About the Author

ಗಾಯಕ, ವಾಗ್ಗೇಯಕಾರ, ವಾದ್ಯಗಾರ, ನಾಟಕ ಕರ್ತೃ ಹೀಗೆ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಕಲೋಪಾಸಕರು ಡಾ. ಪುಟ್ಟರಾಜ ಗವಾಯಿ ಅವರು.
ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಪ್ರಭುತ್ವ ಗಳಿಕೆ. ಹಾರ್ಮೋನಿಯಂ, ತಬಲಾ, ಪಿಟೀಲು, ಸಾರಂಗಿ ವಾದ್ಯಗಳಲ್ಲಿ ಪರಿಣತಿ ಪಡೆದ ಉಭಯಗಾನ ವಿಶಾರದ ಡಾ. ಪುಟ್ಟರಾಜ ಗವಾಯಿ ಅವರು ಗ್ವಾಲಿಯರ್‌ ಘರಾಣೆಯ ಸಮರ್ಥ ಸಾಧಕರು.ಸಂಗೀತದ ಜೊತೆಗೆ, ಹಿಂದಿ, ಸಂಸ್ಕೃತ ಮತ್ತು ಕನ್ನಡ ಈ ಮೂರು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಬ್ರೈಲ್‌ ಲಿಪಿ ಪದ್ದತಿಯಲ್ಲಿ ಹಲವಾರು ಗ್ರಂಥಗಳನ್ನು ರಚಿಸಿದ ಹೆಗ್ಗಳಿಕೆ ಇವರದು.ವೀರೇಶ್ವರ ಪುಣ್ಯಾಶ್ರಮದ ಸಮರ್ಥ ಉತ್ತರಾಧಿಕಾರಿಯಾಗಿ ಅನೇಕ ಸಂಗೀತ ಕಲಾವಿದರನ್ನು ರೂಪಿಸಿದ ಕೀರ್ತಿಗೆ ಭಾಜನರು.ಡಾ. ಪುಟ್ಟರಾಜ ಗವಾಯಿಗಳ ಸಾಧನೆ ಸಿದ್ಧಿಗಳಿಗೆ ಅನೇಕ ಪ್ರಶಸ್ತಿ-ಗೌರವಗಳು ಸಂದಿವೆ.

ಪದ್ಮಭೂಷಣ, ಪಂಡಿತ ಡಾ. ಪುಟ್ಟರಾಜ ಗವಾಯಿಗಳು 1914ರ ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನಗಲ್‌ನ ದೇವರ ಹೊಸಕೋಟೆಯಲ್ಲಿ ಜನಿಸಿದರು. ತಂದೆ ರೇವಣ್ಣಯ್ಯ ಮತ್ತು ತಾಯಿ ಸಿದ್ಧಮ್ಮನವರು. ಇವರ ಮೂಲ ಹೆಸರು ಪುಟ್ಟಯ್ಯಜ್ಜ ಎಂಬುದಾಗಿತ್ತು. ಹುಟ್ಟಿದ ಆರು ತಿಂಗಳಲ್ಲಿಯೇ ಸಿಡುಬಿನ ತೊಂದರೆಯಿಂದಾಗಿ ಬಾಲಕ ಪುಟ್ಟಯ್ಯಜ್ಜ ಅಂಧನಾಗಿದ್ದ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಅಂಧ ಪುಟ್ಟಯ್ಯಜ್ಜನ ಜೀವನದ ಹೊಣೆಗಾರಿಕೆಯನ್ನು ಹೊತ್ತಿದ್ದ ಮಾವ ಚಂದ್ರಶೇಖರರು ಪುಟ್ಟಯ್ಯಜ್ಜನಿಗೆ ಸಂಗೀತ ಶಿಕ್ಷಣ ನೀಡುವಂತೆ ಪಂಡಿತ ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಸೇರಿಸಿದ್ದರು.

ತಮ್ಮ ಗುರುಗಳಲ್ಲಿ ಭಕ್ತಿ ಶ್ರದ್ಧೆಗಳ ತಪಸ್ಸಿನಿಂದ ಅಂಧ ಪುಟ್ಟಯ್ಯಜ್ಜ ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಹಾರ್ಮೋನಿಯಂ ಕಲಿಯುವ ಮೂಲಕ ಸಂಗೀತ ಸಾಮ್ರಾಟ್ ಎಂಬ ಕೀರ್ತಿಗೆ ಭಾಜನರಾದರು. ಗಾಯನವಷ್ಟೇ ಅಲ್ಲದೆ ಸಂಗೀತ ಲೋಕದ ಬಹುತೇಕ ವಾದ್ಯಗಾರಿಕೆಯಲ್ಲೂ ಅವರಿಗೆ ಅಪ್ರತಿಮ ಸಾಧನೆ ಪಡೆದಿದ್ದರು. ಗುರುಗಳಂತೆಯೇ ಬ್ರಹ್ಮಚರ್ಯ, ನೇಮನಿಷ್ಠೆ, ಆಚಾರದಿಂದೊಡಗೂಡಿದ ಜೀವನವನ್ನು ನಿರಂತರ ನಡೆಸಿಕೊಂಡು ಬಂದ ಪುಟ್ಟರಾಜ ಗವಾಯಿಗಳು 1944ರಲ್ಲಿ ವೀರೇಶ್ವರ ಆಶ್ರಮದ ಪೀಠಾಧಿಪತಿಯಾಗಿ ಹೊಣೆಗಾರಿಕೆ ವಹಿಸಿಕೊಂಡರು. ಐದು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ಅಂಧರಿಗೆ ಶಿಕ್ಷಣ ನೀಡುವ ಮೂಲಕ ಅಂಧರ ಪಾಲಿನ ದೇವರೇ ಆಗಿದ್ದರು. ತಾವು ಕಲಿತ ವಿದ್ಯೆಯನ್ನು ಶಿಷ್ಯರಿಗೆ ಕಲಿಸಲು ಗುರುಗಳಿಂದ ಸ್ಥಾಪಿತವಾದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಕ ಸಂಗೀತ ಮಹಾವಿದ್ಯಾಲಯದ ಜವಾಬ್ದಾರಿ ಹೊತ್ತು ನೂರಾರು ಅಂಧರು, ಅನಾಥರು, ವಿಕಲಚೇತನರಿಗೆ ಸಂಗೀತ ಶಿಕ್ಷಣ ದೊರಕುವಂತೆ ಮಾಡಿದರು.

