About the Author

ಚಿಂತನ, ಕಥೆ, ಕಾದಂಬರಿ, ಲೇಖನ, ಪ್ರಬಂಧ ಮುಂತಾದ ವೈವಿಧ್ಯಮಯ ಪ್ರಕಾರಗಳಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಪದ್ಮಾ ಶೆಣೈಅವರು 1933 ನವೆಂಬರ್‌ 03 ರಂದು ಚೆನ್ನೈನಲ್ಲಿ ಜನಿಸಿದರು.

ಮನುಷ್ಯರು ಬೆಳೆಸಿಕೊಂಡಿರುವ ಸಂಸ್ತೃತಿ, ನಂಬಿಕೆ, ಬದಲಾಗುತ್ತಿರುವ ಜೀವನ ಮೌಲ್ಯಗಳು, ಸಂಘರ್ಷ, ಮಾನಸಿಕ ದ್ವಂದ್ವಗಳು ಇವುಗಳನ್ನೇ ತಮ್ಮ ಕಥಾವಸ್ತುವಿನಲ್ಲಿ  ಆರಿಸಿಕೊಂಡು ಜನಪ್ರಿಯ ಲೇಖಕಿ ಎನಿಸಿದ್ದಾರೆ ಪದ್ಮಾ ಶೆಣೈ. ತಂದೆಯಿಂದಲೇ ಎಳೆ ವಯಸ್ಸಿನಲ್ಲಿಯೇ ‘ಗಾಸ್ಪೆಲ್ ಆಫ್ ರಾಮಕೃಷ್ಣ’ ಓದಿದ್ದರ ಜೊತೆಗೆ ತಂದೆಯ ಸಂಗ್ರಹದಲ್ಲಿದ್ದ ಇಂಗ್ಲಿಷ್ ಲೇಖಕರಾದ ಡೇಲ್ ಕಾರ್ನಿಜ್, ಜಿಮ್ ಕಾರ್ಬೆಟ್ ಮುಂತಾದವರ ಕೃತಿಗಳನ್ನಲ್ಲದೆ ರವೀಂದ್ರನಾಥ ಠಾಕೂರ್, ಬಂಕಿಮ ಚಂದ್ರ ಚಟರ್ಜಿ, ಶರಶ್ಚಂದ್ರ ಚಟರ್ಜಿ ಮುಂತಾದವರುಗಳ ಕೃತಿಗಳ ಪರಿಚಯವನ್ನು ಪಡೆದಿದ್ದರು. ಜೊತೆಗೆ ಸಮಯ ಸಿಕ್ಕಾಗಲೆಲ್ಲ ಕನ್ನಡ ಕಾದಂಬರಿಕಾರರಾದ ಶಿವರಾಮ ಕಾರಂತ, ಅ.ನ.ಕೃ., ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿಯವರ ಕಾದಂಬರಿಗಳನ್ನು ಓದಿದ್ದಲ್ಲದೆ ಕುವೆಂಪು, ಡಿವಿ.ಜಿ. ಯವರ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು.

ಅವರ ಮೊದಲ ಕಾದಂಬರಿ ರಸ-ವಿರಸ. ಈ ಕಾದಂಬರಿಗೆ ಮೈಸೂರು ಸರಕಾರದ ಪ್ರಶಸ್ತಿ ದೊರೆತಿದೆ. ನಂತರ ಬರೆದ ಕಾದಂಬರಿಗಳಾದ ‘ಸಂಧಿಕಾಲ’, ‘ಕೊನೆಯ ನಿರ್ಧಾರ’, ‘ನಾ ನಿನ್ನ ಧ್ಯಾನದೊಳಿರಲು’. ಇವುಗಳಲ್ಲಿ ಕಡೆಯ ಎರಡು ಕಾದಂಬರಿಗಳು ಪ್ರಜಾವಾಣಿಯಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಯಿತು. ಇದಾದನಂತರ ನರನಾರಾಯಣ, ಅನಿಶ್ಚಿತ, ಅನುಬಂಧ, ಮರೆಯ ನೆರಳುಗಳು, ಅನುಗ್ರಹ, ಜಯಶ್ರೀ, ಉಯ್ಯಾಲೆ ಮುಂತಾದ ಕಾದಂಬರಿಗಳನ್ನು ಬರೆದರು.  ಆಗಿಂದ್ದಾಗ್ಗೆ ಬರೆದ ಸಣ್ಣ ಕಥೆಗಳು ‘ದೂರದ ಆಸೆ’, ‘ಹರಿದ ಗಾಳಿಪಟ’, ‘ನೂಲಿನಂತೆ ಸೀರೆ’ ಎಂಬ ಮೂರು ಸಂಕಲನಗಳಲ್ಲಿ ಪ್ರಕಟಿಸಿದ್ದಾರೆ. ಭಾರತ-ಭಾರತಿ ಸಂಪದಕ್ಕಾಗಿ ದ್ರೌಪದಿ, ಸಖೂಬಾಯಿ, ಫಿರೋಜ್ ಷಾ ಮೆಹ್ತಾ ಎಂಬ ಮಕ್ಕಳ ಹೊತ್ತಗೆಗಳನ್ನು ರಚಿಸಿಕೊಟ್ಟರು. ಇವು ಹಿಂದಿ ಹಾಗೂ ಮರಾಠಿ ಭಾಷೆಗೂ ಅನುವಾದಗೊಂಡಿದೆ. ಹಲವಾರು ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸಾಹಿತ್ಯ ಸಮ್ಮೇಳನಗಳ ಉದ್ಘಾಟಕರಾಗಿ, ಅಧ್ಯಕ್ಷೆಯಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ. ಶಾಲಾ ಕಾಲೇಜುಗಳ, ಸಾಹಿತ್ಯ ಸಂಘಗಳ ಸಾಹಿತ್ಯೋತ್ಸವ, ವಾರ್ಷಿಕೋತ್ಸವಗಳಲ್ಲಿ ಮುಖ್ಯ ಅತಿಥಿಗಳ ಗೌರವಕ್ಕೂ ಪಾತ್ರರಾಗಿದ್ದಾರೆ.

ಪದ್ಮಾ ಶೆಣೈ

(03 Nov 1933-24 Mar 2020)