Back To Top

 ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಅದು ಮಳೆಗಾಲದ ಸಂಜೆ. ಆ ದಿನ ಮುಂಜಾನೆಯಿಂದಲೇ ಮಳೆ ಹನಿಗಳ ಸದ್ದು ಮನೆ ಸುತ್ತಲೂ ನೆಟ್ಟಿದ್ದ ಹೂ ಗಿಡಗಳ ಮೇಲೆ ಬಿದ್ದು ಇನ್ನಷ್ಟು ಜೋರಾಗಿ ಕೇಳ್ತಾ ಇತ್ತು. ಮಧ್ಯಾಹ್ನದಿಂದಲೇ ಪುಸ್ತಕ ಬದಿಗಿಟ್ಟು ಇಯರ್‌ ಫೋನ್‌ ಕಿವಿಗೆ ಹಾಕ್ಕೊಂಡು ನೆಲದಲ್ಲಿ ಕೂತು ಕಣ್ಣು ಮುಚ್ಚಿ ಗೋಡೆಗೆ ಒರಗಿ ‘ಈ ಸಂಜೆ ಯಾಕೋ…ʼ ಹಾಡನ್ನ ಕೇಳುತ್ತಿದ್ದೆ.

ಕೇಳುತ್ತಿದ್ದ ಹಾಡು ಹಾಗೂ ಫೋನಿನ ರಿಂಗ್‌ ಟೋನ್‌ ಒಂದೇ ಆಗಿದ್ದರಿಂದ ಸ್ನೇಹಿತ ಉತ್ತಮ ನಾಲ್ಕು ಬಾರಿ ಕರೆ ಮಾಡಿದ್ದು ಗೊತ್ತೇ ಆಗಿಲ್ಲ. ಕಾರಣ ಹಾಡಿನ ಪ್ರತಿ ಸಾಲು ಮನಸಿಗೂ ಅದರ ಕನಸಿಗೂ ತುಂಬಾ ಹತ್ತಿರವಾಗಿತ್ತು. ಅಷ್ಟ್ರಲ್ಲೇ ಅಮ್ಮ ʼಲೋ ಚುರಂತನ್ ನಿನ್ ಫ್ರೆಂಡು ಉತ್ತಮ್ ಕಾಲ್ ಮಾಡಿದ್ದಾನೆ ನೋಡುʼ ಅಂತ ಕೂಗಿದ್ರು. ಓಡಿ ಹೋಗಿ ಅಮ್ಮನ ಹತ್ರ ಫೋನ್ ಇಸ್ಕೊಂಡು ಹೇಗಿದಿಯೋ ಬೇವರ್ಸಿ ಅಂಥ ಕೇಳ್ದೆ.

ಅವ್ನು ಅಳ್ತಾ, ಚಿರು ಅಪ್ಪ ಹೋಗ್ಬಿಟ್ರು ನಂಗೆ ಎನ್ಮಾಡ್ಬೇಕು ಅಂತಾನೆ ಗೊತ್ತಾಗ್ತಾ ಇಲ್ಲ ಅಂತ ಅಳೋಕೆ ಶುರು ಮಾಡ್ದ. ನಂಗೆ ನಮ್ಮಪ್ಪನ ನೆನಪಾಯ್ತು. ಉತ್ತಮ್ ನ ದನಿ ಆತರ ನಾನು ಯಾವತ್ತೂ ಕೇಳಿರ್ಲಿಲ್ಲ. ಅಳ್ಬೇಡ ಉತ್ತಮ್ ಬೇಗ ಬರ್ತೀನಿ ಅಂಥ ಅವತ್ತೇ ಸಂಜೆ ಟ್ರೈನ್ ಹತ್ತಿ ಮಂಗಳೂರಿಂದ ಹಾಸನಕ್ಕೆ ಹೊರಟೆ.

