About the Author

ಎ.ಎನ್‌. ನರಸಿಂಹಯ್ಯನವರು ಹುಟ್ಟಿದ್ದು (23-05-1890) ಚಾಮರಾಜ ನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರದಲ್ಲಿ. ಶಿಕ್ಷಣವೆಲ್ಲ ಮೈಸೂರಿನಲ್ಲಿ. ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ಉಪಾಧ್ಯಾಯರಾಗಿ ಟ್ರೈನಿಂಗ್‌ ಕಾಲೇಜಿನ ಉಪನ್ಯಾಸಕರಾಗಿ ಸಂಸ್ಕೃತ ಮಹಾಪಾಠಶಾಲೆಯ ಪ್ರಿನ್ಸಿಪಾಲರಾಗಿ ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಕಾರ್ಯದಶಿಯಾಗಿ ಮೈಸೂರು ವಿಶ್ವವಿದ್ಯಾಲಯದ ಪುಸ್ತಕ ಭಂಡಾರ ಮತ್ತು ಮೈಸೂರು ವಿ.ವಿ.ದಲ್ಲಿ ಅಸಿಸ್ಟೆಂಟ್‌ ರಿಜಿಸ್ಟ್ರಾರ್ ಆಗಿದ್ದರು. ನರಸಿಂಹಯ್ಯನವರು ಲಂಡನ್‌ ವಿಶ್ವವಿದ್ಯಾಲಯದ ‘ಸ್ಕೂಲ್‌ ಆಫ್‌ ಓರಿಯಂಟಲ್‌ ಸ್ಟಡೀಸ್‌’ನಲ್ಲಿ ‘ಎ ಗ್ರಾಮರ್ ಆಫ್‌ ದಿ ಓಲ್ಡೆಸ್ಟ್‌ ಕ್ಯಾನರೀಸ್‌ ಇನ್‌ಸ್ಕ್ರಿಪ್ಷನ್ಸ್‌’ (1933) ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದರು. ಇದರಲ್ಲಿ ಆರು ಮತ್ತು ಏಳನೆಯ ಶತಮಾನಗಳ ಕನ್ನಡ ವ್ಯಾಕರಣ ವಿಶ್ಲೇಷಣೆ ಇದೆ.

ವಿದೇಶಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯ ಅಧ್ಯಯನ ಮಾಡಿ, ಸಂಶೋಧನೆ ನಡೆಸಿದವರಲ್ಲಿ ಮೊದಲಿಗರು. ಬಂಗಾಳಿ ಭಾಷೆಯನ್ನು ಅಧ್ಯಯನ ಮಾಡಿ ಕನ್ನಡಕ್ಕೆ ತಂದವರಲ್ಲಿಯೂ ಮೊದಲಿಗರು. ರವೀಂದ್ರನಾಥ ಠಾಕೂರರ ಸಾಹಿತ್ಯ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಶಿಕ್ಷಣ ಇಲಾಖೆಯ ಕೋರಿಕೆಯಂತೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆಗಳಿಗೆ ಕನ್ನಡ ವ್ಯಾಕರಣ ಪುಸ್ತಕಗಳ ರಚನೆ ‘ಕನ್ನಡ ಪ್ರಥಮ ವ್ಯಾಕರಣ’,  ಪುರಾಣ ಪರಿಚಯ  ಎಂಬುದು ಮತ್ತೊಂದು ಕಿರು ಪುಸ್ತಕ. ಸಂಸ್ಕೃತದಲ್ಲಿ ‘ಸಂಗೀತ ಗಂಗಾಧರಂ’ ಮತ್ತು ‘ಶಿವಪಾದರೇಣುಕಾಸಹಸ್ರಂ’ ಕೃತಿಗಳ ಸಂಪಾದನೆ, ಮತ್ತೊಂದು ಕೃತಿ ‘ಕಾಶಕೃತ್ಸ್ನ ಶಬ್ದ ಕಲಾಪ ಧಾತುಪಾಟ’ ಎಂಬ ನಿಘಂಟು ರಚನೆ, ಪಾಳಿ ವ್ಯಾಕರಣ, ಸಂಸ್ಕೃತ ಶಾಸನಗಳಲ್ಲಿ ವ್ಯಾಕರಣ ಹಸ್ತಪ್ರತಿ ರೂಪದಲ್ಲಿವೆ. ಇವರು 20-05-1980 ರಂದು ನಿಧನರಾದರು. 

ಎ.ಎನ್. ನರಸಿಂಹಯ್ಯ

(25 May 1890-20 May 1980)