About the Author

ಎಸ್.ಎಫ್. ಜಕಬಾಳ (ಡಾ. ಸಿದ್ಧಣ್ಣ ಫಕೀರಪ್ಪ ಜಕಬಾಳ) ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದವರು. (ಜನನ: 01-06-1956) ತಂದೆ ಫಕೀರಪ್ಪ, ತಾಯಿ ಸಿದ್ಧಪ್ಪ. ಗೋಕಾಕ್ ನ ಜೆಎಸ್ ಎಸ್ ಕಾಲೇಜಿನಿಂದ ಬಿ.ಎ. ಹಾಗೂ  ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ. ನಂತರ ‘ನಾಟ್ಯಭೂಷಣ ಶ್ರೀ ಏಣಗಿ ಬಾಳಪ್ಪನವರ ಕಲಾ ವೈಭವ ನಾಟ್ಯ ಸಂಘ, ಬೆಳಗಾವಿ’ ಕುರಿತು ಮಹಾಪ್ರಬಂಧ. ಮಂಡಿಸಿ ಪಿಎಚ್ ಡಿ  ಪದವೀಧರರು. ಗದಗ ನಗರದ ಕೆ.ಎಸ್.ಎಸ್. ಮಹಾವಿದ್ಯಾಲಯದ ಪ್ರಾಚಾರ್ಯ ರಾಗಿ (2016)  ನಿವೃತ್ತರು. ಸದ್ಯ ಇದೇ ಕಾಲೇಜಿನಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ. 

ರಂಗಾಯಣದಲ್ಲಿ ತರಬೇತಿ ಪಡೆದ ಇವರು ಆಡಳಿತದಲ್ಲಿ ಕನ್ನಡ ಶಿಬಿರ ನಿರ್ದೇಶಕರು, ದೊಡ್ಡಾಟ ಶಿಬಿರ ಸಂಚಾಲಕರು, ಕನ್ನಡ ವಿ.ವಿ. ಅಥಣಿಯಲ್ಲಿ ಆಯೋಜಿಸಿದ್ದ ಡೊಳ್ಳುಗಳ ಹಾಡಿನ ತರಬೇತಿ ಶಿಬಿರದ ನಿರ್ದೇಶಕರಾಗಿದ್ದರು. ಕೇಂದ್ರ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಕರ್ನಾಟಕ ವಿ.ವಿ. ವಿದ್ಯಾ ವಿಧೇಯಕ ಪರಿಷತ್ತಿನ ಸದಸ್ಯರು, ಹಾಗೂ ಕನಕ ಅಧ್ಯಯನ ಪೀಠದ ವಿಶೇಷ ಆಮಂತ್ರಿತ ಸದಸ್ಯರಾಗಿದ್ದರು. 

