ರಾಜಕಾರಣಿ ಡಾ.ಹೆಚ್.ಸಿ. ಮಹದೇವಪ್ಪ ಹುಟ್ಟಿದ್ದು 20 ಏಪ್ರಿಲ್, 1953ರಲ್ಲಿ ನಂಜನಗೂಡಿನ ಹದಿನಾರು ಗ್ರಾಮದವರಾದ (ಯದುನಾಡು) ಡಾ. ಮಹದೇವಪ್ಪನವರು ಎಂ.ಬಿ.ಬಿ.ಎಸ್. ಪದವಿ ಪಡೆದು ರಾಜಕಾರಣ ಪ್ರವೇಶಿಸಿದವರು. ಕರ್ನಾಟಕದ ಪ್ರಮುಖ ಜನಪ್ರತಿನಿಧಿಗಳಲ್ಲಿ ಒಬ್ಬರು ಮತ್ತು ಬಿ. ರಾಚಯ್ಯನವರ ಶಿಷ್ಯರು. ಸುಮಾರು 40 ವರ್ಷಗಳ ಸಾರ್ವಜನಿಕ ಬದುಕಿನ ಹಿನ್ನೆಲೆಯನ್ನು ಹೊಂದಿರುವ ಇವರು ಆರು ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿ ಕರ್ನಾಟಕದಲ್ಲಿ 40 ಸಾವಿರ ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ವಿಚಾರಧಾರೆಗಳಲ್ಲಿ ನಂಬಿಕೆ ಇಟ್ಟಿರುವ ಮಹದೇವಪ್ಪನವರು ದಲಿತ ಚಳುವಳಿಗಳ ಹಿಂದಿನ ಶಕ್ತಿಯಾಗಿದ್ದು ದಲಿತ ಸಂಘಟನೆಗಳ ನಂಬುಗೆಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಅತ್ಯುತ್ತಮ ಜನ ಸಂಘಟಕರಾಗಿರುವ ಇವರು ಸಿದ್ದರಾಮಯ್ಯನವರ ಅತ್ಯಾಪ್ತರಾಗಿದ್ದು ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಸಾಕಾರದ ಸಿದ್ಧಾಂತದಲ್ಲಿ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದು ತಮ್ಮ ಸೈದ್ಧಾಂತಿಕ ಬದ್ಧತೆಯ ಕಾರಣಕ್ಕಾಗಿ ಕರ್ನಾಟಕದ ಮಹತ್ವದ ರಾಜಕಾರಣಿಗಳಲ್ಲಿ ಒಬ್ಬರೆನಿಸಿಕೊಂಡಿದ್ದು, ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾರೆ.