About the Author

ಗಣೇಶ ಭಟ್ಟ ಕೊಪ್ಪಲತೋಟ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಪ್ಪಲತೋಟದವರು. ದಾವಣಗೆರೆಯ ಯುಬಿಡಿಟಿ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿ.ಇ (ಮೆಕ್ಯಾನಿಕಲ್) ಪದವಿ ಪಡೆದ ಇವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಎಂ.ಎ (ಸಂಸ್ಕೃತ) ಪದವಿಯನ್ನೂ ಕೂಡ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿಯಲ್ಲಿದ್ದಾರೆ. ಕನ್ನಡ ಸಂಸ್ಕೃತ ತೆಲುಗು ಭಾಷೆಗಳ ಸಾಹಿತ್ಯದಲ್ಲಿ ಆಸಕ್ತರು. ಹಳಗನ್ನಡದಲ್ಲಿ ವಿಶೇಷ ಪರಿಶ್ರಮ. ಕನ್ನಡದ ಪ್ರಮುಖ ಅಷ್ಟಾವಧಾನಿಗಳಲ್ಲಿ ಒಬ್ಬರು. ಕರ್ನಾಟಕದ ಹಲವು ಕಡೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಷ್ಟಾವಧಾನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅಲ್ಲದೇ ಬೇರೆ ಬೇರೆ ಅವಧಾನಿಗಳ ಅವಧಾನಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಬಾರಿ ಪೃಚ್ಛಕರಾಗಿಯೂ ಭಾಗವಹಿಸಿದ್ದಾರೆ.

ಹಳಗನ್ನಡದ ಕಾವ್ಯಗಳು, ಕಥೆ, ಸಣ್ಣಕಥೆ, ಕಾದಂಬರಿ, ಲಲಿತಪ್ರಬಂಧ ಮೊದಲಾದ ಹಲವು ಪ್ರಕಾರದ ಸಾಹಿತ್ಯದಲ್ಲಿ ಕೃಷಿ ನಡೆಸಿದ್ದಾರೆ. ಹಲವು ಕಥೆಗಳು ಲೇಖನಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಗಸ್ತ್ಯಚರಿತೆ, ವೈನತೇಯವಿಜಯಂ, ಶ್ರೀರಾಮನಿರ್ಯಾಣಂ, ಮಧುವನಮರ್ದನಂ, ಸೌಂದರಾನಂದಂ ಮೊದಲಾದವು ಇವರು ಬರೆದ ಹಳಗನ್ನಡದ ಖಂಡಕಾವ್ಯಗಳು, ಧೂರ್ತದೂತಂ, ರಾಸಭಶತಕಂ ವಿಡಂಬನಕಾವ್ಯಗಳು. “ಸಮಯದ ಸರ್ಕಲ್” (2011) ಮೊದಲ ಪ್ರಕಟಿತ ಕಾದಂಬರಿ.

ಗಣೇಶ ಭಟ್ಟ ಕೊಪ್ಪಲತೋಟ