About the Author

‘ಇಈ’ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತರಾಗಿದ್ದ ಇಟಿಗಿ ಈರಣ್ಣ (2 ಜುಲೈ 1950) ಅವರು ಮೂಲತಃ ಹಿರೇಹಡಗಲಿಯವರು. ಹೊಸಪೇಟೆಯ ವಿಜಯನಗರ ಕಾಲೇಜು ಸೇರಿದಂತೆ ಬಳ್ಳಾರಿಯ ವಿ.ವಿ. ಸಂಘದ ಕಾಲೇಜುಗಳಲ್ಲಿ 33 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ‘ಕನ್ನಡ ಶಾಯಿರಿಗಳು’ (1977) ಇಟಿಗಿ ಈರಣ್ಣನವರ ಮೊದಲ ಕೃತಿ. ಉರ್ದು ಭಾಷೆಯಲ್ಲಿ ಜನಪ್ರಿಯ ಕಾವ್ಯ ಪ್ರಕಾರ ಆಗಿರುವ ಶಾಯಿರಿಯನ್ನ ಕನ್ನಡ ಸಾರಸ್ವತ ಲೋಕಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಹಿರಿಮೆ ಅವರದು. ಹರಿವಂಶ್ ರಾಯ್ ಬಚ್ಚನ್ ಅವರ ‘ಮಧುಶಾಲಾ’ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದ ಈರಣ್ಣ ಅವರು ಪಂಜಾಬಿ ಕತೆ-ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಕನ್ನಡ-ಗಜಲ್, ಹಾಗೂ ಕನ್ನಡ ರುಬಾಯಿಗಳಿಗಾಗಿ ಅವರು ಜನಪ್ರಿಯರಾಗಿದ್ದರು. ರಾವಿ ನದಿಯ ದಂಡೆಯ ಮೇಲೆ, ನಾನೂ ನೀನು ರಾಜಿ ಏನ್ ಮಾಡ್ತಾನ್ ಖಾಜಿ?, ತಾಜಮಹಲ್ ಟೆಂಡರ್ ಹಾಗೂ ಯಹೂದಿ ಹುಡುಗಿ ನಾಟಕಗಳು ಯಶಸ್ವಿ ರಂಗ ಪ್ರಯೋಗ ಕಂಡ ಅನುವಾದಿತ ನಾಟಕಗಳು.

‘ಕಬೀರದಾಸರ ಕನ್ನಡ ದೋಹೆಗಳು’ ಅವರ ಮತ್ತೊಂದು ಅನುವಾದ. ಆಧುನಿಕ ವಚನಗಳನ್ನು ಒಳಗೊಂಡ ‘ವಚನಾಚಲ’ ಮತ್ತು ಆಧುನಿಕ ತ್ರಿಪದಿಗಳನ್ನು ಒಳಗೊಂಡ ‘ಈಶನ ವಚನಗಳು’ ಸ್ವತಂತ್ರ ಕೃತಿಗಳು, ಶಬ್ದಮಣಿದರ್ಪಣ ಸಂಗ್ರಹ, ಭಕ್ತವಾಣಿ, ನಮ್ಮ ಬೆಳಕು ಕೃತಿಗಳು ಪಠ್ಯಸಂಗ್ರಹಗಳು. ಸ್ಪರ್ಶ ಕನ್ನಡ ಚಲನಚಿತ್ರಕ್ಕೆ ಅನೇಕ ಶಾಯಿರಿ ಹಾಗೂ ಗೀತೆಗಳನ್ನು ರಚಿಸಿದ್ದರು. ಆ ಚಿತ್ರಕ್ಕಾಗಿ ಅತ್ಯುತ್ತಮ ಗೀತ ರಚನೆಕಾರ ಪರ್ಶಸ್ತ ಪಡೆದಿದ್ದರು. 2010ರಲ್ಲಿ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

2017ರ ಮಾರ್ಚ್ 13ರಂದು ಶಿವಮೊಗ್ಗದಲ್ಲಿ ನಿಧನರಾದರು.

ಇಟಿಗಿ ಈರಣ್ಣ

(02 Jul 1950-13 Mar 2017)