ಸಕಲೇಶಪುರ ರೈಲ್ವೆ
 ಸಕಲೇಶಪುರ ರೈಲ್ವೆ

ಟ್ರೈನಲ್ಲಿ ಸುಮ್ನೆ ಮಲ್ಗಿದ್ದೆ. ಅದ್ಯಾವ ಸ್ಟೋಪಲ್ಲಿ ಹತ್ಕೊಂಡ್ಲೋ ಗೊತ್ತಿಲ್ಲ ಅವಳ ಕಣ್ಣನ್ನ ಮರೆ ಮಾಡುತ್ತಿದ್ದ ಮುಂಗುರುಳನ್ನ ಸರಿಸುತ್ತಾ ಕಿಟಕಿಗೆ ಮುಖವೊಡ್ಡಿ ಕೂತಿದ್ಲು. ಸಕಲೇಶಪುರದಲ್ಲಿ ಯಾವುದೋ ಕಾರಣಕ್ಕೆ ರೈಲು ಅರ್ಧ ಗಂಟೆ ನಿಂತಲ್ಲೇ ನಿಂತುಬಿಟ್ಟಿತು. ಆ ಬೀಳೊ ಮಳೆಯಲ್ಲಿ ಅವಳು ರೈಲಿನಿಂದ ಕೆಳಗಿಳಿದು ಆಡೋ ಆಟಕ್ಕೆ ಮೊಡಗಳೆ ಕರಗಿ ಅವಳ ಸ್ಪರ್ಶ ಸುಖ ಅನುಭವಿಸೋಕೆ ಧರೆಗೆ ಇಳಿತಾ ಇದೆ ಅನ್ನಿಸ್ತಾ ಇತ್ತು.

ಸ್ವಲ್ಪ ಸಮಯ ಆದ್ಮೇಲೆ ರೈಲು ಹೊರಡಿತು, ಆದ್ರೆ ಈ ಸಲ ಅವ್ಳು ನನ್ನ ಎದುರಿನ ಸೀಟಲ್ಲಿ ಬಂದು ಕೂತ್ಕೊಳ್ಳೇ ಇಲ್ಲ. ಅದೇ ಖಾಲಿ ಸೀಟನ್ನ ನೋಡ್ತಾ ಹಾಸನಲ್ಲಿ ಟ್ರೈನ್ ಇಳಿಬೇಕಾದ್ರೆ ಅವ್ಳು ಅದ್ಯಾವುದೋ ಪುಟ್ಟ ಮಕ್ಕಳ ಜೊತೆ ಆಟ ಆಟಾಡ್ತಾ ಇದ್ಲು. ಇದ್ಯಾಕೋ ಟ್ರ್ಯಾಕಿಗೆ ಬರಲ್ಲ ಅನ್ಕೊಂಡು ಉತ್ತಮ್ ಮನೆಗೆ ಆಟೋ ಹತ್ತಿದೆ. ಅದೇ ದಾರಿಯಲ್ಲಿ ನಾನೂ ಉತ್ತಮ್ ಜೊತೆಗೆ ಓದಿದ ಪ್ಯಾರಾ ಮೆಡಿಕಲ್ ಕಾಲೇಜು ನೋಡಿ ದಿನಗಳು ಇಷ್ಟು ಬೇಗ ಕಳೆದು ಹೋದವಾ ಅನ್ನಿಸ್ತು.

ಮನೆಯಲ್ಲಿ ಉತ್ತಮ್ ಚೇರ್ ನಲ್ಲಿ ಮೌನವಾಗಿ ಕೂತಿದ್ದ. ಎದುರೇ ಅವನ ಅಪ್ಪನನ್ನ ಮಲಗಿಸಿದ್ರು. ಸ್ನೇಹಿತ ಉತ್ತಮ್ ಬಳಿ ಹೋಗಿ ಏನಾಯ್ತು ಹೇಗಾಯ್ತು ಹೇಳು ಅಂತ ಕೇಳಿದ್ರೂ ಅವ್ನಿನ್ನು ಮೌನವಾಗೇ ಇದ್ದ. ತಂದಿದ್ದ ಬ್ಯಾಗ್ ಬದಿಗಿಟ್ಟು ನಾನೂ ಉತ್ತಮ್ ಪಕ್ಕ ಸುಮ್ನೆ ಕೂತ್ಕೊಂಡೆ. ಅಷ್ಟರಲ್ಲೇ ದೂರದಲ್ಲಿ ಅದೇನೋ ಜೋರಾಗಿ ಶಬ್ದ ಬಂತು. ಉತ್ತಮ್ ನಾನು ಸೇರಿದಂತೆ ಅಲ್ಲಿ ಸೇರಿದ್ದ ಎಲ್ಲಾರೂ ಅದೇನು ಅಂಥ ನೋಡೋಕೆ ಹೋದ್ವಿ.

