Back To Top

 ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

ಬಾಲ್ಯ ಆಹಾ..! ಎಷ್ಟು ಸುಮಧುರ ಪದವಿದು. ಬಾಲ್ಯ ಎಂದೊಡನೆ ಮನವು ಸ್ವಚ್ಛಂದ ಹಕ್ಕಿಯಂತೆ ಆನಂದದ ಬಾನಿನಲ್ಲಿ ಹಾರಾಡತೊಡಗುತ್ತದೆ. ಯಾವುದೇ ಕಟ್ಟುಪಾಡುಗಳ ಬಂಧನವಿರದ, ಜವಾಬ್ದಾರಿಗಳ ಮಣಭಾರವಿರದ ಅತಿ ಹಗುರಾದ ಅನುಭೂತಿಯೊಂದು ಮನದೊಳಗೆ ಹಾದು ಹೋಗುತ್ತದೆ.

ಆಟ, ತುಂಟಾಟಗಳ ನವಿರಾದ ಸವಿನೆನಪುಗಳ ಸಿಹಿ ಬುತ್ತಿ ಬಿಚ್ಚಿಕೊಳ್ಳುತ್ತದೆ. ಇವೆಲ್ಲವೂ ನಮ್ಮ ತಲೆಮಾರಿನವರ ಬಾಲ್ಯಕ್ಕಷ್ಟೇ ಅನ್ವಯ ಎಂಬುದು ವಿಷಾದನೀಯ. ಏಕೆಂದರೆ ಇಂದಿನ ಮಕ್ಕಳಿಗೆ ಬಾಲ್ಯದ ಆನಂದ ನಿಜಕ್ಕೂ ಮರೀಚಿಕೆಯೇ ಆಗಿದೆ ಎಂಬುದು ಕಹಿಯಾದರೂ ಸತ್ಯ. ಇಂದಿನ ಮಕ್ಕಳು ಸ್ಪರ್ಧೆ ಎಂಬ ಭಯಾನಕ ಜಗತ್ತಿನಲ್ಲಿ, ಒತ್ತಡದೊಂದಿಗೆ ಸೆಣೆಸಾಟ ನಡೆಸುತ್ತಿದ್ದಾರೆ. ದಿನವಿಡೀ ಶಾಲೆಯ ನಿರಂತರ ಪಾಠ, ಪತ್ಯೇತರ ಚಟುವಟಿಕೆಗಳ ನಂತರ ಮನೆಗೆ ಬಂದು ಆರಾಮವಾಗಿ ಆಡುವ, ಕುಟುಂಬದೊಂದಿಗೆ ನಲಿಯುವ ವಾತಾವರಣವಿಲ್ಲ. ಶಾಲೆಯಿಂದ ನೇರವಾಗಿ ಟ್ಯೂಷನ್, ನೃತ್ಯ, ನಾಟಕ, ಕರಾಟೆ, ಸಂಗೀತ ಇನ್ನಾವುದೋ ತರಗತಿಗೆ ಹಾಜರಾಗಬೇಕು.

ಮನೆಗೆ ಬಂದರೆ ಅಪ್ಪ, ಅಮ್ಮ ಇನ್ನಾವುದೋ ಒತ್ತಡದಲ್ಲಿರುತ್ತಾರೆ. ಬಳಲಿ ಬಂದ ಮಗುವನ್ನು ಸಂತೈಸುವ ತಾಳ್ಮೆಅವರಲ್ಲಿರುವುದಿಲ್ಲ. ಇನ್ನೂ ಕೆಲವೊಮ್ಮೆ ಮನೆಗೆ ಬಂದಾಗ ಕೆಲಸದವರೇ ಬರಮಾಡಿಕೊಳ್ಳುವ ಸಂದರ್ಭವಿರಬಹುದು. ಮಗು ಮಲಗುವ ಸಮಯವಾದರೂ ಕೆಲಸಕ್ಕೆಂದು ಹೊರಗೆ ಹೋದ ಪೋಷಕರು ಬರದೇ ಇರಬಹುದು.

