About the Author

ಶರಣ ಸಾಹಿತ್ಯ ವಿದ್ವಾಂಸ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿ ಪುತ್ರರು. ತುಮಕೂರಿನಲ್ಲಿ 23-2-1903 ರಂದು ಜನಿಸಿದರು. ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. 1936ರಲ್ಲಿ  ಮೈಸೂರು ಸಂಸ್ಥಾನದ ವಿದ್ವಾಂಸರಾದರು. ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಹೌದು. ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು.1966ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ,  1968ರಲ್ಲಿ ಜನತೆ ದೇವಗಂಗೆ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿತು. ಕರ್ನಾಟಕ ಏಕೀಕರಣಕ್ಕೆ ದುಡಿದವರು,

ಕೃತಿಗಳು:  ರಾಘವಾಂಕನ ವೀರೇಶ ಚರಿತೆ, ಕೋಡಿಹಳ್ಳಿ ಕೇಶೀರಾಜನ ‘ಷಡಕ್ಷರ ಮಂತ್ರ ಮಹಿಮೆ’ ಗುರುಸಿದ್ದನ ಮಾದೇಶ್ವರ ಸಾಂಗತ್ಯ ಇತ್ಯಾದಿ.  ಕನ್ನಡ ನಿಘಂಟು ಕಾರ್ಯ (1964) ಪೂರ್ಣಗೊಳಿಸಿದರು.  ಭಾಷಣ ಕಲೆ ಅತ್ಯುತ್ತಮ ಮಾಧ್ಯಮವೆಂದು ತಿಳಿದಿದ್ದ ಅವರು ಕನ್ನಡ ನಾಡಿನಲ್ಲೇ ಪ್ರಪ್ರಥಮವಾಗಿ ಭಾಷಣಕಲಾತರಗತಿಗಳನ್ನು ಪ್ರಾರಂಭಿಸಿದ ಹಿರಿಮೆ ಶಾಸ್ತ್ರಿಗಳದ್ದು.  ಶಿವಮೂರ್ತಿ ಶಾಸ್ತ್ರಿಗಳ ಅವಧಿಯಲ್ಲಿ ಪುಸ್ತಕ ಭಂಡಾರಕ್ಕೆ ಸುಮಾರು 4000  ಪುಸ್ತಕಗಳ ಸೇರ್ಪಡೆ ಆಯಿತು. ಆರ್. ನರಸಿಂಹಾಚಾರ್ಯರ ಕವಿಚರಿತ್ರೆ ಪರಿಷ್ಕೃತವಾಗಿ ಪ್ರಕಟವಾಯಿತು. ಬಿ. ಶಿವಮೂರ್ತಿ ಶಾಸ್ತ್ರಿಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 6 ಸಮ್ಮೇಳನಗಳು ನಡೆದಿವೆ. ಪರಿಷತ್ತಿಗೆ ನಾಡಿನ ನಾನಾ ಸಂಸ್ಥೆಗಳಲ್ಲಿ ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆ ಸಂಸ್ಕೃತಿ ಇಲಾಖೆ ಮೊದಲಾದ ಕಡೆ ಪ್ರಾತಿನಿಧ್ಯವಿರುವಂತೆ ಮಾಡಿದ್ದು ಶಾಸ್ತ್ರಿಗಳ ಹೆಗ್ಗಳಿಕೆಗಳಲ್ಲಿ ಒಂದು. ಬಿ. ಶಿವಮೂರ್ತಿ ಶಾಸ್ತ್ರಿಗಳು 15-01-1976 ರಲ್ಲಿ ಲಿಂಗೈಕ್ಯರಾದರು.

ಬ. ಶಿವಮೂರ್ತಿ ಶಾಸ್ತ್ರಿ

(23 Feb 1903-15 Jan 1976)