ಯಾರೋ ಬಂದೂಕಿನಿಂದ ಹೊಡೆದಂತಿತ್ತು. ಅದೇನೂ ಅಲ್ಲ ಅಂಥ ಗೊತ್ತಾದ್ಮೇಲೆ ತಿರುಗಿ ಹೋದ ದಾರಿಯಲ್ಲಿಯೇ ವಾಪಸ್ ಬರೋವಾಗ ಆ ಟ್ರೈನಲ್ಲಿ ನೊಡಿದ್ನಲ್ಲ ಅದೇ ಹುಡ್ಗಿ ಬಲಗಡೆ ತಿರುಗಿ ನನ್ನ ಪಕ್ಕಾನೇ ನಡ್ಕೊಂಡು ಬರ್ತಾ ಇದ್ಲು. ಹಾಯ್ ನಾನು ನಿಮ್ಮನ್ನ ಟ್ಟೈನಲ್ಲಿ ನೋಡ್ದೆ… ನೀವು ಇಲ್ಲಿ? ಅನ್ನೋವಷ್ಟ್ರಲ್ಲಿ ಅವ್ಳು ನೀವು ಚಿರಂತನ್ ರೈಟ್! ನೀವು ಪ್ಯಾರಾ ಮೆಡಿಕಲ್ ಹಾಸನ್ ಅಲ್ಲಿ ಓದಿದ್ದು ಅಲ್ವಾ? ನಾನು ಆಶಾ, ನಿಮ್ಮ ಜೂನಿಯರ್, ನಿಮ್ಮ ಫ್ಯಾನ್.
ನೀವು ಬರೆದ ಸಾಲುಗಳು ನನಗಿನ್ನೂ ನೆನಪಿದೆ “ಕಡಲ ದಾಟಿದರೂ ಒಡಲ ಮೀಟಿದರು ಈ ದನಿ ನಿನ್ನದೇ, ಬರಿ ನಿನ್ನದೇ “. ನಾನವಳ ಮುಖವನ್ನೇ ನೋಡ್ತಾ ನಡೀತಾ ಇದ್ದೆ ಎದುರುಗಡೆ ನೋಡಿದ್ರೆ ಎಲ್ಲಾರೂ ಕಂಗಾಲಾಗಿ ನಿಂತಿದ್ರು ಅದೇನು ಅಂಥ ನೋಡಿದ್ರೆ ಉತ್ತಮ್ ತಂದೆ ಹೆಣಾನೆ ಇರ್ಲಿಲ್ಲ. ಆಚೆ ನೋಡಿದ್ರೆ ದೂರದಲ್ಲಿ ಯಾರೋ ನಾಲ್ಕು ಜನ ನಮ್ಮನ್ನ ಗಮನಿಸ್ತಾ ಇದ್ರು.

ಉತ್ತಮ್ ನ ಸರಿಯಾಗಿ ವಿಚಾರಿಸಿದಾಗ ಗೊತ್ತಾಯ್ತು ಅವರಪ್ಪನಿಗೆ 10 ಲಕ್ಷ ಸಾಲ ಇತ್ತು ಅಂತ. ಯಾರೂ 10 ಲಕ್ಷಕ್ಕೆ ಹೀಗೆಲ್ಲ ಮಾಡಲ್ಲ ಅಲ್ವಾ ಅಂಥ ಯೋಚ್ನೆ ಮಾಡ್ಬೇಕಾದ್ರೆ ಮತ್ತದೇ ಆ ನಾಲ್ಕು ಜನ ನಮ್ಮನ್ನೇ ಗಮನಿಸ್ತಾ ಇದ್ರು. ಅವರನ್ನ ಹಿಂಬಾಲಿಸಿಕೊಂಡು ಹೋಗಿ ನಾಲ್ಕು ಬಿಟ್ಟಾಗ ಗೊತ್ತಾಯ್ತು ಅವರಪ್ಪ ಇನ್ನೊಂದು ಮದುವೆ ಆಗಿದ್ರು ಅನ್ನೊದು ತಿಳಿಯಿತು.

