಟ್ಟಿಗೆ ಆವರಿಸಿತ್ತು ಎಂದರೆ, ತನ್ನ ಬಟ್ಟೆಗಳ ಮೇಲೆ, ಮನೆಯ ಗೋಡೆಯ ಮೇಲೆ, ಅಡಿಗೆ ಮನೆಯಲ್ಲಿ, ಕಡೆಗೆ ಬಚ್ಚಲ ಮನೆಯಲ್ಲೂ ಸಹ ಕವನಗಳನ್ನು ಬರೆದು ಬರೆದು ಒಂದು ಅಂಗುಲ ಜಾಗವು ಬಿಡದೆ ಅಂಟಿಸಿದಳು.

ಇದರಿಂದ ರೋಸಿ ಹೋಗಿದ್ದ ಅವಳ ತಾಯಿ “ನಾವು ಮನೆಯನ್ನು ಸಿಮೆಂಟಿಂದ ಕಟ್ಟಿದಿವೊ ಅಥವಾ ನಿನ್ನ ಕವನಗಳಿಂದ ಕಟ್ಟಿದ್ದೀವ ಗೊತ್ತಿಲ್ಲ. ನಿನ್ನ ಹೀಗೆ ಬಿಟ್ಟರೆ ನಮ್ಮ ಕೈ ಕಾಲಿನ ಮೇಲೆಲ್ಲ ಬರೆದು ನಮ್ಮನ್ನು ಕವನಗಳ ಗೊಂಬೆಯಂತೆ ನಿಲ್ಲಿಸಿ ಬಿಡುತ್ತೀಯ, ಅಲ್ಲವಾ..? ನೀನು ದಾರಿಯಲ್ಲಿ ಓಡಾಡೋ ಆ ಹಾಳದ ವಾಹನಗಳ ಮೇಲಿರುವ ಕವನಗಳನ್ನು ಓದಲು ಆ ವಾಹನವನ್ನು ಹಿಂಬಾಲಿಸಿ, ಕಳೆದು ಹೋಗಿ ಕಡೆಗೆ ನಮ್ಮನ್ನು ಪೊಲೀಸ್ ಠಾಣೆ ಮೆಟ್ಟಿಲನ್ನು ಹತ್ತಿಸಿದ್ದೀಯ. ಅಯ್ಯೋ…..! ದೇವರೇ ನಮಗೆ ಎಂತಹ ಮಗಳನ್ನು ಕೊಟ್ಟೆ.”ಎನ್ನುವಾಗ ಆರಾಧ್ಯ ನಸುನಗುತ್ತಾ ನಿಂತು ಬಿಡುತ್ತಿದ್ದಳು.

ಪ್ರತಿನಿತ್ಯವು ಸಂಜೆ ಅವರ ಮನೆಯಿಂದ ದೂರದಲ್ಲಿದ್ದ ತೋಟದವರೆಗೂ ಸೈಕ್ಲಿಂಗ್ ಹೋಗುವುದು ಅವಳ ಹವ್ಯಾಸವಾಗಿತ್ತು. ಹೋಗಬೇಕಾದರೆ ಸದಾ ಜಾಮ್ ಆಗಿದ್ದ ಒಂದು ರಸ್ತೆಯನ್ನು ದಾಟಲೇ ಬೇಕಿತ್ತು. ಆ ಒಂದು ಮುಸ್ಸಂಜೆಯು ಸಹ ಹಾಗೆ ಸೈಕ್ಲಿಂಗ್ ಹೊರಟಳು. ಆ ಜಾಮಿನಲ್ಲಿ ನಿಂತಿರುವಾಗ ಪುನಃ ಕನಸಿನಲ್ಲಿ ಕಂಡ ಅದೇ ಆಟೊವನ್ನು ಅದೇ ಕವನವನ್ನು ಅದೇ ಸ್ಥಳದಲ್ಲಿ ಕಂಡಳು. ಕನಸಿನಲ್ಲಿ ಓದದೆ ನಿರಾಸೆಯಾದಂತೆ ಪುನಃ ಇಲ್ಲಿ ಹಾಗೆ ಆಗಬಾರದು ಎಂದು ತೀರ್ಮಾನಿಸಿದ ಅವಳು, ಕಣ್ಣ ರೆಪ್ಪೆಗಳನ್ನು ಮುಚ್ಚದೆ ಅದೇ ವಾಹನವನ್ನೇ ದಿಟ್ಟಿಸುತ್ತಾ ನೋಡಿದಳು. ಕಣ್ಣುಗಳನ್ನು ಅಗಲಿಸಿ

