Back To Top

 ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ

ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ

ಸಾಧನೆಯ ಶಿಖರವೇರಲು, ಸಾಧಿಸಿ ಸೈ ಎನಿಸಿಕೊಳ್ಳಲು ವಯಸ್ಸು, ಲಿಂಗ, ಜಾತಿ, ಧರ್ಮ ಎಂಬ ಯಾವುದೇ ಮಿತಿಗಳಿಲ್ಲ ಎನ್ನುತ್ತಾರೆ ಪ್ರಥಮ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿ ಚೇತನ್ ಕಾಶಿಪಟ್ನ. ಅವರು ಕರಾಟೆ ಪಟು ವಿಜ್ಞಾ ಅವರ ಕುರಿತು ಬರೆದ ಲೇಖನ.

ಸಾಧನೆ ಎಂಬುದು ತಾನಾಗೇ ಒಲಿಯುವುದಲ್ಲ ಬದಲಾಗಿ ಕಠಿಣ ಪರಿಶ್ರಮ, ಪ್ರಯತ್ನಗಳಿಂದ ಗಳಿಸಿಕೊಳ್ಳುವುದು. ಸಾಧನೆಯ ಶಿಖರವೇರಲು, ಸಾಧಿಸಿ ಸೈ ಎನಿಸಿಕೊಳ್ಳಲು ವಯಸ್ಸು, ಲಿಂಗ, ಜಾತಿ, ಧರ್ಮ ಎಂಬ ಯಾವುದೇ ಮಿತಿಗಳಿರುವುದಿಲ್ಲ. ದೃಢವಾದ ಆತ್ಮವಿಶ್ವಾಸ, ಸಾಧಿಸುವ ಛಲ, ಸೋಲುಗಳಿಗೆ ಕುಗ್ಗದ ತಾಳ್ಮೆ ಹೀಗೆ ಕೆಲವು ಸೂತ್ರಗಳು ನಮ್ಮಲ್ಲಿದ್ದರೆ ಸಾಕು. ಇದಕ್ಕೆ ನಿದರ್ಶನವೆಂಬತೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೆರಾಡಿ ಎಂಬ ಗ್ರಾಮದ 13 ರ ಬಾಲಕಿ ಕುಮಾರಿ ವಿಜ್ಞಾ ನಮ್ಮ ಕಣ್ಣೆದುರು ನಿಲ್ಲುತ್ತಾಳೆ.

3/12/2010ರಲ್ಲಿ ಜನಿಸಿದ ಈ ಕರಾಟೆಯ ಕುವರಿ ಕಿರಿಯ ಮಗಳಾಗಿ, ತಂದೆ ತಾಯಿಯ ಜೊತೆಗೆ ಇಬ್ಬರು ಸಹೋದರಿಯರ ಪ್ರೀತಿ, ಆರೈಕೆಯಲ್ಲಿ ಬೆಳೆದವಳು. ವಿಜ್ಞಾಳದ್ದು ಸಣ್ಣ ಮಧ್ಯಮ ವರ್ಗದ ಕುಟುಂಬ. ಅಲ್ಲಿ ಕಷ್ಟ ಸಮಸ್ಯೆಗಳು ಸಾವಿರಾರಿದ್ದರು ನೆಮ್ಮದಿಗೆ ಯಾವುದೇ ಕೊರತೆಯಿರಲಿಲ್ಲ. ಹೆಣ್ಣುಮಕ್ಕಳನ್ನು ಕೀಳರಿಮೆಯಿಂದ ಕಾಣುವ, ಅವರಿಗೆ ಕಡಿಮೆ ಪ್ರೋತ್ಸಾಹ ನೀಡುವ ಪೋಷಕರ ನಡುವೆ ವಿಜ್ಞಾಳ ಪೋಷಕರಿಗೆ ಒಂದು ಸಲಾಂ ಹೊಡೆಯಲೇ ಬೇಕು. ತಮ್ಮ ಮೂವರು ಹೆಣ್ಣು ಮಕ್ಕಳಿಗೂ ಶಿಕ್ಷಣ ಕ್ಷೇತ್ರವಾಗಲಿ ಅಥವಾ ಅವರ ಆಸಕ್ತ ಕ್ಷೇತ್ರವಾಗಲಿ ಎರಡರಲ್ಲೂ ಬೆನ್ನು ತಟ್ಟಿ ಮುನ್ನುಗ್ಗಲು ದಾರಿ ಹಾಸಿಕೊಟ್ಟಿದ್ದಾರಲ್ಲ ಅದು ನಿಜಕ್ಕೂ ಶ್ಲಾಘನೀಯ..

