About the Author

‘ಶ್ರೀ’ ಕಾವ್ಯನಾಮದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ಬಿಎಂಶ್ರೀ ಎಂದೇ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ. ತಂದೆ ಮೈಲಾರಯ್ಯ ತಾಯಿ ಭಾಗೀರಥಮ್ಮ. 1884ರ ಜನವರಿ 3ರಂದು ಜನಿಸಿದ ಶ್ರೀಕಂಠಯ್ಯನವರು ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪಡೆದ ನಂತರ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.  (1903) ಪದವಿಯನ್ನು, ಮದರಾಸಿನಲ್ಲಿ ಬಿ. ಎಲ್ (1906) ಪದವಿ ಹಾಗೂ ಎಂ.ಎ (1907) ಪದವಿ ಪಡೆದರು.

ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ (1911) ನೇಮಕಗೊಂಡು 30 ವರ್ಷ ಕಾರ್ಯ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (1926-1930) ಆಗಿ ನಂತರ ಗೌರವ ಕನ್ನಡ ಪ್ರಾಧ್ಯಾಪಕರಾಗಿ (1927) ಆಮೇಲೆ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1942ರಲ್ಲಿ ನಿವೃತ್ತರಾದ ಮೇಲೆ ಧಾರವಾಡದ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡರು ಅವರು 1946ರ ಜನವರಿ 5ರಂದು ನಿಧನರಾದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಚ್ಚುಕೂಟ ಸ್ಥಾಪಿಸುವುದಕ್ಕಾಗಿ ಆರು ಸಾವಿರ ರೂಪಾಯಿ ದೇಣಿಗೆ ನೀಡಿದ ಅವರು. ವಿಶ್ವವಿಖ್ಯಾತ ಕನ್ನಡ ಪುಸ್ತಕ ಮಾಲೆ (1931) ಪ್ರಾರಂಭಿಸಿದರು. 14ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಪರಿಷತ್ತಿನಿಂದ ಕನ್ನಡನುಡಿ ಪತ್ರಿಕೆ ಆರಂಭಿಸಿದ ಹಿರಿಮೆ ಅವರದು. ಶ್ರೀ ಅವರೇ ಮಹಿಳಾಶಾಖೆ ಪ್ರಾರಂಭಿಸಿದ್ದು ಕೂಡ.

ಮೈಸೂರು ಮಹಾರಾಜರಿಂದ ರಾಜಸೇವಾಸಕ್ತ (1938) ಎಂಬ ಬಿರುದನ್ನು ಪಡೆದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ (1938-43) ಆಗಿದ್ದರು. ನವೋದಯ ಸಾಹಿತ್ಯದಲ್ಲಿ ಮೈಲಿಗಲ್ಲುಗ ಸ್ಥಾಪಿಸಿದ ಆಚಾರ್ಯ ಪುರುಷರು.

ಕೃತಿಗಳು: ಇಂಗ್ಲಿಷ್ ಗೀತಗಳು, ಅಶ್ವತ್ಥಾಮನ್ (ನಾಟಕ), ಪಾರಸೀಕರು  (ಗ್ರೀಕ್ ಅನುವಾದಿತ ನಾಟಕ), ಹೊಂಗನಸುಗಳು (ಕವಿತೆಗಳು), ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ, ಕನ್ನಡ ಸಾಹಿತ್ಯ ಚರಿತ್ರೆ ಇತ್ಯಾದಿ

ಬಿ.ಎಂ. ಶ್ರೀಕಂಠಯ್ಯ (ಬಿಎಂಶ್ರೀ )

(03 Jan 1884-05 Jan 1946)