About the Author

ಅ.ರಾ.ಸೇ ಎಂಬ ಪರಿಚಿತರಾದ ಅ.ರಾ. ಸೇತುರಾಮರಾವ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮ ಸಾಗರದವರು. ತಂದೆ- ಅಣಜಿ ರಾಮಣ್ಣ, ತಾಯಿ- ಸಂಜೀವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಭರಮ ಸಾಗರದಲ್ಲಿ ಪಡೆದ ಅವರು ದಾವಣಗೆರೆಯಲ್ಲಿ ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೆಟ್ ಪೂರ್ಣಗೊಳಿಸಿದರು. ಆನಂತರ ಬೆಂಗಳೂರಿನಲ್ಲಿ ಬಿ.ಎಸ್ಸಿ ಪದವಿ ಪಡೆದು ಅಧ್ಯಾಪಕರಾಗಿ ಬೋಧನಾ ವೃತ್ತಿಯನ್ನು ಆರಂಭಿಸಿದರು. ನಂತರದಲ್ಲಿ ಎಂ.ಎ., ಬಿ.ಎಡ್ ಪದವಿ ಗಳಿಸಿ ಜ್ಯೂನಿಯರ್ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಕವಿತೆ ಬರೆವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಬಂದ ಅವರು ಹಾಸ್ಯ ಲೇಖನಗಳ ಮೂಲಕವೂ ಗುರುತಿಸಿಕೊಂಡರು. ಸುಳಿನಗು, ಮುಗಿಲುಹಳ್ಳಿ ಬಖೈರು, ಚಿರತೆ ವೀರನ ಕೋಟೆ, ಸೀನಣ್ಣ ರೊಮಾನ್ಸ್ ಸೇರಿದಂತೆ ಹಲವು ಹಾಸ್ಯ ಲೇಖನ ಸಂಕಲನಗಳನ್ನು ಪ್ರಕಟಿಸಿದರು. ಅಲ್ಲದೇ‘ಯಥಾಗತ’, ‘ತದನಂತರ’ ಇವರು ಬರೆದ ಎರಡು ಕಾದಂಬರಿಗಳು ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ‘ಸ್ವಗದಿರುಳು ನಲ್ವಗಲು’ ಇವರು ಬರೆದ ಮತ್ತೊಂದು ಹಾಸ್ಯಕಾದಂಬರಿ. ಹಾಸ್ಯ ಲೇಖನಗಳಷ್ಟೇ ಲಘು ಕವನಗಳನ್ನು ಬರೆದು ‘ನಗೆಮುಗಿಲು’, ‘ಸುಸ್ಮಿತ’ ಎಂಬ ಸಂಗ್ರಹಗಳಲ್ಲಿ ಹೊರತಂದಿದ್ದಾರೆ. ‘ಮೂಡಲ ಪಯಣ’ ಎಂಬುದು ಇವರ ಪ್ರವಾಸ ಕಥನ ಕೃತಿ. ಹಾಸ್ಯ ಬರಹಗಳಿಂದ ಅಧ್ಯಾತ್ಮಿಕದ ಕಡೆ ಸಾಗಿದ ಅ.ರಾ.ಸೇ. ಯವರು ತೊರವೆ ರಾಮಾಯಣ, ವಾಲ್ಮೀಕಿ ರಾಮಾಯಣಗಳನ್ನಾಧರಿಸಿ ಬರೆದ ಕೃತಿ ‘ಶ್ರೀ ಸುಂದರ ಕಾಂಡ’. ದಕ್ಷಿಣ ವಾರಣಾಸಿ ಅಲಂಪೂರು, ಶಿಶುನಾಳ ಶರೀಫರ ನೂರಾರು ತತ್ತ್ವಪದಗಳು, ಪ್ರತಿಯೊಂದು ಪದಕ್ಕೂ ವ್ಯಾಖ್ಯಾನಮಾಡಿ, ನಾಲ್ಕಾರು ಮಹಾಭಾರತಗಳನ್ನು ತುಲನೆಮಾಡಿ, ಕೆಲಪ್ರಕ್ಷಿಪ್ತ ಭಾಗಗಳನ್ನು ಸೇರಿಸಿ ರಚಿಸಿದ ಕೃತಿ ‘ಕುಮಾರವ್ಯಾಸ ಭಾರತ’, ಲಕ್ಷ್ಮೀಶನ ಜೈಮಿನಿ ಭಾರತ, ಅಧ್ಯಾತ್ಮ ಸಾಹಿತ್ಯ ಕುರಿತ ಪರಿಚಯ ಗ್ರಂಥ ಬ್ರಹ್ಮ ಸೂತ್ರಗಳು, ಅನುಭವಾಮೃತ ಮತ್ತು ನಾಗರಸನ ಭಗವದ್ಗೀತೆಗಳ ಗದ್ಯರೂಪಾಂತರ, ಶ್ರೀ ಶಂಕರಲಿಂಗ ಭಗವಾನ್‌ ಸರಸ್ವತಿ ಪರಮಹಂಸರ ಜೀವನ ಚರಿತ್ರೆಯಾದ ‘ಶ್ರೀ ಗುರುಕಥಾಮೃತ’- ಇವು ಪ್ರಮುಖ ಸಂಪಾದಿತ ಕೃತಿಗಳಾಗಿವೆ. ತುಂಬುಗೆರೆ ‘ಬ್ರಹ್ಮಾನಂದರು’ ಜೀವನ ಚರಿತ್ರೆ. ಇವಲ್ಲದೆ ಅಧ್ಯಾತ್ಮಿಕ ಪಾರಿಭಾಷಿಕ ಶಬ್ದಗಳ ಪದಕೋಶವಾದ ‘ಪರಮಾರ್ಥ ಪದಕೋಶ’, (ಮಿನಿ) ವಿಶ್ವಕೋಶ ಇವೆರಡೂ ಪ್ರಕಟಗೊಂಡಿವೆ.

ಅ.ರಾ. ಸೇತುರಾಮರಾವ್

(26 Jan 1931)

Awards