ಪುಟ್ಟರಾಜರು ತಾರುಣ್ಯದಲ್ಲೇ ಪಂಡಿತ, ಗವಾಯಿ ಬಿರುದು ಪಡೆದಿದ್ದರು. ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ಕೃತಿ ರಚಿಸಿದ್ದ ಗವಾಯಿಗಳಿಗೆ ಸಂಗೀತವೆಂದರೆ ಪಂಚಪ್ರಾಣವಾಗಿತ್ತು. ಇವರ ಅಪಾರ ಸೇವೆಯನ್ನು ಪರಿಗಣಿಸಿ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು, 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌವರ ಡಾಕ್ಟರೇಟ್, 1993ರಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2000ನೇ ಇಸವಿಯಲ್ಲಿ ಬಸವಶ್ರೀ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ನಾಡೋಜ ಗೌರವ, ಕನಕ ಪುರಂದರ ಪ್ರಶಸ್ತಿ. ಶ್ರೀ ಜಯಚಾಮರಾಜ ಒಡೆಯರ್ ಅವರಿಂದ ಸನ್ಮಾನ. ಮೈಸೂರು ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಪಾಲ್ ಹ್ಯಾರಿಸ್ ಪ್ರಶಸ್ತಿ, ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಫೆಲೊಷಿಪ್, ಕಾಳಿದಾಸ ಸಮ್ಮಾನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಪಂಡಿತ ಪುಟ್ಟರಾಜ ಗವಾಯಿ ಅವರನ್ನು ಅರಸಿ ಬಂದಿದ್ದವು.

ನಾಟಕ, ಸಾಹಿತ್ಯ ಸೇರಿದಂತೆ ಪುಟ್ಟರಾಜ ಗವಾಯಿಗಳು ಮೂರೂ ಭಾಷೆಗಳಲ್ಲಿ ಬಹಳಷ್ಟು ಕೃತಿ ರಚಿಸಿದ್ದಾರೆ. ಬಹುಭಾಷಾ ಪಂಡಿತರಾಗಿದ್ದ ಗವಾಯಿಗಳು ಬ್ರೈಲ್ ಲಿಪಿಯಲ್ಲಿ ಭಗವದ್ಗೀತೆ ರಚಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಅವರಿಗೆ ಅದ್ಭುತ ಕವಿತಾಶಕ್ತಿಯಿತ್ತು. ಹಲವಾರು ಚೀಜುಗಳನ್ನು ರಚಿಸಿದ್ದರು. ಅವರ ಕಾರ್ಯಕ್ರಮಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರಗೊಂಡವು. ಪುಟ್ಟರಾಜ ಗವಾಯಿಗಳ ಬಸವೇಶ್ವರ ಪುರಾಣವನ್ನು ನೋಡಿದ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದರು ಮುಕ್ತಕಂಠದಿಂದ ಪ್ರಶಂಸಿಸಿ. ರಾಷ್ಟ್ರಪತಿ ಭವನದಲ್ಲಿ ಸತ್ಕಾರ ನಡೆಸಿದರು. ಮಹಾನ್ ವಿದ್ವಾಂಸರಾದ ಪುಟ್ಟರಾಜ ಗವಾಯಿಗಳು ಕನ್ನಡದಲ್ಲಿ 20, ಹಿಂದಿಯಲ್ಲಿ 5 ಮತ್ತು ಸಂಸ್ಕೃತದಲ್ಲಿ 6 ಕೃತಿಗಳ ರಚನೆ ಮಾಡಿದರು.

ಸೆಪ್ಟೆಂಬರ್ 17, 2010ರಂದು ತಮ್ಮ 97ನೆಯ ವಯಸ್ಸಿನಲ್ಲಿ ನಿಧನರಾದ ಪುಟ್ಟರಾಜ ಗವಾಯಿಗಳು, ಈ ನಾಡಿನ ಚೇತನರಾಗಿ ನಿತ್ಯಸ್ಮರಣೀಯರು. 

ಪುಟ್ಟರಾಜ ಗವಾಯಿ

(03 Mar 1914-17 Sep 2010)

ABOUT THE AUTHOR