About the Author

ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾಗಿರುವ ಪ. ರಾಮಕೃಷ್ಣ ಶಾಸ್ತ್ರಿಯವರು ಹುಟ್ಟಿದ್ದು1953ರ ಜುಲೈ 7ರಂದು. ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು. ತಂದೆ ವೆಂಕಟರಮಣ ಶಾಸ್ತ್ರಿ, ತಾಯಿ ಗುಣವತಿ. ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೇ ಕಲಿತ ಅವರು ನೇರವಾಗಿ ನಾಲ್ಕನೆ ತರಗತಿಗೆ ಸೇರ್ಪಡೆಯಾದರು ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರ. ಪುತ್ತೂರಿನ ಬಳಿ ಕಬಕ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ಅವರ ಕುಟುಂಬ ಸಾಂಸಾರಿಕ ತೊಂದರೆಯಿಂದ ಮಚ್ಚಿನ ಗ್ರಾಮಕ್ಕೆ ವಲಸೆ ಹೋಗಬೇಕಾಯಿತು. ಇದರಿಂದಾಗಿ ಓದಿಗೆ ತಡೆಯುಂಟಾಗಿ ಶಾಲೆ ತೊರೆದರು. ಆನಂತರ ಅವಲಂಭಿಸಿದ್ದು ಕೃಷಿ.  

‘ಹಿಮದ ಹುಡುಗಿ’, ‘ಆನೆ ಮತ್ತು ಇರುವೆ’, ‘ಚಿನ್ನದ ಸೇಬು’, ‘ಚಿನ್ನದ ಗರಿ’, ‘ಪ್ರೀತಿಯ ಗುಟ್ಟು’, ‘ಹಾಲಿನ ರೊಟ್ಟಿ ಮತ್ತು ಇತರ ಕಥೆಗಳು’ ಅವರ ಮಕ್ಕಳ ಕತಾ ಸಂಕಲನ. ಚೀನಿ ಜನಪದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಕ್ಷರ ಕಿರಣ ಯೋಜನೆಯಡಿ ನವ ಸಾಕ್ಷರರಿಗಾಗಿ ದೇವಲೋಕದ ಕುದುರೆ, ವ್ಯಾಪಾರಿ ಸೋತ, ಬದುಕುವ ದಾರಿ, ಬುದ್ಧಿವಂತ ಜಮೀನ್ದಾರ ಮೊದಲಾದ 9 ಕೃತಿಗಳನ್ನೂ ಪ್ರಕಟಿಸಿದ್ದಾರೆ. ಸುಂದರ ಬದುಕಿಗೆ ಒಂದಷ್ಟು ಸೂತ್ರಗಳು, ಶೌಚಾಲಾಯ-ಆರೋಗ್ಯ ಮಾತೆಗಿದು ದೇವಾಲಯ, ಉತ್ತಮ ಆರೋಗ್ಯಕ್ಕೆ ಅಂದದ ಕೈದೋಟ ಮುಂತಾದ ಕೃತಿಗಳಲ್ಲಿ ಮಹಿಳೆಯರಲ್ಲಿ ಆರೋಗ್ಯದ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

‘ಬದುಕು’ ಮತ್ತು ‘ಚಿತ್ರಚೋರ’ ಅವರ ಕತಾ ಸಂಕಲನ. ‘ಎಂಕ್ಟೇಸಿಯ ಸಂಕಟ’, ‘ಸನ್ಮಾನ ಪ್ರಸಂಗ ಮತ್ತು ಇತರ ಹಾಸ್ಯ ಲೇಖನಗಳು’ ಅವರ ಎರಡು ಹಾಸ್ಯ ಲೇಖನ ಸಂಕಲನ. ತುಳು ಭಾಷೆಯಲ್ಲಿ ರಚಿಸಿದ ಕಾದಂಬರಿ ‘ಪುದ್ವಾರು’. ಜಿ.ಪಿ.ರಾಜರತ್ನಂ ಪ್ರಶಸ್ತಿ, ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಪ್ರಶಸ್ತಿ, ಅಖಿಲ ಕರ್ನಾಟಕ ಮಕ್ಕಳ ಮೇಳದ ಪ್ರಶಸ್ತಿ ತುಳು ಕಾದಂಬರಿಗಾಗಿ ಫಣಿಯಾಡಿ ಪ್ರಶಸ್ತಿ, ಆಶಾ ಸಾಲಿಯಾನ್‌ ಪ್ರತಿಷ್ಠಾನ ಪ್ರಶಸ್ತಿ, ತುಳುಪ್ರಶಸ್ತಿ, ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ತಾಲ್ಲೂಕು ಸಾಹಿತ್ಯ ಪರಿಷತ್‌ ಪ್ರಶಸ್ತಿ ಮುಂತಾದ ಗೌರವ ಸನ್ಮಾನಗಳು ಅವರಿಗೆ ಸಂದಿವೆ. ಇವರು ವಿವಿಧ ಪತ್ರಿಕೆಗಳಿಗೆ, ಮ್ಯಾಗಸೈನ್‌ಗಳಿಗೆ ಬರೆದ ಲೇಖನಗಳ ಸಂಖ್ಯೆಯೇ ಸುಮಾರು 7500ಕ್ಕೂ ಹೆಚ್ಚಿದ್ದು ಅವರ ಲೇಖನ ಪ್ರತಿಭೆಗೆ ಸಾಕ್ಷಿಯಾಗಿದೆ. 

ಪ. ರಾಮಕೃಷ್ಣ ಶಾಸ್ತ್ರಿ

(07 Jul 1953)