ಮೂವರು ಹೆಣ್ಣುಮಕ್ಕಳನ್ನು ಸದೃಢವಾಗಿ ಬೆಳೆಸಬೇಕು ಎಂಬ ವಿಜ್ಞಾಳ ತಾಯಿಯ ಮಹದಾಸೆ ಮತ್ತು ಅವರಿಗೆ ಕರಾಟೆಯ ಮೇಲಿದ್ದ ಆಸಕ್ತಿ, ಕಿರಿವಯಸ್ಸಿನಲ್ಲಿಯೇ ಸಾಧನೆಯ ಹಸಿವು ಹೊತ್ತಿದ್ದ ಅವಳನ್ನು ತನ್ನ ಶಾಲೆಯಲ್ಲಿ ಶುರುವಾದ ಕರಾಟೆ ತರಬೇತಿಗೆ ಸೇರುವಂತೆ ಮಾಡಿತು. ಇಲ್ಲಿಂದ ಶುರುವಾಗಿದ್ದು ಅವಳ ಸಾಧನೆಯ ಯಾನ. ಕೆ.ಸಿ ಕರಾಟೆ ತಂಡದ ಪ್ರವೀಣ್ ಸುವರ್ಣ ಪರ್ಕಳ ಎಂಬುವವರ ಗರಡಿಯಲ್ಲಿ ಪಳಗಿದ ಈ 13 ರ ಪೋರಿ ಏರಿನಿಂತಿದ್ದು ಸಾಧನೆಯ ಎತ್ತರದ ಶಿಖರವನ್ನು. ಕಠಿಣ ಪರಿಶ್ರಮ, ಪ್ರಯತ್ನ, ಛಲ ಎಲ್ಲವೂ ಈ ಹುಡುಗಿಯನ್ನು ರಾಷ್ಟ್ರಮಟ್ಟದ ಕರಾಟೆಪಟುವನ್ನಾಗಿಸಿತು..

ಮಡಿಕೇರಿಯ ಕುಶಾಲನಗರದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಕೊಡಗು ಕಪ್ -2022 ರಲ್ಲಿ “ಕಟ ಮತ್ತು ಕುಮೀಟೆ ಎರಡು ವಿಭಾಗದಲ್ಲಿ ಕೂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಡಿಸೆಂಬರ್ 03/12/2022 ರಂದು ಉಡುಪಿಯಲ್ಲಿ‌ನಡೆದ KBK Cup – 2022 ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಸ್ವರ್ಧೆಯಲ್ಲಿ ಕೂಡ ಎರಡು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದ ವಿಜ್ಞಾ, ಇತ್ತೀಚೆಗೆ ಮಹಾರಾಷ್ಟ್ರದ ಪುಣೆ, ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಎರಡು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಒಟ್ಟು 2022 ರಲ್ಲಿ 9 ಪ್ರಥಮ, 1 ದ್ವಿತೀಯ,1 ತೃತೀಯ ಹಾಗೂ 2023 ರಲ್ಲಿ 7 ಪ್ರಥಮ, 2 ದ್ವಿತೀಯ ಪ್ರಶಸ್ತಿಗಳನ್ನು ತನ್ನ ಮೂಡಿಗೇರಿಸಿಕೊಂಡಿದ್ದಾಳೆ.

