ಬಿ.ವಿ. ವೈಕುಂಠರಾಜು (ಜನನ: 15-05-1937) ಚಿತ್ರದುರ್ಗ ಜಿಲ್ಲೆಯ, ಚಿತ್ರದುರ್ಗ ತಾಲ್ಲೂಕಿನ ಗುಡ್ಡದ ರಂಗವ್ವನ ಹಳ್ಳಿಯವರು. ತಂದೆ ವೆಂಕಟರಮಣಪ್ಪ, ತಾಯಿ ಚೌಡಮ್ಮ. ಜಗಳೂರಿನಲ್ಲಿ ಮಾಧ್ಯಮಿಕ ಶಾಲೆ, ನಂತರ ಚಿತ್ರದುರ್ಗದ ಮುನಿಸಿಪಲ್ ಹೈಸ್ಕೂಲು, ತುಮಕೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕರಾದರು. ನಂತರ, ‘ತಾಯಿನಾಡು’ಪತ್ರಿಕೆಗೆ, ಪ್ರಜಾವಾಣಿ ದಿನಪತ್ರಿಕೆಗೆ ಸೇರಿದರು. ಮೊದಲ ಕಾದಂಬರಿ ‘ಅಂತ್ಯ’. ‘ತಹತಹ’ ಇವರ ಆತ್ಮಕತೆ. ನಾಟಕ ಅಕಾಡಮಿಯ ಅಧ್ಯಕ್ಷರಾದರು. ‘ರಂಗಚೈತ್ರೋತ್ಸವ’ -30೦ ದಿನಗಳ ಕಾಲ ನಾಟಕಗಳ ಪ್ರದರ್ಶನ ಏರ್ಪಡಿಸಿದ್ದರು. 1984 ಜನವರಿ 24 ರಂದು ‘ವಾರ ಪತ್ರಿಕೆ’ ಆರಂಭಿಸಿದರು. ಸಾಹಿತ್ಯಕವಾಗಿ ‘ರಾಜುಪತ್ರಿಕೆ’ ಆರಂಭಿಸಿದರು. ಮುಂದೆ ಇದೇ ಕ್ಎಂರೀಡಾ ಪತ್ಬರಿಕೆಯಾಯಿತು. ದಕ್ಷಿಣ ಭಾರತದಲ್ಲೇ ಪ್ರಕಟವಾದ (32 ಪುಟ) ಮೊದಲ ಪತ್ರಿಕೆಯಾಗಿತ್ತು. ಸ್ತ್ರೀಯರಿಗಾಗಿ ‘ಹರಿಣಿ’ ಪತ್ರಿಕೆ ಆರಂಭಿಸಿದರು.
ಕಾದಂಬರಿಗಳು: ಆಕ್ರಮಣ, ಉದ್ಭವ, ಪರ್ಯಟನ ಮತ್ತು ಬಲಿ. ಉದ್ಭವ ಕಾದಂಬರಿಯು ತೆಲುಗು, ಹಿಂದಿ, ಮಲಯಾಳಂ ಭಾಷೆಗೂ ಅನುವಾದಗೊಂಡಿದೆ. ನಾಟಕಕ್ಕೂ ರೂಪಾಂತರಗೊಂಡು,1990ರಲ್ಲಿ ಕೋಡ್ಲು ರಾಮಕೃಷ್ಣರ ನಿರ್ದೇಶನದಲ್ಲಿ ಚಲನಚಿತ್ರವಾyitu. ‘ಸನ್ನಿವೇಶ’ ಮತ್ತು ‘ಕಾನನ್ ದೇವಿ-ಇವು ನಾಟಕಗಳು. ಸಂಪಾದಕರ ಡೈರಿಯಲ್ಲಿ ಪ್ರಸ್ತುತ ವಿಷಯಗಳು ವಸ್ತು ನಿಷ್ಠ ವಿಶ್ಲೇಷಣೆಯಿಂದ ಕೂಡಿದ್ದು, ಮಿನಿಕತೆಗಳು ‘ಆಧುನಿಕ ನೀತಿಕತೆಗಳು’ ಕಾಲಂನಿಂದ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ‘ಸಂನ್ಯಾಸಿ ಕುಂಕುಮ ಮತ್ತು ಇತರ ನೂರು ಆಧುನಿಕ ನೀತಿಕತೆಗಳು’, ‘ನಿರ್ಲಿಪ್ತ’, ‘ಅದಲು-ಬದಲು’ ಮತ್ತು ‘ವಂಚಕರ ಪ್ರಪಂಚದ ಹನಿಕತೆಗಳು’ ಹೆಸರಿನಿಂದ ಪ್ರಕಟಗೊಂಡಿದೆ.
ಪ್ರೊ.ಡಿ.ಎಲ್. ನರಸಿಂಹಾಚಾರ್, ನಾಟಕರತ್ನ ಗುಬ್ಬಿವೀರಣ್ಣ, ಟಿ.ಎಸ್ಸಾರ್-ಜೀವನ ಚಿತ್ರ ಕೃತಿಗಳು, ಕರ್ನಾಟಕ ನಾಟಕ ಅಕಾಡಮಿಗಾಗಿ ‘ಸಂಸ ನಾಟಕಗಳು’, ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ‘1979ರ ಕತೆಗಳು’, ಮಾಸ್ತಿ ಯವರಿಗಾಗಿ ‘15 ಕತೆಗಳು’ ಸಂಪಾದಿಸಿದ್ದಾರೆ. ವಿಮರ್ಶಾ ಲೇಖನಗಳ ಸಂಗ್ರಹ ‘ಸಾಹಿತ್ಯ ಸಂವಾದ’., ಕನ್ನಡ ಚಿತ್ರರಂಗದ ಇತಿಹಾಸ ಹೇಳುವ ‘ಸಿನಿಮಾತು’. ಸಪ್ತಶೃಂಗ (ವ್ಯಕ್ತಿಚಿತ್ರ), ಸ್ಪಂದನ (ಸಂಕೀರ್ಣಕೃತ), ಒಂದು ಶತಮಾನದ ಕನ್ನಡ ರಂಗಭೂಮಿಯ ಇತಿಹಾಸವನ್ನು ದಾಖಲಿಸಿ ಬರೆದ ‘ಕನ್ನಡ ರಂಗಭೂಮಿ’ ಕೃತಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿ ದೊರೆಯಿತು. ಮಂಗಳೂರಿನ ಸಂದೇಶ ಪ್ರಶಸ್ತಿ, ಪತ್ರಿಕಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, 2009 ರಲ್ಲಿ ಟಿಎಸ್ಸಾರ್ ಪ್ರಶಸ್ತಿ ಲಭಿಸಿವೆ. ಇವರು 30-01-2009 ರಂದು ನಿಧನರಾದರು.