Back To Top

 ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

ಪುಸ್ತಕ: ಹಿಮಾಗ್ನಿ
ಲೇಖಕ: ರವಿ ಬೆಳಗೆರೆ

2008ರ ನವೆಂಬರ್ 26..! ಮುಂಬೈ ಬಾಂಬ್ ಸ್ಪೋಟದ ಹಿನ್ನಲೆಯಿಂದ ತೆರೆದುಕೊಳ್ಳುವ ಕಥಾ ಹಂದರವಿದು. ಪಾಪಿ ಪಾಕಿಸ್ತಾನ ದೇಶದ ಭಯೋತ್ಪಾದನ ಸಂಘಟನೆಯಾದ “ಲಷ್ಕರ್-ಎ-ತೈಬಾದ” 10 ಜನ ತಲೆ ಮಾಸಿದ , ಕರುಳು ಹಸಿದ, ಬಡತನದಲ್ಲಿ ಮಿಂದ, ಅಜ್ಞಾನಿ ಪುಡಿ ಯುವಕರ ತಂಡ ಭಾರತದ ಹಣಕಾಸಿನ ರಾಜಧಾನಿ (ವಾಣಿಜ್ಯ ನಗರಿ) ಮುಂಬೈಯ ಕರಾವಳಿ ತೀರಕ್ಕೆ ಮೀನು ಹಿಡಿಯುವರ ಹಪ್ಪಳದಂತಹ ಹಡಗಿನಲ್ಲಿ ಬಂದು, ಯಾರಿಗೂ ನಯಾ ಪೈಸೆಯಷ್ಟು ಅನುಮಾನ ಬಾರದಂತೆ ತಾಜ್ ಹೋಟೆಲ್, ನಾರಿಮನ್ ಹೌಸ್, ಛತ್ರಪತಿ ಶಿವಾಜಿ ಟರ್ಮಿನಲ್, ಹೋಟೆಲ್ ಒಬೆರಾಯ್ , ಕಾಮಾ ಆಸ್ಪತ್ರೆ, ಲಿಯೋಪೋಲ್ಡ್ ಕೆಫೆಗಳಂಥ ಜಾಗಗಳನ್ನು ಹೊಕ್ಕಿ, ಕಣ್ಣಳತೆಯಲ್ಲಿ ಇಡೀ ಕಟ್ಟಡದ ಸಮಸ್ತ ಮೂಲೆ, ಅಂಗಳ, ಮೆಟ್ಟಿಲು, ರೂಮುಗಳನ್ನು ಅಂದಾಜು ಮಾಡಿಕೊಂಡು, ಬ್ಯಾಗಿನಲಿದ್ದ ಎಕೆ 47 ಗನ್ ಹೊರ ತೆಗೆದು, ಏಕಕಾಲಕ್ಕೆ ಸಿಕ್ಕ ಸಿಕ್ಕವರ ಮೇಲೆ ಬಂದೂಕಿನ ನರ್ತನ ಮಾಡಿಬಿಟ್ಟರು. ಬಾಂಬುಗಳ ಮೂಲಕ ಕಟ್ಟಡಗಳ ಇಷಾರೆ ಕೂಡ ಉಳಿಯದಂತೆ ಪುಡಿಗಟ್ಟಿ ಬಿಟ್ಟರು. ಇಲ್ಲಿಂದ ಶುರುವಾಗುತ್ತದೆ ಕಾದಂಬರಿಯ ಅಸಲಿ ಮುಸಲ ಯುದ್ಧ..!

