About the Author

ಲೇಖಕ ನವರತ್ನ ರಾಮರಾವ್ ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ. ತಂದೆ- ನವರತ್ನ ಬಾಲಕೃಷ್ಣರಾಯರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ರಾಮರಾವ್ ಅವರು ಓದಿದ್ದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಅಧ್ಯಾಪಕ ಟೇಟ್ ಸಾಹೇಬರ ಸಹಪಾಠಿಯಾಗಿದ್ದ ರಾಜಾಜಿಯವರ ಸ್ನೇಹಿತರು. ಇಂಗ್ಲಿಷ್‌ನಲ್ಲಿ ಅಸಾಧಾರಣ ಪಾಂಡಿತ್ಯವಿತ್ತು.  ಈಜು, ಕ್ರಿಕೆಟ್, ಗರಡಿ ಸಾಧನೆ ಇವರ ಹವ್ಯಾಸ. ಸಂಸ್ಕೃತ ಹಾಗೂ ಫ್ರೆಂಚ್ ಭಾಷೆ ಕಲಿತಿದ್ದರು. ಕಾನೂನು ವ್ಯಾಸಂಗಕ್ಕಾಗಿ ಮದರಾಸಿಗೆ ಹೊರಟಾಗ ಮೈಸೂರು ಸರಕಾರ ಪ್ರೊಬೆಷನರಿ ಅಕಾರಿಯಾಗಿ ಆಯ್ಕೆ ಮಾಡಿ ಅಮಲ್ದಾರರಾಗಿ ನೇಮಕ ಮಾಡಲಾಗಿತ್ತು. ಉದ್ಯಮ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿ ಪಡೆದರು. ಮಾತಿನಲ್ಲಿ ಚತುರರಾಗಿದ್ದ ಅವರು ಪ್ರಜಾಪ್ರತಿನಿ ಸಭೆಯಲ್ಲಿ, ಲೆಜೆಸ್ಲೆಟಿವ್ ಕೌನ್ಸಿಲ್‌ನಲ್ಲಿ ಸ್ವಾರಸ್ಯವಾಗಿ ಭಾಷಣ ಮಾಡಿ ಹೆಸರು ಗಳಿಸಿದರು. 1932ರಲ್ಲಿ ಲಂಡನ್ನಿನಲ್ಲಿ ನಡೆದ ರೌಂಡ್‌ಟೇಬಲ್ ಕಾನ್‌ರೆನ್ಸ್‌ನಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ರ ತಜ್ಞ ಸಲಹೆಗಾರರಾಗಿದ್ದರು. ಅಮಲ್ದಾರರ ವೃತ್ತಿ ಜೀವನದ ನೆನಪುಗಳನ್ನು ಮಾಸ್ತಿಯವರ ಅಪೇಕ್ಷೆ ಮೇರೆಗೆ ‘ಜೀವನ’ ಪತ್ರಿಕೆಯಲ್ಲಿ ಬರೆದರು. ‘ಕೆಲವು ನೆನಪುಗಳು’ ಎಂಬ ಹೆಸರಿನಿಂದ ಮನೋಹರ ಗ್ರಂಥಮಾಲೆಯಿಂದ ಪುಸ್ತಕರೂಪದಲ್ಲಿ ಪ್ರಕಟವಾಯ್ತು. ಅಲ್ಲದೇ ಮಾಸ್ತಿಯವರ ಚೆನ್ನಬಸವನಾಯಕ ಕಾದಂಬರಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ರಾಜಾಜಿಯವರು ರಾಮಾಯಣ, ಮಹಾಭಾರತಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಸಂದರ್ಭದಲ್ಲೂ ಇವರದು ಮಹತ್ವದ ಪಾತ್ರ. ಇವರ ದಕ್ಷ ಸೇವೆ, ಕನ್ನಡಕ್ಕಾಗಿ ನೀಡಿದ ಕೊಡುಗೆಯನ್ನು ಗುರುತಿಸಿ ಮಹಾರಾಜರು ರಾಮರಾವ್ ಅವರಿಗೆ ‘ರಾಜಸೇವಾಸಕ್ತ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ನವರತ್ನ ರಾಮರಾಯರು ನಿಧನರಾದದ್ದು 27-11-1960ರಲ್ಲಿ

ನವರತ್ನ ರಾಮರಾವ್

(29 May 1877-27 Nov 1960)