About the Author

ಹಿರಿಯ ತಂತ್ರಜ್ಞ ಸಿ.ಆರ್. ಸತ್ಯ ಅವರು ವೃತ್ತಿಪರವಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣಿತರು. ಐವತ್ತು ವರ್ಷಗಳಿಗೂ ಮೇಲ್ಪಟ್ಟು ಇವರು ಈ ಕ್ಷೇತ್ರದಲ್ಲಿ ಇಸ್ರೋ ಮತ್ತು ಟಾಟಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇವರು ಬರೆದಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು, ಮೈಸೂರು ವಿಶ್ವ ವಿದ್ಯಾಲಯದ ವಿಶ್ವಕೋಶದಲ್ಲಿ, ರಕ್ಷಣಾ ಇಲಾಖೆಯ ಪ್ರಕಟಣೆಗಳಲ್ಲಿ ವಿಜ್ಞಾನ ಲೋಕ ಹಾಗೂ ಉತ್ಥಾನ ಇಂತಹ ನಿಯತಕಾಲಿಕಗಳಲ್ಲಿ ಮತ್ತು ವೈಜ್ಞಾನಿಕ ಲೇಖನ ಸಂಕಲನಗಳ ಪುಸ್ತಕಗಳಲ್ಲಿ ಕಾಣಬಹುದು.

ಸತ್ಯ ಅವರು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಇಲ್ಲಿ ವ್ಯಕ್ತಿ ಚಿತ್ರಗಳಿವೆ, ಜೀವನಾನುಭವಗಳಿವೆ, ಹಾಸ್ಯ ಸಂಕಲನಗಳಿವೆ ಮತ್ತು ಸಂಶೋಧನೆಗಳಿವೆ. ಇವರ ಕವನ ‘ಆಚೇ ಮನೆ ಸುಬ್ಬಮ್ಮನಿಗೆ ಏಕದಸೀ ಉಪವಾಸ’ 1959ರಲ್ಲಿ ಕೊರವಂಜಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ ನಂತರ ಹೊರಬಂದ ಅಪರಂಜಿ ಪತ್ರಿಕೆಯಲ್ಲಿ ಅಣಕ ಹಾಸ್ಯ ಲೇಖನಗಳನ್ನು ಈಗಲೂ ಬರೆಯುತ್ತಿದ್ದಾರೆ. 

ತಿರುವನಂತಪುರದಲ್ಲಿ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಲ್ಲುಗಳ ಮೇಲೆ ಸತ್ಯ ಅವರು ಮಾಡಿದ ಸಂಶೋಧನೆಯ ಬಗ್ಗೆ ಕನ್ನಡದಲ್ಲಿ ಅವರು ಬರೆದ ‘ಅಳಿವಿಲ್ಲದ ಸ್ಥಾವರ’ ಪುಸ್ತಕಕ್ಕೆ ಕರ್ನಾಟಕ ಸಾಂಸ್ಕೃತಿಕ ಅಕಾಡಮಿಯಿಂದ ಹಾಗೂ ಇವರೇ ಬರೆದಿರುವ ಪುಸ್ತಕದ ಇಂಗ್ಲಿಷ್ ಅನುವಾದ ‘ಸೆಂಟಿನಲ್ಸ್ ಆಫ್ ಗ್ಲೋರಿ’ ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರಗಳು ದೊರೆತಿವೆ. ಬಹುಮುಖಿ ಆಸಕ್ತಿಯುಳ್ಳ ಸತ್ಯ ಅವರು ಪರಿಸರ ರಕ್ಷಣೆ, ಸಾಹಿತ್ಯ, ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ಪರಿಚಯ, ಶಬ್ದ ಚಿತ್ರಗಳ ನಿರೂಪಣೆಗಳು - ಈ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ದೇಶದ ಹಿರಿಯ ವಿಜ್ಞಾನಿಗಳು ಹಾಗೂ ನಾಯಕರೊಡನೆ ಒಡನಾಟ, ಅನೇಕ ದೇಶಗಳಲ್ಲಿನ ಪ್ರಯಾಣ ಮತ್ತು ತಮ್ಮ ಹವ್ಯಾಸಗಳಿಂದ ಮೂಡಿಬಂದ ಕೆಲವು ಕುತೂಹಲಕಾರಿ ಅನುಭವಗಳನ್ನು ‘ತ್ರಿಮುಖಿ’ ಪುಸ್ತಕದ ಮೂಲಕ ಓದುಗರೊಂದಿಗೆ ಸತ್ಯ ಅವರು ಹಂಚಿಕೊಂಡಿದ್ದಾರೆ. 

 

ಸಿ.ಆರ್. ಸತ್ಯ