ಪ್ರಸಿದ್ಧ ಕಾದಂಬರಿಗಾರ್ತಿ ಅನಸೂಯಾ ರಾಮರೆಡ್ಡಿ ರಾಷ್ಟ್ರಭಾಷಾಪ್ರವೀಣ ಪ್ರೌಢಶಾಲಾ ಶಿಕ್ಷಕಿ. ಅವರು 1929 ಡಿಸೆಂಬರ್ 25 ಚಿತ್ರದುರ್ಗಜಿಲ್ಲೆ ತುರುವನೂರು ಎಂಬಲ್ಲಿ ಜನಿಸಿದರು. ವ್ಯಾಯಾಮ, ಈಜು, ಸೈಕಲ್ ಸವಾರಿ, ಸಂಗೀತ, ಹಿಂದಿ, ಸಾಹಿತ್ಯ ಬಹುಪ್ರಿಯವಾದ ಹವ್ಯಾಸವಾಗಿತ್ತು. ಶಾಲೆಯ ಓದಿನ ಜೊತೆಗೆ ಮನೆಮೇಸ್ಟರಿಂದ ಹಿಂದಿ ಪರೀಕ್ಷೆಗೆ ಕುಳಿತು ರಾಷ್ಟ್ರಭಾಷಾ, ವಿಶಾರದ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇವರ ಮೊದಲ ಕೃತಿ ಗುರುಗೋವಿಂದ ಸಿಂಹರ ಜೀವನ ಚರಿತ್ರೆ. ‘ದೇವಿಯ ದರ್ಶನ’ ಇವರ ಮೊದಲ ಕಾದಂಬರಿ. ನಂತರ ಬರೆದದ್ದು ‘ಮಮತೆಯ ಮಡಿಲು’. ಚಲನ ಚಿತ್ರ ನಿರ್ಮಾಪಕ ಚಂದೂಲಾಲ್ ಜೈನರಿಂದ ಚಲನ ಚಿತ್ರವಾಗಿ ತೆರೆಕಂಡು ಅಪಾರ ಜನಮೆಚ್ಚುಗೆ ಪಡೆಯಿತು. ನಂತರ ಬಂದ ಕಾದಂಬರಿಗಳು ’ಕುಲದೀಪಕ, ಪ್ರತೀಕ್ಷೆ, ಈಚಲು ಮರ, ಹರಿಗೋಲು, ಬೆಳಕಿನಬಳ್ಳಿ, ಮಧುರತರಂಗ, ಮಂದಾನಿಲ, ಮೂರು ದಾರಿ, ಒಡೆದ ಹಾಲು, ಇದಿರುಗಾಳಿ, ಪಂಜರ, ಮಡಿಲ ಮೊಗ್ಗು, ತೆರೆಗಳು, ಸಂಭಾವಿತರು ಮತ್ತು ಅಂತ್ಯ’ ಮೊದಲಾದ 17 ಕಾದಂಬರಿಗಳು. ‘ಮುತ್ತಿನ ಹಾಗೆ ಎರಡು’ ಎಂಬ ನಾಟಕವು 1975 ರಲ್ಲಿ ಕರ್ನಾಟಕ ಸರಕಾರದ ಕುಟುಂಬ ಯೋಜನಾ ಇಲಾಖೆಯ ಪ್ರಥಮ ಬಹುಮಾನ ಪಡೆದ ಕೃತಿಯಾದರೆ ಪಂಜರ ಎಂಬ ಕಾದಂಬರಿಗೆ 1983 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾದತ್ತಿ ನಿಧಿ ಬಹುಮಾನ ದೊರೆಯಿತು. ‘ಪನ್ನ’ ಎಂಬ ನಾಟಕವು ಆಕಾಶವಾಣಿಯಿಂದ ಪ್ರಸಾರವಾದ ಜನಪ್ರಿಯ ನಾಟಕ. ಅವರು ಅನಾರೋಗ್ಯಕ್ಕೆ ತುತ್ತಾಗಿ 28 ಅಕ್ಟೋಬರ್ 2000ರಲ್ಲಿ ನಿಧನರಾದರು