ಅಲ್ಲಿ ನಡೆದಿದ್ದೆಲ್ಲಕ್ಕೂ ಮೂಕ ಸಾಕ್ಷಿಯಾಗಿ ಹರಡಿದ್ದ ರೌದ್ರ ನೆತ್ತರ ಹನಿಗೆ, ಅಂಗಾತ ಬಿದ್ದ ಮಗುವಿನ ದೇಹಕ್ಕೆ, ನಿಷ್ಪಾಪಿ ಜನರ ಪ್ರಾಣ ಹರಣಕ್ಕೆ, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ತಾಯಂದಿರಿಗೆ, ಭಾರತದ ಪ್ರವಾಸಕ್ಕೆ ಬಂದು ಮರಳಿ ಬಾರದೂರಿಗೆ ಹೋದ ವಿದೇಶಿಯರಿಗೆ ಒಂದು ಮೌನ ಸಂತಪ ಸಲ್ಲಿಸಬೇಕಿತ್ತು. ಇದು ಬೇರೆಯೇ ತೆರೆನಾದ ವಿಲಕ್ಷಣ ಮೌನ ಸಂತಾಪ. ಆ ವಿಲಕ್ಷಣ ಮೌನ ಸಂತಾಪದ ಹೆಸರೇ ಮುಸಲ ಯುದ್ಧ. ಅದರ ಹೊಣೆಗಾರಿಕೆ ಇದ್ದಿದ್ದು ಅವತ್ತಿನ ಸರ್ಕಾರಕ್ಕೆ. ಮಾರಣ ಹೋಮ ಎಸಗಿದ ಆ ನರಹಂತಕ ದೇಶದ ವಿರುದ್ಧ ನೇರ ನೇರ ನಿಂತು, ಕಾಲೂರಿ ಬಡಿದಾಡುವುದಕ್ಕೆ ಯುದ್ಧ ಅಂತಾರೆ, ಆದರೆ ಇದು ಬೇರೆಯೇ ತೆರನಾದ ಯುದ್ಧ. ಮುಸಲ ಯುದ್ಧ..!

ರವಿ ಬೆಳಗೆರೆ

ಇದನ್ನು ಕೌಂಟರ್ ಟೆರರಿಸಂ ಅಂತಾರೆ. ಕನ್ನಡದಲ್ಲಿ ಪ್ರತಿಕಾರಕ್ಕಾಗಿ ಮಾಡಿದ ಮರೆಮಾಚಿದ ಯುದ್ಧ ಅನ್ನುವರು. ಇಂಥ ಕದನದಲ್ಲಿ ಪಕ್ಕಾ ನುರಿತ ದೇಶ “ಇಸ್ರೇಲ್”. ವೈರಿ ಕಟ್ಟಿಕೊಂಡ ಅಭೇದ್ಯ ಕೋಟೆಗೆ ನುಗ್ಗಿ, ತಣ್ಣನೆ ದನಿಯಲ್ಲಿ ಬಾಗಿಲು ಬಡಿದು, ಸಿಂಹಾಸನದಲ್ಲಿರುವ ರಾಜನಿಗೆ ಕೆಂಪು ತಿಲಕವಿಟ್ಟು, ಕ್ಷಣಮಾತ್ರದಲ್ಲಿ ಅವನ ಉಸಿರು ನಿಲ್ಲಿಸಿ, ಸಾಮ್ರಾಜ್ಯದ ನಡ ಮುರಿದು ಬರುವುದರಲ್ಲಿ ಇಸ್ರೇಲ್ ಪಳಗಿದ ದೇಶ. ಇದನ್ನೇ ಈ ಕಾದಂಬರಿಯಲ್ಲಿ ಭಾರತ ಯಥಾ ಪ್ರಕಾರ ಕಾಫಿ ಮಾಡಿತು.

