About the Author

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಜನಿಸಿದ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು (1938) ಕಳೆದ 35 ವರ್ಷಗಳಿಂದ ವೈದ್ಯಕೀಯ ವೃತ್ತಿಯನ್ನು ಕೈಗೊಂಡು ಮಂಡ್ಯದಲ್ಲಿ ನೆಲೆಸಿದ್ದಾರೆ. ಪೂರ್ಣಕಾಲಿಕ ಸಾಹಿತಿಯೆನ್ನುವಷ್ಟು ಸಮೃದ್ದ ಸಾಹಿತ್ಯವನ್ನು ಸೃಷ್ಟಿಸಿರುವ ಡಾ. ಪ್ರದೀಪ್ ಕುಮಾರ್ ಹೆಬ್ರಿಯವರು 220 ಸಾಹಿತ್ಯಕೃತಿಗಳನ್ನು ಪ್ರಕಟಿಸಿದ್ದಾರೆ. ಏಳು ಮಹಾಕಾವ್ಯಗಳನ್ನು ರಚಿಸಿರುವ ಅತ್ಯಂತ ಅಪರೂಪದ ಸಾಹಿತಿ ಡಾ. ಹೆಬ್ರಿ. ಯುಗಾವತಾರಿ (ಭಕ್ತಿಭಂಡಾರಿ ಬಸವಣ್ಣನವರನ್ನು ಕುರಿತ 4500 ಪುಟಗಳ ಆರು ಸಂಪುಟಗಳ ಕಾವ್ಯ): ಪೂರ್ಣಪ್ರಜ್ಞ (ಆಚಾರ್ಯ ಮಧ್ಯರ ಕುರಿತು); ಕಲ್ಪತರು (ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಕುರಿತು); ಉಡುತಡಿಯ ಕಿಡಿ (ಅಕ್ಕಮಹಾದೇವಿಯನ್ನು ಕುರಿತು): ಪ್ರಜ್ಯೋತಿ (ಬದುಕು ಸಂಸ್ಕೃತಿಯನ್ನು ಕುರಿತು): ಶರಣ ಮಾತೆ (ಅಕ್ಕ ನಾಗಮ್ಮನ ಕುರಿತು) ಮತ್ತು ಶ್ರೀ ರಾಮಾಯಣ, 'ಯುಗಾವತಾರಿ' ಮಹಾಕಾವ್ಯವು ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಭಾರತೀಯ ಸಾಹಿತ್ಯದಲ್ಲಿ ಅತ್ಯಂತ ದೊಡ್ಡ ಗಾತ್ರದ ಕಾವ್ಯ ಎಂದು ಪರಿಗಣಿತವಾಗಿದೆ. ಇವರಿಗೆ ಹತ್ತಾರು ಪ್ರಶಸ್ತಿ, ಗೌರವಗಳು ಸಂದಿವೆ. ಐದು ಬಾರಿ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷತೆ ವಹಿಸಿದ್ದಾರೆ.

ವಚನ ಸಾಹಿತ್ಯ ಇವರ ಮೆಚ್ಚಿನ ವಿಷಯ. ಈ ಕುರಿತಾಗಿಯೇ 'ಬಸವ ದಾರಿಯೆಮಗನಿವಾರ್ಯ', “ವಚನ ವಾಚನ', 'ಬಸವ ಬೆಳಕು', 'ಮನದ ಕೊನೆಯ ಮೇಲೆ', 'ವಚನಾಮೃತ', 'ನೆನೆದೇವು ನಿಮ್ಮ ವಚನವಲ್ಲರಿ', 'ವಚನ ದಾಸೋಹ', 'ವಚನ ಪಲ್ಲವ' ಮುಂತಾದ ಹಲವಾರು ಕೃತಿಗಳನ್ನು ರಚಿಸಿರುವ ಡಾ. ಹೆಬ್ರಿಯವರು ಸ್ವತಃ ಒಂದೂವರೆ ಸಾವಿರಕ್ಕಿಂತಲೂ ಅಧಿಕ ವಚನಗಳನ್ನು ಬರೆದು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.

ಪ್ರದೀಪ್ ಕುಮಾರ್ ಹೆಬ್ರಿ