About the Author

ಡಾ. ಅರವಿಂದ ಪಟೇಲ್ 1959ರಲ್ಲಿ ಬಳ್ಳಾರಿಯ ಕೃಷಿ ಕುಟುಂಬದಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಅನೇಕ ಸಂಘ ಸಂಸ್ಥೆಗಳೊಂದಿಗೆ ಸಕ್ರಿಯವಾಗಿರುವ ಅವರು ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃಷಿ ಕುಟುಂಬದಲ್ಲಿ ಜನಿಸಿದ ಅವರು ಕೃಷಿಕರ ಪರವಾಗಿಯೇ ಕೆಲಸ ಮಾಡುತ್ತಾ ತಮ್ಮ ಸಹಜ ಕೃಷಿಯ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಪ್ರಜಾ ಜಾಗೃತಿ ಸಂಘದ ಹಲವು ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ‘ಅರಿವು’ ಸಂಘಟನೆ ಬಳ್ಳಾರಿ ಇದರ ಮೂಲಕ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಆರೋಗ್ಯ, ಪರಿಸರ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಕುರಿತ ಕಾರ್ಯಕ್ರಮಗಳು, ಸಾಹಿತ್ಯಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದ್ದಾರೆ.

ವನ್ಯಜೀವಿಗಳ ಸಂರಕ್ಷಣೆ ಮತ್ತು ಪರಿಸರ ಸಮತೋಲನವನ್ನೇ ಪ್ರಧಾನ ಉದ್ದೇಶವಾಗಿಟ್ಟುಕೊಂಡು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಸ್ವತಃ ವನ್ಯಜೀವಿ ಛಾಯಾಗ್ರಾಹಕರಾಗಿರುವ ಇವರು ಅನೇಕ ಅಪರೂಪದ ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪ್ರಕಟಿತ ಕೃತಿಗಳು: 'ಕನಸಿನಂಗಳ' ಮತ್ತು 'ಬೆಳಕಿನತ್ತ' (ಕವನ ಸಂಕಲನಗಳು) ಜೊತೆಗೆ ಎಡಿತ್ ನೆಸ್ಬಿಟ್ ಅವರ ದಿ ರೇಲ್ವೆ ಚಿಲ್ಡ್ರನ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಸಾಹಿತ್ಯಕ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಗೌರವ ನೀಡಿ ಸನ್ಮಾನಿಸಿವೆ. ಸದ್ಯ ಬಳ್ಳಾರಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅರವಿಂದ ಪಟೇಲ್