About the Author

ದ್ರಾವಿಡ ಭಾಷಾ ವಿದ್ವಾಂಸ, ಕನ್ನಡದ ಉದ್ದಾಮ ಪಂಡಿತರಾದ ಎಂ. ಮರಿಯಪ್ಪ ಭಟ್. (ಜನನ: 1905 ಜುಲೈ 27ರಂದು ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ ಜನಿಸಿದರು. ತಂದೆ ಗೋವಿಂದ ಭಟ್ಟರು, ತಾಯಿ ಕಾವೇರಮ್ಮ. ಮೂರು ದಶಕಗಳ ಕಾಲ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪಂಡಿತರಾಗಿ, ನಿಘಂಟುತಜ್ಞರಾಗಿ, ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ಧಾರೆ. ಅವರು ಪರಿಷ್ಕರಿಸಿದ ಕನ್ನಡ ಕಿಟೆಲ್ ನಿಘಂಟನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದ್ದು ಕನ್ನಡ ಸಾಹಿತ್ಯ ಓದುಗರಿಗೆ ಬಹುದೊಡ್ಡ ಕೊಡುಗೆಯಾಗಿದೆ. ಅಲ್ಲದೆ, ಈ ಕಿಟೆಲ್ ಕನ್ನಡ – ಇಂಗ್ಲಿಷ್ ನಿಘಂಟುವಿನ ನಾಲ್ಕು ಸಂಪುಟಗಳು ಮಾತ್ರವಲ್ಲದೆ, ದ್ರಾವಿಡಿಯನ್ ಕಂಪಾರೆಟಿವ್ ವಕಾಬ್ಯುಲರಿ (ದ್ರಾವಿಡ ಭಾಷೆಗಳ ಹೋಲಿಕೆಯ ಶಬ್ದಕೋಶ), ತುಳು – ಇಂಗ್ಲಿಷ್ ನಿಘಂಟು ಹಾಗೂ ಹವ್ಯಕ ಭಾಷೆಯ ನಿಘಂಟು ಪ್ರಕಟವಾಗಿದೆ.

‘ಮಂಗರಾಜನ ಅಭಿನವಾಭಿದಾನಂ, ಸೆಲೆಕ್ಟೆಡ್ ಕನ್ನಡ ಇನ್‌ಸ್ಕ್ರಿಪ್ಷನ್ಸ್, ಆಚಣ್ಣನ ವರ್ಧಮಾನ ಪುರಾಣಂ, ಪಾರ್ಶ್ವನಾಥ ಪುರಾಣಂ, ಶ್ರೀಧರಾಚಾರ್ಯರ ಜಾತಕ ತಿಲಕಂ, ಚಿಕುಪಾಧ್ಯಾಯನ ವಿಷ್ಣುಪುರಾಣಂ, ಹಳಗನ್ನಡ, ನಡುಗನ್ನಡ ಕಾವ್ಯ ಸಂಗ್ರಹ, ಹೊಸಗನ್ನಡ ಕಾವ್ಯಶ್ರೀ, ನಾಲ್ನುಡಿ-ನಾಣ್ಣುಡಿ, ಸರ್ವಜ್ಞನ ವಚನ’ ಅವರ ಮುಖ್ಯ ಸಂಪಾದಿತ ಕೃತಿಗಳು.

‘ಸಂತರ ಚರಿತ್ರೆ’ ಅವರ ಅನುವಾದ ಕೃತಿ. ‘ಕನ್ನಡ ಸಂಸ್ಕೃತಿ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಕೇಶೀರಾಜ’ ಅವರ ಸ್ವತಂತ್ಯ್ರ ಕೃತಿಗಳು. ಕೇಂದ್ರ ಫಿಲ್ಮ್ ಸೆನ್ಸಾರ್ ಮಂಡಳಿಯ ಕನ್ನಡ ಸಲಹಾ ಸಮಿತಿಯ ಸದಸ್ಯ, ಪಠ್ಯಪುಸ್ತಕ ಸಮಿತಿ, ನಿಘಂಟು ರಚನಾ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ರಚನಾ ಸಮಿತಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು.  ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ಫೆಲೋಷಿಪ್ ಹಾಗೂ ಇತರೆ ಗೌರವ ಹುದ್ದೆಗಳಿಗೆ ಸೇವೆ ಸಲ್ಲಿಸಿದ್ದಾರೆ. 1980ರ ಮಾರ್ಚ್ 21 ರಂದು ನಿಧನರಾದರು. 

ಎಂ. ಮರಿಯಪ್ಪ ಭಟ್

(27 Jul 1905-21 Mar 1980)