“ನೀನು ನೀನಲ್ಲ”

ಎಂದು ಓದುವಷ್ಟರಲ್ಲಿ ಹಸಿರು ಸಿಂಗಲ್ ಬಂದು ವಾಹನಗಳು ಮುಂದೆ ವೇಗವಾಗಿ ಚಲಿಸಿದವು. ತಾನು ರೂಪಿಸಿಕೊಂಡ ಗುರಿಯನ್ನು ತಲುಪಲೇ ಬೇಕೆಂದು ನಿರ್ಧರಿಸಿದ ಅವಳು ಅತ್ಯಂತ ವೇಗವಾಗಿ ವಾಹನವನ್ನು ಹಿಂಬಾಲಿಸಿದಳು. ಕೆಲವೇ ಕ್ಷಣಗಳಲ್ಲಿ ಆಟೋ ಚಾಲಕ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ. ಕೊನೆಗೂ ಅವಕಾಶ ದೊರಕಿತೆಂದು ಹಾಗೆ ಹತ್ತಿರ ಬರ ಬರುತಲೆ “ನೀನು ನೀನಲ್ಲ, ನಿನ್ನದಿಲ್ಲಿ ಏನು ಇಲ್ಲ. ನೀನು ನೀನಾಗ….” ಎಂದು ಓದುವಾಗ ಒಂದು ಕಾರು ಅಡ್ಡ ಬಂದು ಅವಳ ಆಸೆಯೂ ಅಂದಕಾರವಾಯಿತು. “ ಅಯ್ಯೋ…! ಕರ್ಮ ಈ ಹಾಳಾದ ಕಾರು ಈಗಲೇ ಬರಬೇಕಿತ್ತಾ? ಒಂದು ಕ್ಷಣದಲ್ಲಿ ಎಲ್ಲಾ ಹಾಳಾಯಿತು.” ಎಂದು ದುಃಖಿಸಿ ನಿಂತವಳ ಮುಖದ ಮೇಲೆ ಹಾಗೆ ಮುಗುಳು ನಗೆಯನ್ನು ಮೂಡಿಸುತ್ತಾ ಪುನಃ ಅದೇ ಆಟೋ ಅವಳ ಕಣ್ಮುಂದೆ ಸಾಗಿತ್ತು. ಈಗ ಕೈಗೆ ಬಂದ ತುತ್ತನ್ನು ಬಾಯಿಗೆ ಬರುವಂತೆ ಮಾಡಿಕೊಳ್ಳಬೇಕೆಂದು ಸಂಪೂರ್ಣ ಏಕಾಗ್ರತೆಯೊಂದಿಗೆ ಹಿಂಬಾಲಿಸಿದಳು. ಕೊನೆಗೂ ಜನ ಸಂಚಾರವೇ ಇಲ್ಲದೆ ಇದ್ದ ಆ ಹಸಿರು ತೋಟದ ಸುಂದರ ಏಕಾಂತದಲ್ಲಿ ಕವನವನ್ನು ಓದಿದಳು.

