About the Author

ಭಾಷಾವಿಜ್ಞಾನ, ವಚನಗಳಿಗೆ ಸಂಬಂಧಿಸಿದಂತೆ ಪ್ರಮುಖ ಕೆಲಸ ಮಾಡಿದ ರುದ್ರಯ್ಯ ಚಂದ್ರಯ್ಯ ಹಿರೇಮಠ ಕನ್ನಡದ ಪ್ರಮುಖ ಸಂಶೋಧಕ ಆಗಿದ್ದರು. ರೋಣ ತಾಲ್ಲೂಕಿನ ಕುರುಡಗಿಯಲ್ಲಿ 1920ರ ಜನೆವರಿ 15ರಂದು ಜನಿಸಿದರು. ತಂದೆ ಚಂದ್ರಯ್ಯ- ತಾಯಿ ವೀರಮ್ಮ. ತಮ್ಮ ವಿದ್ಯಾಭ್ಯಾಸವನ್ನು ಧಾರವಾಡ, ಬೆಳಗಾವಿಯಲ್ಲಿ ಪೂರೈಸಿದರು. ಮುಂಬೈ ವಿಶ್ವವಿದ್ಯಾಲಯದಿಂದ  ಕನ್ನಡ ಎಂ.ಎ.ಪದವಿ (1940) ಗಳಿಸಿದರು.

ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಅವರು ಪಿಎಚ್.ಡಿ ಪದವಿ (1951) ಗಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ, ಕುಲಪತಿ (1975-1980)ಗಳಾಗಿದ್ದರು. ಕನ್ನಡ ವಿಭಾಗ ಇವರ ಕಾಲದಲ್ಲಿ ಕನ್ನಡ ಅಧ್ಯಯನ ಪೀಠವಾಯಿತು. ಕುಲಪತಿಗಳಾಗಿ ನಿವೃತ್ತರಾದ ಅನಂತರ ತಿರುವನಂತಪುರದ ಅಂತರರಾಷ್ಟ್ರೀಯ ದ್ರಾವಿಡ ಭಾಷಾವಿಜ್ಞಾನದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಹುಬ್ಬಳ್ಳಿಯಲ್ಲಿ ನಡೆದ 59ನೇ ಕನ್ನಡ ಸಾಹಿತ್ಯ ಸಮ್ಮೇಳನ (1990) ಅಧ್ಯಕ್ಷತೆ ವಹಿಸಿದ್ದರು. ಭಾಷಾಶಾಸ್ತ್ರ, ವೀರಶೈವ ಸಾಹಿತ್ಯ, ವಚನ ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿದ್ವತ್‍ಪೂರ್ಣ ಗ್ರಂಥಗಳನ್ನು ಸಂಪಾದಿಸಿದ ಹೆಗ್ಗಳಿಕೆ ಇವರದು. 1998ರ ನವೆಂಬರ್ 2ರಂದು ಅವರು ಧಾರವಾಡದಲ್ಲಿ ನಿಧನರಾದರು.

ಸುಮನಾಂಜಲಿ, ಮೌನ ಸ್ಪಂದನ, ಸಾಹಿತ್ಯ ಸಂಸ್ಕೃತಿ, ಕವಿ ಪದ್ಮಣಾಂಕ, ತಥಾಗತ ಚಾರಿತ್ರ್ಯ(ಕಾವ್ಯ), ಬಸವ ಪುರಾಣ, ಪದ್ಮರಾಜಹುರಾನಿ, ರಾಜಶೇಖರ ವಿಳಾಸ, ರಾಮಚಂದ್ರಚರಿತ ಪುರಾಣ, ಅಮೃತ ಬಿಂದುಗಳು (ಸಂಪಾದನೆ), ಲಿಂಗ್ವಿಸ್ಟಿಕ್ ಇನ್ವೆಸ್ಟಿಗೇಷನ್ ಆಫ್ ಸಂಪ್ಲಾಬ್ಲಂಸ್ ಆನ್ ದಿ ರಿಲೇಷನ್‍ಷಿಪ್ ಆಫ್ ಇಂಡೋ-ಆರ್ಯನ್ ಅಂಡ್ ದ್ರವಿಡಿಯನ್ ಲ್ಯಾಂಗ್ವೇಜಸ್(ಪಿಎಚ್.ಡಿ ಗ್ರಂಥ), ಪ್ಲೇಸ್ ನೇಮ್ಸ್ ಇನ್ ಕರ್ನಾಟಕ, ದಿ ಸ್ಟ್ರಕ್ಚರ್ ಆಫ್ ಕನ್ನಡ, ಕಾಂಪೌಂಡ್‍ವರ್ಡ್ಸ್ ಇನ್ ಕನ್ನಡ ಇತ್ಯಾದಿ ಕೃತಿಗಳು ಇಂಗ್ಲಿಷ್‍ನಲ್ಲಿ ರಚಿತವಾಗಿವೆ.

ಸಿದ್ಧರಾಮೇಶ್ವರ ವಚನಗಳು, ಬಸವಣ್ಣನವರ ವಚನಗಳು, ನೀಲಮ್ಮ ಮತ್ತು ಲಿಂಗಮ್ಮನ ವಚನಗಳು, ಇಪ್ಪತ್ತೇಳು ಶಿವಶರಣೆಯರ ವಚನಗಳು, ಷಟ್‍ಸ್ಥಲ ಜ್ಞಾನಸಾರಾಮೃತ ವೀರಶೈವ ಚಿಂತಾಮಣಿ, ಚೆನ್ನಬಸವಣ್ಣನವರ ವಚನಗಳು ಮೊದಲಾದವು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಸಂಪಾದಿತ ಕೃತಿಗಳು. ಸಾಹಿತ್ಯ ಕ್ಷೇತ್ರದ ಮಹತ್ವದ ಸಾಧನೆಗಾಗಿ ಹಲವಾರು ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದ ಹಿರೇಮಠರವರು ತೀರಿಕೊಂಡದ್ದು 1998ರ ನವಂಬರ್ 3 ರಂದು.

ಆರ್.ಸಿ. ಹಿರೇಮಠ

(15 Jan 1920-02 Nov 1998)