ಮಗು ಪೋಷಕರ ಪ್ರೀತಿ, ಬೆಚ್ಚನೆಯ ಮಡಿಲು, ಅಪ್ಪುಗೆಗೆ ಹಂಬಲಿಸಿ ಕೊರಗುತ್ತದೆ. ಇನ್ನೂ ಅವಿಭಕ್ತ ಕುಟುಂಬಗಳು ಹಾಗೂ ಒಂದೇ ಮಗುವಿರುವ ಮನೆಗಳಲ್ಲಿ ಮಗು ಒಂಟಿತನದ ನದ ಯಾತನೆಯನ್ನು ಅನುಭವಿಸುತ್ತದೆ. ಆಟವಾಡಲು ಹೊರಗೆ ಹೋಗುವಂತಿಲ್ಲ. ಪಟ್ಟಣದ ಅಪಾರ್ಟ್ ಮೆಂಟ್ ಗಳಲ್ಲಿ ಮಗು ನಿಜಕ್ಕೂ ಬಾಲ್ಯದ ಆನಂದಗಳಿಂದ ವಂಚಿತವಾಗುತ್ತಿದೆ. ವರ್ಷಕ್ಕೊಮ್ಮೆ ಬರುವ ಬೇಸಿಗೆ ರಜೆಯಲ್ಲಿ ಹಳ್ಳಿಯ ಅಜ್ಜ ಅಜ್ಜಿ ಮನೆಗೆ ಹೋದಾಗ ಅವರಿಗೆ ಹೊಸದೊಂದು ಹಾಯಾದ ಲೋಕಕ್ಕೆ ಬಂದ ಹಿತ.

ಆದರೆ ಎಷ್ಟೋ ಮಕ್ಕಳಿಗೆ ಬೇಸಿಗೆ ಶಿಬಿರ, ರಜೆಯಲ್ಲಿ ವಿಶೇಷ ತರಗತಿಗಳೆಂದು ಇರುವುದರಿಂದ ಆ ಭಾಗ್ಯವೂ ಇಲ್ಲದಂತಾಗಿದೆ. ಇಂದು ಹಿರಿಯರಾದ ನಾವು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿಲ್ಲ. ಬಿಡುವಿನ ಸಮಯದಲ್ಲಿ ಮೊಬೈಲ್ ಇನ್ನಿತರ ನಮ್ಮದೇ ವಲಯದಲ್ಲಿ ಮುಳುಗಿರುತ್ತೇವೆ. ಮಗು ಕುತೂಹಲದಿಂದ ನಮ್ಮ ಬಳಿ ಬಂದು ಏನಾದರೂ ಪ್ರಶ್ನಿಸಿದರೆ ಕೋಪಗೊಳ್ಳುತ್ತೇವೆ.

ಮಗುವಿನ ಮಾತನ್ನು ನಿರ್ಲಕ್ಷಿಸುತ್ತೇವೆ. ಅದರೊಂದಿಗೆ ಆಡುವುದಂತೂ ದೂರದ ಮಾತು. ಮಗುವಿಗೆ ತನ್ನದೇ ಆದ ಆಸಕ್ತಿಗಳಿರುತ್ತವೆ, ಅಭಿಪ್ರಾಯಗಳಿರುತ್ತವೆ ಎಂಬುದನ್ನು ನಾವು ಕಡೆಗಣಿಸುತ್ತಿದ್ದೇವೆ. ಪೋಷಕರಾದ ನಾವು ನಮ್ಮದೇ ಆಸೆ ಆಕಾಂಕ್ಷೆಗಳನ್ನು ಮಗುವಿನಲ್ಲಿ ಕಾಣಲು ಇಚ್ಛಿಸುತ್ತಿದ್ದೇವೆ. ತಾನಾಗಿಯೇ ಅರಳಬೇಕಾದ ಕೋಮಲ ಮನಸ್ಸುಗಳ ಮೇಲೆ ಕೃತಕವಾಗಿ ದಾಳಿ ಮಾಡುತ್ತಿದ್ದೇವೆ.

ಮಗು ತಾನು ಬಯಸಿದ ಆಟವಾಡುತ್ತಿದ್ದರೆ ಕರೆದು ಓದಲು ಬರೆಯಲು ಕೂರಿಸುತ್ತೇವೆ. ಪರೀಕ್ಷೆಯಲ್ಲಿ ಒಂದು ಅಂಕ ಕಡಿಮೆಯಾದರೂ ಪ್ರಳಯವಾದಂತೆ ಕೂಗಾಡುತ್ತೇವೆ. ಸೋಲು ಗೆಲುವಿನ ಮೆಟ್ಟಿಲೆಂಬ ಆತ್ಮಸ್ಥೈರ್ಯ ನೀಡುವುದರ ಬದಲಾಗಿ ಸೋಲಲೇಬಾರದೆಂಬ ಅಸಹಜ ಒತ್ತಡ ಹೇರಿ ಮುಗ್ಧ ಮನಗಳಿಗೆ ಘಾಸಿಯುಂಟು ಮಾಡುತ್ತಿದ್ದೇವೆ. ನಿಜಕ್ಕೂ ಇದು ನಮ್ಮೆಲ್ಲರ ಆತ್ಮವಿಮರ್ಶೆಯ ಸಮಯ. ನಾವೇಕೆ ಮಕ್ಕಳ ಬಾಲ್ಯವನ್ನು ಈ ರೀತಿಯಲ್ಲಿ ಕಸಿಯುತ್ತಿದ್ದೇವೆ.