“ನೀನು ನೀನಲ್ಲ,
ನಿನ್ನದಿಲ್ಲಿ ಏನು ಇಲ್ಲ. ನೀನು ನೀನಾಗಬೇಕಾದರೆ
ನಿನ್ನಲ್ಲಿ ‘ನಾನು’ ‘ನೀನಾಗಬೇಕಲ್ಲವೊ’ ಮಾನವ…”

“ವರೆ ವಾಃ…!” ಎಷ್ಟು ಚಂದ ಇದೆ ಇದು. ಎಂದು ತನ್ನ ಕಣ್ಣಲಿಗಳಲ್ಲಿ ಒಂದು ವಿಸ್ಮಯದ ಭಾವನೆ ಉಂಟಾಯಿತು. ಆರಾಧ್ಯ ಕೊನೆಗೂ ಕವನವನ್ನು ಓದಿದ್ದೇನೊ ಸತ್ಯ… ಆದರೆ ಅರ್ಥವಾಗಬೇಕಲ್ಲ. ಅರ್ಥದ ಹುಡುಕಾಟದ ಮನಸ್ಸಿನಲ್ಲೆ ಮನೆಗೆ ಹಿಂದಿರುಗುವಾಗ ರಸ್ತೆಯಲ್ಲಿ ಬಿದ್ದು ಮೈಯೆಲ್ಲಾ ಕೆಸರು ಮಾಡಿಕೊಂಡಳು. ಅವಳನ್ನು ಕಂಡು ಕೋಪಗೊಂಡ ತಾಯಿ “ಕಣ್ಣನ್ನು ಆಕಾಶದಲ್ಲಿ ಬಿಟ್ಟುಕೊಂಡು ಬರುತ್ತಿದ್ದೇನೊ..? ಹೀಗೆ ಕೆಸರಿನಿಂದ ಅಭಿಷೇಕಗೊಂಡಿದ್ದಿಯಾ ಅಲ್ವಾ? ಕರ್ಮ ಕರ್ಮ … ಹೋದ ಜನ್ಮದಲ್ಲಿ ಮಂಗನಾಗಿ ಏನಾರ ಹುಟ್ಟಿದ್ದ?” ಎಂದು ಕೋಪ ಹಳಿಯುತ್ತಿದ್ದಳು.

ಆರಾಧ್ಯ, “ಅಮ್ಮ, ನೀನು ನೀನಲ್ಲ, ನಿನ್ನದಿಲ್ಲಿ ಏನೂ ಇಲ್ಲ. ನೀನು ನೀನಾಗಬೇಕಾದರೆ ನಿನ್ನಲ್ಲಿ ನಾನು ನೀನಾನಾಗಬೇಕಲ್ಲವೋ ಮಾನವ…” ಎನ್ನುತ್ತಾ ಪ್ರಶ್ನಾರ್ಥಕವಾಗಿ ದಿಟ್ಟಿಸುತ್ತಿದ್ದಳು. ಅಲ್ಲದೇ ಅಮ್ಮನ ಬೈಗುಳಕ್ಕೆ ಕಿವಿ ಕೊಡದೇ ಮುಖ ತೊಳೆಯಲು ಹೊರಟಳು. ಚಿಂತೆ ಇಲ್ಲದವನಿಗೆ ಸಂತೆಯಲ್ಲು ನಿದ್ದೆ. ಆದರೆ ಚಿಂತೆ ಇರುವ ಅವಳಿಗೆ ನಿದ್ದೆಯಲ್ಲೂ ಚಿಂತೆ.

ಯೋಚಿಸಿ ಯೋಚಿಸಿ, ಕೊನೆಗೆ 10 ವರ್ಷಗಳ ನಂತರ ಆರಾಧ್ಯ ಆದದ್ದು ಪತ್ರಕರ್ತೆ. ತನ್ನದೇ ಒಂದು “ನಿತ್ಯ ಬದುಕಿನ ಕವನ” ಎಂಬ ದಿನಪತ್ರಿಕೆಯನ್ನು ಪ್ರಾರಂಭಿಸಿದಳು. ಎಲ್ಲರ ಪತ್ರಿಕೆಯ ಮೊದಲ ಪುಟದಲ್ಲಿ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಗಳು ರಾರಾಜಿಸುತ್ತಿದ್ದರೆ, ಅವಳ ಪತ್ರಿಕೆಯಲ್ಲಿ ಮಾತ್ರ ತನ್ನ ಬದುಕಿನ “ಮುಂದೆ ಏನು?” ಎಂಬ ಪ್ರಶ್ನೆಗೆ ಉತ್ತರಿಸಿದ