ಇಡೀ ಸರ್ಕಾರವನ್ನೇ ತನ್ನ ಅಂಗೈ ಅಗಲದ ಕಪಿ ಮುಷ್ಠಿಯಲ್ಲಿ, ಬೆರಳ ತುದಿಯಲ್ಲಿ ಇಟ್ಟುಕೊಂಡಿದ್ದ ಮಾಹಿನೋ ಗಾಂಧಿ ಎಂಬ ಇಟಾಲಿಯನ್ ಹೆಣ್ಣು ಮಗಳು ಆ ಕೃತ್ಯಕ್ಕೆ ತೆಗೆದುಕೊಂಡ ದಿಟ್ಟ ನಿರ್ಧಾರವೇ ಮುಸಲ ಯುದ್ಧ. ಇಟಾಲಿ ಹೆಣ್ಣು ಮಗಳ ಬಲಗೈ ಬಂಟನಾಗಿ ಒಟ್ಟು ಕಾರ್ಯಚರಣೆಯ ಮುಖ್ಯಸ್ಥನಾಗಿದ್ದವನು ಅನಾಲಿಸಸ್ ವಿಂಗ್‌ನ ಉನ್ನತ ಅಧಿಕಾರಿ ಕಾರ್ಲೋಸ್ ಮಾಥುರ್. ಈತ ಏಳು ಹೆಡೆಯ ಸರ್ಪದಂಥವನು. ಕಣ್ಣ ಪಸೆಯಲ್ಲೇ ಸತ್ಯ ಕಕ್ಕಿಸುವ ನಿರ್ಭಾವುಕ. ಇವರೆಲ್ಲರಿಗೂ ರಣ ಭಯಂಕರನಾದವನು ಕಾರ್ಗಿಲ್ ವೀರ, ಕೊಡಗಿನ ಕುವರ ಮಾಚಿಮಾಡ ರವೀಂದ್ರ ಪೂಣಚ್ಚ.

ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಮೊದಲ ಗೆಲುವಿನ ಪತಾಕೆ ಹಾರಿಸಿದ ಗಂಡುಗಲಿ ಈತ. ಸೈನ್ಯದಿಂದ ಹೊರ ಬಂದು “ರಾ” ವಿಂಗ್‌ಗೆ ಏಜೆಂಟ್ ಆಗಿ ಸೇರಿ ನಂತರದ ಇವನ ಬದುಕು ರೋಮಾಂಚನಕಾರಿಯಾದದ್ದು. ಮುಂಬೈ ಕರಾಳ ಸ್ಪೋಟದ ರಕ್ತಸಿಕ್ತ ಅಧ್ಯಾಯಕ್ಕೆ ಪ್ರತ್ಯುತ್ತರ ಕೊಡಲು ನೇಮಕಗೊಂಡವನೆ. ಕದನಕ್ಕಿಳಿದ ಟೀವ್‌ಗೆ ದಂಡ ನಾಯಕ ಈತನೇ. ಸೌರವ್, ನಂಬಿ, ರೆಡ್ಡಿ, ಬೀಷಮ್ ಎಂಬ ನಾಲ್ಕು ತುಪಾಕಿಯಂಥ ಅಧಿಕಾರಿಗಳು ಇವನ ಹುರಿಯಾಳುಗಳು.

ಕಾರ್ಗಿಲ್‌ ಯುದ್ದ ಗೆಲುವು

ಈಗೊಂದು ದಂಡು ಕಟ್ಟಿಕೊಂಡು ಸಿದಾ ಹೊರಟದ್ದು ಯುರೋಪ್ ಖಂಡಕ್ಕೆ. ಈ ಸಿಡಿಲಬ್ಬರದ ಟೀಮ್ ಎದುರು ಟಾರ್ಗೆಟ್ ಇದ್ದದ್ದು 18. ಅವರೆಲ್ಲರ ವಾಸದ ಮನೆ ಯುರೋಪ್. ಒಬ್ಬಬ್ಬರನ್ನು ತರಿದು ಕೆಡವಲು, ಮುಗಿಸಿ ಹಾಕಲು, ಕರುಳು ಬಗೆಯಲು, ರುಂಡ ಕತ್ತರಿಸಲು ಯುರೋಪ್ ಆಯಾ ಕಟ್ಟಿನ ಜಾಗದಂಥಾಗಿತ್ತು. ಯುರೋಪ್ ಮಾಫಿಯಾದ ಅನಭಿಷಕ್ತ ದೊರೆಯಾಗಿದ್ದ ಖನಾಸಾ ಕಿಮ್ ಮತ್ತು ಅವನ ಮಗ ಚಿಂದೇರಾ ಕಿಮ್ ಹಾಗೂ ಕೆಲವೊಂದಿಷ್ಟು ಭೂಗತ ಲೋಕದ ನಂಬಿಕಸ್ಥ ನಾಯಕರ ನೆರವು ಪಡೆದು 18 ನೆತ್ತರ ನಾಯಿಗಳನ್ನು ಬೇಟೆಯಾಡಲು ಸಿದ್ಧಗೊಂಡರು.