ಇಷ್ಟೇ ಅಲ್ಲದೇ ಕುಣಿತ ಭಜನೆಯಲ್ಲಿ ಬಾಲ್ಯದಿಂದಲೇ ಆಸಕ್ತಿ, ಅಭಿರುಚಿ ಹೊಂದಿದ್ದ ವಿಜ್ಞಾಳಿಗೆ ಧಾರ್ಮಿಕ ಕ್ಷೇತ್ರದಲ್ಲೂ ಸಾಧನೆಯ ಛಾಪು ಮೂಡಿಸಿರುವ ಕೀರ್ತಿ ಸಲ್ಲುತ್ತದೆ. 134 ಕುಣಿತ ಭಜನಾ ತಂಡಗಳನ್ನು ಕಟ್ಟಿ ಸಂಸ್ಕೃತಿಯ ಉಳಿವಿಗೆ ದನಿಯಾಗಿರುವ ಭಜನಾ ಗುರು ವಿಜಯ ನೀರ್ಕೆರೆರವರೊಂದಿಗೆ ಸೇರಿ ಪ್ರತಿ ಭಜನತಂಡಕ್ಕೂ ಸಹತರಬೇತುದಾರರಾಗಿ ತನ್ನ 13 ರ ವಯಸ್ಸಿನಲ್ಲಿಯೇ ಗುರು ಸ್ಥಾನದಲ್ಲಿ ನಿಂತಿರುವ ಹಿರಿಮೆ ಈ ವಿಜ್ಞಾಳದ್ದು.

ಇದು ವಿಜ್ಞಾಳ ಸಾಧನೆಯ ಸವಿವರ. 13 ರ ಈ ಬಾಲಕಿ ಇಷ್ಟೆಲ್ಲ ಸಾಧನೆ ಮಾಡಿರುವುದು ಒಂದರೆಕ್ಷಣ ಅಚ್ಚರಿ ಎನಿಸಿದರೂ ಇವಳ ಸಾಧನೆ, ಸಾಧಿಸುವ ಛಲ ನಮ್ಮಲ್ಲಿದ್ದರೆ ಯಾವುದು ಅಸಾಧ್ಯವಲ್ಲ ಎಂಬ ವಿಚಾರವನ್ನು ಮನದಟ್ಟಾಗಿಸುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಅಪ್ಪ ಅಮ್ಮನ ಅತಿಯಾದ ಮುದ್ದಿನಿಂದ ಮೊಬೈಲ್ ಇತ್ಯಾದಿ ಚಟಕ್ಕೆ ಬಿದ್ದು ದಾರಿತಪ್ಪುವ ಮಕ್ಕಳ ನಡುವೆ ಈ ಬಾಲಕಿ ತನ್ನ ತಂದೆ-ತಾಯಿಗೆ ಹೆಮ್ಮೆಯ ಕಿರಿಟ ತೋಡಿಸಿರುವುದು ನಿಜಕ್ಕೂ ಸ್ಫೂರ್ತಿದಾಯಕ. ಅಸಾಧ್ಯ ಎಂಬುದು ಯಾವುದು ಇಲ್ಲ ನಮ್ಮಿಂದಲ್ಲೂ ಇಂತಹ ಸಾಧನೆಗಳು ಸಾಧ್ಯ. “ಸಾಧಿಸಬೇಕೆಂಬ ಮನದಾಸೆಯ ಗಾಳಿಪಟಕ್ಕೆ ಪ್ರಯತ್ನ ಎಂಬ ದಾರ ಕಟ್ಟಿ ಹಾರಲು ಬಿಡಿ, ದಾರ ಮುರಿದರೆ ಮತ್ತೊಂದು ದಾರ ಕಟ್ಟಿ, ಹೀಗೆ ಒಂದಲ್ಲ ಒಂದು ದಿನ ನಿಮ್ಮ ಸಾಧನೆಯ ಗಾಳಿಪಟ ಬಾನೆತ್ತರಕ್ಕೆ ಹಾರಿಯೇ ಹಾರುತ್ತದೆ..”

ಚೇತನ್ ಕಾಶಿಪಟ್ನ
ಪ್ರಥಮ ಪದವಿ, ಪತ್ರಿಕೋದ್ಯಮ
ಎಸ್.ಡಿ.ಎಂ ಕಾಲೇಜು, ಉಜಿರೆ 

Prev Post

Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ

Next Post

ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

post-bars

Leave a Comment

Related post