ನೀನು ನೀನಲ್ಲ, ನಿನ್ನದಿಲ್ಲಿ ಏನೂ ಇಲ್ಲ. ನೀನು ನೀನಾಗಬೇಕಾದರೆ ನಿನ್ನಲ್ಲಿ ನಾನು ನೀನಾಗಬೇಕಲ್ಲವೊ ಮಾನವ.. ಎಂದು ಮನಸ್ಸಿನಲ್ಲಿ ಮನೋಹರವಾದ ಕಂಪನಗಳನ್ನು ಹುಟ್ಟಿಸುತ್ತಿದ್ದ ಆ ಕವನ ಕಂಗೊಳಿಸಿತಿತ್ತು.

ನಮ್ಮ ಬದುಕು ಸಹ ಒಂದು ಸುಂದರ ಕವನದಂತೆ ಅಲ್ಲವಾ? ನಮ್ಮ ಬದುಕಿನಲ್ಲಿ ಸಂಭವಿಸುವ ಒಂದೊಂದು ಘಟನೆಯು ಕವನದಲ್ಲಿರುವ ಒಂದೊಂದು ಪದದಂತೆ. ಅದರಲ್ಲಿರುವ ಪ್ರಾಸ ಸಾಹಿತ್ಯ ಹೋಲಿಕೆಗಳೆಲ್ಲ ನಮ್ಮ ಬದುಕಿನ ಭಾವನೆಗಳಂತೆ. ಅವುಗಳ ನಡುವೆ ಒಂದು ಸುಂದರ ಸುಮಧುರ ಬಂದವನು ರೂಪಿಸಿದಾಗ ಮಾತ್ರ ಬದುಕೊಂದು ಸುಂದರ ಕವನವಾಗುತ್ತದೆ ಅಲ್ಲವಾ? ಬದುಕೆಂಬ ಕವನವನ್ನು ಅರ್ಥ ಮಾಡಿಕೊಳ್ಳುವವರಿಗೆ ಒಂದು ಜೀವನವಾದರೆ ಅರ್ಥ ಮಾಡಿಕೊಳ್ಳದಿರುವವರಿಗೆ ಮತ್ತೊಂದು ಜೀವನ.

ನಮ್ಮ ಈ ಪುಟ್ಟ ಜೀವನದಲ್ಲಿ ಯಾವ ಯಾವ ಘಟನೆಗಳು ಯಾರನ್ನ ಎಲ್ಲೆಲ್ಲಿಗೆ ಕರೆದೊಯ್ಯುತ್ತದೊ ಯಾರಿಗೆ ಗೊತ್ತು. ಮರುಭೂಮಿಯಲ್ಲಿ ಬದುಕಲಾರದೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಒಂದು ಜೀವಿಯ ಜೀವನವನ್ನು ಒಂದು ಅನಿರೀಕ್ಷಿತ ಸಾಗರದ ಅಲೆ ತನ್ನ ಇಡೀ ಬದುಕನ್ನೇ ಬದಲಿಸಬಹುದು. ಅದು ಕಾಲ ಧರ್ಮದ ಇಚ್ಛೆ.ಆದರೆ ಬದುಕು ಬದುಕಿಸಿದ ಹಾದಿಯಲ್ಲಿ ಬದುಕುತ್ತಾ, ಬದುಕನ್ನು ಹುಡುಕುತ್ತಾ ಸಾಗಿ, ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳುವುದು ಮಾತ್ರ ನಮ್ಮ ಇಚ್ಛೆ ಅಲ್ಲವಾ….?

ಶಿಲ್ಪ. ಬಿ
ಪ್ರಥಮ ಪಿಯುಸಿ
ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು

Prev Post

ನೀನಾಗು ವಿಶ್ವ ಮಾನವ | ಸಿಂಚನಾ ಜೈನ್ ಮುಟ್ಟದಬಸದಿ

Next Post

ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

post-bars

Leave a Comment

Related post