About the Author

ಬೆಂಗಳೂರಿನ ವಿಜಯನಗರದ ಗುರುಸ್ವಾಮಿ ಮತ್ತು ಪಾರ್ವತಮ್ಮ ದಂಪತಿಯ ಹಿರಿಯ ಪುತ್ರಿ ಹೇಮಲತಾ ಮೂರ್ತಿ. ಓದಿದ್ದು ಸರಕಾರಿ ಶಾಲೆಯಲ್ಲಿ, ಕಷ್ಟದಲ್ಲೇ ಜೀವನ ನಡೆಸಿದ ಇವರ ಕುಟುಂಬ ಬಡತನವನ್ನು ಎದುರಿಸಿದ್ದಾರೆ. ಹತ್ತನೇ ತರಗತಿ ಮುಗಿಸಿ ಪದವಿಪೂರ್ವ ಶಿಕ್ಷಣಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಬಡತನದ ಕಾರಣಕ್ಕೆ ಓದು ಮುಂದುವರೆಸಲಾಗದೇ ಹೇಮಲತಾ ಮೂರ್ತಿಯವರು ಮದುವೆ ಮಾಡಿಕೊಳ್ಳಬೇಕಾಯಿತು. ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಮೂರ್ತಿಯವರು ಬಾಳ ಸಂಗಾತಿಯಾಗಿ ಹೇಮಲತಾ ಮೂರ್ತಿಯವರೊಂದಿಗೆ ಜೊತೆಯಾದರು. ಕಾರ್ಯನಿಮಿತ್ತ ಮೂರ್ತಿಯವರಿಗೆ ಭದ್ರಾವತಿಗೆ ವರ್ಗಾವಣೆಯಾದಾಗ ಅಲ್ಲಿಗೆ ತೆರಳಿದ ಹೇಮಲತಾ ಮೂರ್ತಿಯವರು ಕುಟುಂಬದ ಜವಾಬ್ದಾರಿ ಹೊತ್ತುಕೊಂಡೇ ತಮ್ಮ ಇಬ್ಬರು ಮಕ್ಕಳನ್ನು ಸಾಕಿ ಸಲಹುತ್ತಾ ಅರ್ಧದಲ್ಲೇ ಬಿಟ್ಟ ಶಿಕ್ಷಣವನ್ನು ಮುಂದುವರೆಸಿದರು. ಪರಿಣಾಮ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ಸಾಹಿತ್ಯದಲ್ಲಿ ಆಸಕ್ತಿ ಇತ್ತು ಹಾಗೂ ಲಂಕೇಶ ಪತ್ರಿಕೆ ಓದುತ್ತಿದ್ದ ಹೇಮಲತಾ ಅವರಿಗೆ ಲಂಕೇಶ ಪತ್ರಿಕೆ ಎಂದರೆ ಅಚ್ಚುಮೆಚ್ಚು, ತಮ್ಮ ಸಾಹಿತ್ಯ ಕೃಷಿಗೆ ತಮ್ಮ ಓದೇ ಪ್ರಮುಖ ಪ್ರೇರಣೆ ಎನ್ನುತ್ತಾರೆ. ಭಾವ ಭಾಮಿನಿ ಮತ್ತು ಕಳಚಿಟ್ಟಿದ್ದೇನೆ ಇದೋ ನಿರ್ವಾಣ ಎಂಬ ಎರಡು ಕವನ ಸಂಕಲನಗಳು ಪ್ರಕಟವಾಗಿವೆ. 

ಹೇಮಲತಾ ಮೂರ್ತಿ