About the Author

ಕಾದಂಬರಿಕಾರ್ತಿ ಪದ್ಮಾ ಗುರುರಾಜ್‌ರವರು ಹುಟ್ಟಿದ್ದು 1942 ರ ಸೆಪ್ಟಂಬರ್ 12 ರಂದು ಕೋಲಾರದ ಬಾಗೇಪಲ್ಲಿಯಲ್ಲಿ. ಕಾಲೇಜು ಪತ್ರಿಕೆಗಳಿಗೆ ಆಗಾಗ್ಗೆ ಬರೆದ ಸಣ್ಣಕತೆ, ಕವನಗಳು ಪ್ರಕಟಗೊಂಡಾಗ ಅವರ ಮನಸ್ಸು ಪುಳಕಗೊಂಡು ಬರೆಯಬೇಕೆಂಬ ಹಠ ಹುಟ್ಟಿತು. ಓದು ಮುಗಿಯುವ ಮುನ್ನವೇ ದಾಂಪತ್ಯ ಜೀವನಕ್ಕೆ ಅಡಿಯಿಟ್ಟು ತುಂಬಿದ ಮನೆಯ ಅವಿಭಕ್ತ ಕುಟುಂಬದಲ್ಲಿ ಪತಿಯೊಡನೆ ಏಕಾಂತದಲ್ಲಿ ಮಾತನಾಡಲೂ ಅವಕಾಶ ಸಿಗದಂತಹ ಪರಿಸ್ಥಿತಿಯಲ್ಲಿ ಇವರ ನೋವು, ನಲಿಗಳು, ತುಮಲಗಳಿಗೆ ಸಾಂತ್ವನ ಮಾಡುವವರೂ ಇಲ್ಲದ ಪರಿಸ್ಥಿತಿಯಲ್ಲಿ, ಕಾಲೇಜು ದಿನಗಳಲ್ಲಿ ಮನಸ್ಸಿನಾಳದಲ್ಲಿ ಬೆಚ್ಚಗೆ ಕುಳಿತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಕಾವು ಕೊಟ್ಟಂತಾಗಿ ಸಣ್ಣಕಥೆ, ಹರಟೆ, ಲೇಖನ ರೂಪದಲ್ಲಿ ಹೊರಹೊಮ್ಮತೊಡಗಿದವು. ಹೀಗೆ ಇವರು ಬರೆದ ಮೊದಲ ಕತೆ ಪ್ರಕಟವಾದದ್ದು 1962 ರಲ್ಲಿ ‘ಕೈಲಾಸ’ ಎಂಬ ಪತ್ರಿಕೆಯಲ್ಲಿ. ಅವರು ಬರೆದ ಕಥೆಗಳು ಕರ್ಮವೀರ, ಪ್ರಜಾಮತ, ಸುಧಾ ವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರ ಮೊದಲ ಕಾದಂಬರಿ ‘ಹೆಣ್ಣಿನ ಪ್ರೇಮ’ ಪ್ರಕಟವಾದುದು ಹಂಸಧ್ವನಿ ಪ್ರಕಾಶನದಿಂದ 1968 ರಲ್ಲಿ, ಎರಡನೆಯ ಕಾದಂಬರಿ ಧ್ರುವತಾರೆ ಪ್ರಕಟವಾಯಿತು.

“ಮುಳ್ಳಿನ ಕಿರೀಟ, ಅವಳ ಕನಸು, ಮೇಘಮಾಲೆ, ಮಾಯಾ ಜಾಲ, ಮೈತ್ರಿ, ಅನುಪಲ್ಲವಿ, ಸುಮವಸಂತ, ಅಂಧ್ಯಾದೀಪ., ಜನ್ಮದ ಜೋಡಿ, ದೀಪಿಕಾ, ಮೂರುದಾರಿ” ಅವರ ಕಾದಂಬರಿಗಳು. ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ‘ಸಮಾಜ ಕಲ್ಯಾಣ’ ಪತ್ರಿಕೆಯ ಸಹಸಂಪಾದಕಿಯಾಗಿ, ವಾರ್ತಾ ಇಲಾಖೆಯ ‘ಜನಪದ’ ಪತ್ರಿಕೆಯ ಮಕ್ಕಳ ವಿಭಾಗಕ್ಕೆ ಬರೆದ ಲೇಖನ, ಸಂದರ್ಶನಗಳಿಂದ, ಸಂಯುಕ್ತ ಕರ್ನಾಟಕ ಪತ್ರಿಕೆಗಾಗಿ ಬರೆದ ಸಮೀಕ್ಷಾ ಲೇಖನಗಳಿಂದ ಪಡೆದ ಅನುಭವ ಅವರನ್ನು ಸಾಹಿತ್ಯದ ವಿವಿಧತೆಯಲ್ಲಿ ತೆರೆದುಕೊಳ್ಳುವ ಅವಕಾಶವನ್ನು ವಿಸ್ತರಿಸಿತು. ಬರೆದ ಹಲವಾರು ಕಾದಂಬರಿಗಳು ‘ರಾಗಸಂಗಮ’, ‘ಮಲ್ಲಿಗೆ’, ಉದಯವಾಣಿ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದು ಇದುವರೆವಿಗೂ 53 ಕಾದಂಬರಿಗಳು, ‘ಕುಸುಮಾಂಜಲಿ, ಪುಷ್ಪಸಿಂಚನ’ ಎಂಬ ಎರಡು ಲೇಖನ ಸಂಗ್ರಹ, ‘ದಾಹ, ಬೇಲಿ, ಭೂಮಿಕ, ಬರಿದ ಮೊಗ್ಗು, ಸೌಗಂಧಿಕಾ’ ಮೊದಲಾದ  ಕಥಾ ಸಂಕಲನಗಳು ಪ್ರಕಟಗೊಂಡಿವೆ. ‘ಕಾಂಗರೂಗಳ ನಾಡಿನಲ್ಲಿ’, ನಾಲ್ಕು ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ ಅನುಭವದಿಂದ ಬರೆದ ಕೃತಿ. 1955 ರಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುತ್ತಮ ಕೃತಿ ವಿಭಾಗದ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿಯನ್ನು ಗಳಿಸಿದ್ದಾರೆ. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ, ಕಾವ್ಯಸಿಂಚನ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದಶಮಾನೋತ್ಸವ, ರಜತೋತ್ಸವ ಸಂದರ್ಭದಲ್ಲಿ ಸನ್ಮಾನ, ಬೆಂಗಳೂರು ವಿಹಾರ ಕೇಂದ್ರದಿಂದ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ರಿಗಳು ಅವರಿಗೆ ಸಂದಿವೆ. 

ಪದ್ಮಾ ಗುರುರಾಜ್‌ (ಎಚ್.ಆರ್‌. ಪದ್ಮಾವತಿ)

(12 May 1942)