About the Author

ಕೃಷ್ಣಪ್ರಕಾಶ ಉಳಿತ್ತಾಯ ಅವರು ಮೂಲತಃ ಮಂಗಳೂರಿನ ಉಳಾಯಿಬೆಟ್ಟು ಸಮೀಪದ ಪೆರ್ಮಂಕಿನವರು. ತಂದೆ ವೆಂಕಟೇಶ ಉಳಿತ್ತಾಯ ಹಾಗೂ ತಾಯಿ ಅಮರಾವತಿ. 

ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾದ ಕೃಷ್ಣ ಪ್ರಕಾಶ ಉಳಿತ್ತಾಯ ಅವರು ಯಕ್ಷಗಾನ ಕಲಾವಿದ, ಕಲಾವಿಮರ್ಶಕರೂ ಕೂಡ. ಈಗಾಗಲೆ ಯಕ್ಷಗಾನ ಪರಂಪರೆಯಲ್ಲಿ ಇವರ ಹೆಸರು ಚಿರಪರಿಚಿತವಾಗಿದೆ.  ಓದಿದ್ದು ಕಾನೂನು ಸ್ನಾತಕೋತ್ತರ ಪದವಿ ( LLM) ಯಾದರೂ ಇವರ ಯಕ್ಷಗಾನ ಕಲೆಯ ಕೊಡುಗೆ ಅನನ್ಯವಾದುದು. ಯಕ್ಷಗಾನ ನಾಟ್ಯಾಭ್ಯಾಸವನ್ನು  ಸಬ್ಬಣಕೋಡಿ ರಾಮ ಭಟ್ ಅವರಿಂದ ಕಲಿತು ಯಕ್ಷಗಾನ ಹಿಮ್ಮೇಳ ಚೆಂಡೆ ಮದ್ದಳೆಯನ್ನು  ದಿ.ಪುಂಡಿಕಾಯಿ ಕೃಷ್ಣ ಭಟ್, ಶ್ರೀ ಮೋಹನ ಬೈಪಾಡಿತ್ತಾಯ ಅವರಿಂದ ಕಲಿತಿದ್ದಾರೆ. ಇದಲ್ಲದೇ ಕರ್ಣಾಟಕ ಶಾಸ್ತ್ರೀಯ ಮೃದಂಗವಾದನವನ್ನು  ವಿ. ತ್ರಿಚ್ಚಿ ಕೆ.ಆರ್ ಕುಮಾರ್ ಮತ್ತು ವಿ. ಕುಕ್ಕಿಲ ಶಂಕರ ಭಟ್ ಅವರಿಂದ ಕಲಿತುಕೊಂಡರು. ಯಕ್ಷಗಾನ ಛಂದಸ್ಸು ಕಲಿಕೆ ಮತ್ತು ಮದ್ದಲೆವಾದನ ಛಂದಸ್ಸುಗಳನ್ನೂ ಶಾಸ್ತ್ರೀಯವಾಗಿ ಗಣೇಶ ಕೊಲೆಕಾಡಿ ಇವರ ಬಳಿ ಅಧ್ಯಯನ ನಡೆಸಿದ್ದಾರೆ. 

ಇವರ ಆಸಕ್ತಿಯ ಕ್ಷೇತ್ರಗಳು ಕಲೆ, ಸಂಗೀತ, ಕನ್ನಡ ,ಇಂಗ್ಲೀಷ್ ಸಾಹಿತ್ಯದ ಓದಿನ ಜೊತೆ ವೈದಿಕ ಸಾಹಿತ್ಯದ ಅಧ್ಯಯನ ನಡೆಸುವುದು ಇವರಿಗೆ ಅಚ್ಚುಮೆಚ್ಚು. 

’ಅಗರಿ ಮಾರ್ಗ’  ಇವರ ಮೊದಲ ಪ್ರಕಟಿತ ಪುಸ್ತಕವಾಗಿದೆ. ಕಲಾರಾಧಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉದಯವಾಣಿ, ದಿ. ಹಿಂದು(ಆಂಗ್ಲ ಬರಹ), ಪ್ರಜಾವಾಣಿ, ಕಣಿಪುರ, ಯಕ್ಷದೀಪ, ತುಷಾರ, ರಾಗಸುಧಾ ಇತ್ಯಾದಿ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟಗೊಂಡಿವೆ. ಅಗರಿ ಶ್ರೀನಿವಾಸ ಭಾಗವತ ಮತ್ತು ಬಲಿಪ ನಾರಾಯಣ ಗಾಯನದ ಬಗೆಗೆ ಅಧ್ಯಯನ ಸಂಶೋಧನೆಯನ್ನು ನಡೆಸುತ್ತಿದ್ದಾರೆ.

ಹಿಮ್ಮೇಳ ಕಲಾವಿದರ ಪರಿಚಯ ಮಾಲೆ ಸುಘಾತ, ಲೇಖನಗಳು, ಪುಸ್ತಕ ಪರಿಚಯ ಮಾಲೆ. ತಾಳಮದ್ದಳೆ ಅವಲೋಕನ,  ಇವು ಅವರ ಪ್ರಕಟಿತ ಬರಹಗಳು.ಯಕ್ಷಗಾನ ಕಲೆಯ ಬಗ್ಗೆ ಹಲವು ಕಡೆ ಭಾಷಣ, ಉಪನ್ಯಾಸ ನೀಡುತ್ತಾ ಯಕ್ಷಗಾನದ ಪರಿಚಯ, ಹಿನ್ನೆಲೆ, ಪರಂಪರೆಯನ್ನು ತಿಳಿಸಿಕೊಡುವ ಇವರ ಪ್ರಯತ್ನ ಮೆಚ್ಚುವಂತದ್ದು. ಹಲವು ಸಂಸ್ಮರಣಾ ಗ್ರಂಥಗಳಿಗೆ ಲೇಖನ ಕೊಡುಗೆ ನೀಡಿದ್ದಾರೆ. 

ಹಲವಾರು ಯಕ್ಷಗಾನ ಮೇಳಗಳಿಗೆ ಅತಿಥಿ ಕಲಾವಿದರಾಗಿ ಸಕ್ರಿಯವಾಗಿ ಪಾಲ್ಗೊಳ್ಳುವ ಇವರು ಯುವ ಯಕ್ಷಕಲಾರಾಧಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 

 

 

ಕೃಷ್ಣ ಪ್ರಕಾಶ ಉಳಿತ್ತಾಯ