About the Author

ವಿದ್ವಾಂಸರು, ಸಾಹಿತಿಗಳು, ಆಧುನಿಕ ಕನ್ನಡದ ನಿರ್ಮಾತೃಗಳಲ್ಲಿ ಒಬ್ಬರಾದ ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹುಟ್ಟಿದ್ದು ಮೈಸೂರಿನಲ್ಲಿ. ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ, ರೇಂಜ್ ಇನ್‌ಸ್ಪೆಕ್ಟರ್ ರಾಗಿ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ 1947ರಲ್ಲಿ ನಿವೃತ್ತಿ ಪಡೆಯುತ್ತಾರೆ.

ಪ್ರಚಂಡ ವಾಗ್ಮಿ, ಉತ್ತಮ ಶಿಕ್ಷಕರು, ಸಮರ್ಥ ಅಧಿಕಾರಿಯಾದ ಅವರು ಸಂಸ್ಕೃತ, ಹಳಗನ್ನಡಗಳ ಅಭ್ಯಾಸದ ಅನುಭವದಿಂದ ರಚಿಸಿದ ಕೃತಿಗಳು.. ವಿದ್ಯಾರ್ಥಿ ದೆಸೆಯಲ್ಲಿಯೇ ರಚಿಸಿದ ಕಾದಂಬರಿ ‘ಸಾವಿತ್ರಿ.’ ಸ್ಕೌಟ್ ಬಾಲಕರ ಅಭಿನಯಕ್ಕೆಂದು ರಚಿಸಿದ ನಾಟಕ ‘ಕಂಠೀರವ ವಿಜಯ.’  ’ಧರ್ಮದುರಂತ, ನಾಗರಿಕ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಮಹಾತ್ಯಾಗ ಮತ್ತೊಂದು ಕಾದಂಬರಿ. ’ರಂಗಣ್ಣನ ಕನಸಿನ ದಿನಗಳು’ ಮತ್ತೊಂದು ಕೃತಿ. ಕನ್ನಡ ಸಾಹಿತ್ಯದಲ್ಲಿ ಇದೊಂದು ವಿಶಿಷ್ಟ ಬಗೆಯ ಕೃತಿ. ಗ್ರಾಮೀಣ ಬದುಕಿನ ಶಾಲಾ ಮಾಸ್ತರರ ಬದುಕು-ಬವಣೆಗಳ ನಿರೂಪಣೆಯ ಕೃತಿ. ಆಳವಾದ ಅಭ್ಯಾಸದಿಂದ ಮೂಡಿ ಬಂದ ಮತ್ತೊಂದು ಕೃತಿ ‘ಭಕ್ತಿ ಭಂಡಾರಿ ಬಸವಣ್ಣ’. ’ಚಾಮರಸನ ಪ್ರಭುಲಿಂಗಲೀಲೆ, ವಿರೂಪಾಕ್ಷ ಪಂಡಿತನ ಚನ್ನಬಸವಪುರಾಣ’ ಸಂಪಾದಿತ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವಲ್ಲಿ ಇವರ ಪಾಲು ಬಹಳ. ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ. ಕನ್ನಡ ನುಡಿ ಮತ್ತು ಪರಿಷತ್ ಪತ್ರಿಕೆಗಳ ಸಂಪಾದಕರ ಜವಾಬ್ದಾರಿ. ಇವರು ಸಲ್ಲಿಸಿದ ಕನ್ನಡ ನಾಡುನುಡಿ ಸೇವೆಗಾಗಿ 1940ರಲ್ಲಿ ಬಾದಾಮಿ ಶಿವಯೋಗ ಮಂದಿರದಿಂದ ‘ವಚನ ವಾಙ್ಮಯ ವಿಶಾರದ’ ಪ್ರಶಸ್ತಿ, ಸನ್ಮಾನ. ಇವರ ನಿಧನಾ ನಂತರ ಲೇಖನ, ಮುನ್ನುಡಿ, ವಿಮರ್ಶೆ-ಬರಹಗಳನ್ನೆಲ್ಲಾ’ ಸಾಹಿತ್ಯಲೋಕ’ ಎಂಬ ಹೆಸರಿನಲ್ಲಿ ಮೈಸೂರು ವಿ.ವಿ.ದ ಕುವೆಂಪು ಅಧ್ಯಯನ ಸಂಸ್ಥೆಯಿಂದ ಪ್ರಕಟಿಸಲಾಯಿತು.

ಎಂ.ಆರ್. ಶ್ರೀನಿವಾಸಮೂರ್ತಿ

(28 Aug 1892-05 Sep 1953)