ಕನ್ನಡದ ಹಿರಿಯ ಲೇಖಕಿ, ಕವಯತ್ರಿ ನಾರಾಯಣಮ್ಮ ಬಿ. ಅವರು 1933 ಜೂನ್ 09 ರಂದು ಬೆಂಗಳೂರಿನಲ್ಲಿ ಜನಿಸಿದರು. ಬಿಎಸ್ಸಿ, ಬಿಎಡ್, ಎಂ.ಎ, ಎಂಎಡ್ ಪದವೀಧರೆಯಾಗಿದ್ದ ಅವರು ರಾಜ್ಯ ಶಿಕ್ಷಣ ಇಲಾಖೆ ಮತ್ತು ವಾರ್ತಾ ಇಲಾಖೆಗಳಲ್ಲಿ ಅಧಿಕಾರಿಯಾಗಿ ಹಾಗೂ ಸರಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿ ಜೀವನದ ಜತೆಗೆ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಕೊಡುಗೆ ನೀಡಿರುವ ನಾರಾಯಣಮ್ಮ, ‘ಮೇನಕಾ’ ಮತ್ತು ‘ತನ್ಮಯಿ’ ಎಂಬ ಎರಡು ಕಾದಂಬರಿ, ‘ಕನ್ಯಾಕುಮಾರಿ, ಶ್ರೀರಂಗನಾಥನ ಶ್ರೀ ಸಾನಿಧ್ಯದಲ್ಲಿ’ ಕವನ ಸಂಕಲನ, ಕರ್ನಾಟಕ ಜನಸಂಖ್ಯೆ, ಕರ್ನಾಟಕ ಇತಿಹಾಸ ಮತ್ತು ಜನ ಪ್ರಳಯ ಎಂಬ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಜಾಣಗೆರೆ ಎಂ ವಾರಪತ್ರಿಕೆಗೆ ಅಂಕಣಗಳನ್ನು ಸಹ ಬರೆದಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘ ಪ್ರಕಟಿತ ‘70ರ ವಯಸ್ಸು 20ರ ಮನಸ್ಸು’ ಪುಸ್ತಕದಲ್ಲಿ ಇವರ ಆತ್ಮಕಥನ ಪ್ರಕಟವಾಗಿದೆ. ಇವರಿಗೆ ಕೆಂಪೇಗೌಡ ಪ್ರಶಸ್ತಿ, ಮಂಗಳ ಪ್ರಶಸ್ರಿ, ಕದಂಬ ಪ್ರಶಸ್ತಿ, ಹೊಯ್ಸಳ ಪ್ರಶಸ್‌ಇ, ಸಾಹಿತ್ಯ ಸರಸ್ವತಿ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಕನ್ನಡ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ 2002 ರಿಂದ 2006ರವರೆಗೆ ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಾರಾಯಣಮ್ಮ ಪ್ರತಿಷ್ಠಾನದ ಮುಖಾಂತರ ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು 2015 ಮಾರ್ಚ್ 19 ಹೃದಯಾಘಾತದಿಂದ ಕೊನೆಯುಸಿರೆಳೆದರು.