ಡಾ. ಬಿ.ಆರ್. ಹಿರೇಮಠ ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಯಡವಳ್ಳಿ ಗ್ರಾಮದವರು. ತಂದೆ ರೇವಣ್ಣಯ್ಯ ಹಿರೇಮಠ, ತಾಯಿ ಅನ್ನಪೂರ್ಣದೇವಿ. ಹುಟ್ಟೂರು ಯಡಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ(1964), ಮಾಧ್ಯಮಿಕ ಶಿಕ್ಷಣವನ್ನು ಗಲಗಲಿ ಮತ್ತು ಮುಧೋಳದಲ್ಲಿ(1967) ಪೂರ್ಣಗೊಳಿಸಿದರು. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿಶ್ವವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಪಡೆದು 1971ರಲ್ಲಿ ಬಿ.ಎ. ಪದವೀಧರರಾದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1973ರಲ್ಲಿ) ಪೂರ್ತಿಗೊಳಿಸಿದರು. ‘ಶಾಸನಗಳಲ್ಲಿ ಕರ್ನಾಟಕದ ವರ್ತಕರು’ ವಿಷಯದ ಕುರಿತು (1982ರಲ್ಲಿ) ಪಿಎಚ್.ಡಿ ಪಡೆದರು.ಕರ್ನಾಟಕ ವಿ.ವಿ. ಕನ್ನಡ ಅಧ್ಯಯನ ಪೀಠದಲ್ಲಿಯೇ ಸಂಶೋಧನ ಸಹಾಯಕರಾಗಿ (1973) ಸೇವೆಗೆ ಸೇರಿಕೊಂಡರು. ಐಏ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಬೆಳಗಾವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಯಾಗಿ ಕನ್ನಡ ಅಭ್ಯಾಸ ಮಂಡಳಿಯ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು. ಸಂಶೋಧನೆ, ಸಂಪಾದನೆ ಮತ್ತು ಅಭಿನಂದನಾ ಗ್ರಂಥ, ಲೇಖನ ಸಂಪಾದನೆಯಂತಹ ಕೃತಿಗಳು ಸೇರಿ ಒಟ್ಟು 30ಕ್ಕಿಂತಲೂ ಹೆಚ್ಚು ಗ್ರಂಥಗಳನ್ನುರಚಿಸಿದ್ದಾರೆ.
ಕೃತಿಗಳು: ಸಂಶೋಧನ ಪಥ (1984), ವೀರಶೈವ ಸಂಶೋಧನೆಗಳು(1992), ಕನ್ನಡ ಹಸ್ತಪ್ರತಿ: ಲಿಪಿಕಾರರು, ಪ್ರಶಸ್ತಿಗಳು(1993), ಮುದನೂರು ಮತ್ತು ಯಡ್ರಾವಿಯ ಶಾಸನಗಳು(1994), ವೀರಶೈವ ಸಂಪದ(1998), ಸಾಹಿತ್ಯ ಸಂಶೋಧನೆ (2001), ವ್ಯಾಸಂಗ ತರಂಗ(2004)ಇವು ಸಂಶೋಧನಾ ಕೃತಿಗಳು.
ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ(1977), ತೋಂಟದ ಸಿದ್ಧಲಿಂಗೇಶ್ವರನ ಭಾವರತ್ನಾಭರಣ ಸ್ತೋತ್ರ(1979), ಅದ್ವೈತಾನಂದದ ವಚನಗಳು(1983), ಮಡಿವಾಳ ಮಾಚಿದೇವನ ವಚನಗಳು(1987), ಹರಿಹರನ ಭಕ್ತಿ ತರಂಗಿಣಿ(1987), ಇಮ್ಮಡಿ ಮುರುಗಾ ಗುರುಸಿದ್ಧ ಶಿವಯೋಗಿಯ ಐದು ಕೃತಿಗಳು(1988), ಸುಖ ಸಂಪಾದನೆಯ ವಚನಗಳು(1988), ಸಂಪಾದನೆಯ ಸಾರಾಮೃತ(1988), ವಚನ ಸಂಕಲನ ಸಂಪುಟ-1(1999), ವಚನ ಸಂಕಲನ ಸಂಪುಟ-4(1993), ಸೋದೆಯ ಸದಾಶಿವರಾಯರ ಕೃತಿಗಳು(1993), ಸಂಕೀರ್ಣ ವಚನ ಸಂಪುಟ-8 (1993), ಡಾ. ಆರ್.ಸಿ ಹಿರೇಮಠ : ನಾವು ಕಂಡಂತೆ (1999), ಸಾರಂಗ ಪ್ರಭೆ (2002), ಬಸವಣ್ಣನವರ ವಚನಗಳ ಸಮಾಲೋಚನೆ (2002) ಎಂಬ ಅನೇಕ ಕೃತಿಗಳ ಸಂಪಾದನೆ ಮಾಡಿದ್ದಾರೆ. ಬಿ.ಆರ್. ಹಿರೇಮಠರು ಇನ್ನೂ ಸೇವೆಯಲ್ಲಿ ಇರುವಾಗಲೇ ಹೃದಯಾಘಾತದಿಂದ (12-8-2007) ನಿಧನರಾದರು.