ಇವರು ಮಾಡುತಿದ್ದ ಪ್ರತಿ ಹತ್ಯೆಯ ಹಿಂದೆ ಹೊಸ ಸತ್ಯ ಇಣುಕುತಿತ್ತು. ಈ ಇಣುಕಿದ ಸತ್ಯ ಟೀಮಿನ ಸದಸ್ಯರಿಗೆ ಹೊಸ ದೃಷ್ಟಿ ಕೊಡಲಾರಂಬಿಸಿತು. ಭಯೋತ್ಪದಕರನ್ನು ಸದೆಬಡಿಯಲು ಹೋದವರಿಗೆ ಕಂಡದ್ದು ಗಾಂಧಿ ಕುಟುಂಬ ಮಾಡಿದ ಭ್ರಷ್ಟಾಚಾರ. ರಾಜೀವ್ ಗಾಂಧಿ ಮೇಯ್ದ 1.3 ಮಿಲಿಯನ್ ಡಾಲರ್ ಮೊತ್ತದ ಹಣ. ಆ ಭ್ರಷ್ಟಾಚಾರದ ಹೆಸರೇ ಬೋಪೋರ್ಸ್ ಹಗರಣ! ಅಸಲಿ ಕಾರ್ಯಚರಣೆಯ ಇನ್ನೋಂದು ಉದ್ದೇಶ ಬೋಪೋರ್ಸ್ ಹಗರಣಕ್ಕೆ ತೆರೆ ಎಳೆಯುವುದೇ ಆಗಿತ್ತು. ಇಟಾಲಿಯ ಮುದಿ ರೌಡಿ ವಿಜ್ಜಿನಿ ಹಾಗೂ ಅವನ ಜೊತೆಗಿನ ಮೂವರನ್ನು ಕೊಂದಿದ್ದರಿಂದ ಹೊರಬಿದ್ದ ಸತ್ಯ ಅನಾಲಿಸಸ್ ವಿಂಗ್ ಎಜೆಂಟರ್ಗಳ ಸಾವಿಗೆ ಕಾರಣವಾಯ್ತು. ಆ ಸಾವುಗಳು ನೆಡೆದಿದ್ದು ಹೇಗೆ? ಕೊಂದದ್ದು ಯಾರು? ಹಾಗೂ ಕ್ಯಾಪ್ಟನ್ ರವೀಂದ್ರ ಪೂಣಚ್ಚ ಅನ್ನೋ ಧೀರೋದಾತ ಯೋಧ ಬದುಕಿದ್ದು ಎಂಥ ಬದುಕನ್ನ ಗೊತ್ತೇ? ಅವನ ಪ್ರತಿಯೊಂದು ಹೆಜ್ಜೆಯು ಸಾವಿನೊಂದಿಗೆ ಸರಸವಾಡಿದಂತಿತ್ತು. ಅದನ್ನು ತಿಳಿಯಬೇಕಿದ್ದರೆ ಈ ಪುಸ್ತಕ ಓದಿ.

ಶಶಿಸ್ಕಾರ ನೇರಲಗುಡ್ಡ
ಪತ್ರಿಕೋದ್ಯಮ ವಿದ್ಯಾರ್ಥಿ.
ಎಸ್. ಡಿ. ಎಮ್. ಕಾಲೇಜು, ಉಜಿರೆ.

Prev Post

ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

Next Post

‘ಮನೀಷಾ’ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಮ್ಯಾಗಜಿನ್ ಗರಿ

post-bars

Leave a Comment

Related post