ಕೃತಿಗಳು: ಕನಕದಾಸರು, ಹರಿಭಕ್ತಿಸಾರ (ವಿಶ್ಲೇಷಣಾತ್ಮಕ ಗದ್ಯಾನುವಾದ), ಕನಕದಾಸರ ಮುಂಡಿಗೆಗಳು (ಅರ್ಥ ವಿವೇಚನೆ), ವಜ್ರ ಚೂಡಾಮಣಿ (ದೊಡ್ಡಾಟ), ಇಟಗಿ ಶ್ರೀ ಭೀಮಾಶಂಕರಿ ಪುರಾಣ, ಕುರುಬರ ರಟ್ಟಮತ ಶಾಸ್ತ್ರ, ಚೂನಿಯ ಬೇಟೆ (ಜಾನಪದ ರೂಪಕ), ಕಾಯಕಯೋಗಿ (ಮೈಲಾರಪ್ಪ ಮೆಣಸಗಿ ಅವರ ಅಭಿನಂದನಾ ಗ್ರಂಥ) ರ್‍ವಾಣಗಳು (ಕನ್ನಡ ದೇಸಿ ಕಾವ್ಯ ಮಾರ್ಗದ ವಿಶಿಷ್ಟ ಸಂಗ್ರಹ), ಕಲಾವೈಭವ ನಾಟ್ಯ ಸಂಘ, ಬೆಳಗಾವಿ (ಪಿಎಚ್ ಡಿ ಪ್ರಬಂಧ), ನುಡಿ ನಮನ (ಎಚ್.ಬಿ. ಕಟಿಗೆಣ್ಣನವರ ಅಭಿನಂದನಾ ಗ್ರಂಥ), ಹಂತಿಪದಗಳು, ಸಮೀಕ್ಷೆ (78ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ), ಗದಗ ಜಿಲ್ಲೆಯ ಜನಪದ ಕಲಾವಿದರು, ಅರ್ಥ ಹೇಳ್ತೀನಂತಾಳ, ರಾಜಾ ನಳಚಂದ್ರ, ಮಾತ್ರವಲ್ಲ; ಇವರ ಸಂಪಾದಿತ ಕೃತಿಗಳಾದ ಏಕಾಂಕ ಸಂಚಯ, ಆಧುನಿಕ ಕನ್ನಡ ಕಾವ್ಯ ಸಂಚಯ ಹಾಗೂ ಕಾವ್ಯ ಸಂಪದ (ಕವಿವಿ ವಿಜ್ಞಾನ ಪದವಿಗಳಿಗೆ)  ಪಠ್ಯವಾಗಿದ್ದವು. ಅಲ್ಲದೇ, ಕುರುಬರ ರ್‍ವಾಣಗಳು, ಕರಿಮಲ್ಲಿಗೆ ರೂಪಕ (ಜಾನಪದ ಡೊಳ್ಳು) , ಟಗರ ಜೋಗಿಗಳ ಟಗರ ಪವಾಡ (ಜನಪದ ಗದ್ಯ ಕಾವ್ಯ), ಹರಿಣಿ ಶಿಕಾರಿಗಳು (ಜನಾಂಗೀಯ ಅಧ್ಯಯನ), ನಾಟಕಕಾರ ಸಾಳುಂಕೆ, ಕುಮಾರವ್ಯಾಸ ಹಾಗೂ ದೊಡ್ಡಾಟಗಳು, ಹಾಲುಮತ ಸಂಸ್ಕೃತಿಯ ಮೌಖಿಕ ಆಕರಗಳು, ಝಂಡೆ ರಾವುತ (ಜನಾಂಗೀಯ ಅಧ್ಯಯನ), ಕುರಿಗಾರರ ಕಾಲಜ್ಞಾನ, ಗದಗ ಜಿಲ್ಲೆಯ ಜನಪದ ಕಲೆಗಳು, ಬೀರದೇವರ ಸಂಪ್ರದಾಯಗಳು ಇತ್ಯಾದಿ ಅವರ ವಿಶೇಷ ಲೇಖನಗಳು, ಕೌರವ ದಿನಪತ್ರಿಕೆಯ ಕಲಾಸಿರಿ ಅಂಕಣದಲ್ಲಿ ಸುಮಾರು 50 ಕಲಾವಿದರನ್ನು ಪರಿಚಯಿಸಿದ್ದಾರೆ. 

ಹಸ್ತಪ್ರತಿಗಳ ಸಂಗ್ರಹ: ಕಿರಾತಾರ್ಜುನ ಕಾಳಗ, ರಾಜಾ ನಳಚಂದ್ರ, ಕೀಚಕ ವಧಾ, ಚಿತ್ರಸೇನಾ ಗಂಧರ್ವ, ಕರ್ಣ ಪರ್ವ, ಮೂರೂವರೆ ವಜ್ರ, ಕೃಷ್ಣಾರ್ಜುನ ಕಾಳಗ, ವೀರ ಅಭಿಮನ್ಯು, ದೇವಸೇನಾ ಕಲ್ಯಾಣ, ರಾವಣನ ಜನನ-ಮರಣ, ತಳೆವಾಡಿ ನಬಿ ಆಟ (ಕೃಷ್ಣ ಪಾರಿಜಾತ) ಹೀಗೆ ವಿವಿಧ ಕೃತಿಗಳ ಹಸ್ಯಪ್ರತಿಗಳನ್ನು ಸಂಗ್ರಹಿಸಿದ್ದಾರೆ.

ಧ್ವನಿಸುರುಳಿ ಸಂಗ್ರಹ: ಡೊಳ್ಳಿನ ಹಾಡುಗಳು, ಸೋಬಾನೆ ಹಾಡುಗಳು , ಗೀ ಗೀ ಪದಗಳು, ಗೊರವರ ಹಾಡುಗಳು, ರ್‍ವಾಣಗಳು,ಕೋಲಾಟದ ಪದಗಳು, ಟಗರ ಜೋಗಿಗಳ ಟಗರ ಪವಾಡ. 

ಪ್ರಶಸ್ತಿ-ಗೌರವಗಳು: ಕರ್ನಾಟಕ ಯಕ್ಷಗಾನ ಹಾಗೂ ಜಾನಪದ ಅಕಾಡೆಮಿಯ ಬೆಳ್ಳಿ ಹಬ್ಬ ಮಹೋತ್ಸವದಲ್ಲಿ (2007)  ಸನ್ಮಾನ, ಕನಕ ಶ್ರೀ ಪ್ರಶಸ್ತಿ (2016)  ಸೇರಿದಂತೆ ನಾಡಿನ ವಿವಿಧ ಸಂಘ-ಸಂಸ್ಥೆಗಳಿಂದ ಗೌರವಗಳು ಸಂದಿವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 

ಎಸ್. ಎಫ್. ಜಕಬಾಳ

(01 Jun 1956)