ಬಾಲ್ಯವನ್ನು ಅನುಭವಿಸುವುದು ಪ್ರತಿ ಮಗುವಿನ ಆ ಜನ್ಮಸಿದ್ಧ ಹಕ್ಕು. ಅದನ್ನು ಕಸಿಯುವ ಅಧಿಕಾರ ನಮಗಿಲ್ಲ. ಹಾಗೊಂದು ವೇಳೆ ನಾವು ಮಾಡಿದರೆ ಮುಂದೆ ನಮ್ಮ ಮಕ್ಕಳು ಪೋಷಕರ ಬಗ್ಗೆ ಯಾವುದೇ ಭಾವನಾತ್ಮಕ ಬೆಸುಗೆ ಇಲ್ಲದ ಒರಟು ವ್ಯಕ್ತಿಗಳಾಗುವುದರಲ್ಲಿ ಸಂದೇಹವಿಲ್ಲ. ಇಂತಹ ಮಕ್ಕಳಿಂದ ನಮ್ಮ ವೃದ್ದಾಪ್ಯದ ದಿನಗಳಲ್ಲಿ ಅವರು ಅನುಭವಿಸಿದ ಮಾನಸಿಕ ಯಾತನೆಯನ್ನು ನಾವು ಅನುಭವಿಸ ಬೇಕಾಗುತ್ತದೆ.

ಇಂದು ಓದು ಉದ್ಯೋಗವೇ ಮುಖ್ಯವೆಂದು ನಾವು ಕಲಿಸಿದ ಮಕ್ಕಳು, ಪೋಷಕರು ಸಾವಿನ ಹಾಸಿಗೆಯಲ್ಲಿ ಒದ್ದಾಡುತ್ತಿದ್ದರೂ ನೋಡಲು ಬರುವುದಿಲ್ಲ. ನಾವು ಅವರಿಗಾಗಿ ಸಮಯ ನೀಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದ್ದರಿಂದ ನಮ್ಮ ಮಕ್ಕಳಿಗೆ ಬಾಲ್ಯದ ಸ್ವಾತಂತ್ರ್ಯ, ವಾತ್ಸಲ್ಯಗಳನ್ನು ನೀಡಿ, ಅವರ ಆಟ, ತುಂಟಾಟ ಗಳನ್ನು ಕಂಡು ನಲಿಯುವ ಮನಸ್ಥಿತಿ ಬೆಳೆಸಿಕೊಳ್ಳೋಣ.

ಅಂಕ ಗಳಿಕೆಗಿಂತ ಮೌಲ್ಯಯುತ ವ್ಯಕ್ತಿಗಳನ್ನಾಗಿಸಲು ಪ್ರಯತ್ನಿಸೋಣ. ಏಕೆಂದರೆ ಮಗು ಎಂದರೆ ಒಂದು ಯಂತ್ರವಲ್ಲ. ನಾವು ಹೇಳಿದಂತೆ ತಲೆಯಾಡಿಸಬೇಕು ಎಂಬ ನಿರೀಕ್ಷೆ ಸಲ್ಲ. ಹಸನಾದ ಬಾಲ್ಯ ಮಗುವಿನ ವ್ಯಕ್ತಿತ್ವ ವಿಕಸನದ ಮೊದಲ ಹಂತ ಎಂಬುದನ್ನು ಅರಿತು ನಡೆದು ಕೊಳ್ಳೋಣ.

ಸಿಂಚನ ಜೈನ್. ಮುಟ್ಟದ ಬಸದಿ
ಬಿ. ಕಾಂ ವಿದ್ಯಾರ್ಥಿ
ಎಸ್‌. ಡಿ. ಎಮ್‌ ಕಾಲೇಜು, ಹೊನ್ನಾವರ

Prev Post

ಸುಂದರಿಗೆ ಸ್ವಪ್ನದಲ್ಲಿ ಕಾಡಿದ ಬದುಕಿನ ರಹಸ್ಯ | ಶಿಲ್ಪ. ಬಿ

Next Post

ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

post-bars

One thought on “ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

Vishusays:

Good 💐

Reply

Leave a Comment

Related post