About the Author

ಲೇಖಕ ಬಿ. ಪುಟ್ಟಯ್ಯನವರು ಜನಿಸಿದ್ದು ಬೆಂಗಳೂರಿನಲ್ಲಿ ತಂದೆ-ಮರಿಚೆನ್ನಪ್ಪ, ತಾಯಿ- ತಿಮ್ಮಮ್ಮ. ಪ್ಪ್ರಾಥಮಿಕ ಶಿಕ್ಷಣವನ್ನು ಲಂಡನ್ ಮಿಷನ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದ ಅವರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಪದವಿ ಗಳಿಸಿದರೂ ನೌಕರಿ ಸಿಗದ ಕಾರಣ ಪೊಲೀಸ್ ಇಲಾಖೆಯಲ್ಲಿ ಏಳನೆಯ ದರ್ಜೆ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. 1903ರಲ್ಲಿ ಬಡ್ತಿ ದೊರೆತ ಕಾರಣ ಪೊಲೀಸ್ ಹೆಡ್‌ಮುನ್ಷಿಯಾಗಿ ಚಿತ್ರದುರ್ಗಕ್ಕೆ ವರ್ಗವಾದರು. ಹನ್ನೆರಡು ವರ್ಷದ ಲೆಕ್ಕಪತ್ರಗಳನ್ನು ಸರಿಪಡಿಸಿ ಡೆಪ್ಯುಟಿ ಕಮೀಷನರಿಂದ ಮೆಚ್ಚುಗೆ ಪಡೆದರು. 1906ರಲ್ಲಿ ಒಕ್ಕಲಿಗರ ಸಂಘ ಸ್ಥಾಪಿಸಿದ ಅವರು ಒಕ್ಕಲಿಗರ ಸಂಘದ ಸೇವೆಗಾಗಿ ದೀಕ್ಷೆತೊಟ್ಟರು. ದಿವಾನರ ಅಪ್ಪಣೆಯ ಮೇರೆಗೆ ಸಂಬಳವಿಲ್ಲದೆ ರಜೆ ದೊರಕಿಸಿಕೊಂಡು ಸಂಘದ ಕಾರ‍್ಯದರ್ಶಿಯಾಗಿ, ಒಕ್ಕಲಿಗರ ಪತ್ರಿಕೆಯ ಸಂಪಾದಕರಾಗಿ, ಮುದ್ರಣಾಲಯದ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದರು. ಅಲ್ಲದೇ ಸರಕಾರದ ಮುದ್ರಣ ಶಾಖೆಗೆ ಅಭ್ಯರ್ಥಿಗಳ ಆಯ್ಕೆಗೆ ಪುಟ್ಟಯ್ಯನವರ ಜೊತೆಯಲ್ಲಿ ಶ್ರೀನಿವಾಸ ಅಯ್ಯಂಗಾರ‍್ಯರು ಸೇರಿದರು. ಮುದ್ರಣ ಕಲೆಯಲ್ಲಿ ಉಚ್ಚ ರೀತಿಯ ಶಿಕ್ಷಣ ಪಡೆಯಲು ಇಬ್ಬರೂ ಇಂಗ್ಲೆಂಡಿಗೆ ಪ್ರಯಾಣಬೆಳೆಸಿದರು. ಮುದ್ರಣ ಕಲೆಯಲ್ಲಿ ಪರಿಣತರಾಗಿ ಪ್ರಶಸ್ತಿ ಪಡೆದು 1915ರಲ್ಲಿ ಸ್ವದೇಶಕ್ಕೆ ಮರಳಿದರು. ವಿದೇಶದಲ್ಲಿದ್ದಾಗ ತಮ್ಮ ಅನುಭವಗಳನ್ನು ಒಕ್ಕಲಿಗರ ಪತ್ರಿಕೆಗಾಗಿ PUTTAIAH’S WEEKLY ಎಂಬ ಅಂಕಣ ಪ್ರಕಟಿಸಿದರು. ಈ ಅಂಕಣಬರಹಗಳ ಸಂಕಲನ ‘ಅಭಿವೃದ್ಧಿ ಸಂದೇಶ’ ಎಂಬ ಹೆಸರಿನಿಂದ 1921ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆಯಾಯ್ತು. ಈ ಕೃತಿ ಪ್ರವಾಸ ಸಾಹಿತ್ಯದ ಕನ್ನಡದ ಮೊಟ್ಟಮೊದಲ ಗ್ರಂಥವೆಂಬ ಹೆಗ್ಗಳಿಕೆಗೂ ಪಾತ್ರವಾಯ್ತು. ಸರಕಾರಿ ಮುದ್ರಣಾಲಯದ ಅಸಿಸ್ಟೆಂಟ್ ಸೂಪರಿಂಟೆಂಡೆಂಟರಾಗಿ, ಸೂಪರಿಂಟೆಂಡೆಂಟರಾಗಿ ಕಾರ್ಯ ನಿರ್ವಹಿಸಿ 1934ರಲ್ಲಿ ನಿವೃತ್ತಿ ಪಡೆದರು. ಮುದ್ರಣ ಕಲೆಯ ಬಗ್ಗೆ ಬರೆದ ಪುಸ್ತಕ ಮುದ್ರಣ ಕಸುಬು (1915). 1944ರ ಡಿಸೆಂಬರ್ ತಿಂಗಳಿನಲ್ಲಿ ರಬಕವಿಯಲ್ಲಿ ನಡೆದ 28ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಹೋದ ಪುಟ್ಟಯ್ಯನವರ ಹಠಾತ್ ಮರಣ ಹೊಂದಿದರು. ಪುಟ್ಟಯ್ಯನವರ ಜೀವನ ವೃತ್ತಾಂತವನ್ನು ಅವರ ಮಗ ಬಿ.ಪಿ. ರಾಧಾಕೃಷ್ಣರವರು ‘ನನ್ನ ತಂದೆ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.

ಬಿ. ಪುಟ್ಟಯ್ಯ

(01 Jun 1879)