ನಡಿ ನಂಗೆ ಅವರ ಮನೆ ತೋರಿಸು ಅಂಥ ಆ ನಾಲ್ಕು ಜನರಲ್ಲಿ ಸಿಕ್ಕ ಒಬ್ಬನನ್ನ ಎಳ್ಕೊಂಡು ಹೋದೆ. ಅಲ್ಲಿ ಹೋಗಿ ನೋಡಿದ್ರೆ ಉತ್ತಮ್ ತಂದೆ ಹೆಣ ಅಲ್ಲೇ ಇತ್ತು ಅವರ ಸುತ್ತ ಆ ಇನ್ನೊಂದು ಹೆಂಡತಿ ಮಕ್ಕಳು ಇದ್ರು. ಅಂತೂ ನಾಲ್ಕು ಜನ ಸೇರಿ ಜಗಳ ಮಾಡಿ ಅವರಪ್ಪನ ಹೆಣವನ್ನ ಎತ್ಕೊಂಡು ಬಂದ್ವಿ. ಉತ್ತಮ್ ಅವರ ಹೊಲದಲ್ಲೇ ಎಲ್ಲಾ ವಿಧಿ ವಿಧಾನ ಏನು ತೊಂದರೆ ಇಲ್ಲದೆ ನಡೀತು.

ಅಷ್ಟ್ರಲ್ಲೇ ಆ ಟ್ರೈನ್ ಹುಡ್ಗಿ ಹತ್ರ ಬಂದು ʼಥ್ಯಾಂಕ್ಯೂ ಚಿರು ಉತ್ತಮ್ ತುಂಬಾ ಟೆನ್ಶನ್ ಆಗಿದ್ದ ಏನಾಗುತ್ತೋ ಅಂಥ. ಮುಂದಿನ ತಿಂಗಳು ನಂದು ಉತ್ತಮ್ ದು ಮದ್ವೆ ಇತ್ತು. ಆದ್ರೆ ಅಷ್ಟರಲ್ಲೇ ಹೀಗೆ ಆಗ್ಬಿಡ್ತು. ಮುಂದೆ ಏನು ಆಗುತ್ತೋ ಗೊತ್ತಾಗ್ತಾ ಇಲ್ಲʼ ಅಂದ್ಲು. ನಾನು ನಗುತ್ತಾ ʼಇಲ್ಲ ಇವ್ರೆ ಎಲ್ಲ ಸರಿ ಆಗುತ್ತೇ ನಾನಿದಿನಿ ಅಲ್ವಾ ಆದಷ್ಟು ಬೇಗ ಎಲ್ಲಾ ಸರಿ ಆಗುತ್ತೆ.ʼ ಅಂಥ ಹೇಳಿ ಅವತ್ತು ಸಂಜೇನೆ ಮಂಗಳೂರಿಗೆ ಬಂದೆ. ಬಂದು ಅರ್ಧ ಮುಗಿಸಿದ್ದ ಪುಸ್ತಕ ಓದೋಕೆ ಶುರು ಮಾಡಿದೆ. ಎದೆಗೂಡ ತಟ್ಟಿ ಹೋದ ಹುಡುಗಿ ಮನಸಾಚೆ ಮಾಯವಾದಳು.

ದರ್ಶನ್ ಕುಮಾರ್
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

Prev Post

ಕಟ್ಟುಪಾಡುಗಳ ಗೆರೆದಾಟಿ ಸಮಾಜಕ್ಕೆ ಬಲಿಯಾದ ಮಾಲತಿಯ ಕಥನ | ವಿಕಾಸ್ ರಾಜ್ ಪೆರುವಾಯಿ

Next Post

ಮುಂಗೋಪ ಕಲಿಸಿದ ಪಾಠ | ಅಂಕಿತ

post-bars

Leave a Comment

Related post