About the Author

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ 1982 ರಂದು ಜನನ. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ಆಗಿದ್ದು ತುಮಕೂರಿನ ಸರ್ಕಾರೀ ಪಾಲಿಟೆಕ್ನಿಕ್ ಕಾಲೇಜಿನಲ್ಲಿ. 2001ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (ಜೆ ಎಸ್ ಡಬ್ಲ್ಯೂ) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರಿದ್ದು. ಅದಾದ ಐದು ವರ್ಷಗಳ ನಂತರ ಎಲ್&ಟಿ ಕಂಪನಿಗೆ ಸೇರಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಎರಡು ವರ್ಷ ಇಂಜಿನಿಯರಾಗಿ ಕೆಲಸ. ತದನಂತರ ದುಬೈನಲ್ಲಿ ಕೆಲಸ ಮಾಡುವ ಅವಕಾಶ ಮತ್ತು ಅಲ್ಲಿ ಸುದೀರ್ಘ 10 ವರ್ಷಗಳ ಜೀವನ. ಯುದ್ಧಪೀಡಿತ ದೇಶಗಳಲ್ಲಿ ನ್ಯಾಟೋ ಮತ್ತು ವಿಶ್ವಸಂಸ್ಥೆಗೆ ನೆರವಾಗುತ್ತಿದ್ದ ಜರ್ಮನ್ ಮೂಲದ ಕಂಪನಿಯೊಂದರಲ್ಲಿ ಇಂಜಿನಿಯರಿಂಗ್ ವಿಭಾಗದ ಉಪ-ಮುಖ್ಯಸ್ಥನಾಗಿ ಕೆಲಸ. ನಂತರ ಸ್ವಲ್ಪ ಕಾಲ ನೆಲೆಸಿದ್ದು ಉತ್ತರ ಮೆಸಿಡೋನಿಯಾದಲ್ಲಿ. 2018ರಿಂದ ಈಚೆಗೆ ಮೈಸೂರಿನಲ್ಲಿ ನೆಲೆಸಿ ಸದ್ಯಕ್ಕೆ ಮನೆಯಿಂದಲೇ ಸಿಂಗಾಪುರಿನ ಕಂಪನಿಯೊಂದಕ್ಕೆ ಕನ್ಸಲ್ಟೆಂಟ್ ಇಂಜಿನಿಯರಾಗಿ ವೃತ್ತಿ. ಕೆಲಸದ ಸಲುವಾಗಿ ಯುದ್ಧಪೀಡಿತವಾಗಿದ್ದ ಆಫ್ಘಾನಿಸ್ತಾನ್ ಮತ್ತು ಇರಾಕ್ ಸೇರಿದಂತೆ, ಇತರೆ ಗಲ್ಫ್ ರಾಷ್ಟ್ರಗಳು, ಯುರೋಪ್ ಮತ್ತು ಅಮೇರಿಕ ದೇಶಗಳನ್ನು ಹಲವಾರು ಬಾರಿ ಸುತ್ತಿದ ಅನುಭವಿದೆ. 
ಕನ್ನಡ ಸಾಹಿತ್ಯ ಓದುವ ಹವ್ಯಾಸ ಚಿಕ್ಕಂದಿನಿಂದಲೇ ಇದ್ದು ಲೇಖನ, ಕಥೆ, ಪ್ರವಾಸ ಮತ್ತು ಅನುಭವ ಕಥನ ಬರೆಯುವ ಹವ್ಯಾಸಿ ಬರಹಗಾರ. ವಿಜಯಕರ್ನಾಟಕ ಮತ್ತು ವೀರಲೋಕ ಪ್ರಕಾಶನ ಆಯೋಜಿಸಿದ್ದ 2022ರ ದೀಪಾವಳಿ ಕಥಾಸ್ಪರ್ಧೆಯಲ್ಲಿ ತಮ್ಮ ಕಥೆಗೆ ಬಹುಮಾನ ಬಂದಿದೆ.
ವೀರಲೋಕ ಪ್ರಕಾಶನದಿಂದ ಪ್ರಕಟವಾದ ‘ಕುಣಿಗಲ್ ಟು ಕಂದಹಾರ್’ (ಅಫ್ಘಾನ್ ಯುದ್ಧಭೂಮಿಯ ರೋಚಕ ಅನುಭವಗಳು) ಇವರ ಚೊಚ್ಚಲ ಕೃತಿ.

ಮಂಜುನಾಥ್‌ ಕುಣಿಗಲ್